ರಾಜ್ಯದ ಸಹಕಾರಿ ವಲಯದ ಬ್ಯಾಂಕುಗಳಲ್ಲಿ ಇದುವರೆಗೂ ಕೃಷಿಸಾಲದ ಪ್ರಯೋಜನ ಪಡೆಯದ ಕೃಷಿಕರ ಸಂಖ್ಯೆ 10 ಲಕ್ಷ, ಹೊಸದಾಗಿ ಕೃಷಿಸಾಲ ನೀಡುವ ಸಂದರ್ಭದಲ್ಲಿ ಇವರಿಗೆ ಆದ್ಯತೆ ನೀಡಲಾಗುವುದು. ಈ ತನಕ 22 ಲಕ್ಷಕ್ಕೂ ಅಧಿಕ ರೈತರು ಸಹಕಾರಿ ವಲಯದ ಸಾಲಯೋಜನೆ ವ್ಯಾಪ್ತಿಯಲ್ಲಿದ್ದಾರೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ಬೆಂಗಳೂರಿನಲ್ಲಿ ಜುಲೈ 24, 2019ರಂದು ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.  10 ಲಕ್ಷ ರೈತರಿಗೆ ತಲಾ 30 ಸಾವಿರ ಸಾಲ ನೀಡಲು 3 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ. ಇದರಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕು (ಡಿಸಿಸಿ) ಶೇಕಡ 50ರಷ್ಟನ್ನು ಭರಿಸುತ್ತವೆ. ಉಳಿದ ಶೇಕಡ 50ರಷ್ಟು ಹಣವನ್ನು ಭರಿಸುವಂತೆ ರಾಜ್ಯ ಸರ್ಕಾರವನ್ನು ಕೋರಲಾಗುವುದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಲಾಗುವುದು ಎಂದರು.

ಸಾಕಷ್ಟು ವರ್ಷಗಳಿಂದ ಕೃಷಿಸಾಲ ಯೋಜನೆಯಿಂದ ಸಾಲ ಪಡೆದವರೇ ಮತ್ತೆಮತ್ತೆ ಪಡೆಯುತ್ತಿದ್ದಾರೆ. ಇತರರು ಇದರ ಪ್ರಯೋಜನ ಪಡೆಯದೇ ಇರುವುದನ್ನು ಗಮನಿಸಲಾಗಿದೆ. ಇದಲ್ಲದೇ ಸಾಕಷ್ಟು ಮಂದಿ ರೈತರು ಆಧಾರ್ ಮತ್ತು ಪಡಿತರ ಹೊಂದಿಲ್ಲದೇ ಇರುವುದರಿಂದಲ್ಲೂ ಕೃಷಿಸಾಲ ಯೋಜನೆ ವ್ಯಾಪ್ತಿಗೆ ಬಂದಿಲ್ಲ ಎಂದರು.

ನೂತನವಾಗಿ 10 ಲಕ್ಷ ರೈತರನ್ನು ಕೃಷಿಸಾಲ ಯೋಜನೆ ವ್ಯಾಪ್ತಿಗೆ ತರಲು ರಾಜ್ಯ ಹಣಕಾಸು ಇಲಾಖೆ ಅನುಮತಿ ನೀಡಬೇಕು. ಕೃಷಿಕರ ಪ್ರಗತಿಗೆ ನೆರವಾಗುವ ಇಂಥ ಯೋಜನೆಗಳಿಗೆ ಹಣಕಾಸು ಒದಗಿಸಲು ಸರ್ಕಾರಕ್ಕೆ ಸಮಸ್ಯೆ ಆಗುವುದಿಲ್ಲ. ಆದಷ್ಟು ಶೀಘ್ರ ಈ ಕಾರ್ಯ ಮಾಡಲಾಗುವುದು ಎಂದರು.

ಇದೇ ಜುಲೈ 10ರ ಒಳಗೆ ಸಾಲಮನ್ನಾದ ಪೂರ್ಣ ಹಣ ಪಾವತಿ ಮಾಡಲಾಗುವುದು. ಸಹಕಾರಿ ಬ್ಯಾಂಕುಗಳಿಂದ 19 ಲಕ್ಷ ಕೃಷಿಕರು ಸಾಲ ತೆಗೆದುಕೊಂಡಿದ್ದರು. ಇದರ ಬಾಬ್ತಿನ ಸಾಕಷ್ಟು ಹಣ ಈಗಾಗಲೇ ಪಾವತಿಯಾಗಿದೆ. ಉಳಿದ ಹಣವನ್ನು ಜುಲೈ 10 ರೊಳಗೆ ಪಾವತಿಸುವ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಸಾಲಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೆಲವಾರು ದಾಖಲಾತಿಗಳನ್ನು ಕೇಳಿತ್ತು. 18, 19, 151 ರೈತರು ಅವುಗಳನ್ನು ಒದಗಿಸಿದ್ದಾರೆ. ಇನ್ನು 1.36 ಲಕ್ಷ ರೈತರು ಇದನ್ನು ಒದಗಿಸಿಲ್ಲ ಎಂಬ ವಿವರಗಳನ್ನು ನೀಡಿದರು.

ನಬಾರ್ಡ್ ನೆರವು ಕುರಿತಂತೆ ಸಚಿವರು ಮಾತನಾಡಿದರು. ಪ್ರಸ್ತುತ ನಬಾರ್ಡ್ ನಿಂದ ಮರುಸಾಲ ನೀಡಿಕೆ ಪ್ರಮಾಣ ಈ ಮೊದಲು ಶೇಕಡ 80ರಷ್ಟಿತ್ತು. ಇತ್ತೀಗೆ ಅದು ಶೇಕಡ 40ಕ್ಕೆ ಇಳಿದಿದೆ. ಮತ್ತೆ ಈ ಪ್ರಮಾಣ ಹೆಚ್ಚಿಸಬೇಕಾದ ಅಗತ್ಯವಿದೆ. ಜೊತೆಗೆ ಆದಾಯ ತೆರಿಗೆ ವ್ಯಾಪ್ತಿಯಿಂದ ಸಹಕಾರಿ ವಲಯವನ್ನು ಹೊರಗಿಡಬೇಕಾದ ಜರೂರು ಇದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ಈ ಸಂಬಂಧ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಜೊತೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಾಗುವುದು. ಇವರೊಂದಿಗೆ ಚರ್ಚಿಸಿದ ನಂತರ ಕೇಂದ್ರ ಸರ್ಕಾರಕ್ಕೆ ನಿಯೋಗ ಹೋಗಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ಕೆ.ಎನ್. ರಾಜಣ್ಣ ಮಾತನಾಡಿದರು. ಕೇಂದ್ರ ಸರ್ಕಾರಕ್ಕೆ ಇದುವರೆಗೂ ಡಿಸಿಸಿ ಬ್ಯಾಂಕುಗಳು ಮತ್ತು ಅಪೆಕ್ಸ್ ಬ್ಯಾಂಕುಗಳು 200 ಕೋಟಿ ರೂಪಾಯಿ ತೆರಿಗೆ ನೀಡಿವೆ. ಆದರೆ ಇದರಿಂದ ಈ ಬ್ಯಾಂಕುಗಳಲ್ಲಿ ಠೇವಣಿ ಇಡುವವರ ಸಂಖ್ಯೆಯೇನೂ ಕಡಿಮೆ ಆಗಿಲ್ಲ ಎಂದರು.

LEAVE A REPLY

Please enter your comment!
Please enter your name here