ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ವರದಿಯಾದ ಬೆಂಕಿ ಘಟನೆಗಳ ನಾಸಾ ಚಿತ್ರ ಗಳು ಜಾಲ ತಾಣಗಳಲ್ಲಿ ಓಡಾಡುತ್ತಿದೆ. ಇದರ ಮಧ್ಯೆ ಮುಂದಿನ 48 ಗಂಟೆಗಳಲ್ಲಿ ನಮ್ಮ ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಬಿಸಿ ಗಾಳಿಯ ಮುನ್ನೆಚ್ಚರಿಕೆ ನೀಡಲಾಗಿದೆ. ಆದರೆ ಈ ಸಂದೇಶ ಬರುವ ಮುಂಚೆಯೇ ಬೆಂಕಿಗೆ ಕಾಡು ಆಹುತಿಯಾದ ನೆಲೆಗಳಲ್ಲಿ ಮಧ್ಯಾಹ್ನ ತೀವ್ರ ಉರಿಯಿದೆ.
ಮಲೆನಾಡಿನ ಕಾಡು ಹೊತ್ತಿ ಉರಿಯುತ್ತಿದೆ.
ತೊಗಟೆ ಬೆಂದ ಮರಗಳು, ಬುಡಸಹಿತ ಸುಟ್ಟು ಹೋದ ಬಳ್ಳಿ, ಗಿಡಗಳು ಕಣ್ಣಿಗೆ ಕಾಣುತ್ತಿವೆ. ಪಕ್ಷಿ, ಕೀಟ, ಹಾವು, ಹಲ್ಲಿ, ಕಪ್ಪೆ, ಜೇನು,ಜಿಂಕೆ ಸೇರಿದಂತೆ ಇನ್ನುಳಿದ ಜೀವ ಸಂಕುಲ ಸ್ಥಿತಿ ಊಹಿಸಲೂ ಅಸಾಧ್ಯ. ಬೆಂಕಿ ಹೇಗೆ ಬಿತ್ತು, ಏನಾಯಿತು ಎಂಬುದಕ್ಕಿಂತ ಇನ್ನಾದರೂ ಎಚ್ವರವಹಿಸುವ ತುರ್ತು ಅಗತ್ಯ ಇದೆ.
ಅರಣ್ಯ ಇಲಾಖೆ ಬೆಂಕಿ ಆರಿಸಬೇಕು, ಅವರಿಗೆ ನಾವು ಮಾಹಿತಿ ನೀಡಬೇಕು ಎನ್ನುವುದಕ್ಕಿಂತ ಬೆಂಕಿ ಕಂಡ ತಕ್ಷಣ ಕೈಲಾದ ನಿಯಂತ್ರಣ ಕೆಲಸ ನಡೆಯಬೇಕು. ತೀವ್ರ ಸುಳಿಗಾಳಿ ನಡುವೆ ಬೆಂಕಿ ಆರಿಸುವ ಕಾರ್ಯ ಬಹಳ ಎಚ್ಚರಿಕೆಯಿಂದ ಕೂಡಿರಬೇಕು. ತೋಟ, ಮನೆಗಳಿಗೆ ಬೆಂಕಿ ತಗಲಿದರೆ ಮಾತ್ರ ಹಾನಿ ಎಂದು ತಿಳಿಯಬಾರದು. ಕಾಡಿಗೆ ಬಿದ್ದ ಬೆಂಕಿ ನಮ್ಮ ಬದುಕನ್ನು ಸುಡುತ್ತದೆಂಬ ಎಚ್ಚರ ಬೇಕು.
ನಮ್ಮ ಮಾಧ್ಯಮಗಳು ಜನ ಜಾಗೃತಿ ಮೂಡಿಸಲು ಸಂದೇಶ, ಸಾಕ್ಷ್ಯ ಚಿತ್ರ ಪ್ರಸಾರ ಮಾಡಿದರೆ ಅನುಕೂಲ. ಇದು ವನ್ಯಜೀವಿ, ಅರಣ್ಯ, ನದಿ, ನೀರು ಉಳಿಸುವ ಕಾರ್ಯವಾಗುತ್ತದೆ. ಚುನಾವಣೆ ಬರುತ್ತದೆ ಹೋಗುತ್ತದೆ,ಎಲ್ಲಕ್ಕಿಂತ ಅಳಿದುಳಿದ ಕಾಡು ಉಳಿಸಲು ಆದ್ಯತೆ ಬೇಕಾಗಿದೆ.
ರಾಜ್ಯದ ಭೂಮಿಯ ದೊಡ್ದ ಜಮೀನ್ದಾರ ಕರ್ನಾಟಕ ಅರಣ್ಯ ಇಲಾಖೆ. ಇದರ ಮುಖ್ಯ ಕಛೇರಿ ಮಲ್ಲೇಶ್ವರ ಅರಣ್ಯ ಭವನ, ಇದು ಉನ್ನತ ಅಧಿಕಾರಿಗಳ ದೊಡ್ಡ ಸಂಗ್ರಹಾಲಯ ಕೂಡಾ! ಪ್ರತೀ ವರ್ಷ ಬೇಸಿಗೆ ಬರ್ತದೆ,ಚಳಿಗಾಲದಲ್ಲಿ ಮರಗಳು ಎಲೆ ಉದುರಿಸುತ್ತವೆ. ಮಾರ್ಚ್ – ಏಪ್ರಿಲ್ ಕಾಳ್ಗಿಚ್ಚು ಕಾಲ. ಎಲ್ಲವೂ ಗೊತ್ತಿದೆ.
ರಾಜ್ಯದ ಯಾವುದೇ ಪ್ರದೇಶದಲ್ಲಿಯೂ ನಿಶ್ಚಿತವಾಗಿ ಪ್ರತೀ ವರ್ಷ ಬೆಂಕಿ ಬೀಳುವ ನಿಗದಿತ ಸ್ಥಳಗಳು ಇವೆ. ಇಲ್ಲಿ ಮುಂಚಿತವಾಗಿ ಏನು ಮಾಡಬಹುದು ಯೋಚಿಸುವ ಕಾರ್ಯ ನಡೆಯುತ್ತಿಲ್ಲ. ಕಳೆದ ಐದು ವರ್ಷಗಳಿಂದ ಅರಣ್ಯದಲ್ಲಿ ವಿದ್ಯುತ್ ಲೈನ್ ಮಾರ್ಗ, ಟ್ರಾನ್ಸಫಾರ್ಮರ್ ಹಾಕಲಾಗಿದೆ. ಆಗಾಗ ಬೀಳುವ ಕಿಡಿ, ಬೆಂಕಿಗೆ ಕಾರಣವಾಗಿದೆ. ಅತಿಕ್ರಮಣ, ಬೇಟೆ ಮುಂತಾದ ಕಾರಣಗಳು ಇದರಲ್ಲಿ ಸೇರಿವೆ.
ಬೆಂಕಿಯಿಂದ ಅರಣ್ಯ ಸಂರಕ್ಷಣೆಗೆ ಏನು ಮಾಡಬೇಕು ಎಂಬುದಕ್ಕೆ 1980ರಿಂದ ನಡೆದ ಪ್ರಯೋಗ, ಅಧ್ಯಯನ ವರದಿಗಳು, ಬಹುವರ್ಣದಲ್ಲಿ ಮುದ್ರಿತ ಪುಸ್ತಕ, ಮಾಹಿತಿ ಪತ್ರಗಳ ರಾಶಿಯೇ ಇದೆ. ಬಿದಿರು ಹೂ ಅರಳಿಸಿದ ಕಾಲಕ್ಕೆ ಯಾವ ಎಚ್ಚರ ಬೇಕು? ತೇಗದ ನೆಡುತೋಪು, ಉದುರೆಲೆ ಅರಣ್ಯದಲ್ಲಿ ಯಾವ ಎಚ್ಚರ ಬೇಕು? ಶೋಲಾ ಕಾಡು, ಹುಲ್ಲುಗಾವಲು, ಹಳ್ಳಿಯ ಅಂಚು, ರಸ್ತೆ ಪಕ್ಕ ಯಾವೆಲ್ಲ ಮುಂಜಾಗ್ರತೆ ಕೈಗೊಳ್ಳಬೇಕು? ಹೊಸದಾಗಿ ಹೇಳಬೇಕಿಲ್ಲ, ಎಲ್ಲವೂ ಗೊತ್ತಿದೆ.
ಬ್ರಿಟನ್ ನೆರವಿನ ಪಶ್ಚಿಮ ಘಟ್ಟ ಅಭಿವೃದ್ದಿ ಯೋಜನೆ ಜಾರಿಯಾದ 90ರ ದಶಕದಲ್ಲಿ ವಾಚ್ ಟವರ್ ಕಟ್ಟಿದ್ದೇವೆ.ವಾಕಿ ಟಾಕಿ, ವಾಚ್ ಮೆನ್ ನೇಮಕ ಮೂಲಕ ಬೆಂಕಿ ನಿಯಂತ್ರಣದ ಯೋಜನೆ ಮಾಡಿ ಕೋಟಿಗಟ್ಟಲೆ ಹಣ ಖಾಲಿ ಮಾಡಿದ್ದೇವೆ. ಬೆಂಕಿ ತಡೆಗೆ ತಾತ್ಕಾಲಿಕ ವಾಚ್ ಮೆನ್ ನೇಮಿಸಿಕೊಂಡು ಪ್ರತೀ ವರ್ಷ ಕಾಡು ಕಾಳಜಿಗೆ ಹಣ ವಿನಿಯೋಗ ಆಗುತ್ತದೆ.
ನಾಗರ ಹೊಳೆ ಕಾಡಿನಲ್ಲಿ ಬೆಂಕಿ ಸಮಸ್ಯೆ ತಡೆಯಲು ಹಿಂದೊಮ್ಮೆ ತೇಗದ ಮರ ಕಡಿಯಲು 2003ರಲ್ಲಿ ಹಾಸ್ಯಾಸ್ಪದ ಹೇಳಿಕೆ ನೀಡಿದ ಹಿರಿಯ ಅಧಿಕಾರಿ ರೈ ಸಾಹೇಬರು ನೆನಪಾಗುತ್ತಾರೆ.
ಪ್ರತೀ ವರ್ಷ ಬೆಂಕಿ ಮಾಮೂಲಿ, ಆದರೆ ಈ ವರ್ಷ ಜಾಸ್ತಿ. ಅದೂ ಬಿದಿರು ಹೂ ಅರಳಿಸಿ ಒಣಗಿದ ಕಾಲಕ್ಕಿಂತ ಹೆಚ್ಚು. ಬೆಂಕಿ ಜಾಗೃತಿಗೆ ಇಲಾಖೆ ಅಲ್ಲಲ್ಲಿ ಪ್ಲೆಕ್ಸ್ ಹಾಕಿದೆ, ಅದರಲ್ಲಿ ಅಧಿಕಾರಿಗಳ ದೂರವಾಣಿ ಸಂಖ್ಯೆ ಪ್ರಕಟಿಸಿದೆ. ಇದರ ಜೊತೆಗೆ ಅಧಿಕಾರಿಗಳು,ಸಿಬ್ಬಂದಿಗಳು ಹೆಚ್ಚಿನ ಜನ ಸಂಪರ್ಕ ಉಳಿಸಿಕೊಳ್ಳಬೇಕು.
ಅರಣ್ಯ ನಶಿಸಿದ ಪ್ರದೇಶದ ಅರಣ್ಯ ಪುನರುಜ್ಜೀವನಕ್ಕೆ ಒಟ್ಟೂ ಅರಣ್ಯ ನಿರ್ವಹಣೆ ಬಜೆಟ್ ನ ಶೇಕಡಾ 55ರಷ್ಟು ಹಣ ಖಾಲಿ ಮಾಡುವ ಮೂರ್ಖ ಯೋಜನೆ ರಾಜ್ಯದಲ್ಲಿದೆ. ಮಾರ್ಚ್ ಹೊತ್ತಿಗೆ ಕಾಂಕ್ರೀಟ್ ಕಂಬ,ತಂತಿ ಬೇಲಿ ಕಾಮಗಾರಿಯಲ್ಲಿ ಕಳೆದು ಹೋದ ಉದಾಹರಣೆಯಿದೆ.
ತಂತಿ ಬೇಲಿಯಲ್ಲಿ ಕಾಡು ಕಾಯಲು ಹೊರಟ ಅರಣ್ಯ ಭವನದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಂಕಿಯಿಂದ ಅರಣ್ಯ ರಕ್ಷಣೆಗೆ ಏನು ಮಾಡಬೇಕು? ಮೊದಲು ಹೇಳಬೇಕು. ಭೂಮಿಗೆ ಇಳಿದು ನಿರಂತರ ಜನರ ಜೊತೆಗೂಡಿ ಕೆಲಸ ಮಾಡದೇ ಯಾವತ್ತೂ ಅರಣ್ಯ ಉಳಿಯುವುದಿಲ್ಲ. ಕಾರಾಳುಗಳಿಗಿಂತ ಕಾಲಾಳು ಕಾಡಿಗೆ ಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.