‘ನನ್ನ ಯಶಸ್ಸಿನ ತಳಹದಿಯೇ ಸಮಗ್ರ ಕೃಷಿ. ಇದೇ ಸಾಧನೆಯ ಮಂತ್ರ ಮತ್ತು ಜೀವಾಳ’ ಹೀಗೆನ್ನುತ್ತಾರೆ ಇಡೀ ಕೃಷಿರಂಗವೇ ತಮ್ಮತ್ತ ಅಚ್ಚರಿಯಿಂದ ನೋಡುವಂತೆ ಮಾಡಿದ ರೈತ ಸದಾನಂದ. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರದ ತಪಸೀಹಳ್ಳಿ ಗ್ರಾಮ ನಿವಾಸಿ. ವ್ಯವಸಾಯ ಎಂದರೆ ನಷ್ಟದಾಯಕ ಬಾಬತ್ತು ಎನ್ನುವ ಭಾವನೆ ದಟ್ಟವಾಗಿದೆ. ಇಂಥ ಸಂದರ್ಭದಲ್ಲಿ ಐವತ್ತರ ವಯೋಮಾನದ ಅತಿ ಸಣ್ಣ ರೈತ ಸದಾನಂದ ಅವರು ಕೃಷಿಯಲ್ಲಿ ಮಾಡಿದ ಸಾಧನೆ ಮತ್ತು ಇದೇ ಹಾದಿಯಲ್ಲಿ ಮುಂದುವರಿಲು ರೂಪಿಸಿಕೊಂಡಿರುವ ಯೋಜನೆಗಳು ಬಲು ಅಪರೂಪದ ವಿದ್ಯಮಾನ…

ಹೆಚ್. ಸದಾನಂದ ಅವರದು ಕೃಷಿಕ ಕುಟುಂಬದ ಹಿನ್ನೆಲೆ. ಎಸ್.ಎಸ್.ಎಲ್.ಸಿ. ತನಕ ವಿದ್ಯಾಭ್ಯಾಸ. ನಂತರ ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆಯೊಂದರ ನೌಕರಿ. 2000ನೇ ಇಸವಿಯಲ್ಲಿ ಕೆಲಸ ಬಿಡಲು ನಿರ್ಧರಿಸಿದಾಗ ಆತ್ಮೀಯರ ಸಲಹೆ ‘ಇನ್ನೂ 20 ವರ್ಷ ಸೇವೆಯಿದೆ. ಕೈ ತುಂಬ ಸಂಬಳ ಬರುವ ಕೆಲಸ ಬಿಡಬೇಡ’ ಆದರೆ ಸದಾನಂದ ಕೆಲಸ ಬಿಡಲು ನಿರ್ಧರಿಸಿದ್ದರು. ಇದರ ಹಿಂದೆ ಮನಸಿನಲ್ಲಿ ವರ್ಷಗಳ ಕಾಲ ರೂಪಿಸಿಕೊಂಡ ಯೋಜನೆಯಿತ್ತು. ಊರಿಗೆ ಹಿಂದಿರುಗಿ ಹಿರಿಯರಿಂದ ಬಂದಿದ್ದ ಭೂಮಿಯಲ್ಲಿ ಕಾಯಕ ಮಾಡಲು ಮನಸ್ಸು ಮಾಡಿದ್ದರು. ಇವರೊಂದಿಗೆ ಪತ್ನಿ, ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು ಊರಿಗೆ ಹಿಂದಿರುಗಿದರು. ಊರೊಳಗೆ ಮನೆ ಇದ್ದರೂ ಜಮೀನಿನಲ್ಲಿಯೇ ಆಗ ಪುಟ್ಟದೊಂದು ಮನೆ ಮಾಡಿ ನೆಲಸಿದರು.

ಪ್ರಾರಂಭದಲ್ಲಿ ಅಂದುಕೊಂಡಷ್ಟು ಕೃಷಿಕಾರ್ಯ ಸರಳವಾಗಿರಲಿಲ್ಲ. ಆದರೆ ಸದಾನಂದ ಮುಂದಿಟ್ಟ ಹೆಜ್ಜೆ ಹಿಂದಿಡಲಿಲ್ಲ. ಒಂದೆರಡು ವರ್ಷ ಇರುವ ಎರಡೂಕಾಲು ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಕ್ಷೇತ್ರಬೆಳೆಗಳನ್ನು ಬೆಳೆದರು. ಆದರೆ ಇದರಿಂದ ನಷ್ಟವೇನೂ ಆಗದಿದ್ದರು ಲಾಭ ಮಾತ್ರ ಖಂಡಿತ ಆಗಿರಲಿಲ್ಲ. ಕುಟುಂಬದ ಹೆಚ್ಚುತ್ತಿದ್ದ ಅವಶ್ಯಕತೆಗಳನ್ನು ಪೂರೈಸುವಷ್ಟು ಆದಾಯ ತರುತ್ತಿರಲಿಲ್ಲ. ಆದ್ದರಿಂದ ನೀರಾವರಿ ಆಶ್ರಿತ ತೋಟಗಾರಿಕೆ ಮಾಡಲು ನಿಶ್ಚಯಿಸಿದರು. ಕೊಳವೆಬಾವಿ ತೋಡಿಸಲು ನಿರ್ಧರಿಸಿದಾಗ ಜಮೀನಿನಲ್ಲಿ ನೀರಿನ ಲಭ್ಯತೆ ಇದೆಯೇ ಎಂದು ತಜ್ಞರಿಂದ ತಿಳಿದು ಮುಂದುವರಿದರು. ತೋಡಿಸಿದ ಕೊಳವೆ ಬಾವಿ ಪ್ರತಿ ಒಂದು ಗಂಟೆಗೆ 4000 ಗ್ಯಾಲನ್ ನೀರು ಪೂರೈಸತೊಡಗಿದಾಗ ಸಮಾಧಾನ.

ಜಮೀನಿನಲ್ಲಿ ನೀರು ಸಿಕ್ಕಿದ ಶುರುವಿನಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆಯತೊಡಗಿದರು. ಪರವಾಗಿಲ್ಲ ಎನ್ನುವ ಆದಾಯ ತರಕಾರಿ ಕೃಷಿಯಿಂದ ಬಂದರೂ ಸಮಾಧಾನಕರವಾಗಿರಲಿಲ್ಲ. ವರ್ಷವಿಡೀ ಆದಾಯ ತರುವ ರೀತಿ ಕೃಷಿಯೋಜನೆ ರೂಪಿಸಬೇಕೆಂದು ನಿರ್ಧರಿಸಿದರು. ಅದರಂತೆ ಕಾರ್ಯಪ್ರವೃತ್ತರೂ ಆದರು. ತ್ರೈ ಮಾಸಿಕ, ಅರೆವಾರ್ಷಿಕ; ವಾರ್ಷಿಕ ಮತ್ತು ಬಹು ವಾರ್ಷಿಕ ಬೆಳೆಗಳನ್ನು ಬೆಳೆಸಲು ಮತ್ತು ಜಾನುವಾರು ಸಾಕಾಣಿಕೆ ಮಾಡಲು ನಿರ್ಧರಿಸಿದರು. ಆದರೆ ಇರುವ ಜಮೀನು ಕೇವಲ ಎರಡೂಕಾಲು ಎಕರೆ. ಇಷ್ಟು ಕಡಿಮೆ ಪ್ರಮಾಣದ ಜಮೀನಿನಲ್ಲಿಯೇ ಅಂದುಕೊಂಡಿದ್ದೆಲ್ಲವನ್ನೂ ಮಾಡಬೇಕಿತ್ತು. ವ್ಯವಸ್ಥಿತವಾಗಿ ಯೋಜನೆ ಮಾಡಿದ ಕಾರಣ ಎಲ್ಲವೂ ಸಾಧ್ಯವಾಯಿತು.

ಜಮೀನಿನ ಅಂಚಿನ ಸುತ್ತಲೂ 50 ತೆಂಗಿನ ಸಸಿಗಳನ್ನು ನೆಟ್ಟರು. ಅದರೊಂದಿಗೆ ಜಮಿನಿನ ಒಳಭಾಗದಲ್ಲಿ ಸಫೋಟಾ, ಹಲಸು, ಅಗಸೆ, ತೇಗ, ಸಿಲ್ವರ್ ಓಕ್, ಹೊಂಗೆ ಇತ್ಯಾದಿ ಸಸಿಗಳನ್ನು ನೆಟ್ಟರು. 20 ಗುಂಟೆಯಲ್ಲಿ ಅಡಿಕೆ ಸಸಿಗಳನ್ನು ಹಾಕಿದರು. ಇವೆಲ್ಲವುಗಳಿಗೂ ಸಸ್ಯತ್ಯಾಜ್ಯಗಳಿಂದಲೇ ಮುಚ್ಚಿಗೆ ಮಾಡಿ ಸಾವಯವ ಗೊಬ್ಬರಗಳನಷ್ಟೇ ಪೋಷಕಾಂಶವಾಗಿ ಪೂರೈಸತೊಡಗಿದರು. 2003-4ನೇ ಇಸವಿಯೊಳಗೆ ಇವರ ತೋಟದಲ್ಲಿ ಹೈನುಗಾರಿಕೆ, ಕುರಿ ಮತ್ತು ಕೋಳಿ ಸಾಕಾಣಿಕೆ ಸಾಗತೊಡಗಿತ್ತು. ಬಯೋಗ್ಯಾಸ್ ಸ್ಥಾವರ ಸ್ಥಾಪನೆಯಾಗಿತ್ತು. ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡತೊಡಗಿದರು. ಇವೆಲ್ಲದರಿಂದ ವಾರ್ಷಿಕ ಆದಾಯ 3 ಲಕ್ಷ ರುಪಾಯಿಗಳಿಗೆ ತಲುಪಿತ್ತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ‘ಗ್ರಾಮೀಣ ಜೈವಿಕ ಸಂಪನ್ಮೂಲ ಘಟಕ’ ದವರರನ್ನು ಸಂಪರ್ಕಿಸಿ ಕೃಷಿ ಅಭಿವೃದ್ಧಿ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಸಂಗ್ರಹಿಸಿದರು. ನಂತರ ತರಕಾರಿ ಬೆಳೆಗಳನ್ನು ಅಧಿಕ ಪ್ರಮಾಣದಲ್ಲಿ ಬೆಳೆಯತೊಡಗಿದರು. ಪುಷ್ಪಕೃಷಿ ಕೈಗೊಂಡರು. ವಿವಿಧ ಸಸಿಗಳ ನರ್ಸರಿ ಪ್ರಾರಂಭಿಸಿದರು. ಸುಧಾರಿತ ತಳಿಗಳ ಕುರಿಗಳ ಸಂಖ್ಯೆ ಹೆಚ್ಚಿಸಿದರು. ಕೋಳಿಗಳ ಸಂಖ್ಯೆಯೂ ಹೆಚ್ಚಾಯಿತು. ವರ್ಮಿ ಕಾಂಪೋಸ್ಟ್ ಘಟಕ, ಅಜೋಲ್ಲಾ ಉತ್ಪಾದನಾ ಘಟಕಗಳು ಸ್ಥಾಪನೆಯಾದವು. ಎಲ್ಲವೂ ವೈಜ್ಞಾನಿಕ ಮಾದರಿಯ ನಿರ್ವಹಣೆ.

2009ನೇ ಇಸವಿಯೊಳಗೆ ಪಷ್ಪಕೃಷಿ ಅತ್ಯುತ್ತಮವಾಗಿ ಅಭಿವೃದ್ಧಿಯಾಗಿತ್ತು. ತೆರೆದ ಪದ್ಧತಿಯಲ್ಲಿ ಮಾಡುತ್ತಿದ್ದ ಗುಲಾಬಿ ಕೃಷಿಯನ್ನು ನಿಯಂತ್ರಿತ ಪದ್ಧತಿಗೆ ಬದಲಾಯಿಸಿದರು. ಇದರಿಂದ ಮೊದಲಿಗಿಂತಲೂ ಉತ್ತಮ ಫಲಿತಾಂಶ ದೊರೆಯಿತು. 20 ಗುಂಟೆಯಲ್ಲಿದ್ದ ಅಡಿಕೆ ಸಸಿಗಳು ಇಳುವರಿ ನೀಡತೊಡಗಿದವು. ಮುಚ್ಚಿಗೆ, ಚೆನ್ನಾಗಿ ಕಳಿಸಿದ ಸಾವಯವ ಗೊಬ್ಬರಗಳ ಪೂರೈಕೆ ಕಾರಣದಿಂದ ಇವುಗಳಿಂದ ಉತ್ತಮ ಪ್ರಮಾಣದ ಇಳುವರಿ ಲಭ್ಯ. ಇದೇ ಅಡಿಕೆ ತೋಟದಲ್ಲಿ ಗಿರಿರಾಜ ಮತ್ತು ಗಿರಿರಾಣಿ ತಳಿಗಳ ಕೋಳಿಗಳ ಸಾಕಾಣಿಕೆ ಆರಂಭಿಸಿದರು. ಕೋಳಿಗಳ ರಕ್ಷಣೆಗೆ ತೋಟದ ಸುತ್ತಲೂ ಸುಭದ್ರ ಬೇಲಿ.

ಗುಲಾಬಿ ಹೂವಿನ ಪ್ರಭೇದವಾದ ಕರಿಷ್ಮಾ ಹೂ ತಳಿಯನ್ನು ಒಂದೂವರೆ ಎಕರೆಗೆ ವಿಸ್ತರಿಸಿದರು. ‘ ತರಕಾರಿ ಕೃಷಿಗಿಂತಲೂ ಪಷ್ಪಕೃಷಿ ಹೆಚ್ಚಿನ ಲಾಭದಾಯಕ ಎನ್ನುವುದು ಅನುಭವಕ್ಕೆ ಬಂದಿದೆ’ ಎನ್ನುತ್ತಾರೆ ಸದಾನಂದ. ಗುಲಾಬಿಯ ವಿವಿಧ ತಳಿಗಳ ಹೂವುಗಳಿಗೆ ಮಾರುಕಟ್ಟೆಯಲ್ಲಿ ವರ್ಷವಿಡೀ ಬೇಡಿಕೆ. ಸಮೀಪದ ಮತ್ತು ಸ್ಥಳೀಯ ಮಾರುಕಟ್ಟೆಯಾದ ದೊಡ್ಡಬಳ್ಳಾಪುರಕ್ಕೆ ಇವರು ಬೆಳೆಯುವ ಪುಷ್ಪಗಳ ಹೆಚ್ಚಿನ ಪ್ರಮಾಣ ಪೂರೈಕೆಯಾಗುತ್ತದೆ. ಇದರಿಂದ ದಿನನಿತ್ಯವೂ ಆದಾಯ ದೊರೆಯುತ್ತದೆ. ಇದರಿಂದ ಬರುವ ಹಣದಿಂದಲೇ ಇವರ ಎಲ್ಲ ಕೃಷಿ ನಿರ್ವಹಣೆಯೂ ಸಾಗುತ್ತಿದೆ.

ಹತ್ತು ಗುಂಟೆಯಲ್ಲಿ ತರಕಾರಿ ಸಸಿಗಳ ನರ್ಸರಿ ಮಾಡಿದ್ದಾರೆ. ದೊಡ್ಡಬಳ್ಳಾಪುರ ಒಂದರಿಂದಲೇ ಸಸಿಗಳಿಗೆ ಬರುವ ಕೋರಿಕೆ ಪೂರೈಸಲು ಸಾಧ್ಯವಾಗದಷ್ಟು ಹೆಚ್ಚಿನ ಬೇಡಿಕೆಯಿದೆ. ವಿವಿಧ ತಳಿಗಳ ಬೀಜೋತ್ಪಾದನೆಯೂ ನಡೆಯುತ್ತಿದೆ. ಇದು ಇವುಗಳು ಸ್ಥಳೀಯ ರೈತರಿಗೆ ಮಾರಾಟವಾಗುತ್ತಿವೆ. ಆಯಾ ಕಾಲಘಟ್ಟದಲ್ಲಿ ಬೇಡಿಕೆಯಿರುವ ಮತ್ತು ಋತುಮಾನಕ್ಕನುಗುಣವಾದ ಉತ್ಪನ್ನಗಳ ಕೃಷಿಯಲ್ಲಿ ತೊಡಗಿರುವುದರಿಂದ ವರ್ಷದ ಎಲ್ಲ ದಿನಗಳು ಇವರ ತೋಟದಲ್ಲಿ ಚಟುವಟಿಕೆ ಸಾಗುತ್ತಿರುತ್ತದೆ. ಆದಾಯವೂ ಗಳಿಕೆಯಾಗುತ್ತಿರುತ್ತದೆ.

ಸದಾ ಹೊಸತನೇನಾದರೂ ಮಾಡಬೇಕೆಂಬ ಹಂಬಲ-ತುಡಿತ ಸದಾನಂದ ಅವರಿಗಿದೆ. ಕೈಗೊಂಡ ಕಾರ್ಯದಲ್ಲಿ ಗಣನೀಯ ಸಾಧನೆ ಮಾಡುವ ಛಲವೂ ಇದೆ. ಈ ನಿಟ್ಟಿನಲ್ಲಿ ಮಾಹಿತಿಗಳ ಸಂಗ್ರಹಣೆ ಮಾಡುತ್ತಿರುತ್ತಾರೆ. ಮೀನುಗಾರಿಕೆ ಕೈಗೊಂಡರೆ ಹೇಗೆ ಎಂಬ ಆಲೋಚನೆ ಮೂಡಿದಾಗ ತಡಮಾಡದೇ ಇದರ ಸಾಧಕ ಬಾಧಕಗಳು, ತಮ್ಮ ತೋಟದಲ್ಲಿ ಮೀನುಗಾರಿಕೆ ಕೈಗೊಳ್ಳಬಹುದೇ ಎಂಬ ಬಗ್ಗೆ ತಜ್ಞರೊಂದಿಗೆ ಚರ್ಚಿಸಿದರು. ‘ನಿಮ್ಮ ತೋಟದಲ್ಲಿ ಈಗಾಗಲೇ ಇರುವ ವಿಸ್ತಾರವಾದ ನೀರಿನ ತೊಟ್ಟಿಯಲ್ಲಿಯೇ ಮೀನುಗಾರಿಕೆ ಮಾಡಬಹುದು. ಇದಕ್ಕಾಗಿಯೇ ಪ್ರತ್ಯೇಕ ತೊಟ್ಟಿ ನಿಮಾರ್ಣದ ಅವಶ್ಯಕತೆಯಿಲ್ಲ’ ಎಂದು ತಜ್ಞರು ಹೇಳಿದಾಗ ಸದಾನಂದ ಇದನ್ನು ಕಾರ್ಯರೂಪಕ್ಕೆ ತಂದರು. ಶೀಘ್ರವಾಗಿ ಬೆಳವಣಿಗೆಯಾಗುವ ಉತ್ತಮ ತಳಿಗಳ ಮೀನುಮರಿಗಳನ್ನು ತಂದು ಸಾಕಾಣಿಕೆ ಮಾಡತೊಡಗಿದರು. ರೋಗ-ರುಜಿನ ತಾಗದಂತೆ ನಿರ್ವಹಣೆಯನ್ನೂ ಮಾಡತೊಡಗಿದರು. ಕೆಲ ತಿಂಗಳುಗಳಲ್ಲಿಯೇ ಇದರಿಂದಲೂ ಉತ್ತಮ ಆದಾಯ ಬರತೊಡಗಿತು.

ತೋಟದಲ್ಲಿರುವ ಹಸುಗಳಿಗೆ ಬೇಕಾದ ಪೌಷ್ಟಿಕ ಆಹಾರದ ಉತ್ಪಾದನೆಯನ್ನೂ ಮಾಡಲಾಗುತ್ತಿದೆ. ಅತ್ಯುತ್ತಮ ಪೌಷ್ಟಿಕ ಪಶು ಆಹಾರವಾದ ಅಜೋಲ್ಲಾ ಕೃಷಿ ಮಾಡುತ್ತಿದ್ದಾರೆ. ಇದರ ಸೇವನೆಯಿಂದ ಇಲ್ಲಿರುವ ಮಿಶ್ರತಳಿ ಹಸುಗಳು ಉತ್ತಮ ಪ್ರಮಾಣ-ಗುಣಮಟ್ಟದ ಹಾಲು ಉತ್ಪಾದನೆ ಮಾಡುತ್ತಿವೆ. ಇವುಗಳ ಸಗಣಿ ವ್ಯರ್ಥವಾಗಲೂ ಬಿಡದೇ ದಿನಬಂಧು ಮಾದರಿ ಬಯೋಗ್ಯಾಸ್ ಸ್ಥಾವರ ನಿರ್ಮಾಣ ಮಾಡಲಾಗಿದೆ. ಇದರಿಂದ ಬರುವ ಜೈವಿಕ ಅನಿಲವೇ ಮನೆಯ ಬಹುತೇಕ ಅಡುಗೆ ಕಾರ್ಯಗಳಿಗೆ ಬೇಕಾದ ಇಂಧನವಾಗಿ ಪೂರೈಕೆಯಾಗುತ್ತಿದೆ ಬಯೋಗ್ಯಾಸ್ ಸ್ಲರಿ ಮತ್ತು ತೋಟದ ಸಸ್ಯತ್ಯಾಜ್ಯಗಳನ್ನು ಮಿಶ್ರಣ ಮಾಡಿ ಚೆನ್ನಾಗಿ ಕಳಿಸಲಾಗುತ್ತದೆ. ಇದರಿಂದ ಲಭ್ಯವಾಗುವ ಉತ್ತಮ ಗುಣಮಟ್ಟದ ಕಾಂಪೋಸ್ಟ್ ಗೊಬ್ಬರ, ತೋಟಕ್ಕೆ ಬೇಕಾದ ಪೋಷಕಾಂಶವನ್ನು ಪೂರೈಸುವ ಪ್ರಮುಖ ಸಾವಯವ ಮೂಲ.

ತೋಟದಲ್ಲಿರುವ ಕೊಳವೆ ಬಾವಿಯಿಂದ ಸಾಕಷ್ಟು ಪ್ರಮಾಣದ ನೀರು ಲಭ್ಯವಿದೆ. ಆದರೆ ಇದರ ಒಂದು ಹನಿ ನೀರೂ ಅನಗತ್ಯವಾಗಿ ಬಳಕೆಯಾಗುತ್ತಿಲ್ಲ. ನೀರಿನ ಮಿತವ್ಯಯದ ದೃಷ್ಟಿಯಿಂದ ತೋಟಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ.’ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವುದರಿಂದ ತೋಟದಲ್ಲಿ ಕಳೆಗಳ ಬಾಧೆ ಇಲ್ಲ. ಪರಿಣಾಮ, ಕಳೆ ನಿಯಂತ್ರಣಕ್ಕೆ ಕೃಷಿಕಾರ್ಮಿಕರಿಗೆ ನೀಡಬೇಕಾದ ಹಣವೂ ಉಳಿತಾಯವಾಗಿದೆ. ನೀಡುವ ಎಲ್ಲ ಪೋಷಕಾಂಶ ಬೆಳೆಗಳಿಗೆ ದಕ್ಕುವುದರಿಂದ ಇಳುವರಿಯೂ ಅತ್ಯುತ್ತಮ. ಇದಲ್ಲದೇ ಆಗಾಗ ತೋಟದಲ್ಲಿ ಮಾಡಬೇಕಾದ ಸಿಂಪಡಣಾ ಕಾರ್ಯಗಳನ್ನು ಮನೆಮಂದಿಯೇ ಮಾಡುತ್ತೇವೆ. ಸಿಂಪಡಣೆ-ಧೂಮೀಕರಣ ಮಾಡಲು ಬೇಕಾದ ಮೋಟಾರನ್ನು ಹೊರಗಿನಿಂದ ಖರೀದಿಸಿ ತರದೇ ನಮ್ಮಲ್ಲಿಯೇ ಇದ್ದ ಹಳೇ ಸ್ಕೂಟರ್ ಇಂಜಿನಿನಲ್ಲಿ ಅಲ್ಪ ಸ್ವಲ್ಪ ಮಾರ್ಪಾಡು ಮಾಡಿ ಬಳಸುತ್ತಿದ್ದೇವೆ. ಇದರಿಂದಲೂ ಸಾಕಷ್ಟು ಪ್ರಮಾಣದ ಉಳಿತಾಯವಾಗುತ್ತದೆ. ಉಳಿಕೆಯಾಗಿದ್ದು ಕೂಡ ಲಾಭವೇ ತಾನೇ’ ಎಂದು ಮುಗುಳ್ನಗುತ್ತಾರೆ ‘ಸದಾನಂದ’

ತೋಟದ ಯಾವುದೇ ಉತ್ಪನ್ನಗಳ ತ್ಯಾಜ್ಯಗಳು ಅನುತ್ಪಾದಕವಾಗಲು ಬಿಡದೇ ಪೋಷಕಾಂಶಗಳಾಗಿ ಮರುಬಳಕೆ ಮಾಡುತ್ತಿರುವುದರಿಂದಲೇ ಕೃತಕ ಗೊಬ್ಬರಗಳಿಗೆ ವಿನಿಯೋಗಿಸಬೇಕಾದ ಹಣ ಗಣನೀಯ ಪ್ರಮಾಣದಲ್ಲಿ ಉಳಿತಾಯವಾಗುತ್ತದೆ. ಇವರ ಎರಡೂಕಾಲು ಎಕರೆ ತೋಟದಲ್ಲಿರುವ ಪ್ರತಿಯೊಂದು ಘಟಕ ಒಂದಕ್ಕೊಂದು ಪೂರಕವಾಗಿರುವುದನ್ನು ಕಾಣಬಹುದು. ಉದಾಹರಣೆಗೆ ಹೇಳುವುದಾದರೆ ಹೈನುರಾಸುಗಳಿಗೆ, ಕುರಿಗಳಿಗೆ, ಕೋಳಿಗಳಿಗೆ ಬೇಕಾದ ಆಹಾರ ತೋಟದಿಂದಲೇ ಪೂರೈಕೆಯಾಗುತ್ತದೆ. ತೋಟಕ್ಕೆ ಬೇಕಾದ ಸಮೃದ್ಧ ಪೋಷಕಾಂಶ ಈ ಪ್ರಾಣಿಗಳಿಂದಲೇ ಲಭ್ಯವಾಗುತ್ತದೆ. ಇದರಿಂದಲೇ ಈ ತೋಟ ಪ್ರತಿಯೊಂದು ಹಂತದಲ್ಲಿಯೂ ಸಮತೋಲನದಿಂದ ಸಾಗುತ್ತಿರುವುದನ್ನು ಕಾಣಬಹುದು. ಸದಾನಂದ ಅವರು ಬಹುಬೇಡಿಕೆಯಿರುವ ರಾಟ್ ವ್ಹೀಲರ್ ಮತ್ತು ಗ್ರೇಟ್ ಡೆನ್ ನಾಯಿ ತಳಿಗಳ ಅಭಿವೃದ್ಧಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ನಾಯಿಮರಿಗಳ ಮಾರಾಟದಿಂದಲೂ ಅತ್ಯುತ್ತಮ ಆದಾಯವಿದೆ. ಇಂಥ ಸಮಗ್ರ ಕೃಷಿಯ ಉದಾಹರಣೆ ಅಪರೂಪ.

ವರ್ಷದಿಂದ ವರ್ಷಕ್ಕೆ ಈ ತೋಟದ ಎಲ್ಲ ಘಟಕಗಳಿಂದಲೂ ಬರುವ ಆದಾಯದ ಪ್ರಮಾಣ ಏರಿಕೆಯಾಗುತ್ತಲೇ ಇದೆ ‘ ಮೊದಲಿನಿಂದಲೂ ಮಾಡಬೇಕಾದ ಎಲ್ಲ ಕೃಷಿಕಾರ್ಯಗಳನ್ನು ಚೆನ್ನಾಗಿ ಯೋಜಿಸಿ ಮಾಡುತ್ತಿದ್ದೇನೆ. ಇದರಿಂದ ನಷ್ಟಕ್ಕೊಳಗಾಗುವ ಅವಶ್ಯಕತೆ ಬಂದಿಲ್ಲ ಮತ್ತು ಬರುವುದು ಇಲ್ಲ. ಯಾವುದೇ ಒಂದೆರಡು ಬೆಳೆಗಳ ಮೇಲೆ ಅವಲಂಬಿತರಾಗದೇ ಸಮಗ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ನೀರಿನ ಮಿತವ್ಯಯದ ದಿಕ್ಕಿನಲ್ಲಿ ಸಾಧ್ಯವಿರುವ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಹೊರಗಿನಿಂದ ಸಾಧ್ಯವಾದಷ್ಟು ಮಟ್ಟಿಗೆ ಅವಶ್ಯವಿರುವ ಪೋಷಕಾಂಶಗಳನ್ನು ತರಬಾರದು. ಮನೆಮಂದಿಯೇ ಸಾಧ್ಯವಾದಷ್ಟು ಕೆಲಸಗಳನ್ನು ಕೃಷಿಕಾರ್ಮಿಕರ ಅವಶ್ಯಕತೆಯನ್ನು ಗಣನೀಯವಾಗಿ ತಗ್ಗಿಸಿಕೊಳ್ಳಬೇಕು. ಕೃಷಿಗೆ ಪೂರಕವಾಗಿ ಜಾನುವಾರು ಸಾಕಾಣಿಕೆ ಮಾಡಬೇಕು. ಆಗ ಹೆಚ್ಚಿನ ಮಟ್ಟದ ಆದಾಯ ನಿರೀಕ್ಷೆ ಮಾಡಲು ಸಾಧ್ಯ’ ಎಂಬುದು ಸದಾನಂದ ಅವರ ಅನುಭವದ ನುಡಿ.

ಅಗ್ರಿಕಲ್ಚರ್ ಇಂಡಿಯಾ ವೆಬ್ ತಾಣದಲ್ಲಿ ಸುಸ್ಥಿರ - ಸ್ವಾಭಿಮಾನಿ - ಸಮೃದ್ಧ ಹಾಗೂ ಲಾಭದಾಯಕವಾಗಿ ಕೃಷಿ ಮಾಡಲು ಅಗತ್ಯವಾದ ಮಾಹಿತಿಗಳನ್ನು ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ನೀವೂ ಆರ್ಥಿಕ ನೆರವು ನೀಡಬಹುದು.

LEAVE A REPLY

Please enter your comment!
Please enter your name here