“ಕರ್ನಾಟಕ ಸರ್ಕಾರ 2007ರಲ್ಲಿ “ಕರ್ನಾಟಕ ದ್ರಾಕ್ಷಿ ಸಂಸ್ಕರಣೆ ಮತ್ತು ದ್ರಾಕ್ಷಾರಸ ನೀತಿ” ಜಾರಿಗೆ ತಂದಿದೆ. ಇದು ರಾಜ್ಯದ ವೈನ್ ಉದ್ಯಮದ ಮೇಲೆ ಸಕಾರಾತ್ಮಕ ಪರಿಣಾಮವನ್ನೇ ಬೀರಿದೆ. ಪಾಲಿಸಿ ತರುವುದಕ್ಕೂ ಮುನ್ನ ರಾಜ್ಯದಲ್ಲಿ ಇದ್ದ ವೈನರಿಗಳ ಸಂಖ್ಯೆ ಕೇವಲ 2 ಮಾತ್ರ. ಆನಂತರ ಇವುಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಈ ಮೊದಲು ವೈನ್ ಟಾವರಿನ್ಸ್ ಇರಲಿಲ್ಲ. ಈಗ ಇವುಗಳ ಸಂಖ್ಯೆ 190ಕ್ಕೆ ಏರಿದೆ. ಬೋಟಿಕ್ಸ್ ಕೂಡ ಇರಲಿಲ್ಲ. ಈಗ ಇವುಗಳ ಸಂಖ್ಯೆ 39 ಕ್ಕೆ ಏರಿಕೆಯಾಗಿದೆ. ಮೊದಲು ದ್ರಾಕ್ಷಿ ಬೆಳೆಯುವ ಪ್ರದೇಶದ ಒಟ್ಟು ವಿಸ್ತೀರ್ಣ ಕೇವಲ 500 ಹೆಕ್ಟೇರ್. ಇದೀಗ ಇದರ ವಿಸ್ತೀರ್ಣ 2000 ಹೆಕ್ಟೇರ್. ವೈನ್ ಮಾರಾಟ 15 ಲಕ್ಷ ಲೀಟರುಗಳಿಂದ 86 ಲಕ್ಷ ಲೀಟರಿಗೆ ಏರಿಕೆಯಾಗಿದೆ. ಇದುವರೆಗೂ 25 ವೈನ್ ಮೇಳಗಳು, ಮೂರು ಬಾರಿ ಅಂತರಾಷ್ಟ್ರೀಯ ವೈನ್ ಮೇಳಗಳು ನಡೆದಿವೆ. ರಾಷ್ಟ್ರಮಟ್ಟದಲ್ಲಿ 1 ಬಾರಿ ದ್ರಾಕ್ಷಾರಸ ಸಮ್ಮೇಳನ, 5 ಬಾರಿ ವಿಚಾರಸಂಕಿರಣಗಳಾಗಿವೆ. ಇವೆಲ್ಲದರ ಪರಿಣಾಮವಾಗಿ ಪಾಲಿಸಿಗಿಂತ ಮೊದಲು ವೈನ್ ಮಾರಾಟದಿಂದ ವಾರ್ಷಿಕ ಬರುತ್ತಿದ್ದ ಆದಾಯ ಕೇವಲ 60 ಲಕ್ಷ ರೂಪಾಯಿ ಮಾತ್ರ. ಈಗ ಅದರ ವಾರ್ಷಿಕ ಆದಾಯದ ಪ್ರಮಾಣ 210 ಕೋಟಿ ರೂಪಾಯಿ” ಹೀಗೆಂದು ವೈನ್ ಬೋರ್ಡಿನ ವ್ಯವಸ್ಥಾಪಕ ನಿರ್ದೇಶಕ ಸೋಮು ಟಿ. ವಿವರಿಸುತ್ತಾರೆ.
ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆಯಾಗಿದೆಯೇ :
ವ್ಯವಸ್ಥಾಪಕ ನಿರ್ದೇಶಕರು ನೀಡುವ ಅಂಕಿಅಂಶಗಳನ್ನು ನೋಡಿದಾಗ ರಾಜ್ಯದ ವೈನ್ ಪಾಲಿಸಿ, ಬೆಳೆಗಾರರು/ಉದ್ಯಮಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡಿರುವುದು ತಿಳಿಯುತ್ತದೆ. ಇದು ಜಾರಿಯಾದ ಬಳಿಕ ಉದ್ಯಮದಲ್ಲಿ ಬೆಳವಣಿಗೆಗಳಾಗಿವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆಯಾಗಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಪ್ರಶ್ನೆಗೆ ತಮ್ಮ ಅನುಭವದ ಆಧಾರದ ಮೇಲೆ ಬೇರೆಬೇರೆ ವೈನ್ ಉದ್ಯಮಿಗಳು ಉತ್ತರಗಳನ್ನು ಹೇಳುತ್ತಾರೆ.
ರಾಜ್ಯ ವೈನ್ ಬೆಳೆಗಾರರ ಸಂಘದ ಹಿರಿಯ ಪದಾಧಿಕಾರಿ, ಸ್ವತಃ ವೈನ್ ದ್ರಾಕ್ಷಿ ಬೆಳೆಗಾರರು ಆಗಿರುವ ಕೃಷ್ಣಾರೆಡ್ಡಿ ಅವರು ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ವೈನ್ ಯಾರ್ಡ್ ಹೊಂದಿದ್ದಾರೆ. ಇತರ ಏಳುಮಂದಿ ಬೆಳೆಗಾರರೊಡನೆ ಸೇರಿ 200 ಎಕರೆಗೂ ಹೆಚ್ಚು ವಿಸ್ತೀರ್ಣದ ದ್ರಾಕ್ಷಿ ತೋಟ ನಿರ್ವಹಣೆ ಮಾಡುತ್ತಿದ್ದಾರೆ. ಇವರಿಗೆ ಗೋವಾದಲ್ಲಿಯೂ 70 ಎಕರೆಯಷ್ಟು ವಿಸ್ತೀರ್ಣದ ದ್ರಾಕ್ಷಿ ತೋಟವಿದೆ. ಇವೆರಡೂ ಸ್ಥಳದಲ್ಲಿಯೂ ಇವರು ವೈನ್ ತಯಾರಿಕೆಗೆ ಅತ್ಯುತ್ತಮ ಎಂದು ಪರಿಗಣಿಸಲ್ಪಟ್ಟ ಸಿರಾಜ್, ಕ್ಯಾಬರ್ನೆ ಇತ್ಯಾದಿ ತಳಿಗಳನ್ನು ಬೆಳೆಯುತ್ತಿದ್ದಾರೆ.
ಉದ್ಯಮಿಗಳಾಗಲು ಉತ್ತೇಜನಕಾರಿ:
“ಕರ್ನಾಟಕ ಸರ್ಕಾರ ವೈನ್ ಪಾಲಿಸಿ ಜಾರಿ ಮಾಡಿದ ಬಳಿಕ ನಾವು ಎಂಟು ಮಂದಿ ರೈತರು ಸೇರಿಕೊಂಡು ವೈನ್ ಯಾರ್ಡ್ ಆರಂಭಿಸಿದೆವು. 200 ಎಕರೆಯಲ್ಲಿ ವೈನ್ ದ್ರಾಕ್ಷಿ ಬೆಳೆಯಲಾರಂಭಿಸಿದೆವು. ವೈನ್ ಫ್ಯಾಕ್ಟರಿಯನ್ನೂ ಸ್ಥಾಪಿಸಿದೆವು. ಇದರಲ್ಲಿನ ದ್ರಾಕ್ಷಿತಳಿಗಳು ಉತ್ಕೃಷ್ಟವಾಗಿವೆ. ಉದಾಹರಣೆಗೆ ಸಿರಾಜ್, ಕ್ಯಾಬರ್ನೆ ಇತ್ಯಾದಿ. ನಾವು ವೈನ್ ಯಾರ್ಡ್ ಸ್ಥಾಪಿಸುವ ಹಿಂದೆ ಒಂದು ಉದ್ದೇಶವಿವಿತ್ತು. ಇದು ಶ್ರೀಮಂತರಿಗಷ್ಟೆ ಸೀಮಿತವಾಗಿದೆ. ಸಾಧಾರಣ ಆರ್ಥಿಕ ಪರಿಸ್ಥಿತಿ ಉಳ್ಳವರೂ ಆರೋಗ್ಯದ ದೃಷ್ಟಿಯಿಂದ ಬಳಸಬೇಕು ಎಂಬ ಚಿಂತನೆ ಮಾಡಿದೆವು. ಮೊದಲೆಲ್ಲ ಶುದ್ಧ ವೈನ್ ದೊರೆಯುತ್ತಿರಲಿಲ್ಲ. ಆದ್ದರಿಂದ ಸರ್ಕಾರದ ಪಾಲಿಸಿ ಬಳಸಿಕೊಂಡು ಉತ್ತಮದರ್ಜೆಯ ವೈನ್ ನೀಡುವ ಉದ್ದೇಶದಿಂದ ಫ್ಯಾಕ್ಟರಿ ಆರಂಭಿಸಿದೆವು. ಈಗ ಪರಿಸ್ಥಿತಿ ಸುಧಾರಿಸಿದೆ” ಎನ್ನುತ್ತಾರೆ ಕೃಷ್ಣಾರೆಡ್ಡಿ.
ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ :
“ನೇರವಾಗಿ ಮಾರುಕಟ್ಟೆ ಮಾಡುತ್ತಿಲ್ಲ. ಬೇರೆಬೇರೆ ಡಿಸ್ಟಿಲರಿಗಳಿಗೆ ಮಾರಾಟ ಮಾಡುತ್ತಿದ್ದೇವೆ. ನಾವೇ ಮಾರಾಟ ಮಾಡುವ ಉದ್ದೇಶದಿಂದ ವೈನ್ ಬೋರ್ಡಿಗೆ ಮತ್ತು ಅಬಕಾರಿ ಇಲಾಖೆಗೆ ಮನವಿ ಮಾಡಿದ್ದೇವೆ. ಇದು ಆರೋಗ್ಯಕರ ಪೇಯ.ಇದರಲ್ಲಿ ಸ್ಪೀರಿಟ್ ಮಿಕ್ಸ್ ಆಗುವುದಿಲ್ಲ. ಕೇವಲ ದ್ರಾಕ್ಷಿಹಣ್ಣುಗಳನ್ನು ಬಳಸಿ, ಅವುಗಳನ್ನು ಹುಳಿಬರಿಸಿ, ಸಂಸ್ಕರಿಸಿ ವೈನ್ ತಯಾರಿಸಲಾಗುತ್ತದೆ. ಆದ್ದರಿಂದ ಇದಕ್ಕೆ ಶೇಕಡ 1ರಷ್ಟು ಶುಲ್ಕಮಾತ್ರ ವಿಧಿಸಲು ಕೇಳಿದ್ದೇವೆ. ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ. ಕೆಲವಾರು ದೈಹಿಕ ತೊಂದರೆಗಳ ಉಪಶಮನಕ್ಕೆ ದ್ರಾಕ್ಷಾರಸ ಒಳ್ಳೆಯದು ಎಂದು ಹೇಳಲಾಗುತ್ತದೆ. ಎಕ್ಸೈಸ್ ಆಕ್ಟ್ ನಿಂದ ಹೊರಗಿಡಲು ಕೇಳುತ್ತಿದ್ದೇವೆ. ಆದರೆ ಇದನ್ನು ಕೇವಲ ಕರ್ನಾಟಕ ಸರ್ಕಾರ ಮಾತ್ರ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವೇ ಮಾಡಬೇಕು. ಇದಕ್ಕಾಗಿ ಪ್ರಸ್ತಾವನೆ ಕಳಿಸಲಾಗಿದೆ” ಎಂದು ವಿವರಿಸುತ್ತಾರೆ.
ವೈನ್ ಮತ್ತು ಲಿಕ್ಕರ್ ಶಾಪುಗಳು ಪ್ರತ್ಯೇಕವಾಗಿರಲಿ :
“ಮುಖ್ಯವಾಗಿ ಆಲ್ಕೋಹಾಲಿಕ್ ಅಂಶ ಹೆಚ್ಚಿರುವ, ಸ್ಪೀರಿಟ್ ಬಳಸಿದ ಮದ್ಯ ಮಾರಾಟ ಮಾಡುವ ಅಂಗಡಿಗಳಿಗೆ ವೈನ್ ಸ್ಟೋರ್ ಎಂದು ಕರೆಯಲಾಗುತ್ತದೆ. ವೈನ್ ಬಗ್ಗೆ ಜನರಿಗೆ ತಪ್ಪುಭಾವನೆ ಬರಲು ಇದೂ ಒಂದು ಕಾರಣ. ಆದ್ದರಿಂದ ವೈನ್ ಹೆಸರಿನ ಬದಲು ಅಂಥ ಸ್ಟೋರ್ ಗಳಿಗೆ ಲಿಕ್ಕರ್ ಶಾಪ್ ಎಂದು ಹೆಸರಿಸುವಂತೆ ಕೇಳಿದ್ದೇವೆ. ಇಂಥ ಶಾಪುಗಳಲ್ಲಿ ವೈನ್ ಮಾರಾಟ ಮಾಡದೇ ಪ್ರತ್ಯೇಕವಾಗಿ ಮಾರಾಟ ಮಾಡುವ ವ್ಯವಸ್ಥೆ ಬರಬೇಕು” ಎಂದು ಕೃಷ್ಣಾರೆಡ್ಡಿ ಒತ್ತಾಯಿಸುತ್ತಾರೆ.
“ವೈನ್ ನಲ್ಲಿ ಗಮನಾರ್ಹ ಆದಾಯ ಬಾರದ ಕಾರಣವೊ ಏನೋ ಅಬಕಾರಿ ಇಲಾಖೆಯಾಗಲಿ, ಸರ್ಕಾರವಾಗಲಿ ವೈನ್ ಉದ್ಯಮಿಗಳ ಮನವಿಯನ್ನು ಇನ್ನೂ ಪರಿಗಣಿಸಿಲ್ಲ ಎನ್ನುವ ಕೃಷ್ಣಾರೆಡ್ಡಿ, ಈ ಬಗ್ಗೆ ಸರ್ಕಾರ ಒಂದು ನಿರ್ಧಾರಕ್ಕೆ ಬರದಿದ್ದರೆ ಹಂತಹಂತವಾಗಿ ಪ್ರತಿಭಟಿಸಲು ನಿರ್ಧರಿಸಿದ್ದೇವೆ. ಕೋರ್ಟಿಗೆ ಹೋಗಲು ಕೂಡ ಸಿದ್ಧ ಎನ್ನುತ್ತಾರೆ.
ಮಹಿಳೆಯರಿಗೆ ಮುಜುಗರ :
ನಗರ ಪ್ರದೇಶಗಳಲ್ಲಿ ಸಾಕಷ್ಟು ಮಂದಿಗೆ ವೈನ್ ಸೇವನೆಯಿಂದ ಆರೋಗ್ಯದ ಮೇಲಾಗುವ ಉತ್ತಮ ಪರಿಣಾಮದ ಬಗ್ಗೆ ಅರಿವಿದೆ. ಆದರೆ ಈಗ ವೈನ್ ಅನ್ನು ಲಿಕ್ಕರ್ ಅಂಗಡಿಗಳಲ್ಲಿಯೇ ಮಾರಾಟ ಮಾಡುತ್ತಿರುವುದರಿಂದ ಅಲ್ಲಿ ಮಹಿಳೆಯರು ಸಲೀಸಾಗಿ ಹೋಗಿ ಖರೀದಿಸಲು ಮುಜುಗರ ಅನುಭವಿಸುತ್ತಾರೆ. ಆದ್ದರಿಂದ ವೈನ್ ಮಾರಾಟಕ್ಕೆ ಪಟ್ಟಣ ಮತ್ತು ನಗರಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡುವುದು ಖಂಡಿತವಾಗಿಯೂ ಸೂಕ್ತ. ಇದು ವೈನ್ ಬೇರೆ ಲಿಕ್ಕರ್ ಬೇರೆ ಎಂಬ ತಿಳಿವಳಿಕೆ ಹೆಚ್ಚಲು ಸಹ ಕಾರಣವಾಗುತ್ತದೆ.
ಬೆಳೆಗಾರರ ಹಿತದೃಷ್ಟಿಯ ಕಾರ್ಯಕ್ರಮಗಳು:
“ವೈನ್ ಬೋರ್ಡ್ ತೋಟಗಾರಿಕೆ ಇಲಾಖೆ ಸಹಭಾಗಿತ್ವದಲ್ಲಿ ನಡೆಯುತ್ತದೆ. ವೈನ್ ದ್ರಾಕ್ಷಿ ಬೆಳೆದರೆ 50 ಸಾವಿರ ರೂಪಾಯಿ ಸಬ್ಸಡಿ ದೊರೆಯುತ್ತದೆ. ವೈನರಿ ಸ್ಥಾಪನೆ ಮಾಡಲು 50 ಲಕ್ಷ ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ. ತೋಟಕ್ಕೆ ಬೇಕಾದ ಹನಿನೀರಾವರಿ ಇತ್ಯಾದಿ ವ್ಯವಸ್ಥೆಗಳ ಅಳವಡಿಕೆಗೂ ಸಹಾಯಧನ ಲಭ್ಯವಿದೆ. ಬೆಳೆಗಾರರೇ ಸೇರಿಕೊಂಡು ಸ್ಥಾಪಿಸುವ ವೈನರಿಗಳಿಗೂ ಸರ್ಕಾರದಿಂದ ಉತ್ತೇಜನವಿದೆ” ಎಂದು ವೈನ್ ಬೋರ್ಡ್ ಎಂ.ಡಿ. ಸೋಮು ಅವರು ವಿವರಿಸುತ್ತಾರೆ.
ಸರ್ಕಾರದ ಸಕಾರಾತ್ಮಕ ಹೆಜ್ಜೆಗಳು:
ರಾಜ್ಯದಲ್ಲಿ ದ್ರಾಕ್ಷಾರಸ ತಳಿ ಬೆಳೆಯಲು ಸೂಕ್ತಪ್ರದೇಶಗಳನ್ನು ಗುರುತಿಸುವುದು, ದ್ರಾಕ್ಷಾರಸ ಉತ್ಪಾದನಾ ಘಟಕಗಳನ್ನು ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆ ಕೈಗಾರಿಕೆ ಎಂದು ಘೋಷಿಸುವುದು, ದ್ರಾಕ್ಷಾರಸ ತಳಿ ಬೆಳೆಯಲು ಹಾಗೂ ದ್ರಾಕ್ಷಾರಸ ಉತ್ಪಾದನೆಗೆ ಬೇಕಾಗುವ ಭೂಮಿ ಖರೀದಿಸಲು ನಿಯಮಗಳನ್ನು ಸರಳೀಕರಿಸುವುದು, ರಾಷ್ಟ್ರೀಕೃತ ಬ್ಯಾಂಕುಗಳು ಬೆಳೆಗಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಲು ಶಿಫಾರಸು ಮಾಡುವುದು, ನ್ಯಾಷನಲ್ ಹಾರ್ಟಿಕಲ್ಚರ್ ಮಿಷನ್ ಬ್ಯಾಕ್ ಎಂಡೆಡ್ ಸಹಾಯಧನ ಕೊಡುವಾಗ ದ್ರಾಕ್ಷಾರಸ ತಳಿಗಳನ್ನು ಬೆಳೆಯುವ ಬೆಳೆಗಾರರಿಗೆ ಪ್ರಾಮುಖ್ಯತೆ ನೀಡುವಂತೆ ವಿನಂತಿಸುವಿಕೆ.
ಅಬಕಾರಿ ಸುಂಕದಲ್ಲಿ ರಿಯಾಯತಿ :
ದ್ರಾಕ್ಷಾರಸ ಉತ್ಪಾದನಾ ಘಟಕಗಳಿಗೆ ಲೈಸನ್ಸ್ ಕೊಡುವ ನಿಯಮಗಳ ಸರಳೀಕರಣ, ದ್ರಾಕ್ಷಾರಸ ಘಟಕಗಳಲ್ಲಿ ವೈನ್ ಮಾರಾಟ ಮಾಡಲು ಅನುಮತಿ, ಬಂಡವಾಳ ತೊಡಗಿಸುವಿಕೆಗೆ ಸಹಾಯಧನ, ದ್ರಾಕ್ಷಿ ಸಂಸ್ಕರಣೆಗೆ ಸಹಾಯಧನ, ತರಬೇತಿ, ವೈನ್ ಮಾರಾಟಕ್ಕೆ ವಾರ್ಷಿಕ ಶುಲ್ಕವನ್ನು ಕೇವಲ 5 ಸಾವಿರಕ್ಕೆ ನಿಗದಿಪಡಿಸಿರುವುದು, ರಾಜ್ಯ ಸರ್ಕಾರದ ಅಬಕಾರಿ ನೋಂದಣಿ ಶುಲ್ಕವೂ ಇಷ್ಟೇ ಪ್ರಮಾಣದಲ್ಲಿರುವುದು ಗಮನಾರ್ಹ. ರಾಜ್ಯದಲ್ಲಿ ಇರುವ ವೈನ್ ತಯಾರಿಕಾ ಘಟಕಗಳು ಉತ್ಪಾದಿಸುವ ವೈನಿಗೆ ಪ್ರತಿ ಲೀಟರಿಗೆ 2 ರೂಪಾಯಿ, ಹೊರರಾಜ್ಯದಿಂದ ಬರುವ ವೈನ್ ಗಳಿಗೆ ಇದರ ನಾಲ್ಕುಪಟ್ಟು ಅಬಕಾರಿ ಸುಂಕ ವಿಧಿಸಲಾಗುತ್ತದೆ. ಇದಲ್ಲದೇ ರಾಜ್ಯದ ವೈನ್ ತಯಾರಿಕಾ ಘಟಕಗಳಿಗೆ ಲೇಬಲ್ ನೋಂದಣಿ ಶುಲ್ಕವೂ ಉಚಿತವಾಗಿದೆ.
ಸಲಹೆಗಳ ಪರಿಗಣನೆ ಅತ್ಯಗತ್ಯ :
ರಾಜ್ಯದ ವೈನ್ ಪಾಲಿಸಿಯಲ್ಲಿ ಇಷ್ಟೆಲ್ಲ ಉತ್ತಮ ಅಂಶಗಳಿವೆ. ಇಂಥ ಸಂದರ್ಭದಲ್ಲಿ ಉದ್ಯಮ ಮತ್ತಷ್ಟೂ ಗರಿಗೆದರಲು ಬೆಳೆಗಾರ/ಉದ್ಯಮಿಗಳ ಪ್ರಾತಿನಿಧಿಕ ರೀತಿ ಕೃಷ್ಣಾರೆಡ್ಡಿ ಅವರ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ ಎನಿಸುತ್ತದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಬಾಗಲಕೋಟೆ ಜಿಲ್ಲೆ, ಮುಧೋಳ ತಾಲ್ಲೂಕಿನಲ್ಲಿರುವ ಎಲೈಟ್ ವಿಂಟೇಜ್ ವೈನರಿ ಘಟಕದ ಮಾರುಕಟ್ಟೆ ವ್ಯವಸ್ಥಾಪಕ ಕೃಷ್ಣದೀಕ್ಷಿತ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
“ಪ್ರಸ್ತುತ ವೈನ್ ಉತ್ಸವಗಳು ಬೆಂಗಳೂರು, ಮಂಗಳೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿಗೆ ಮಾತ್ರ ಸೀಮಿತವಾಗಿವೆ. ಆದ್ದರಿಂದ ಪ್ರತಿವರ್ಷ ಕಿರು ಮತ್ತು ಮಧ್ಯಮ ಮಟ್ಟದಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ವೈನ್ ಫೆಸ್ಟಿವಲ್ ಗಳನ್ನು ಆಯೋಜಿಸುವುದು. ಇದರಿಂದ ರಾಜ್ಯದ್ಯಂತ ವೈನ್ ಸೇವನೆಯಿಂದಾಗುವ ಉತ್ತಮ ಪರಿಣಾಮಗಳನ್ನು ತಿಳಿಸಲು ಸಾಧ್ಯವಾಗುತ್ತದೆ. ಪ್ರತಿವರ್ಷವೂ ರಾಜಧಾನಿಯಲ್ಲಿ ಅಂತರಾಷ್ಟ್ರೀಯ ವೈನ್ ಉತ್ಸವ ಏರ್ಪಡಿಸಬೇಕು. ಇವೆಲ್ಲದರಿಂದ ರಾಜ್ಯದ ವೈನ್ ಉದ್ಯಮ ಮತ್ತಷ್ಟೂ ಶೀಘ್ರವಾಗಿ ಬೆಳೆಯುತ್ತದೆ” ಎನ್ನುತ್ತಾರೆ.