ಹಿಂದಿನವರ ಆಯಸ್ಸು ಜಾಸ್ತಿಯೇ? ಇಂದಿನವರ ಆಯಸ್ಸು ಜಾಸ್ತಿಯೇ?

0
ಲೇಖಕರು: ಡಾ. ಶ್ರೀಧರ್ ಎನ್.ಬಿ. ಹಿರಿಯ ಪಶುವೈದ್ಯರು

ಹಿಂದಿನವರ ಆಯಸ್ಸು ತುಂಬಾ ಜಾಸ್ತಿ ಇತ್ತು. ಅವರ ಜೀವನ ಶೈಲಿಯಲ್ಲಿಯೇ ಹಾಗಿತ್ತು. ಉತ್ತಮ ಆಹಾರ, ಕಲುಷಿತವಲ್ಲದ ಗಾಳಿ, ಉತ್ತಮ ನೀರು ದೊರೆಯುತ್ತಿತ್ತು. ಆಗ ಕಾಯಿಲೆಗಳ ಪ್ರಮಾಣವೇ ಕಡಿಮೆ ಇತ್ತು. ಈವತ್ತಿನ ಜನಕ್ಕೆ ಕಾಯಿಲೆ ತುಂಬಾ ಜಾಸ್ತಿ. ಬೇಗನೇ ಸತ್ತು ಹೋಗುತ್ತಾರೆ. ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ, ಹೃದಯದ ಕಾಯಿಲೆ ಜಾಸ್ತಿಯಾಗಿ ಜನ ಬೇಗ ಶಿವನ ಪಾದ ಸೇರಿಕೊಳ್ತಾರೆ ಎಂದುಕೊಳ್ತಿದ್ದೀರಲ್ವಾ? ಹಾಗಿದ್ದರೆ ನಿಮ್ಮ ಊಹೆ ನಂಬಿಕೆ ಶುದ್ಧ ತಪ್ಪು.

ಹಿಂದಿನ ಕಾಲದ ಮನುಷ್ಯರಿಗಿಂತ ಈಗಿನವರ ಆಯಸ್ಸು ಜಾಸ್ತಿ, ಇವರು ಬದುಕಿ ಬಾಳುವ ಸಾಧ್ಯತೆ ತುಂಬಾ ಜಾಸ್ತಿ, ಮರಣದ ಸಂಖ್ಯೆ ಗಣನೀಯವಾಗಿ ಈಗ ಇಳಿದಿದೆ ಎಂದು ಈಗಿನ ಅಂಕಿ ಅಂಶಗಳು ಕರಾರುವಾಕ್ಕಾಗಿ ಹೇಳುತ್ತಿವೆ.

ಸದ್ಯ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಪ್ರಪಂಚದಲ್ಲಿ ಗಂಡು ಹೆಣ್ಣು ಇಬ್ಬರದು ಸರಾಸರಿ 73.2 ವರ್ಷಗಳಾಗಿದ್ದರೆ ಗಂಡಿನದು 70.8 ವರ್ಷಗಳಾದರೆ ಹೆಣ್ಣಿನದು 75.6 ವರ್ಷಗಳು. ಅಂದರೆ ಹೆಣ್ಣು ಜೀವಿಗಳು ಗಂಡುಗಳಿಗಿಂತ ಸುಮಾರು 6 ವರ್ಷ ಹೆಚ್ಚೇ ಬದುಕುತ್ತಾರೆ.

ಭಾರತದ ಅಂಕಿ ಅಂಶಗಳನ್ನೇ ನೋಡಿ. ಇಲ್ಲಿಯೂ  ಹೆಣ್ಣು ಮಕ್ಕಳ ಬದುಕುವ ಆಯಸ್ಸು 71.80 ಇದ್ದರೆ ಗಂಡಸರದು 69.16 ಮತ್ತು ಸರಾಸರಿ 70.42. ಇನ್ನು ಪ್ರಪಂಚದ 193 ದೇಶಗಳ ವಿಷಯಕ್ಕೆ ಬಂದರೆ ಹಾಂಕಾ೦ಗಿನಲ್ಲಿ ಅತ್ಯಂತ ಹೆಚ್ಚಿನ ಆಯಸ್ಸು ದಾಖಲಾಗಿದ್ದು ಅದು ಸರಾಸರಿ 85.29 ಇದ್ದು ಗಂಡಸರದು 82.38 ಮತ್ತು ಹೆಂಗಸರದು 88.17 ವರ್ಷಗಳು. ಅತ್ಯಂತ ಕನಿಷ್ಟ ಸರಾಸರಿ ಆಯಸ್ಸು 54.36 ಗಂಡಸರದು 52.16 ಮತ್ತು ಹೆಂಗಸರದು 56.58 ವರ್ಷಗಳು.

ವಿಶ್ವ ಆರೋಗ್ಯ ಸಂಸ್ಥೆಯ ದಾಖಲೆಯ ಪ್ರಕಾರ ಹಿಂದಿನ ಕಾಲ ಅಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಮನುಷ್ಯನ ಸರಾಸರಿ ಆಯಸ್ಸು 64 ವರ್ಷಗಳು. ಅಂದರೆ ಈಗಿನ ಸರಾಸರಿ ಆಯಸ್ಸಿನಿಂತ ಅನೇಕ ಪಟ್ಟು ಕಡಿಮೆ. ಹಾಗಿದ್ದರೆ ಯಾವ ಆಧಾರದ ಮೇಲೆ ಹಿಂದಿನವರ ಆಯಸ್ಸು ಜಾಸ್ತಿಯಿತ್ತು ಎಂದು ಹೇಳಲಾಗುತ್ತದೆಯೋ ಗೊತ್ತಿಲ್ಲ. ಹೋಗಲಿ ಇನ್ನೂ ಹಿಂದೆಯಾದರೂ ಜಾಸ್ತಿಯಿತ್ತೇ? ಖಂಡಿತಾ ಇಲ್ಲ.

1800 ಮತ್ತು 2000 ಇಸವಿಗಳ ನಡುವೆ 200 ವರ್ಷಗಳಲ್ಲಿ ಇರುವ ಆಯಸ್ಸಿನ ಸಮೀಕ್ಷೆಯ ಜೀವಿತಾವಧಿಯು ಭಾರತದಲ್ಲಿ ಸುಮಾರು 45 ವರ್ಷಗಳಿದ್ದು ಜಾಗತಿಕ ಸರಾಸರಿ 67 ಇತ್ತು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದು 75 ವರ್ಷಗಳಿತ್ತು. 2020 ರ ಸಾಲಿನಲ್ಲಿ ಇದು ಜಾಗತಿಕ ಮಟ್ಟದಲ್ಲಿ 70 ವರ್ಷಗಳಾಗಿತ್ತು. ಅಂದರೆ ಹಿಂದಿನ ಕಾಲದಲ್ಲಿ ಜನ ತುಂಬಾ ಜಾಸ್ತಿ ವರ್ಷ ಬದುಕುತ್ತಿದ್ದರು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಇನ್ನು ಮಹಾಭಾರತ, ರಾಮಾಯಣದ ಕಾಲದಲ್ಲಿ, ಪುರಾಣ ಕಾಲದಲ್ಲಿ ಜನ ಸಹಸ್ರಾರು ವರ್ಷಗಳು ಬದುಕುತ್ತಿದ್ದರು ಎಂಬ ಪ್ರತೀತಿ ಇದೆಯಾದರೂ ಇದೊಂದು ನಂಬಿಕೆಯಾಗಿ ಉಳಿದಿದೆಯೇ ವಿನ: ಸಹ ಇದಕ್ಕೆ ಅಷ್ಟು ಉತ್ತಮ ದಾಖಲೆಗಳಿಲ್ಲ.

ಹಾಗಿದ್ದರೆ ನಮ್ಮ ಹಿರಿಯರು ಸಿಕ್ಕಾಪಟ್ಟೆ ವರ್ಷ ಬದುಕುತ್ತಿದ್ದರು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಾಗಲಿ ಅಥವಾ ಸಾಂಖ್ಯಕ ಆಧಾರಗಳಾಗಲಿ ಇಲ್ಲ. ಇದೊಂದು ನಂಬಿಕೆ ಅಷ್ಟೆ.

ಹಿಂದಿನವರ ಆಯಸ್ಸೇ ಜಾಸ್ತಿಯಿತ್ತು ಎನ್ನುವವರು ಈ ಕುರಿತೂ ಸಹ ಗಮನ ಹರಿಸಿ. ಪ್ರಸಿದ್ಧ ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನಾ ಲೇಖನವೊಂದರ ಪ್ರಕಾರ 2170 ನೇ ಸಾಲಿನಷ್ಟರಲ್ಲಿ ಮನುಷ್ಯನ ಸರಾಸರಿ ಆಯಸ್ಸು 125 ವರ್ಷಗಳಿಗೆ ಹೆಚ್ಚಬಹುದಂತೆ!!. ಅಂದರೆ ಇನ್ನು ಮುಂದಿನ ವರ್ಷಗಳಲ್ಲಿ ಮನುಷ್ಯನ ಆಯಸ್ಸು ವರ್ಧಿಸುವುದೇ ಹೊರತು ಇಳಿಯುವುದಿಲ್ಲ ಎಂಬುದು ಕಳೆದ ಒಂದು ಸಾವಿರ ವರ್ಷಗಳ ಮಾನವನ ಇತಿಹಾಸದ ಅಧ್ಯಯನ ಮಾಡಿದಾಗ ಗೊತ್ತಾದ ವಿಷಯ. ಅದರಲ್ಲೂ ಸಹ ಒಂದಿಷ್ಟು ಪ್ರಮಾಣದಲ್ಲಿಯಾದರೂ ಅಧುನಿಕ ಜಗತ್ತಿನ ಸಹ ಒತ್ತಡಗಳು, ಆಹಾರದ ಗುಣಮಟ್ಟ, ಕಲುಷಿತ ವಾತಾರವರಣ ಬದಲಾದರೆ ಇನ್ನೂ ಆಯಸ್ಸು ವರ್ಧಿಸಬಹುದು.

ನಮ್ಮ ನಿಮ್ಮ ಸುತ್ತಮುತ್ತಲು ಒಂದಿಷ್ಟು ಅಜ್ಜ ಅಜ್ಜಿಯರು ಆರೋಗ್ಯದಿಂದಿದ್ದು ಜಾಸ್ತಿ ದಿನ ಬದುಕಿದರೆ ಅದು ವೈಯಕ್ತಿಕ ಮಟ್ಟದ ಅಭಿಪ್ರಾಯವಾಗಬಹುದೇ ಹೊರತು ಅದು ಸಾಂಖ್ಯಿಕ ಶಾಸ್ತ್ರದ ಮೂಲಕ ಗಮನಿಸಿದರೆ ಗೌಣ. ಕಾರಣ ನಮ್ಮಜ್ಜ ಆ ಕಾಲದಲ್ಲಿ ಜಾಸ್ತಿ ದಿನ ಬದುಕಿದ್ದರು ಎನ್ನುವುದು ವೈಯಕ್ತಿಕ ಅಭಿಪ್ರಾಯವಾಗುತ್ತದೆಯೇ ವಿನ: ಸರಾಸರಿ ಆಯಸ್ಸಿಗೆ ಗಮನಿಸಿದಾಗ ಅದು ಗೌಣ.

ಅಷ್ಟಕ್ಕೂ ಇತ್ತೀಚೆಗಿನ ವರ್ಷಗಳಲ್ಲಿ ಮನುಷ್ಯನ ಸರಾಸರಿ ಆಯಸ್ಸು ವರ್ಧಿಸಲು ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿನ ನೂತನ ಆವಿಷ್ಕಾರಗಳು, ಹೊಸ ಔಷಧಿಗಳ ಪತ್ತೆ, ಕಾಯಿಲೆಯ ಪತ್ತೆಯ ಬಗ್ಗೆ ನಿಖರ ವಿಧಾನಗಳು, ತಡೆಗಟ್ಟಲು ಲಸಿಕಾ ಪ್ರಯೋಗಗಳು, ನಿರಂತರ ಆರೋಗ್ಯ ಚಿಂತನೆ, ಆರೋಗ್ಯ ವರ್ಧನೆಗೆ ಸರ್ಕಾರಗಳು ತೆಗೆದುಕೊಂಡ ಅನೇಕ ಕ್ರಮಗಳು ಕಾರಣ.

ಒಂದೇ ಒಂದು ಪ್ಲೇಗು ಪ್ರಪಂಚದ ಶೇ 30-60 ರಷ್ಟು ಜನರ ಆಯಸ್ಸನ್ನು ನುಂಗಿ ಹಾಕಿತು. ಆದರೆ ಕೊರೋನಾದಂತ ಅತ್ಯಂತ ಸಾಂಕ್ರಾಮಿಕ ಮಹಾಮಾರಿಯೂ ಸಹ ಪ್ರಪಂಚದ 3.4 ರಷ್ಟು ಮಾತ್ರ ಜನರ ಆಯಸ್ಸನ್ನು ನುಂಗಿಹಾಕಲು ಸಾಧ್ಯವಾಯಿತು. ಇದು ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿನ ಪ್ರಗತಿಯಿಂದ. ಇನ್ನೂ ಹೆಚ್ಚಿನ ಸಂಶೋಧನೆಗಳು ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಗಬೇಕು ಮತ್ತು ಮನುಜ ಕುಲದ ಆಯಸ್ಸು, ಬದುಕಿನ ಗುಣಮಟ್ಟ ಜಾಸ್ತಿಯಾಗಬೇಕು. ಬಹಳ ಮುಖ್ಯವಾಗಿ ಜನರಲ್ಲಿ ಉತ್ತಮ ವೈಜ್ಞಾನಿಕ ಚಿಂತನೆ ಪ್ರಾರಂಭವಾದರೆ ಅದು ಅತ್ಯಂತ ಆಶಾದಾಯಕ.

ಡಾ, ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-577204

LEAVE A REPLY

Please enter your comment!
Please enter your name here