ಮಣ್ಣಿನ ಸವಕಳಿ ತಡೆಗಟ್ಟದಿದ್ದರೆ ಉಳಿಗಾಲವಿಲ್ಲ

0
ಡಾ. ನಾಗರಾಜ್‌, ಕೃಷಿ ಯಂತ್ರೋಪಕರಣ ತಜ್ಞರು

ಇಂದು (ಡಿಸೆಂಬರ್ ೫) ವಿಶ್ವ ಮಣ್ಣು ದಿನಾಚರಣೆ. ಈ ದಿನ ಮಾತ್ರವಲ್ಲ; ವರ್ಷವಿಡೀ ಮಣ್ಣಿನ ಸಂರಕ್ಷಣೆ ನಿತ್ಯ ಮಂತ್ರವಾಗಬೇಕು. ಭಾರತ ಮಾತ್ರವಲ್ಲ; ವಿಶ್ವದ ಹಲವಾರು ದೇಶಗಳಲ್ಲಿ ಕೃಷಿಭೂಮಿಯ ಮೇಲ್ಮಣ್ಣಿನ ಸವಕಳಿ ಉಂಟಾಗುತ್ತಲೇ ಇದೆ. ಇದನ್ನು ತಡೆಗಟ್ಟದಿದ್ದರೆ ಜೀವ ಸಂಕುಲಕ್ಕೆ ಉಳಿಗಾಲವಿಲ್ಲ !

ಇದನ್ನು ಗಮನದಲ್ಲಿಟ್ಟುಕೊಂಡೇ ಮಣ್ಣಿನ ಸವಕಳಿ ತಡೆಗಟ್ಟುವುದರ ಜೊತೆಜೊತೆಗೆ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಕ್ರಮಗಳತ್ತ ಗಮನ ನೀಡಬೇಕು. ಈ ದಿಶೆಯಲ್ಲಿ ಮಣ್ಣಿನ ಸಂರಕ್ಷಣೆಯನ್ನು ಕಾಪಾಡುವ ಬೇಸಾಯ ಮಾಡುವುದು, ಮುಚ್ಚಿಗೆ ಬೆಳೆಗಳನ್ನು ಬೆಳೆಯುವುದು, ವೈವಿಧ್ಯಮಯ ಬೆಳೆ ಆವರ್ತನೆ ಮಾಡುವುದು, ಸಾವಯವ ಪೋಷಕಾಂಶಗಳನ್ನೇ ಬಳಸುವುದು, ಮಣ್ಣಿನ ಸವಕಳಿ ತಡೆಯಲು ಸುಭದ್ರ ಬದುಗಳನ್ನು ನಿರ್ಮಿಸುವುದು, ಬೆಳೆ ಉಳಿಕೆಗಳನ್ನು ನಿರ್ವಹಣೆ ಮಾಡುವುದು ಇದರ ಜೊತೆಜೊತೆಗೆ ನೀರಿನ ನಿರ್ವಹಣೆ ಮಾಡುವುದು ಬಹಳ ಅಗತ್ಯ.

ನೀರಿನ ನಿರ್ವಹಣೆ

ನೀರಿಲ್ಲದೇ ಬೆಳೆ ಬೆಳೆಯುವುದನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದಿದ್ದರೆ ಮೇಲ್ಮಣ್ಣು ಇರುವುದಿಲ್ಲ, ಫಲವತ್ತೆಯೂ ನಾಶವಾಗುತ್ತದೆ. ಆದ್ದರಿಂದ ಇತಿಮಿತಿಯಲ್ಲಿ ಬಳಕೆ ಮಾಡುವುದು ಅತ್ಯಗತ್ಯ. ಕೃಷಿಭೂಮಿಯಲ್ಲಿ ಸುದೀರ್ಘ ಕಾಲ ನೀರು ನಿಲ್ಲಿಸುವುದರಿಂದ ಮಣ್ಣು ಸವಳಾಗುತ್ತದೆ. ಒಮ್ಮೆ ಮಣ್ಣು ಸವಳಾದರೆ ಅದನ್ನು ಪುನರುಜ್ಜೀವನ ಮಾಡುವುದು ಭಾರಿ ಕಷ್ಟಕರ ಕೆಲಸ.

ಮಳೆನೀರು ಇಂಗಿಸುವುದು

ಮಳೆನೀರಿನಲ್ಲಿ ಅತ್ಯಮೂಲ್ಯ ಪೋಷಕಾಂಶಗಳಿವೆ. ಇದನ್ನು ಸದ್ಬಳಕೆ ಮಾಡುವುದು ಅಗತ್ಯ. ಕೃಷಿಭೂಮಿಯ ಮೇಲ್ಮದರ ಗಟ್ಟಿಯಾಗಿದ್ದರೆ ಮಳೆನೀರು ಮಣ್ಣಿನೊಳಗೆ ಇಳಿದು ಅಂತರ್ಜಲ ವೃದ್ಧಿಯಾಗುವುದಿಲ್ಲ. ಬದಲಿಗೆ ಕೊಚ್ಚಿಕೊಂಡು ಹೋಗುತ್ತದೆ. ಆದ್ದರಿಂದ ಮಣ್ಣನ್ನು ದಮ್ಮಸು ಮಾಡುವಂಥ ಭಾರಿತೂಕದ ಯಂತ್ರಗಳನ್ನು ಪದೇಪದೇ ಬಳಕೆ ಮಾಡುವುದು ಸೂಕ್ತವಲ್ಲ. ಅತಿಯಾದ ಉಳುಮೆಯೂ ಸೂಕ್ತವಲ್ಲ.

ಸುಭದ್ರ ಬದುಗಳ ನಿರ್ಮಾಣ

ಕೃಷಿಭೂಮಿಯಲ್ಲಿ ಬಿದ್ದ ಮಳೆನೀರು ಅಲ್ಲಿಯೇ ಇಂಗುವಂಥ ವ್ಯವಸ್ಥೆ ಮಾಡಿಕೊಳ್ಳಬೇಕು. ಇದಕ್ಕಾಗಿ ಸುಭದ್ರ ಬದುಗಳ ನಿರ್ಮಾಣ ಅಗತ್ಯ. ಇದನ್ನು ನಿರ್ಮಾಣ ಮಾಡಲು ಇಟ್ಟಿಗೆ, ಸಿಮೆಂಟ್ ಬಳಸಬೇಕಿಲ್ಲ. ಮಣ್ಣಿನ ಬದುಗಳ ಸುತ್ತಲೂ ಹುಲ್ಲು ಬೆಳೆಯಲು ಆಸ್ಪದ ನೀಡಬೇಕು. ಇದರ ಬೇರುಗಳು ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತವೆ. ಹೀಗೆ ಮಾಡದಿದ್ದರೆ ಮಳೆನೀರಿಗೆ ಬದು ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇರುತ್ತದೆ.
ಮಣ್ಣಿನಲ್ಲಿ ಅಪಾರ ಸಂಖ್ಯೆಯಲ್ಲಿ ಉಪಯುಕ್ತ ಜೀವಾಣುಗಳಿಗೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಇವುಗಳನ್ನು ವೃದ್ಧಿ ಮಾಡುವತ್ತ ಗಮನ ಇರಬೇಕು. ಕೃಷಿಭೂಮಿಯಲ್ಲಿ ದೀರ್ಘಕಾಲ ನೀರು ನಿಲ್ಲಿಸುವುದರಿಂದ ಜೀವಾಣುಗಳ ನಷ್ಟವಾಗುತ್ತದೆ.

ಗಾಳಿಯಿಂದಲೂ ಮಣ್ಣಿನ ಸವಕಳಿ

ಕೃಷಿಭೂಮಿಯ ಮೇಲ್ಮೆಯಲ್ಲಿ ಸುದೀರ್ಘ ಕಾಲ ಸಸ್ಯಗಳು ಇಲ್ಲದಿದ್ದರೂ ಭಾರಿಗಾಳಿಯಿಂದ ಮಣ್ಣಿನ ಸವಕಳಿ ಉಂಟಾಗುತ್ತಿರುತ್ತದೆ. ಆದರೆ ಇದರ ಪ್ರಕ್ರಿಯೆ ನಿಧಾನ. ಆದ್ದರಿಂದ ಮಣ್ಣಿನ ಫಲವತ್ತೆ ವೃದ್ಧಿಸುವ ಸಸ್ಯಗಳನ್ನು ಬೆಳೆದರೆ ಅವುಗಳು ಮುಚ್ಚಿಗೆಯಾಗುತ್ತದೆ. ಅವುಗಳು ಹೂ ಬಿಡುವ ಮುನ್ನ ಉಳುಮೆ ಮಾಡಿ ಮಣ್ಣಿನೊಂದಿಗೆ ಮಿಶ್ರಣ ಮಾಡಿದರೆ ಫಲವತ್ತತೆಯೂ ಹೆಚ್ಚುತ್ತದೆ. ಇದರಿಂದ ಪೋಷಕಾಂಶಗಳಿಗೆ ಮಾಡುವ ಖರ್ಚಿನಲ್ಲಿ ಗಣನೀಯ ಉಳಿತಾಯವಾಗುತ್ತದೆ.

ಬೆಳೆ ಆವರ್ತನೆ

ಬಹಳಷ್ಟು ಮಂದಿ ಕೃಷಿಕರು ಏಕಬೆಳೆ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಇದರಿಂದಲೂ ಮಣ್ಣಿನ ಫಲವತ್ತತೆ ಮೇಲೆ ದುಷ್ಪರಿಣಾಮಗಳಾಗುತ್ತವೆ. ಇದರ ಜೊತೆಗೆ ಕೀಟಬಾಧೆಯೂ ಬೆಳೆಯಿಂದ ಬೆಳೆ ಅವಧಿಗೆ ಹೆಚ್ಚುತ್ತಾ ಹೋಗುತ್ತದೆ. ಇದರ ನಿಯಂತ್ರಣಕ್ಕೆ ರಾಸಾಯನಿಕ ಕೀಟನಾಶಕಗಳಿಗಾಗಿ ಖರ್ಚು ಮಾಡುವುದು ಹೆಚ್ಚಾಗುತ್ತದೆ. ಆದ್ದರಿಂದ ಇದೊಂದು ವಿಷಚಕ್ರ. ಇದನ್ನು ನಿಲ್ಲಿಸಲು ಏಕೈಕ ದಾರಿ ಎಂದರೆ ಬೆಳೆ ಅವರ್ತನೆ. ಒಂದು ಬೆಳೆ ತೆಗೆದುಕೊಂಡ ನಂತರ ಮತ್ತೆ ಅದೇ ಬೆಳೆ ಬೆಳೆಯದೇ ಬೇರೊಂದು ಬೆಳೆ ಪಡೆದುಕೊಳ್ಳಬೇಕು. ಹೀಗೆ ಮಾಡಿದರೆ ಅತೀ ಕಡಿಮೆ ಖರ್ಚಿನಲ್ಲಿ ಮಣ್ಣಿನ ಫಲವತ್ತತೆ ಕಾಪಾಡುವುದರ ಜೊತೆಜೊತೆಗೆ ಖರ್ಚಿಲ್ಲದೇ ಕೀಟ ನಿಯಂತ್ರಣ ಮಾಡಬಹುದು. ಗಣನೀಯ ಇಳುವರಿ ಪಡೆಯಬಹುದು.

ನೀರಿನ ಸಂಸ್ಕರಣೆ

ಮಣ್ಣಿನ ಪರೀಕ್ಷೆ ಎಷ್ಟು ಮುಖ್ಯವೋ ನೀರಿನ ಪರೀಕ್ಷೆಯೂ ಅಷ್ಟೆ ಮುಖ್ಯ. ನೀರು ಅತಿಯಾದ ಲವಣಾಂಶದಿಂದ ಕೂಡಿದ್ದರೂ ಮಣ್ಣಿಗೆ, ಬೆಳೆಗೆ ಹಾನಿಕಾರಕ. ಇದನ್ನು ಸಂಸ್ಕರಿಸಿಯೇ ನೀಡಬೇಕು. ಇದರತ್ತಲೂ ಗಮನ ನೀಡಬೇಕು.

LEAVE A REPLY

Please enter your comment!
Please enter your name here