ಕೃಷಿಯಲ್ಲಿ ನವೋದ್ಯಮಗಳು ಘೋಷವಾಕ್ಯದೊಂದಿಗೆ ಕೃಷಿಮೇಳ

0

ಬೆಂಗಳೂರು: ಅಕ್ಟೋಬರ್ 07: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರತಿವರ್ಷ ಕೃಷಿಮೇಳ ಆಚರಿಸುತ್ತಿದೆ. 2022ರ ಕೃಷಿಮೇಳವನ್ನು “ಕೃಷಿಯಲ್ಲಿ ನವೋದ್ಯಮಗಳು” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗುತ್ತಿದೆ ಎಂದು ಕುಲಪತಿ ಕೆ.ಸಿ. ನಾರಾಯಣಸ್ವಾಮಿ ತಿಳಿಸಿದರು.

ಅವರಿಂದು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದಲ್ಲಿರುವ ನಾಯಕ್ ಭವನದಲ್ಲಿ ಆಯೋಜಿಸಿದ್ದ ಕೃಷಿಮೇಳದಲ್ಲಿ ಮಾತನಾಡಿದರು. ಜಿಕೆವಿಕೆ ಆವರಣದಲ್ಲಿ 2022ರ ನವೆಂಬರ್ 3, 4 5 ಮತ್ತು 6ನೇ ತಾರೀಖುಗಳಂದು ಕೃಷಿಮೇಳ ನಡೆಯುತ್ತದೆ ಎಂದವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಕುಲಪತಿ ಮತ್ತು ಕೃಷಿವಿಜ್ಞಾನಿಗಳು ಕೃಷಿಮೇಳದ ಪ್ರಚಾರ ಸಾಮಗ್ರಿಗಳನ್ನು ಲೋಕಾರ್ಪಣೆ ಮಾಡಿದರು

ಕೃಷಿ ಮೇಳ ಒಂದು ತೀವ್ರ ಶಿಕ್ಷಣಾನುಭವ ಮತ್ತು ನೋಡಿ ತಿಳಿಯುವ ವಿಧಾನ. ಅನ್ನದಾತರನ್ನು ಸನ್ಮಾನಿಸುವುದರ ಜೊತೆಗೆ ಸುಧಾರಿತ ಪದ್ದತಿಗಳನ್ನು ಸಮರ್ಪಕವಾಗಿ ಆಚರಣೆಗೆ ತಂದಿರುವ ಪ್ರಾತ್ಯಕ್ಷಿಕೆ ಕ್ಷೇತ್ರಗಳಿಗೆ ಭೇಟಿ ನೀಡಿ ವಿಷಯದ ಪ್ರತ್ಯಕ್ಷ ಅನುಭವ ಪಡೆಯುವ ವಿಧಾನವೇ ಕೃಷಿ ಮೇಳ. ಇದರಲ್ಲಿ ಕ್ಷೇತ್ರ ಸಂದರ್ಶನವಷ್ಟೇ ಅಲ್ಲದೆ ತಜ್ಞರೊಂದಿಗೆ ಚರ್ಚೆ, ವಸ್ತು ಪ್ರದರ್ಶನ ಮುಂತಾದವುಗಳು ಅಡಕವಾಗಿವೆ ಎಂದು ಕುಲಪತಿ ಕೆ.ಸಿ. ನಾರಾಯಣಸ್ವಾಮಿ  ವಿವರಿಸಿದರು.

ಕೃಷಿ ಮೇಳವನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ನಿರಂತರವಾಗಿ ಆಚರಿಸುತ್ತಾ ರೈತರು ಹಾಗೂ ವಿಸ್ತರಣಾ ಕಾರ್ಯಕರ್ತರಿಗೆ ಕೃಷಿ ತಾಂತ್ರಿಕತೆಯ ಜ್ಞಾನದ ವಿವಿಧ ಮಜಲುಗಳನ್ನು ಪರಿಚಯ ಮಾಡಿಕೊಡುತ್ತಾ ಬಂದಿರುತ್ತದೆ. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ 1966ರಲ್ಲಿ ಪ್ರಾರಂಭವಾದ ಕ್ಷೇತ್ರೋತ್ಸವವು ಕಾಲಾನುಕ್ರಮದಲ್ಲಿ ಕೃಷಿ ಮೇಳವಾಗಿ ಪರಿವರ್ತನೆಗೊಂಡು ಅತ್ಯಂತ ಜನಪ್ರಿಯಗೊಂಡಿದೆ ಎಂದು ತಿಳಿಸಿದರು.

 ಈ ವರ್ಷ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕರ್ನಾಟಕ ಸರ್ಕಾರದ ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ಹಾಲು ಮಹಾಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗುತ್ತಿದೆ ಎಂದವರು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಕೆ. ನಾರಾಯಣಗೌಡ, ಸಂಶೋಧನಾ ನಿರ್ದೇಶಕ ಡಾ. ಕೆ.ಬಿ. ಉಮೇಶ್, ಹಿರಿಯ ವಾರ್ತಾತಜ್ಞ ಡಾ. ಕೆ. ಶಿವರಾಮು, ಸಹ ವಿಸ್ತರಣಾ ನಿರ್ದೇಶಕ ಡಾ. ಕೃಷ್ಣಮೂರ್ತಿ, ಕೃಷಿ ತಂತ್ರಜ್ಞಾನ ಮಾಹಿತಿ ಘಟಕದ ಮುಖ್ಯಸ್ಥ ಡಾ. ರಘು ಪ್ರಸಾದ್ ಹಾಜರಿದ್ದರು

ಕೃಷಿ ಮೇಳದ ವೈಶಿಷ್ಟಗಳು

ಒಂಬತ್ತು ಹೊಸ ತಳಿಗಳು ಮತ್ತು 38 ತಂತ್ರಜ್ಞಾನಗಳ ಬಿಡುಗಡೆ. ಕೃಷಿ ಸಾಧಕರಿಗೆ ಪುರಸ್ಕಾರ. ಭೌತಿಕವಾಗಿ ಆಯೋಜನೆ ಜೊತೆಗೆ  ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ ಮಾಡಲಾಗುವುದು. ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ತಾಕುಗಳು. ಸುಧಾರಿತ ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳು . ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು. ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ. ತೋಟಗಾರಿಕೆ ಬೆಳೆಗಳ ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ.

ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ. ಸಿರಿಧಾನ್ಯಗಳು ಹಾಗೂ ಮಹತ್ವ . ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳು. ಜಲಾನಯನ ನಿರ್ವಹಣೆ. ಸಾವಯವ ಕೃಷಿ ಪದ್ಧತಿಗಳು. ಸಮಗ್ರ ಪೋಷಕಾಂಶಗಳು, ರೋಗ ಹಾಗೂ ಪೀಡೆ ನಿರ್ವಹಣೆ . ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ . ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು. ಮಳೆ ಹಾಗೂ ಮೇಲ್ಛಾವಣಿ ನೀರಿನ ಕೋಯ್ಲು . ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ. ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ. ಬಿತ್ತನೆ ಬೀಜಗಳ ಪರೀಕ್ಷೆ ಹಾಗೂ ಶೇಖರಣೆ. ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಣೆ

ಮಾರುಕಟ್ಟೆ ನೈಪುಣ್ಯತೆ ಮಾಹಿತಿ. ಹವಾಮಾನ ಚತುರ ಕೃಷಿ. ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ. ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ. ರೈತ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ ಹಾಗೂ ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ. ಮಣ್ಣುರಹಿತ ಕೃಷಿ

LEAVE A REPLY

Please enter your comment!
Please enter your name here