ವಿಜಯಪುರ ಸುತ್ತಾಡುವಾಗ ರೈತರ ದ್ರಾಕ್ಷಿ ತೋಟಕ್ಕೆ ಹೋಗಿ ನೆನಪಿಗೆ ಅಂಥ ಒಂದು ಬಳ್ಳಿ ತುಂಡು ತಂದಿದ್ದೆ. ನೆಲಕ್ಕೆ ಊರಿ ಗೊಬ್ಬರ ಹಾಕಿ ಅಕ್ಕರೆಯಲ್ಲಿ ಬದುಕಿಸಿದೆ. ಆಗಾಗ ಗೊಂಚಲು ದ್ರಾಕ್ಷಿಯ ಕನಸು. ಚಿಗುರಿದ ನೆಲದ ಬಳ್ಳಿ ಹಬ್ಬಲು ಚಪ್ಪರ ಬೇಕಿತ್ತು. ಇರುವ ಒಂದು ಬಳ್ಳಿಗೆ ಸಧ್ಯಕ್ಕೆ ಗೂಟ ಸಾಕೆಂದು ಬಿದಿರು ಊರಿದೆ. ಹಬ್ಬಿದ ಬಳ್ಳಿಗೆ ಚಾಟ್ನಿ(ಪ್ರೂನಿ o ಗ್)ಮಾಡೋದು ಯಾವಾಗ ಯೋಚಿಸುತ್ತಾ ಇದ್ದೆ.
ನೆಟ್ಟ ದ್ರಾಕ್ಷಿ ಬೆಳೆಯಲೆಂದು ನೀರು ಹನಿಸುತ್ತಾ ಕಳೆ ಕೀಳುತ್ತಾ ಇದ್ದೆ. ಒಂದಿನ ಬಿದಿರಿಗೆ ಗೆದ್ದಲು ಹತ್ತಿತು, ಒಂದೆರಡು ದಿನದಲ್ಲಿ ಹುತ್ತು ಕಟ್ಟುವ ಸೂಚನೆ ಮೂಡಿತು. ದ್ರಾಕ್ಷಿಗೆ ಊರಿದ ಬಿದಿರು ಗೂಟ ನುಂಗಿ ಹುತ್ತು ಮೇಲೇರುತ್ತಾ ಮೇಲೇರುತ್ತಾ ಹೋಯ್ತು. ಕೊನೆಗೆ ನನ್ನ ದ್ರಾಕ್ಷಿ ಹಣ್ಣಿನ ಬದಲು ಬಳ್ಳಿಯೇ ಮನುಕ(ಒಣ ದ್ರಾಕ್ಷಿ) ಆಯ್ತು!
ಒಂದಿನ ಬಳ್ಳಿ, ಬಿದಿರಿನ ಯಾವ ಕುರುಹು ಇರಲಿಲ್ಲ. ಅದೇ ದಿನ ಬಯಲು ಸೀಮೆಯ ದ್ರಾಕ್ಷಿ ನೆಲದ ಮಂದಿ ನಮ್ಮನೆಗೆ ಬಂದಿದ್ದರು. ಎತ್ತರದ ಹುತ್ತ ನೋಡಿ ಕೇಳಿದರು ‘ಇಲ್ಲಿ ನಾಗಪ್ಪ ದೇವರು ಉಂಟೆ? ‘ ನಾನು ಉತ್ತರಿಸಲಿಲ್ಲ, ಅಷ್ಟರಲ್ಲಿ ಅವರು ಕೈ ಮುಗಿದರು. ದ್ರಾಕ್ಷಿಯ ಕಥೆ ಅವರಿಗೆ ಒಂಚೂರು ಹೇಳಲಿಲ್ಲ.
ಇವತ್ತು ದ್ರಾಕ್ಷಿ ನೆಟ್ಟ ಐದಾರು ವರ್ಷಗಳ ನಂತರ ಜಾಗ ನೋಡಿದರೆ ಹುತ್ತದ ತುದಿ ಗೋಪುರದಲ್ಲಿ ಜೀರುಂಡೆಯ ಒಂದು ಪೊರೆ ಇದೆ. ಭೂಗತ ಜೀವಿ ಬೇರಿನ ರಸ ಹೀರಿ ಬದುಕಿದ್ದು ಒಂದಿನ ಹುತ್ತಕ್ಕೆ ಪೊರೆ ಇಟ್ಟು ಕಾನಿಗೆ ಜಿಗಿದು ಹಾರಿ ಹೋಗಿದೆ.
ನನಗೀಗ ದ್ರಾಕ್ಷಿ, ಬಿದಿರು, ಗೆದ್ದಲು, ಜೀರುಂಡೆಗಳ ನವಿರಾದ ಸಂಬಂಧ ಕಾಣಿಸುತ್ತಿದೆ. ಆಗಾಗ ನಮ್ಮ ಸುತ್ತ ಹಾಡುವ ಜೀರುಂಡೆ ಸ್ವರದಲ್ಲಿ ಈ ಹುತ್ತದ ಪೊರೆಯ ಜೀರುಂಡೆ ಅಸಲಿ ಹಾಡು ಯಾವುದು? ಗೊತ್ತಾಗುತ್ತಿಲ್ಲ.
ನಿಮಗೆ ಸಿಕ್ಕರೆ ನನಗೂ ಹೇಳಿ ಆಯ್ತಾ