ನಿರ್ಲಕ್ಷಿತ ತರಕಾರಿ ರೆಕ್ಕೆ ಅವರೆ

0
ಲೇಖಕರು: ಅನೂಶಾ ಹೊನ್ನೇಕೂಲು

ರೆಕ್ಕೆ ಅವರೆ, ಮೀನವರೆ, ಮತ್ತಿ ಅವರೆ, ಗರಗಸ ಅವರೆ, ಕತ್ತರಿ ಅವರೆ, ಸೊಪ್ಪು ಅವರೆ, ಬಣಪ್ಪವರೆ ಮುಂತಾದ ಹೆಸರುಗಳಿರುವ ಈ ತರಕಾರಿ ಅಪಾರ ಪೌಷ್ಟಿಕ ಅಂಶಗಳನ್ನು ಹೊಂದಿದೆ.  ಇಂಗ್ಲೀಷ್ ನಲ್ಲಿ winged bean, goa bean, four angle ಬೀನ್, princess peo ಮುಂತಾದ ಹೆಸರುಗಳಿವೆ. ವೈಜ್ಞಾನಿಕ ಹೆಸರು psophocarpus tetragonolobus.

ರೆಕ್ಕೆ ಅವರೆಗೆ ವಿಶೇಷ ಆರೈಕೆ ಬೇಡ. ರೋಗಗಳ ಹಾವಳಿಯೂ ಇಲ್ಲ. ಜೂನ್ ನಲ್ಲಿ ಬಿತ್ತನೆ ಮಾಡಿ ಚಪ್ಪರಕ್ಕೆ ಹಬ್ಬಿಸಿದರೆ ಎರಡು ಮೂರು ತಿಂಗಳಲ್ಲಿ ಹೂವು ಬಿಟ್ಟು ಇಳುವರಿ ಬರಲು ಶುರುವಾಗುತ್ತದೆ. ರಾಶಿ ರಾಶಿ ಹೂವು ಹೀಚು ಕಾಯಿಗಳಿಂದ ಬಳ್ಳಿ ತೊನೆದಾಡುತ್ತದೆ. ಕಡು ಹಸಿರು ಬಣ್ಣದ ನಾಲ್ಕು ಬದಿಗೆ ಗರಗಸದಂತಹ ರಚನೆಯ ಕಾಯಿಗಳು ಆಕರ್ಷಣೀಯ. ಸತತ 6ರಿಂದ 8 ತಿಂಗಳ ಕಾಲ ಇಳುವರಿ ನೀಡಿ ಬಳ್ಳಿ ಒಣಗುತ್ತದೆ.

ರೆಕ್ಕೆ ಅವರೆಗೆ ಒಳ್ಳೆಯ ಮಣ್ಣು, ಬೂದಿ, ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಕೊಟ್ಟರೆ ಸಾಕು. ಬೇಸಿಗೆಯಲ್ಲಿ ವಾರಕ್ಕೆರಡು ಬಾರಿ ನೀರುಣಿಸಿದರೆ ಸಾಕಾಗುತ್ತದೆ. ಹಿತ್ತಲಲ್ಲಿ ಒಮ್ಮೆ ನಾಟಿ ಮಾಡಿದರೆ ಇದು ನಾಲ್ಕು, ಐದು ವರ್ಷಗಳವರೆಗೂ ಬದುಕುತ್ತದೆ. ಪ್ರತಿ ವರ್ಷ ಮೆ ತಿಂಗಳ ಹೊತ್ತಿಗೆ ಬಳ್ಳಿ ಒಣಗಿ ಮಳೆ ಬಂದ ಕೂಡಲೇ ಮಣ್ಣಿನ ಒಳಗಿರುವ ಗಡ್ಡೆಗಳು ಚಿಗುರುತ್ತವೆ. ಆ ಹೊತ್ತಿಗೆ ಬುಡಕ್ಕೆ ಆರೈಕೆ ಮಾಡಿದರೆ ಚಿಗುರಿ ಇಳುವರಿ ನೀಡುತ್ತದೆ. ಈ ಅವರೆಯ ಚಿಗುರು, ಹೂವು, ಕಾಯಿ, ಗಡ್ಡೆ, ಬಲಿತ ಬೀಜ ಎಲ್ಲವೂ ತಿನ್ನಲು ಯೋಗ್ಯವಾಗಿದ್ದು ಪೋಷಕಾಂಶಗಳ ಆಗರ.

ರೆಕ್ಕೆ ಅವರೆಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಸಂಧಿವಾತ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಗೆ ಇದು ಔಷಧ. ಸೋಯಾ ಕಾಳುಗಳಷ್ಟೇ ಪೋಷಕಾಂಶಗಳನ್ನು ಇದರ ಕಾಳುಗಳು ಹೊಂದಿವೆ. ಆದರೆ ಇದರಲ್ಲಿರುವ ಪೌಷ್ಟಿಕ ಅಂಶಗಳ ಬಗ್ಗೆ ಅರಿಯದೆ ಇದನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ನಿರ್ಲಕ್ಷಿತ ತರಕಾರಿಯಾಗಿದೆ. ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ಕೆಲವರು ಹಿತ್ತಲ ತರಕಾರಿಯಾಗಿ ಬೆಳೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ದೊರೆಯುವುದು ದೂರದ ಮಾತು. ಹಾಗಾಗಿ ಎಷ್ಟೋ ಜನರಿಗೆ ಇದರ ಪರಿಚಯವೇ ಇಲ್ಲ.

ರೆಕ್ಕೆ ಅವರೆ ಬಳಸುವುದು ಹೇಗೆ: ಹೀಚು ಕಾಯಿಯಾಗಿ ಒಂದು ವಾರದೊಳಗೆ ಎಳೆಯ ಕಾಯಿಗಳನ್ನು ಬಳಸಿದರೆ ರುಚಿ. ಬಲಿತ ಕಾಯಿಗಳು ರುಚಿ ಇಲ್ಲ. ಬಲಿತದ್ದನ್ನು ಒಣಗಿಸಿ ಕಾಳುಗಳನ್ನು ಉಪಯೋಗಿಸಬಹುದು. ಒಣ ಬೀಜಗಳಲ್ಲಿ ಎ ಜೀವಸತ್ವ ಅಧಿಕ ಇದೆ. ನಾಟಿ ಮಾಡಿದ 7, 8 ತಿಂಗಳಲ್ಲಿ ಬೇರುಗಳು ಗಡ್ಡೆಗಳಾಗುತ್ತವೆ. ಆಲೂಗಡ್ಡೆಯನ್ನು ಹೋಲುತ್ತವೆ. ಈ ಗಡ್ಡೆಗಳನ್ನೂ ಆಹಾರವಾಗಿ ಬಳಸಬಹುದು. ಚಿಪ್ಸ್, ಬೋಂಡ ಮಾಡಬಹುದು. ಚಿಗುರು ಮತ್ತು ಕಾಯಿಗಳಿಂದ ಸಾಂಬಾರ್, ಪಲ್ಯ, ಮಜ್ಜಿಗೆ ಹುಳಿ ಮಾಡಬಹುದು. ರೆಕ್ಕೆ ಅವರೆಯಲ್ಲಿ ಗೇಣುದ್ದ, ಮೊಳದುದ್ದ ಎರಡು ತಳಿಗಳಿವೆ.

ರೆಕ್ಕೆ ಅವರೆಯಲ್ಲಿ Folate ಅಂಶ ಹೇರಳವಾಗಿದ್ದು ಗರ್ಭಿಣಿಯರ ಆರೋಗ್ಯ ರಕ್ಷಣೆಗೆ ಉಪಯುಕ್ತ ತರಕಾರಿ. ವಿಟಮಿನ್ ಎ ಮತ್ತು ಸಿ ಇರುವುದರಿಂದ ಇದರ ಸೇವನೆಯಿಂದ ಮುಖದ ಸುಕ್ಕುಗಟ್ಟುವಿಕೆ ತಡೆಯುತ್ತದೆ. ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಇಷ್ಟೆಲ್ಲಾ ಉಪಯುಕ್ತವಾದ ಈ ತರಕಾರಿಯನ್ನು ಹಿತ್ತಲಿನಲ್ಲಿ ಬೆಳೆದು ಉಳಿಸೋಣ. ಹೆಚ್ಚೆಚ್ಚು ಜನ ಇದನ್ನು ಉಪಯೋಗಿಸುವಂತಾಗಲಿ.

ಚಿತ್ರ: ಗುಣಾಜೆ ರಾಮಚಂದ್ರ ಭಟ್

LEAVE A REPLY

Please enter your comment!
Please enter your name here