ಪರಿಸರ ಸಂರಕ್ಷಣೆ ಯೋಜನೆಗಳು ತುರ್ತಾಗಿ ಬೇಕಲ್ಲವೇ ?

0
ಲೇಖಕರು: ಅವಿನಾಶ್ ಟಿ.ಜಿ.ಎಸ್.

ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯ ದುಷ್ಪರಿಣಾಮಗಳು ಎಲ್ಲೆಡೆ ಗೋಚರಿಸುತ್ತಿವೆ. ವಿಶ್ವದ ಯಾವುದೇ ಹಲವು ಪ್ರದೇಶ ಇದಕ್ಕೆ ಹೊರತಾಗಿಲ್ಲ. ಭಾರತದ ಶೇಕಡ 80ರಷ್ಟು ಭಾಗಗಳುಇದರ ನೇರ ಪರಿಣಾಮಕ್ಕೆ ಒಳಗಾಗಿವೆ. ತೀವ್ರ ತಾಪಮಾನದಿಂದ ತತ್ತರಿಸುತ್ತಿವೆ. ಓಜೊನ್ ವಲಯ ಛಿದ್ರವಾಗಿರುವುದರಿಂದ ಸೂರ್ಯನ ಅಪಾಯಕಾರಿ ಕಿರಣಗಳು ಭೂಮಿಗೆ ನೇರವಾಗಿ ಅಪ್ಪಳಿಸುತ್ತಿವೆ.

ಗಾಳಿ, ನೀರು, ವಾತಾವರಣ ಎಲ್ಲವೂ ಬಿಸಿಯಾಗುತ್ತಿದೆ.  ವರ್ಷದಿಂದ ವರ್ಷಕ್ಕೆ ಸೈಕ್ಲೋನ್ ಹಾವಳಿ ಹೆಚ್ಚಾಗುತ್ತಿದೆ. ಹಿಮಗಡ್ಡೆಗಳು,  ಹಿಮಪರ್ವತಗಳು ಕರಗುತ್ತಿವೆ ಸಮುದ್ರ,ಗಳ ಮಟ್ಟ ಹೆಚ್ಚಾಗುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಗಳು ಒಟ್ಟಿಗೆ ಸಂಭವಿಸುತ್ತಿದೆ. ಇನ್ನು ಗಾಳಿಯ ವೇಗ ಹೆಚ್ಚಾಗುತ್ತಿದೆ, ಜೊತೆಗೆ ಗಾಳಿ, ನೀರು ಆಮ್ಲೀಯತೆಗೆ ಒಳಗಾಗಿದೆ.

ಪ್ರಕೃತಿಯ ಮಡಿಲಲ್ಲಿ ಜೇವಿಸುತ್ತಿದ್ದ ವಿವಿಧ ಪ್ರಭೇದಗಳ  ಜೀವಿಗಳು ಈಗ 40 ಪ್ರತಿಶತದಷ್ಟು ನಶಿಸಿವೆ ಎಂದು ಹೇಳಲಾಗುತ್ತಿದೆ. ಶೇ. 40ರಷ್ಟು ಕಾಡು ನಾಶ ಆಗಿದೆ. ಇಂತಹ ಅದೆಷ್ಟೋ ಕಾರಣಗಳಿಂದ ಪ್ರಕೃತಿ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದೆ. ಅದೇ ಕಾರಣಕ್ಕೆ “ಇನ್ನೊಂದು 50 ರಿಂದ 100 ವರ್ಷಗಳಲ್ಲಿ ಈ ಭೂಮಿಯ ಮೇಲೆ ಯಾವ ಜೀವಿಗಳೂ ಇರುವುದು ಕಷ್ಟ” ಎಂದು ತಜ್ಞರು, ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ.

ಮನುಷ್ಯರೇ ಈ ಎಲ್ಲ ಆನಾಹುತಗಳಿಗೆ ಕಾರಣ.  ನಮ್ಮ ಕೈಯಾರ ನಾವೇ ನಮ್ಮ ಅಂತ್ಯವನ್ನು ತಂದುಕೊಳ್ಳುತ್ತಿದ್ದೇವೆ. ಅಧುನಿಕ ಜಗತ್ತನ್ನು ಸೃಷ್ಟಿಸುವ ಬರದಲ್ಲಿ, ಐಷಾರಾಮಿ ಜೀವನಕ್ಕೆ ಅಗತ್ಯ ಎಂದುಕೊಂಡಿರುವ ಶೇ. 70ರಿಂದ ಶೇಕಡ 90ರಷ್ಟು ಉತ್ಪನ್ನಗಳನ್ನು ಬಳಸುತ್ತಿದ್ದೇವೆ.  ಇವುಗಳಿಂದ ಹಲವಾರು ಅನಿಲಗಳು ಉತ್ಪತ್ತಿಯಾಗುತ್ತಿವೆ.

ಉದಾಹರಣೆಗೆ, ವಾಹನಗಳು, ರೆಫ್ರಿಜರೇಟರ್ ಗಳು, ಹವಾನಿಯಂತ್ರಣಗಳು, ಫೋಮ್ಗಳು, ಪೆಟ್ರೋಲ್, ಡೀಸಲ್, ಮೊಬೈಲ್, ಕಂಪ್ಯೂಟರ್ ಗಳು, ಕಾಸ್ಮೇಟಿಕ್, ಕೃಷಿಯಲ್ಲಿ ಬಳಸುವ ರಾಸಾಯನಿಕಗಳು, ಕ್ರಿಮಿನಾಶಕಗಳು, ಕಳೆನಾಶಕಗಳು, ಕಲ್ಲಿದ್ದಲಿನಿಂದ ತಯಾರಾಗುತ್ತಿರುವ ವಿದ್ಯುತ್‌ ನಿಂದ ಹಸಿರು ಮನೆ ಅನಿಲಗಳು ಅಥವಾ ಶಾಖವರ್ಧಕ ಅನಿಲಗಳು ಉತ್ಪಾದನೆಯಾಗುತ್ತಿವೆ.  ಈ ಅನಿಲಗಳು ಭೂಮಿಯನ್ನು ಸುತ್ತುವರಿದು  ಸಕಲ ಜೀವರಾಶಿಗಳ ಅಸ್ತಿತ್ವವನ್ನು ಉಸಿರುಕಟ್ಟಿ ಅಳಿಸಿ ಹಾಕಲು ಹೊರಟಿವೆ.

ಇಂಥ ಸಮಯದಲ್ಲಿ ಭಾರತದಲ್ಲಿ ಮತ್ತೊಂದು ಚುನಾವಣೆ ಎದುರಾಗಿದೆ. ಈಗ ಭೂಮಿಯ ಆಕ್ರಂದನಕ್ಕೆ ತುರ್ತಾಗಿ ಸಂದಿಸುವ ಮನಸ್ತುಗಳುಳ್ಳ ಜನಪ್ರತಿನಿಧಿಗಳ ಅವಶ್ಯಕತೆ ಎಂದಿಗಿಂತ ಇಂದು ಹೆಚ್ಚು ಅಗತ್ಯವಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳು, ಆಯ್ಕೆಯಾಗುವ ಜನಪ್ರತಿನಿಧಿಗಳು ಮತ್ತು ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು ಮುಂದಿನ 5 ವರ್ಷಗಳ ಅವಧಿಯಲ್ಲಿ ಸಕಲ ಜೀವರಾಶಿಗಳ ಉಳಿವಿಗೆ ಕೈಗೊಳ್ಳುವ ಕಾರ್ಯಗಳ ಬಗ್ಗೆ ಸ್ಪಷ್ಟವಾದ ಗುರಿಯನ್ನು ಹೊಂದಿರಬೇಕು.

ಈ ನಿಟ್ಟಿನಲ್ಲಿ ಆಲೋಚಿಸುತ್ತಾ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಒಂದಷ್ಟು ಬೆಳಕನ್ನು ಚೆಲ್ಲುವ ಪ್ರಯತ್ನ ಮಾಡುತ್ತಿದ್ದೇನೆ. ಇದನ್ನು ಜನ ಪ್ರಣಾಳಿಕೆ ಎಂದಾದರೂ ಕರೆಯೋಣ ಅಥವಾ ಪ್ರಕೃತಿ-ಪರಿಸರದ ಉಳಿವಿಗಾಗಿ ಅವಶ್ಯವಿರುವ ಪ್ರಣಾಳಿಕೆ ಎಂದಾದರೂ ಕರೆಯೋಣ.

ಪ್ರಸಕ್ತ ಭಾರತ ದೇಶದಲ್ಲಿ ಶೇ. 70ರಷ್ಟು ವಿದ್ಯುತ್, ಕಲ್ಲಿದ್ದಲಿನಿಂದ ಉತ್ಪಾದನೆಯಾಗುತ್ತಿದೆ. ಈ ರೀತಿ ತಯಾರಾಗುವ ವಿದ್ಯುತ್‌ನಿಂದ ತಾಪಮಾನ ಏರಿಕೆಗೆ ಕಾರಣವಾಗುವ ಸರಿಸುಮಾರು 40 ಪ್ರತಿಶತಕ್ಕೂ ಅಧಿಕ ಪ್ರಮಾಣದಲ್ಲಿ ಶಾಖವರ್ಧಕ ಅನಿಲಗಳು ಬಿಡುಗಡೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಇನ್ನು ಮುಂದಿನ ದಿನಗಳಲ್ಲಿ ನೀರು, ಗಾಳಿ ಮತ್ತು ಸೌರ ಶಕ್ತಿ ಬಳಸಿಕೊಂಡು ವಿದ್ಯುತ್‌ ಪ್ರತೀ ಉತ್ಪಾದಿಸುತ್ತಾ ಕಲ್ಲಿದ್ದಲಿನ ಬಳಕೆಯನ್ನು ಸಂಪೂರ್ಣವಾಗಿ  ನಿಷೇಧಿಸುವ ಕಡೆ ನಮ್ಮ ನಡೆ ಇರಬೇಕು.

ಭಾರತದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದಲೂ ಶೇಕಡ  18 ರಷ್ಟು ಶಾಖವರ್ಧಕ ಅನಿಲಗಳು ಬಿಡುಗಡೆ ಆಗುತ್ತಿದೆ ಎಂದು ಅಂದಾಜಿಸಲಾಗಿದೆ. ಇನ್ನು ಮುಂದೆ ಭಾರತಕ್ಕೆ ಅಗತ್ಯವಾಗಿರುವ ಉತ್ಪನ್ನಗಳ ತಯಾರಿಕೆಗೆ  ಮಾತ್ರ  ಗಣಿಗಾರಿಕೆಗೆ  ಅವಕಾಶ ಕೊಡಬೇಕು. ಹಾಗೂ ಆ ಗಣಿಗಾರಿಕೆ ನಡೆಯುವ ಸ್ಥಳದ ಸುತ್ತಮುತ್ತ ವಾಸಿಸುವ ಜನರು, ಪ್ರಾಣಿಪಕ್ಷಿಗಳಿಗೆ ಯಾವುದೇ ಹಾನಿ ಉಂಟಾಗದಂತೆ  ಎಚ್ಚರ ವಹಿಸುವ ಕೆಲಸಗಳು ಜೊತೆಜೊತೆಗೆ ಕಾರ್ಯರೂಪಕ್ಕೆ ಬರಬೇಕು.

ಸಾರಿಗೆ ವ್ಯವಸ್ಥೆಯಿಂದ  ಶೇಕಡ 20ಕ್ಕೂ  ಅಧಿಕ ಪ್ರಮಾಣದಲ್ಲಿ ಶಾಖವರ್ಧಕ ಅನಿಲಗಳು ಬಿಡುಗಡೆ ಆಗುತ್ತಿವೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಬಸ್ಸು, ರೈಲಿನಂತಹ ಸಾರಿಗೆ ವ್ಯವಸ್ಥೆ ಅನಿವಾರ್ಯ. ಜೊತೆಗೆ ಐಷಾರಾಮಿ ಬದುಕಿನಲ್ಲಿ ಬಳಸುತ್ತಿರುವ ವಾಹನಗಳಲ್ಲಿ ಒಂದಷ್ಟು ಮಿತಿ ಸಾಧಿಸಬೇಕು. ಅಂದರೆ ಒಂದು ಮನೆಗೆ ಒಂದು ದ್ವಿಚಕ್ರ ವಾಹನ,  ಒಂದು ನಾಲ್ಕು ಚಕ್ರದ ವಾಹನ ಇರುವಂತಾದರೆ ಪರಿಸ್ಥಿತಿ ತಕ್ಕಷ್ಟು ಸುಧಾರಿಸುತ್ತದೆ.  ಪ್ರತಿ ಒಂದು ಲೀಟರಿಗೆ ಹೆಚ್ಚು ಮೈಲೇಜ್ ನೀಡುವಂಥ ವಾಹನಗಳನ್ನು ಬಳಸಬೇಕು.

ಪ್ರಸಕ್ತ ನಮ್ಮ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿರುವ ಹತ್ತುಹಲವು ಉತ್ಪನ್ನಗಳನ್ನು ತಯಾರಿಸಲು ಕಾರ್ಖಾನೆಗಳು ಅತ್ಯವಶ್ಯಕ.  ಪ್ರಕೃತಿಗೆ ಹಾನಿ ಮಾಡುತ್ತಿರುವ  ಶಾಖವರ್ಧಕ ಅನಿಲಗಳ ಉತ್ಪಾದನೆಯಲ್ಲಿ ಕಾರ್ಖಾನೆಗಳ ಪಾಲೂ ಶೇಕಡ 20 ರಷ್ಟಿದೆ. ಹೆಚ್ಚು ಪ್ರಮಾಣದ  ವಿದ್ಯುತ್‌  ಪೂರೈಕೆ, ಬಳಕೆ ಅವಶ್ಯಕವಿರದ  ಗೃಹಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಸರಳ ಜೀವನಕ್ಕೆ ಅವಶ್ಯವಿರುವ ಕಾರ್ಖಾನೆಗಳು ಮಾತ್ರ ಇರುವಂತೆ ನೋಡಿಕೊಳ್ಳಬೇಕಾಗಿದೆ.

ಪ್ರಸಕ್ತ ನಾವು ಬಳಸುತ್ತಿರುವ ಪ್ಲಾಸ್ಟಿಕ್‌ಗೆ ಪರ್ಯಾಯವನ್ನು ಹುಡುಕುವ ಕಾರ್ಯವನ್ನು ತುರ್ತಾಗಿ ಮಾಡಬೇಕಾಗಿದೆ. ಮುಂದಿನ  5 ವರ್ಷಗಳ ಒಳಗಾಗಿ ಈಗ ಬಳಸಲಾಗುತ್ತಿರುವ ಪ್ಲಾಸ್ಟಿಕನ್ನು ಸಂಪೂರ್ಣವಾಗಿ ನಿಷೇಧಿಸುವಂತಹ ಕಟ್ಟುನಿಟ್ಟಾದ ಕಾನೂನನ್ನು ರೂಪಿಸಬೇಕು. ಈ ಅವಧಿಯಲ್ಲಿ ಪ್ಲಾಸ್ಟಿಕ್ ಸಂಗ್ರಹಣೆ ಮತ್ತು ಮರು ಬಳಕೆಯನ್ನು ಕಡ್ಡಾಯಗೊಳಿಸಬೇಕು. ಅವುಗಳನ್ನು ಡಾಂಬರು ರಸ್ತೆ, ಗೋಡೆಗಳಿಗೆ ಬಳಸುವಂಥ ಕಾರ್ಯವಾಗಬೇಕು. ಪ್ರಕೃತಿಗೆ ಹೆಚ್ಚು ಹಾನಿಯಾಗದಂಥ ಉತ್ಪನ್ನಗಳ ತಯಾರಿಕೆಗೆ ಅಗತ್ಯವಾದ ಸಂಶೋಧನೆಗೆ ಒತ್ತು ನೀಡಬೇಕು.

ಪ್ರತಿಯೊಂದು ಮನೆ, ಹೊಟೇಲ್, ವಸತಿಗೃಹ, ವಿದ್ಯಾರ್ಥಿ ನಿಲಯ ಮುಂತಾದ ಕಡೆಗಳಲ್ಲಿ ಗೋಬರ್ ಗ್ಯಾಸ್‌ ಅಥವಾ ಸೌರಶಕ್ತಿಯನ್ನೇ ಬಳಸಿಕೊಂಡು ಅಲ್ಲಿನ ಅಗತ್ಯಗಳನ್ನು ಪೂರೈಸಿಕೊಳ್ಳಬೇಕು.  ಈ ದಿಶೆಯಲ್ಲಿ ಕಾನೂನುಗಳು ರೂಪಿತವಾಗಬೇಕು.

ಅರಣ್ಯ  ಸಂರಕ್ಷಣೆಗಾಗಿ ಗರಿಷ್ಠ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜೀವವೈವಿಧ್ಯತೆಗೆ ಧಕ್ಕೆಯಾಗುವ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು. ಬಹಳ ಮುಖ್ಯವಾಗಿ ಈ ದಟ್ಟಾರಣ್ಯದ ಉಳಿವಿಗಾಗಿ ಮಾಧವ ಗಾಡ್ಗಿಳ್ ವರದಿ ಜಾರಿಗೊಳಿಸಲೇಬೇಕು. ಈಗಾಗಲೇ ಹಾನಿಗೊಳಗಾಗಿರುವ ಕಾಡಿನಲ್ಲಿ ಆಯಾ ಪ್ರದೇಶಕ್ಕೆ ಸೂಕ್ತವಾದ ಮರಗಿಡಗಳನ್ನು ಬೆಳೆಸುವ ಜವಾಬ್ದಾರಿಯನ್ನು ನಿಭಾಯಿಸಬೇಕು.

ಗೋಮಾಳಗಳು, ಕುರುಚಲು ಕಾಡುಗಳಂತಹ ಪ್ರದೇಶಗಳಲ್ಲಿ ಮಳೆ ನೀರು ಕೊಯ್ದು ಪದ್ಧತಿಗಳನ್ನು ಅಳವಡಿಸಬೇಕು. ಅವುಗಳ ಸುತ್ತಮುತ್ತ ಮರಗಿಡಗಳನ್ನು ನೆಟ್ಟು ಜೀವವೈವಿಧ್ಯತೆ ಹೆಚ್ಚಾಗಲು ಪೂರಕವಾದ ವ್ಯವಸ್ಥೆ ರೂಪಿಸಬೇಕು. ಗೋಮಾಳಗಳನ್ನು, ಕುರುಚಲು ಕಾಡುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯತ್‌ಗಳಿಗೆ ವಹಿಸುವುದರ ಜೊತೆಗೆ ಅವಶ್ಯವಿರುವ ಹಣಕಾಸಿನ ನೆರವನ್ನು ನೀಡಬೇಕು. ಈ ಕೆಲಸಕಾರ್ಯಗಳಿಗಾಗಿ ಅವಶ್ಯವಿರುವ ಯುವ ಶಕ್ತಿಯನ್ನು ಸ್ಥಳೀಯವಾಗಿಯೇ ಆಯ್ಕೆಮಾಡಿಕೊಳ್ಳಬೇಕು.

ರಸ್ತೆ ಅಗಲೀಕರಣ ಅಥವಾ ಬಡಾವಣೆ ಅಥವಾ ಇನ್ನಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುವಾಗ ಕಡಿಯಲಾಗುವ ಮರಗಳ ಸಂಖ್ಯೆಗಿಂತ 5 ಪಟ್ಟು ಹೆಚ್ಚಿನ ಮರಗಿಡಗಳನ್ನು ನೆಟ್ಟು ಪೋಷಿಸಲೇಬೇಕು ಎನ್ನುವಂಥ ನಿಯಮಗಳು ರೂಪಿತವಾಗಬೇಕು. ಜೊತೆಗೆ ಸರಕಾರಿ ಖಾಲಿ ಜಾಗಗಳಲ್ಲಿ ಮೊದಲೇ ನೆಟ್ಟು 5 ವರ್ಷಗಳ ಕಾಲ ಅದರ ಪೋಷಣೆಯನ್ನು ಮಾಡುವಂತಹ ಕೆಲಸ ಕಾರ್ಯಗಳು ಕಡ್ಡಾಯವಾಗಬೇಕು.

ಕೃಷಿಯಲ್ಲಿ ಬಳಸುತ್ತಿರುವ ರಾಸಾಯನಿಕಗಳನ್ನು ಉತ್ಪಾದಿಸುವಾಗ, ತಯಾರಿಸುವಾಗ ಮತ್ತು ಅದನ್ನು ಸಾಸುವಾಗ ಸರಿಸುಮಾರು 8 ಪ್ರತಿಶತದಷ್ಟು ಶಾಖವರ್ಧಕ ಅನಿಲಗಳು ಬಿಡುಗಡೆಯಾಗುತ್ತಿವೆ. ಹಾಗಾಗಿ ರಾಸಾಯನಿಕ ಮುಕ್ತ ಕೃಷಿ ಪದ್ಧತಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ರಾಸಾಯನಿಕಗಳು, ಕ್ರಿಮಿನಾಶಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂಥ  ಕಾರ್ಯಯೋಜನೆಗಳನ್ನು ಜಾರಿಗೊಳಿಸಬೇಕು. ಬೆಳಕಿನ  ಬೇಸಾಯ ಕ್ರಮದಲ್ಲಿ ಪ್ರತಿ ಮೂರು ಎಕರೆಗೆ ಒಂದು ಎಕರೆಯನ್ನು ಆಹಾರ ಬನವಾಗಿ ರೂಪಿಸಲು ಆದ್ಯತೆ ನೀಡಬೇಕು. ಇದಕ್ಕೆ ಅಗತ್ಯವಿರುವ ಹಣಕಾಸು ನೆರವು ನೀಡಬೇಕು.

ಅನವಶ್ಯಕವಾಗಿ ಕೊಳವೆ ಬಾವಿ ಕೊರೆಯದಂತೆ ತಡೆಯೊಡ್ಡಬೇಕು.  ಈಗಾಗಲೇ ಅಸ್ತಿತ್ವದಲ್ಲಿರುವ ಕೊಳವೆ ಬಾವಿಗಳಿಗೆ ಮಳೆನೀರು ಮರು ಪೂರಣ ವ್ಯವಸ್ಥೆ ರೂಪಿಸಬೇಕು. ಪ್ರತಿಯೊಂದು ಎಕರೆ ಪ್ರದೇಶದಲ್ಲಿ ಬೀಳುವ ಮಳೆನೀರನ್ನು ಆಯಾ ಪರಿಸರದಲ್ಲಿಯೇ ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ ರೂಪಿಸಬೇಕು. ಟ್ರೆಂಚರ್ಸ್ ನಿಂದ ಕೂಡಿದ ಕೃಷಿಪದ್ಧತಿಗೆ ಆದ್ಯತೆ ನೀಡಬೇಕು. ಹಣಕಾಸು ನೆರವನ್ನು ಒದಗಿಸಬೇಕು.

ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಸುವಂತಹ ಕೆಲಸ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕು, ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುತ್ತಾ ಆಯಾ ಹೋಬಳಿ ಮಟ್ಟದಲ್ಲಿಯೇ ಮಾರಾಟ ಮಾಡುವಂತಹ ವ್ಯವಸ್ಥೆಯನ್ನು ಕಲ್ಪಿಸಬೇಕು, ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಮಾರುಕಟ್ಟೆ ವ್ಯವಸ್ಥೆಯನ್ನೂ ಅಲ್ಲಿಯೇ ಕಲ್ಪಿಸಬೇಕು.

ಪ್ರತಿಯೊಂದು ಕೆರೆಕಟ್ಟೆಗಳ ಜೀರ್ಣೋದ್ದಾರ ಮಾಡುವ, ಒತ್ತುವರಿಯಾದ  ಕೆರೆಗಳನ್ನು ಸುಸ್ಥಿತಿಗೆ ತಂದು ಸಂರಕ್ಷಿಸುವ ಕಾನೂನು ಜಾರಿಯಾಗಬೇಕು, ನದಿಪಾತ್ರಗಳಲ್ಲಿ ಹ್ಯೂಮಸ್ ಉತ್ಪಾದನೆಗೆ ಸಹಕಾರಿಯಾಗುವಂತಹ ಮರಗಿಡಗಳನ್ನು ನೆಟ್ಟು ಸಂರಕ್ಷಿಸಬೇಕು.

ಪ್ರತಿಯೊಂದು ಸಿಮೆಂಟ್ ತಾರಸಿಯ ಮೇಲೊಂದು ಕೈತೋಟಕ್ಕೆ ಉತ್ತೇಜನ ನೀಡಬೇಕು, ಪ್ರತೀ ಮನೆಗೂ ಮಳೆ ನೀರು ಕೊಯ್ದು ಪದ್ಧತಿ ಕಡ್ಡಾಯವಾಗಿ ಜಾರಿಯಾಗುವಂತಹ ಕಾನೂನನ್ನು ರೂಪಿಸಬೇಕು. ಶಿಕ್ಷಣದಲ್ಲಿ ಪ್ರಕೃತಿ-ಪರಿಸರಕ್ಕೆ ಸಂಬಂಧಿಸಿದಂತೆ ಪಠ್ಯ, ಕಾರ್ಯಚಟುವಟಿಕೆ, ಸಂವಾದಗಳನ್ನು ನಡೆಸುತ್ತಾ ಮಕ್ಕಳಿಗೆ ಪ್ರಕೃತಿ-ಪರಿಸರಕ್ಕೆ ಪೂರಕವಾದ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.

ಇಲ್ಲಿರುವುದು ಕೆಲವು ಉದಾಹರಣೆಗಳು ಮಾತ್ರ, ಇನ್ನು ಅದೆಷ್ಟೋ ಕಲಸಕಾರ್ಯಗಳು ಪ್ರಕೃತಿಯ ಉಳಿವಿಗಾಗಿ ಸಹಕಾರಿಯಾಗುತ್ತವೆ. ಅಂಥವುಗಳು  ಈ ಐದು ವರ್ಷಗಳ ಅವಧಿಯಲ್ಲಿ ಕಾರ್ಯರೂಪಕ್ಕೆ ಬರಲೇಬೇಕಾಗಿದೆ. ಏಕೆಂದರೆ ಭೂಮಿಯು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮನುಷ್ಯರ ಅವಶ್ಯಕತೆ ಏನಿಲ್ಲ. ಆದರೆ ನಮ್ಮ ಅಸ್ತಿತ್ವ ಉಳಿಯಬೇಕಾದರೆ ಭೂಮಿ ಅವಶ್ಯಕ.

ಲೇಖಕರು ಸಹಜ ಕೃಷಿಪದ್ಧತಿಯ ಬೇಸಾಯಗಾರರು. “ಬೆಳಕಿನ ಬೇಸಾಯ” ಎಂಬ ಕೃತಿ ರಚಿಸಿದ್ದಾರೆ. ರಾಜ್ಯದೆಲ್ಲೆಡೆ ಸುಸ್ಥಿರ ಕೃಷಿ ಕಾರ್ಯಾಗಾರಗಳನ್ನು ನಡೆಸಿಕೊಡುತ್ತಿದ್ದಾರೆ.

LEAVE A REPLY

Please enter your comment!
Please enter your name here