ಅಲಂಕಾರದ ಸೂರ್ಯಕಾಂತಿ ಆದಾಯದ ಆನಂದ !

1
ಅಲಂಕಾರಿಕ ಸೂರ್ಯಕಾಂತಿ

ಸೂರ್ಯಕಾಂತಿ ಹೂಗಳನ್ನು ಕಂಡರೆ ಬಾಲ್ಯದ ಹಂತದವರಿಂದ ವೃದ್ಧರ ಹಂತದವರೆಗೆ ಪರಮ ಆಕರ್ಷಣೆ.  ಸೂರ್ಯನತ್ತಲೇ ದೃಷ್ಟಿ ನೆಟ್ಟ ಈ ಹೂವಿನ ಚೆಲುವು ಅಂಥದ್ದು. ಇದನ್ನು ಬೇರೆ ಹೂವುಗಳ ಮಾದರಿಯಲ್ಲಿ ಸಭೆ – ಸಮಾರಂಭಗಳಲ್ಲಿ ಬಳಸಲು ಆಗುವುದಿಲ್ಲ. ಕೇವಲ ಇದರ ಬೀಜಗಳಿಂದ ಎಣ್ಣೆ ತೆಗೆಯಲಾಗುತ್ತದೆ. ಉತ್ತಮ ದರ್ಜೆಯ ಖಾದ್ಯತೈಲ ಇದರಿಂದ ಲಭ್ಯವಾಗುತ್ತದೆ.

ಸೂರ್ಯಕಾಂತಿ ಹೂವುಗಳ ಸಹಜ ಆಕರ್ಷಣೆ, ಎಲ್ಲರಿಗೂ ಅದರೆಡೆಗೆ ಇರುವ ಮೋಹ ಅರಿತ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿವಿಜ್ಞಾನಿಗಳು ಅಲಂಕಾರಿಕಾ ಸೂರ್ಯಕಾಂತಿ ಹೂವು ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಹೆಸರು  ವಿನ್ಸೆಂಟ್‌ ೨ ಚಾಯ್ಸ್

ಅಲಂಕಾರಿಕಾ ಸೂರ್ಯಕಾಂತಿ ತಾಕು

ವಿಶಿಷ್ಟತೆ

ಖಾದ್ಯ ತೈಲ ನೀಡುವ ಬೀಜ ಹೊಂದುವ ಸೂರ್ಯಕಾಂತಿ ತಳಿಗಳು ತುಂಬ ಅಗಲವಾಗಿರುತ್ತವೆ. ಹೂವಿನ ಮಧ್ಯಭಾಗದಲ್ಲಿ ಅಗಲವಾದ, ದಪ್ಪನೆಯ ಕಪ್ಪುಬಣ್ಣದ ಬೀಜಗಳನ್ನು ಹೊಂದಿರುತ್ತವೆ. ಕೊಯ್ಲು ಮಾಡಿದ ಕೆಲವೇ ದಿನಗಳಲ್ಲಿ ಹೂವಿನ ದಳಗಳು, ತೈಲಬೀಜಗಳು ಉದುರಲು ಆರಂಭಿಸುತ್ತವೆ. ಘಾಟು ಪರಿಮಳವೂ ಅವುಗಳಿಂದ ಹೊರ ಹೊಮ್ಮುತ್ತದೆ.

ಅಲಂಕಾರಿಕಾ ಸೂರ್ಯಕಾಂತಿ ತಳಿಯ ಹೂವುಗಳು ಮಧ್ಯಮ ಆಕಾರ ಹೊಂದಿದ್ದು, ಮಧ್ಯಭಾಗದಲ್ಲಿ ಕಪ್ಪನೆ ಕೇಸರ ಹೊಂದಿದ್ದರೂ ತೈಲ ನೀಡುವ ಬೀಜಗಳಿರುವುದಿಲ್ಲ. ಕೊಯ್ಲಾದ 20 ರಿಂದ 25 ದಿನಗಳವರೆಗೂ ದಳಗಳು ಉದುರುವುದಿಲ್ಲ. ಘಾಟು ವಾಸನೆ ಬರುವುದಿಲ್ಲ.

ಬೆಲೆ

ಇವುಗಳನ್ನು ಈಗಾಗಲೇ ಸಭೆ – ಸಮಾರಂಭಗಳಲ್ಲಿ ಅಲಂಕಾರಿಕಾ ಹೂವುಗಳಾಗಿ ಬಳಸಲಾಗುತ್ತಿದೆ. ನೋಡಲು ಭಾರಿ ಚೆನ್ನಾಗಿ ಅಂದರೆ ವೈಭವದಿಂದ ಕಾಣುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ಇದೆ. ಒಂದು ಹೂವಿನ ದಳಕ್ಕೆ ಸದ್ಯ 15 ರೂ ತನಕ ದರವಿದೆ. ಹಬ್ಬಗಳು, ಸಭೆ-ಸಮಾರಂಭಗಳು ಇರುವ ದಿನಗಳಲ್ಲಿ ಬೆಲೆ ಹೆಚ್ಚಬಹುದು, ಕಡಿಮೆ ಇರುವ ಸಂದರ್ಭಗಳಲ್ಲಿ ಬೆಲೆ ತಗ್ಗಬಹುದು.‌

ತಳಿ ವಿವರ

೧. ಬಲವಾದ ಕಾಂಡ ಹೊಂದಿರುವ ಸಸ್ಯ,.  ಮೇಲ್ಮುಖವಾಗಿ ಹೂವು ಬಿಡುತ್ತದೆ.

೨. ಬಿತ್ತನೆ ಮಾಡಿದ ೪೫ ರಿಂದ ೫೫ ದಿನಗಳಲ್ಲಿ ಹೂವುಗಳನ್ನು ಕೊಯ್ಲು ಮಾಡಬಹುದು

೩. ಹೂವುಗಳು ಆಕರ್ಷಕ, ಸುಂದರ ಕಿತ್ತಳೆ ಬಣ್ಣ ಹೊಂದಿರುತ್ತವೆ.

೪. ಅಲಂಕಾರಿಕಾ ಸೂರ್ಯಕಾಂತಿ ಹೂವುಗಳನ್ನು  ಹೂದಾನಿಗಳು, ಹೂಗುಚ್ಛಗಳು ಮತ್ತು ಸಮಾರಂಭಗಳಲ್ಲಿ ವೇದಿಕೆಗಳನ್ನು ಸಿಂಗರಿಸಲು ಬಳಸಬಹುದು.

೫. ದೀರ್ಘ ಸಾಗಣೆಗೆ ಸೂಕ್ತವಾಗಿದೆ

೬. ಉತ್ತಮ ಮಾರುಕಟ್ಟೆಯೂ ಇದೆ.

ಬೇಸಾಯ ಪದ್ಧತಿಗಳು

 ಹವಾಮಾನ: 25 ಡಿಗ್ರಿ ಸೆಲ್ಸಿಯಸ್‌ ನಿಂದ 30 ಡಿಗ್ರಿ ಸೆಲ್ಸಿಯಸ್

 ಮಣ್ಣು : ಮರಳು ಮಿಶ್ರಿತ ಜೇಡಿ ಮಣ್ಣು

 ಅಂತರ: 30 x 30 ಸೆಂ. ಮೀ.

 ಬಿತ್ತನೆ ಆಳ : 0.5–1.0 ಇಂಚು

 ಕಾಲ : ವರ್ಷವಿಡೀ

 ಬಿತ್ತನೆ ಬೀಜ : 6 ಕಿ. ಗ್ರಾಂ/ಹೆ.

 ಪೋಷಕಾಂಶ ನಿರ್ವಹಣೆ : ಕೊಟ್ಟಿಗೆ ಗೊಬ್ಬರ : 25 ಟನ್/ಹೆ. + ಎರೆಹುಳು ಗೊಬ್ಬರ @ 2.5 ಟನ್/ಹೆ. (ಬಿತ್ತುವ 2 ವಾರಗಳ ಮೊದಲು ಮಣ್ಣಿಗೆ ಮಿಶ್ರಣ ಮಾಡುವುದು) 19:19:19 ಎನ್ ಪಿ ಕೆ-1 ಗ್ರಾಂ/ಗಿಡಕ್ಕೆ ವಾರಕ್ಕೊಮ್ಮೆ ಬೆಳೆ ಬೆಳವಣಿಗೆಗೆ ಹಂತದಲ್ಲಿ.

 ನೀರಾವರಿ : ಮಣ್ಣಿನ ತೇವಾಂಶವನ್ನು ಅವಲಂಬಿಸಿ ವಾರಕ್ಕೊಮ್ಮೆ

 ಕಳೆ ನಿರ್ವಹಣೆ – ಸಕಾಲದಲ್ಲಿ ಕಳೆ ಕೀಳುವುದು ಮುಖ್ಯ

 ಕೊಯ್ಲು : 45-55 ದಿನಗಳು (1/4 ನೇ ಹೂ ತೆರೆದ ಹಂತ)

 ಇಳುವರಿ : 1,00,000 ಕಾಂಡಗಳು/ಹೆ.

 ಕೊಯ್ಲೋತ್ತರ ಜೀವಾವಧಿ : 20-25 ದಿನಗಳು

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಡಾ. ಶ್ರೀನಿವಾಸ್‌, ಕೃಷಿ ವಿಜ್ಞಾನಿ, ಜಿಕೆವಿಕೆ, ಬೆಂಗಳೂರು. ಸಂಚಾರಿ ದೂರವಾಣಿ:   98457 74509

1 COMMENT

LEAVE A REPLY

Please enter your comment!
Please enter your name here