ಬಯಲುಸೀಮೆ ತೋಟ ಆವರಿಸಿಕೊಂಡ ಮುಟ್ಟಿದರೆ ಮುನಿ !

0
Mimosa invisa - ಮುಟ್ಟಿದರೆ ಮುನಿ
ಲೇಖಕರು: ಸಂತೋಷ್ ಕೌಲಗಿ

ಭಾಗ – 2

ನಮ್ಮದು ಮಳೆ ಕಡಿಮೆ ಬರುವ ಪ್ರದೇಶ. ಮರಳು ಮಿಶ್ರಿತ ಕೆಂಪು ಮಣ್ಣು. ಎಲ್ಲ ಕಡೆ ಬಯಲು. ಅಂತಹ ಫಲವತ್ತಲ್ಲದ ಭೂಮಿ. ಅಂತರ್ಜಲವೂ ಕಡಿಮೆ. ಉಳುಮೆ ಮಾಡದೆ ಬಿಟ್ಟರೆ ಹುಲ್ಲೋ ಹುಲ್ಲು. ಬೇಸಿಗೆಯಲ್ಲಿ ಯಾರಾದರೂ ಬೆಂಕಿಗೆ ತಗಲಿಸಿದರೆ ಮುಗಿಯಿತು, ಸರ್ವ ನಾಶ. ಅಂತಹ ಜಾಗದಲ್ಲಿ ನಾರಾಯಣರೆಡ್ಡಿ ಅವರ ಅಪ್ಪಣೆಯ ಮೇರೆಗೆ ಸುಮಾರು ೬ ಎಕರೆಯಲ್ಲಿ ಸೀಬೆಯ ತೋಟವನ್ನು ಈ ಮಿಮೊಸಾ ಬೀಜ ಸಿಗುವ ಎರಡು ವರ್ಷ ಮುಂಚೆಯಷ್ಟೇ ಪ್ರಾರಂಭಿಸಿದ್ದೆವು. ( ನಾರಾಯಣರೆಡ್ಡಿಯವರ ಹನಿ ನೀರಾವರಿ ಕತೆ ಮುಂದೊಮ್ಮೆ ಹೇಳುವೆ)

ಜನವರಿಯಲ್ಲಿ ಭರಣಿಯ ಮಳೆಯಲ್ಲಿ ಸೀಬೆ ತೋಟದ ಒಂದು ಭಾಗವನ್ನು ಅಚ್ಚು ಕಟ್ಟಾಗಿ ಉತ್ತು ಅಲ್ಲಿ ಈ ಮಿಮೋಸಾ ಬೀಜವನ್ನು ಬಿತ್ತಿದೆವು.( ಇರುವ ಸ್ವಲ್ಪ ಬೀಜವನ್ನು ಆದಷ್ಟು ಬೇಗ ದ್ವಿಗುಣ ಗೊಳಿಸಿ ಇಡೀ ತೋಟಕ್ಕೆ ಬಿತ್ತುವ ಉದ್ದೇಶ ನಮ್ಮದು) ಬಯಲು ಸೀಮೆಯ ಈ ವಾತಾವರಣದಲ್ಲಿ ಆ ಗಿಡಕ್ಕೆ ಸಾಕಷ್ಟು ಬಿಸಿಲು, ಹದವಾದ ಮಳೆ ಇಲ್ಲಿ ಸಿಕ್ಕಿತು ಎನಿಸುತ್ತದೆ. ಆ ವರ್ಷದ ಕಡೆಗೆ ನಾವು ಬಿತ್ತಿದ ಜಾಗದಲೆಲ್ಲಾ ಈ ಗಿಡ ಹರಡಿ, ಜನವರಿಯಲ್ಲಿ ಬೀಜ ಬಿಡಲು ಪ್ರಾರಂಭಿಸಿತು. ಸುಮಾರು ೮/೧೦ ಕೆಜಿ ಬೀಜ ದೊರಕಿತು. ಸಾಕಷ್ಟು ಎಲೆ ಮತ್ತು ಕಡ್ಡಿ ಒಣಗಿ ಭೂಮಿಯ ಮೇಲೆ ಒಂದು ಪದರ ನಿರ್ಮಾಣವಾಗಿತ್ತು. ನಮಗೆ ಸಂತೋಷವೋ ಸಂತೋಷ.

ಮುಂದಿನ ಮುಂಗಾರಿನಲ್ಲಿಇಡೀ ತೋಟಕ್ಕೆ ಈ ಬೀಜ ಬಿತ್ತಿದೆವು. ಆ ವರ್ಷವೇ ಇಡೀ ತೋಟವನ್ನು ಇದು ಆಕ್ರಮಿಸಿಕೊಂಡು ನಾವು ನಮ್ಮ ಶತ್ರುಗಳು ಎಂದು ಭಾವಿಸಿದ್ದ ಹಲವಾರು ಬೇರೆಯ ಗಿಡಗಳನ್ನು ನಾಶ ಮಾಡಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸತೊಡಗಿತು. ನಮಗೆ ಗೆದ್ದೆವೆಂಬ ಭಾವ. ಅದರ ಮಾರನೆಯ ವರ್ಷ ನಮ್ಮ ಸೀಬೆಯ ಗಿಡಗಳಿಗೆ ಮೂರು-ನಾಲ್ಕು ವರ್ಷ. ನಾವು ಪ್ರಾರಂಭದಲ್ಲಿ ಹಾಕಿದ ಗೊಬ್ಬರದ ಪರಿಣಾಮವೋ, ಮಾಡಿದ ಆರೈಕೆಯ ಪರಿಣಾಮವೋ) ಸೀಬೆ ಗಿಡದಲ್ಲಿ ಕಾಯಿಗಳು ಜೊಂಪೆ, ಜೊಂಪೆಯಾಗಿ ದೊಡ್ಡ ದೊಡ್ಡ ಗಾತ್ರದಲ್ಲಿ ಬಿಡತೊಡಗಿದವು( ಅಲಹಾಬಾದ್ ಸಫೇದ್)

ಕೆಳಗೆ ಸುಂದರ ಭೂ ಮುಚ್ಚಳಿಕೆ, ಗಿಡದ ತುಂಬ ಕಾಯಿ, ಇನ್ನೇನು ಬೇಕು? ನಾವು ಪುಕುವೊಕಾ ಎಂದು ಕೊಳ್ಳಲು ಅನುಮಾನವೇ ಉಳಿಯಲಿಲ್ಲ. ಆದರೆ ನಮಗಿನ್ನೂ ಬಿಳಿಯ ಗಡ್ಡ ಬರುವ ವಯಸ್ಸಾಗಿರಲಿಲ್ಲ. ಆಗಾಗ್ಗೆ ಇದರ ಬಗ್ಗೆ ಗುರುಗಳಾದ ತೇಜಸ್ವಿಯವರಿಗೆ ವರದಿ ಸಲ್ಲಿಸುತ್ತಿದ್ದೆವು. ನನ್ನ ಮದುವೆಗೆ ಬರಲಾಗದಿದ್ದರಿಂದ ಆರು ತಿಂಗಳ ನಂತರ ನಮ್ಮನ್ನು ಹರಸಲು ಬಂದ ತೇಜಸ್ವಿಯವರೂ ಅದನ್ನು ನೋಡಿ, ಭಲೆ ಭಲೆ ಎಂದರು. ಅದೇ ವರ್ಷ ಸೆಪ್ಟೆಂಬರ್‍ /ಅಕ್ಟೋಬರ್‌ನಲ್ಲಿ ನಮ್ಮಲ್ಲಿಗೆ ಹಾಸನದಿಂದ ಆಕಾಶವಾಣಿಯ ಗೆಳೆಯ ವಿಜಯ ಅಂಗಡಿ ಬಂದಿದ್ದರು. ಅವರು ಆಗಲೇ ಫುಕುವೊಕಾನ ಶಿಷ್ಯನಾಗಿ ಭೂಮಿಯಿಂದ ಅರ್ಧ ಅಡಿ ಮೇಲೆ ಓಡಾಡುತ್ತಿದ್ದರು.

ಅವರಿಗೆ ನಮ್ಮ ಈ ಅಧ್ಬುತ ತೋಟವನ್ನು ನೋಡಿ ಹಿಗ್ಗೋ ಹಿಗ್ಗು. ನಳ ನಳಿಸುತ್ತಿದ್ದ ತೋಟ, ಗಿಡದ ತುಂಬ ಕಾಯಿ, ನೆಲ ಮುಚ್ಚಿಗೆ. ಪಕ್ಕದ ಬೆಟ್ಟದಲ್ಲಿ ಹುಟ್ಟು ಕಟ್ಟಿದ್ದ ಹೆಜ್ಜೇನುಗಳ ಸಂಭ್ರಮದ ಹಾರಾಟ, ಆಗಲೇ ಅವರು ಇನ್ನೊಂದೆರಡು ವಾರದಲ್ಲಿ ತಮ್ಮ ಬಾನುಲಿ ಬಳಗದ ಸದಸ್ಯರನ್ನೆಲ್ಲಾ ಈ ತೋಟ ತೋರಿಸಲು ಕರೆದು ತರಲು ಅನುಮತಿ ಕೋರಿದರು.

ನಮಗೂ ಬಾಲ್ಯ. ಪ್ರಚಾರದ ಚಪಲ, ಜನ ನೋಡಬೇಕು , ಭೇಷ್ ಎನ್ನಬೇಕು ಎಂಬ ಆಸೆ. ಅದೂ ವಿಜಯ್ ಅಂಗಡಿ ಪ್ರಸಾರ ಮಾಧ್ಯಮದಲ್ಲೇ ಇರುವಾಗ, ಸೈ ಎಂದೆವು. ಮುಂದೊಂದು ವಾರದಲ್ಲಿ ಒಂದು ದೊಡ್ಡ ಬಸ್ಸಿನ ತುಂಬ ಹಾಸನದ ರೈತರನ್ನು ತುಂಬಿ ಕೊಂಡು ವಿಜಯ್ ಅಂಗಡಿ ಇಳಿದೇ ಬಿಟ್ಟರು. ರೈತರು ತೋಟವನ್ನು ನೋಡಿ ಸಂತೋಷ ಪಟ್ಟರು, ಬೇಕಾದಷ್ಟು ದೊಡ್ಡ ದೊಡ್ಡ, ಸಿಹಿಯಾದ ಸೀಬೆಯ ಹಣ್ಣನ್ನು ತಿಂದು ಹಾಡಿ ಹೊಗಳಿ ಹೋದರು. ಹೋಗುವಾಗ ವಿಜಯ್ ಅಂಗಡಿ ಮುಂದಿನ ವರ್ಷ ನಮಗೆ ಮಿಮೋಸಾದ ಬೀಜ ಒಂದು ಕ್ವಿಂಟಾಲ್ ನಷ್ಟು ಕೊಡಣ್ಣ ಎಂದು ಹೇಳಿ ಹೋದರು. ನಮಗೆ ಫುಕುವೊಕಾ ಆಗಲು ಅರ್ಧ ಅಡಿ ಉಳಿದಿದೆ ಎನಿಸತೊಡಗಿತು. ಆದರೆ ಹಾಳಾದ್ದು ಗಡ್ಡ ಬಿಳಿಯಾಗಲು ಇನ್ನೂ ಎರಡು ದಶಕ ಕಾಯಬೇಕಿತ್ತು. ಬೇಸಿಗೆಯಲ್ಲಿ ಬೀಜ ಸಂಗ್ರಹಿಸಿ ವಿಜಯ್ ಅಂಗಡಿಗೆ ಒಂದು ಕ್ವಿಂಟಾಲ್ನಷ್ಟು ನೀಡಿ ಹಣವನ್ನೂ ಪಡೆದಾಯ್ತು.

ಗೆಳೆಯ ಸುರೇಶ ತನ್ನ ಮಲೆನಾಡಿನ ಮನೆಗೆ ಹೋಗಿ ಮಲೆನಾಡಿನ ರೈತರಿಗೆ ಇದರ ಮಹಿಮೆಯನ್ನು ತಿಳಿಸಿ ರಾಘವೇಂದ್ರ ಸ್ವಾಮಿಗಳ ಮಠದ ಮಂತ್ರಾಕ್ಷತೆಯಂತೆ ಇಷ್ಟಿಷ್ಟೇ ಬೀಜವನ್ನು ನೀಡಿ ಜೋಪಾನವಾಗಿ ಕಾಪಾಡಿ ಅಭಿವೃದ್ಧಿ ಪಡಿಸಲು ಆಶೀರ್ವಾದ ಪೂರ್ವಕವಾಗಿ ಈ ಬೀಜವನ್ನು ವಿತರಿಸತೊಡಗಿದ. ಆದರೆ ಮಲೆನಾಡಿನಲ್ಲಿ ಆತನ ಆಶೀರ್ವಾದ ಫಲಿಸಲಿಲ್ಲ. ಅದು ನಮ್ಮಲ್ಲಿ ಫಲಿಸತೊಡಗಿತು. ಆಗಷ್ಟೇ ಶ್ರೀರಂಗ ಪಟ್ಟಣದ ಬಳಿಯ ಮಹದೇವಪುರದ ಬಳಿ ಇಸ್ಕಾನ್‌ ಅವರು ತೋಟವೊಂದನ್ನು ಅಭಿವೃದ್ಧಿ ಪಡಿಸತೊಡಗಿದ್ದರು. ಅಲ್ಲಿದ್ದ ಸ್ವಾಮಿಯೊಬ್ಬರಿಗೆ ಈ ಗಿಡದ ಮಹತ್ವ ಅರಿವಾಗಿ ಅವರೂ ನಮ್ಮಲ್ಲಿ ಬೀಜಕ್ಕೆ ಬಂದರು, ಅವರಿಗೂ ಕೊಟ್ಟೆವು.

ವಿಜಯ್ ಅಂಗಡಿ ಕೃಷಿ ಕಾರ್ಯಕ್ರಮದಲ್ಲಿ ಈ ಗಿಡದ ಬಗ್ಗೆ ಮಾತನಾಡಿದ ಕಾರಣ ಎಲ್ಲೆಲ್ಲಿಂದಲೋ ಈ ಬೀಜಕ್ಕಾಗಿ ಕಾಗದಗಳು ಬರತೊಡಗಿದವು ( ಆಗಿನ್ನೂ ಮೊಬೈಲ್ ಫೋನ್ ಇರಲಿಲ್ಲ) ನಾವು ಪುಕುವೊಕಾ ಆದೆವು ಎಂದು ಕೊಳ್ಳಲು ನಮಗಿದ್ದ ಒಂದೆ ಅಡ್ಡಿ ಎಂದರೆ ನಮ್ಮ ಕರಿಯ ಗಡ್ಡ!

ಈ ಲೇಖನದ ಮೊದಲ ಭಾಗವನ್ನೂ ಓದಿ : ತೋಟಕ್ಕೆ ಬಂದ ಮುಟ್ಟಿದರೆ ಮುನಿ !

ಮುಂದುವರಿಯುತ್ತದೆ …

ಲೇಖಕರ ಪರಿಚಯ: ಸಂತೋಷ್ ಕೌಲಗಿ ಅವರು ಮಂಡ್ಯ ಜಿಲ್ಲೆ ಮೇಲುಕೋಟೆ ನಿವಾಸಿ.ಜಪಾನಿನ ಸಹಜ ಕೃಷಿಕ ಮಸನೋಬು ಪುಕುವೋಕ ಅವರ ಕೃಷಿ ವಿಚಾರಗಳಿಂದ ಪ್ರಭಾವಿತರಾದವರು. ಮೂರು ದಶಕದ ಹಿಂದೆ ಪುಕುವೋಕ ಅವರು ಬರೆದ “ಒನ್ ಸ್ಟ್ರಾ ರೆವಲ್ಯೂಶನ್” ಕೃತಿಯನ್ನು ಕನ್ನಡಕ್ಕೆ ಒಂದು ಹುಲ್ಲಿನ ಕ್ರಾಂತಿ ಹೆಸರಿನಲ್ಲಿ ಅನುವಾದಿಸಿದರು. ಹೊಸ ಜೀವನ ದಾರಿ ಹೆಸರಿನ ತೋಟದಲ್ಲಿ ಸಹಜ ಕೃಷಿ ಪ್ರಯೋಗಳನ್ನು ಆರಂಭಿಸಿ ಇತರರಿಗೂ ಮಾದರಿಯಾದರು

LEAVE A REPLY

Please enter your comment!
Please enter your name here