ಆತ್ಮೀಯರೇ, ಇಷ್ಟಕ್ಕೂ ಪ್ರತೀ ವರ್ಷ ಡಿಸೆಂಬರ್ 05ರಂದೇ ಏಕೆ “ವಿಶ್ವ ಮಣ್ಣು ದಿನ”ದ ಆಚರಣೆ ? ಇದಕ್ಕೊಂದು ಸ್ವಾರಸ್ಯಕರ ಹಿನ್ನೆಲೆ ಇದೆ.
ಮಣ್ಣಿನ ಅಧ್ಯಯನವನ್ನೇ ಜೀವನದ ದೀಕ್ಷೆ ಎಂಬಂತೆ ಸ್ವೀಕರಿಸಿದ ಸಾವಿರಾರು ಮಣ್ಣು ವಿಜ್ಞಾನಿಗಳು 1927ರಲ್ಲೇ ಜಾಗತಿಕ ಮಟ್ಟದಲ್ಲಿ “ಮಣ್ಣು ವಿಜ್ಞಾನಿಗಳ ಅಂತರಾಷ್ಟ್ರೀಯ ಒಕ್ಕೂಟ”ವನ್ನು ರಚಿಸಿದರು. ನಾನಾ ದೇಶಗಳಿಗೆ ಸೇರಿದ ಈ ವಿಜ್ಞಾನಿಗಳು 2002ರ ಡಿಸೆಂಬರ್ 05 ರಂದು ಮೊದಲ “ಮಣ್ಣು ದಿನ”ವನ್ನು ಆಚರಿಸಿದರು.
ಜಗತ್ತಿನ ಭತ್ತದ ಕಣಜ ಎಂದೇ ಪ್ರಸಿದ್ಧಿ ಪಡೆದ ಥಾಯ್ಲೆಂಡ್ ದೇಶದಲ್ಲಿ ಭಾರತೀಯ ಸಂಸ್ಕೃತಿಯ ಛಾಯೆ ದಟ್ಟವಾಗಿದೆ. ಅಲ್ಲಿನ ರಾಜನ ಹೆಸರು ಭೂಮಿಬಲ ಅತುಲ್ಯತೇಜ. ಅವರಿಗೆ “9ನೇ ರಾಮ” ಎಂಬ ಉಪಾಧಿಯೂ ಇದೆ. 1946ರಂದು ಪಟ್ಟಕ್ಕೆ ಬಂದ ಈ ರಾಜ ಜಗತ್ತಿನ ಅತೀ ದೀರ್ಘಕಾಲದ ರಾಜ್ಯಾಡಳಿತ ನಡೆಸಿದವರೆಂದು ಹೆಗ್ಗಳಿಕೆ ಕೂಡಾ ಪಡೆದಿದ್ದಾರೆ.
ವಿಶೇಷವೆಂದರೆ ಮಣ್ಣಿನ ಆರೋಗ್ಯದ ಬಗ್ಗೆ ಸಾಕಷ್ಟು ಆಸಕ್ತಿ ಮತ್ತು ಪರಿಣತಿ ಬೆಳೆಸಿಕೊಂಡ ಇವರು ಕೃಷಿಭೂಮಿಯ ಸುತ್ತಾ ಮಣ್ಣಿನ ಸವಕಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಖಸ್ ಹುಲ್ಲು ಬೆಳೆಸುವಂತ ಮಾದರಿ ಪ್ರಯೋಗಗಳನ್ನು ನಡೆಸಿದವರು.
(ಗಮನಿಸಿ – ಈ ವರ್ಷದ ವಿಶ್ವ ಮಣ್ಣು ದಿನದ ಧ್ಯೇಯವೇ “ಮಣ್ಣು ಮತ್ತು ನೀರು – ಜೀವಾಧಾರದ ಮೂಲ” – ಅಂದರೆ ಸವೆಯುತ್ತಿರುವ ಮಣ್ಣನ್ನು ತಡೆಯುವುದು ಹಾಗೂ ಸೋರುತ್ತಿರುವ ನೀರನ್ನು ಉಳಿಸುವುದು).
ತಮ್ಮ ದೇಶದ ರಾಜಧಾನಿ ಬ್ಯಾಂಕಾಕ್ ನಲ್ಲಿ ಮಣ್ಣು ವಿಜ್ಞಾನಿಗಳ ಜಾಗತಿಕ ಸಮಾವೇಶಕ್ಕೆ ಅನುವು ಮಾಡಿಕೊಟ್ಟ ಈ ರಾಜನ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 05ನ್ನು “ವಿಶ್ವ ಮಣ್ಣು ದಿನ”ವೆಂದು ಆಚರಿಸಲು ನಿರ್ಧರಿಸಲಾಗಿದೆ.
ಇದೀಗ ವಿಶ್ವಸಂಸ್ಥೆಯೂ ಈ “ಮಣ್ಣು ದಿನ”ಕ್ಕೆ ಮಾನ್ಯತೆ ನೀಡಿ, ಎಲ್ಲಾ ರಾಷ್ಟ್ರಗಳೂ ಇದನ್ನು ಜನಜಾಗೃತಿಯ ದಿನವಾಗಿ ಆಚರಿಸಬೇಕೆಂದು ಕರೆನೀಡಿದೆ.
ಥಾಯ್ಲೆಂಡ್ ಸರ್ಕಾರದ ಒತ್ತಾಯದಿಂದಾಗಿಯೇ ವಿಶ್ವಸಂಸ್ಥೆ 2015ರ ಇಡೀ ವರ್ಷವನ್ನು “ಅಂತರಾಷ್ಟ್ರೀಯ ಮಣ್ಣು ವರ್ಷ” ಎಂದು ಜಗತ್ತಿನೆಲ್ಲೆಡೆ ಆಚರಿಸಬೇಕೆಂದು ಕರೆ ನೀಡಿದೆ.
ಮೂಲ: ನಾಗೇಶ ಹೆಗಡೆಯವರ “ಮಣ್ಣು – ಅದೇ ಅಸಲೀ ಹೊನ್ನು” ಪುಸ್ತಕದಿಂದ