1985 ರಿಂದ ಇದುವರೆಗೂ ಪ್ರಪಂಚದಾದ್ಯಂತ ಎಷ್ಟು ಪ್ರಮಾಣದ ಅರಣ್ಯ ಪ್ರದೇಶಗಳು ನಷ್ಟವಾಗಿವೆ ಮತ್ತು ಈಗ ಸಧ್ಯಕ್ಕೆ ಎಷ್ಟು ಪ್ರಮಾಣದ ಅರಣ್ಯಪ್ರದೇಶ ಉಳಿದಿದೆ ಎನ್ನುವುದರ ಒಂದು Statistical analysis ಇದು.
ಅಭಿವೃದ್ದಿ ಹೆಸರಿನಲ್ಲಿ ಇರೋ ಬರೋ ಲಕ್ಷಾಂತರ ಕಿಲೋ ಮೀಟರ್ ವಿಸ್ತಾರ ಹಚ್ಚಹಸುರಿನಿಂದ ನಳನಳಿಸುತ್ತಿದ್ದ ದಟ್ಟಾರಣ್ಯಗಳನ್ನ ಕಡಿದು ಹಾಕಿ ಕೆಲವೇ ಕೆಲವು ಲಿಲೋ ಮೀಟರ್ಗಳಷ್ಟು ಅರಣ್ಯ ವಲಯಗಳನ್ನ ಸ್ಥಾಪಿಸಲಾಗಿದೆ.
ವನ್ಯಜೀವಿಗಳು ಇಲ್ಲಿಯಾದರೂ ನೆಮ್ಮದಿಯಿಂದ ಇದಾವೆ ಎಂದುಕೊಂಡಿರಾ!? ಊಹ್ಞೂಂ ಇಲ್ಲ. ಹಣ ಮಾಡಲೆಂದೇ ಪ್ರವಾಸೋದ್ಯಮದ,ರೆಸಾರ್ಟ್, ಸಫಾರಿ ಹೆಸರಿನಲ್ಲಿ ಇಲ್ಲಿಯೂ ಅವುಗಳ ನೆಮ್ಮದಿ, ಸ್ವಾತಂತ್ರ್ಯಹರಣ ಮಾಡಿಯಾಗಿದೆ. ದಟ್ಟ ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತ ತಮಗೆ ಹಸಿವಾದಾಗ ಬೇಟೆಯಾಡಿ ಹಸಿವು ನೀಗಿಸಿಕೊಂಡು ತಮ್ಮ ಸಂತಾನೋಭಿವೃದ್ದಿಯಲ್ಲಿ ತೊಡಗಿಕೊಳ್ಳುವ ಅವುಗಳ ಸ್ವಚ್ಛಂದ ಜೀವನಕ್ಕೆ ಜೀಪು ಬಸ್ಸು ಟ್ರೈನು ಇತ್ಯಾದಿ ವಾಹನಗಳ ಕರ್ಣಕಠೋರ ಹಾರ್ನ್ ನಿಂದ ಅವುಗಳ ನೆಮ್ಮದಿ ಕಸಿಯಲಾಗಿದೆ
ವನ್ಯಜೀವಿಗಳಿಗೆ ಇತ್ತ ದಟ್ಟವಾದ ಅರಣ್ಯ ಇಲ್ಲ .ಅತ್ತ ಇರೋಬರೋ ಕೊಂಚ ಅರಣ್ಯದಲ್ಲಿ ನೆಮ್ಮದಿಯೂ ಇಲ್ಲ. ರೋಷಗೆಟ್ಟ ವನ್ಯಜೀವಿಗಳು ನಾಡಿನ ಮಾನವರ ಮೇಲೆ ದಾಳಿ ಮಾಡದೇ ಇರುತ್ತವೆಯೇ !? ಅರಣ್ಯ ನಾಶಕ್ಕೆ ಪ್ರಪಂಚದ ಎಲ್ಲ ಸರಕಾರಗಳ ಕೆಲವು ಆರ್ಥಿಕ ನೀತಿ ನಿಯಮಗಳು ತಮ್ಮ ಕೊಡುಗೆಯನ್ನ ಕೊಡುತ್ತಲೇ ಇವೆ.ಆ ಆರ್ಥಿಕ ನೀತಿಯಲ್ಲಿ ತೋರಿಕೆಯ ಅರಣ್ಯಾಭಿವೃದ್ದಿಯ ಚಿಂತನೆ ಇದೆಯೇ ಹೊರತು ನೈಜ ಅರಣ್ಯ ಪುನಃಶ್ಚೇತನದ ಚಿಂತನೆ ಇಲ್ಲವೇ ಇಲ್ಲ.
ಈ ಅರಣ್ಯನಾಶಕ್ಕೆ ನಮ್ಮ ನಿಮ್ಮಂತ ಸಾಮಾನ್ಯರ ಕೊಡುಗೆಯೂ ಒಂದಲ್ಲ ಒಂದು ರೀತಿಯಿಂದ ಇದ್ದೇ ಇದೆ. ಈ ಪೃಥ್ವಿಯ ಮೇಲೆ ಈಗ ವನ್ಯಜೀವಿಗಳಿಗಿಂತ ಮಾನವರ ಸಂಖ್ಯೆಯೇ ಅತಿಹೆಚ್ಚು. ಸಾಕಣೆ ಮಾಡುವ ಜಾನುವಾರುಗಳ ಸಂಖ್ಯೆಯ ಕೇವಲ ಶೇಕಡ 3 ರಷ್ಟು ಮಾತ್ರ ವನ್ಯಜೀವಿಗಳು ಇವೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ.
ನೀವು ಮೂವತ್ತು ನಲವತ್ತು ವರ್ಷಗಳ ಹಿಂದೆ ಬಸ್ಸಲ್ಲಿ, ಟ್ರೇನಲ್ಲಿ ಒಂದೂರಿಂದ ಇನ್ನೋಂದೂರಿಗೆ ಪ್ರಯಾಣಿಸುವಾಗ ಮಾರ್ಗ ಮಧ್ಯದಲ್ಲಿ ಎಷ್ಟು ಕುರುಚಲುಗಳು, ಮರಗಿಡಗಳು ಕಂಡುಬರುತ್ತಿದ್ದವು ಈಗ ಎಷ್ಟು ಕಂಡುಬರುತ್ತವೆ ಒಮ್ಮೆ ಅವಲೋಕಿಸಿ ನೋಡಿ.ಈಗ ಒಂದೂರಿಂದ ಇನ್ನೋಂದೂರಿನ ಮಧ್ಯದಲ್ಲಿ ಸಣ್ಣ ಪ್ರಮಾಣದ ಅರಣ್ಯವೂ ಕಾಣಿಸುವುದು ತೀರಾ ಕಡಿಮೆ.ಕೇವಲ ದಟ್ಟ ಕಾಂಕ್ರೀಟ್ ವಲಯ ಬಿಟ್ಟರೆ ಹಸಿರು ಕಾಣಿಸುವುದೇ ಅಪರೂಪವಾಗಿಬಿಟ್ಟಿದೆ.ಅಲ್ಲಿ ಇಲ್ಲಿ ಕಂಡಾಗ ಮನಸ್ಸಿಗೆ ಕೊಂಚ ಮುದವೆನಿಸಿ ಮರುಭೂಮಿಯಲ್ಲಿ ಓಯಸಿಸ್ ಕಂಡಂತೆ ಹಾಯ್ ಎಂದೆನಿಸುತ್ತೆ .
ಇತ್ತ ಭೂಮಿಯ ಮೇಲಿನ ಅರಣ್ಯಗಳ ಪರಿಸ್ಥಿತಿ ಹೀಗಾದರೇ ಅತ್ತ ಸಾಗರಗಳ ಪರಿಸ್ಥಿತಿಯಂತೂ ಇದಕ್ಕಿಂತಲೂ ಇನ್ನೂ ಘನಘೋರ ಭೀಕರ ಬರ್ಬರವಾಗಿದೆ.ಆಘಾತಕಾರಿ ಸಂಗತಿ ಎಂದರೆ ಈಗ ಸಮುದ್ರದಾಳದಲ್ಲಿಯೂ ಮೈನಿಂಗ್ ಶುರುವಾಗಿಬಿಟ್ಟಿದೆ.