ಸಮಗ್ರಕೃಷಿ ಮೂಡಿಸಿದ ಬಂಗಾರದ ಮನುಷ್ಯ

0
ಲೇಖಕರು: ಕೆ. ಶಿವರಾಮು
ಲೇಖಕರು:  ಎಂ.ಎ. ಮೂರ್ತಿ

 

 

 

 

 ಮತ್ತೊಬ್ಬರ ಹಂಗಿನಲ್ಲಿ ಬಾಳುವುದಕ್ಕಿಂತ ಭೂಮಿಯಲ್ಲಿ  ಕಷ್ಟಪಟ್ಟು ದುಡಿದರೆ ಕೈ ಕೆಸರು,  ಬಾಯಿ ಮೊಸರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಟ್ಟಿನಲ್ಲಿ ಯಾವುದಕ್ಕೂ ಸಾಧಿಸುವ ಛಲ ಮತ್ತು ಪ್ರಾಮಾಣಿಕ ಪರಿಶ್ರಮಬೇಕು ಎಂಬುದಕ್ಕೆ ಕೋಲಾರ ತಾಲ್ಲೂಕಿನ ಮದನಹಳ್ಳಿ ಗ್ರಾಮದ  ರವಿಶಂಕರ್ ಉತ್ತಮ ಉದಾಹರಣೆ.

ದ್ವಿತೀಯ ಪಿ.ಯು.ಸಿ ರವರೆಗೆ ವಿದ್ಯಾಭ್ಯಾಸ ಮಾಡಿರುವ ಇವರು ಮೊದಲು ಏಕ ಬೆಳೆ ಪದ್ಧತಿಯನ್ನು ಆಳವಡಿಸಿಕೊಂಡು ಅನೇಕ ಸಂಕಷ್ಟಗಳಿಗೆ ಒಳಗಾಗಿ ಅತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದರು ಸಮಗ್ರ ಕೃಷಿಗೆ ಶರಣಾಗಿ ನಾನಾ ಹೊಸ ಹೊಸ ಪ್ರಯೋಗಗಳÀಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಮ್ಮ 26 ಎಕರೆ ಜಮೀನಿನಲ್ಲಿ, 8 ಎಕರೆ ಕೃಷಿಗೆ, 12 ಎಕರೆ ತೋಟಗಾರಿಕೆಗೆ, ಒಂದು ಎಕರೆ ರೇಷ್ಮೆಗೆ, 3 ಎಕರೆ ಕೃಷಿ ಅರಣ್ಯಕ್ಕೆ, ಒಂದು ಎಕರೆ ಮೇವಿನ ಬೆಳೆಗಳಿಗೆ ಹಾಗೂ ಒಂದು ಎಕರೆ ಉಪ ಕಸುಬುಗಳಾದ ಮೇಕೆ, ಕೋಳಿ, ಮೀನು, ಹಂದಿ ಮತ್ತು ಜೇನು ಸಾಕಣೆಗೆ ಮೀಸಲಿರಿಸಿದ್ದಾರೆ. ಸಮಗ್ರ ಕೃಷಿ ಪದ್ಧತಿಯು ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಳಕ್ಕೆ, ರೈತರ ಆರ್ಥಿಕ ಪರಿಸ್ಥಿತಿ ಹಾಗೂ ಜೀವನ ಮಟ್ಟ ಸುಧಾರಿಸಲು ತುಂಬಾ ಸಹಕಾರಿಯೆನ್ನುತ್ತಾರೆ.

ಕೇವಲ ಏಕ ಬೆಳೆ ಪದ್ಧತಿ ಆಳವಡಿಸಿಕೊಳ್ಳುವುದರಿಂದ ಆದಾಯ ಕುಂಠಿತವಾಗುತ್ತದೆ, ಅದುದರಿಂದ ಕೃಷಿ ಬೆಳೆಗಳ ಜೊತೆಗೆ ಕೃಷಿ ಅವಲಂಬಿತ ಉಪ ಕಸುಬುಗಳ ವೈಜ್ಞಾನಿಕ ಸಂಯೋಜನೆಯಿಂದ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಸುಸ್ಥಿರ ಉತ್ಪಾದನೆ ಮತ್ತು ಆದಾಯವನ್ನು ಉತ್ತಮ ಪಡಿಸುವುದರ ಜೊತೆಗೆ ವರ್ಷ ಪೂರ್ತಿ ಕುಟುಂಬಕ್ಕೆ ಉದ್ಯೋಗ ಕಲ್ಪಿಸಿ, ಸುಸ್ಥಿರ ಜೀವನೋಪಾಯ ಸಾಗಿಸಬಹುದು ಎಂದು ಅಭಿಪ್ರಾಯಪಡುತ್ತಾರೆ.

ನೂತನ ತಂತ್ರಜ್ಞಾನಗಳ ಪಾರುಪತ್ಯ:

ಕೃಷಿ ತಜ್ಞರ ಸಲಹೆ ಮೇರೆಗೆ ಮಣ್ಣು ಮತ್ತು ನೀರಿನ ಪರೀಕ್ಷೆ ಕೈಗೊಂಡಿದ್ದು ಶಿಪಾರಸ್ಸಿಗೆ ಅನುಗುಣವಾಗಿ ಪೋಷಕಾಂಶಗಳ ನಿರ್ವಹಣೆ ಕೈಗೊಂಡಿದ್ದಾರೆ. ಮಣ್ಣು ಪರೀಕ್ಷೆ ಮಾಡಿಸದೆ ರಸಾಯನಿಕ ಗೊಬ್ಬರಗಳನ್ನು ಬೆಳೆಗಳಿಗೆ ಹಾಕುವುದರಿಂದ ಹಣ ದುಂದು ವೆಚ್ಚವಾಗುವುದಲ್ಲದೆ ಭೂಮಿಯ ಗುಣಮಟ್ಟ ಕೆಡುತ್ತದೆ.

ರಾಸಾಯನಿಕ ಗೊಬ್ಬರಗಳ ಕಪಿಮುಷ್ಠಿಯಿಂದ ಹೊರಬರಲು ಕೃಷಿ ತ್ಯಾಜ್ಯಗಳಾದ, ಕಳೆ, ಹಸಿರೆಲೆ, ಹಣ್ಣು ಮತ್ತು ತರಕಾರಿ ತ್ಯಾಜ್ಯವನ್ನು ಬಳಸಿ ವಾರ್ಷಿಕವಾಗಿ 20 ಟನ್ ಎರೆಹುಳುಗೊಬ್ಬರ ತಯಾರಿಸುತ್ತಿದ್ದಾರೆ. ಇದರ ಜೊತೆಗೆ ಜಪಾನ್ ಮಾದರಿಯಲ್ಲಿ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಿ ಕಡಿಮೆ ಅವಧಿಯಲ್ಲಿ ಉತ್ಕೃಷ್ಟ ಗೊಬ್ಬರ ಪಡೆದು ಬೆಳೆಗಳಿಗೆ ನೀಡುತ್ತಿದ್ದಾರೆ.  ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆ, ಬೆಳೆಪದ್ಧತಿಗಳು, ಮಾಗಿ ಹುಳುಮೆ, ಇಳಿಜಾರಿಗೆ ಅಡ್ಡಲಾಗಿ ಉಳುಮೆ  ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ.

ತುಂತುರು ಮತ್ತು ಹನಿ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಂಡಿರುವುದರಿAದ ಶೇಕಡಾ 50 ರಿಂದ 60 ರಷ್ಟು ನೀರಿನ ಉಳಿತಾಯವಾಗುತ್ತದೆ ಹಾಗೂ ಕಡಿಮೆ ನೀರಿನ ಲಭ್ಯತೆಯಲ್ಲಿ ಹೆಚ್ಚಿನ ಪ್ರದೇಶವನ್ನು ನೀರಾವರಿಗೆ ಅಳವಡಿಸಿಕೊಳ್ಳಬಹುದು ಎನ್ನುತ್ತಾರೆ. ಇದಲ್ಲದೆ ತಮ್ಮ ಜಮೀನಿನಲ್ಲಿ ವ್ಯರ್ಥವಾಗಿ ಪೋಲಾಗುತ್ತಿದ್ದ ನೀರಿಗೆ ಕೃಷಿ ಹೊಂಡ ಮತ್ತು ಇಂಗು ಗುಂಡಿ ನಿರ್ಮಿಸಿದ್ದಾರೆ.  ಶಿಫಾರಸ್ಸು ಮಾಡಿರುವ ತಳಿಗಳ ಆಯ್ಕೆ, ಎರೆ ಗೊಬ್ಬರ ಬಳಕೆ, ಹಸಿರೆಲೆ ಗೊಬ್ಬರ ಬಳಕೆ, ಪಂಚಗವ್ಯ ಬಳಕೆ, ಸರಿಯಾದ ಪ್ರಮಾಣದಲ್ಲಿ ಸಸಿಗಳ ಸಂಖ್ಯೆ ಕಾಪಾಡುವುದು, ಕೆರೆಗೋಡು ಬಳಕೆ ಮತ್ತು ಪಳವಳಿಕೆಗಳನ್ನು ಸುಡದೆ ಭೂಮಿಗೆ ಸೇರಿಸುವುದು ಇವರ ಯಶಸ್ಸಿನ ಹಿಂದಿರುವ ಗುಟ್ಟು.

ಕೃಷಿ ಬೆಳೆಗಳಲ್ಲಿ ಸುಸ್ಥಿರ ಆದಾಯಕ್ಕೆ ಅಧ್ಯತೆ: ಕೃಷಿ ಬೆಳೆ ಬೆಳೆಯುವಲ್ಲಿ ವೈಜ್ಞಾನಿಕ ತಾಂತ್ರಿಕತೆಗಳಿಗೆ ಒತ್ತು ನೀಡುತ್ತಿರುವ ಇವರು ಕಾಲಕ್ಕೆ ಅನುಗುಣವಾಗಿ ತಳಿಗಳ ಆಯ್ಕೆಗೆ ಒತ್ತು ನೀಡುತ್ತಾರೆ. ರಾಗಿಯಲ್ಲಿ ಮಧ್ಯಮಾವಧಿ ತಳಿಗಳಾದ ಜಿ.ಪಿ.ಯು-28 ಮತ್ತು ಎಂ.ಎಲ್.-365, ತೊಗರಿಯಲ್ಲಿ ಬಿ.ಆರ್.ಜಿ-1 ಮತ್ತು ಬಿ.ಆರ್.ಜಿ-4 ತಳಿಗಳನ್ನು ಸಾಲು ಪದ್ಧತಿಯಲ್ಲಿ ಬೆಳೆಯುವುದರ ಜೊತೆಗೆ ಕುಡಿ ಚಿವುಟುವುದು ಮತ್ತು ಪಲ್ಸ್ ಮ್ಯಾಜಿಕ್ ಸಿಂಪರಣೆ ಮಾಡಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.  ಜೋಳ, ಅವರೆ ಮತ್ತು ಸಿಹಿ ಜೋಳದಲ್ಲಿ ಮುಖ್ಯ ಉತ್ಪನ್ನ ಪಡೆಯುವುದರ ಜೊತೆಗೆ ಉಪ ಉತ್ಪನ್ನವಾದ ಮೇವನ್ನು ಹೈನುಗಾರಿಕೆಗೆ ಬಳಸುತ್ತಿದ್ದಾರೆ.  ಶ್ರೀಯುತರು ಕೃಷಿಯಲ್ಲಿ ವಾರ್ಷಿಕವಾಗಿ ಸುಮಾರು  ನಾಲ್ಕು ಲಕ್ಷಕ್ಕೂ ಅಧಿಕ ನಿವ್ವಳ ಆದಾಯಗಳಿಸುತ್ತಿದ್ದಾರೆ.

ತೋಟಗಾರಿಕೆ ಬೆಳೆಗಳ ಜಗತ್ತು ಅನಾವರಣ:

ಅಂತರ ಬೆಳೆ ಬೆಳೆಯುವಲ್ಲಿ ನಿಪುಣರಾಗಿರುವ ರವಿಶಂಕರ್  ತಮ್ಮ   12 ಎಕರೆ ಪ್ರದೇಶದಲ್ಲಿ ಮಲ್ಲಿಕಾ, ಬಾದಾಮಿ, ತೋತಾಪೂರಿ, ಬೆನೆಶಾನ್, ನೀಲಂ ಮಾವಿನ ತಳಿಗಳನ್ನು ಬೆಳೆಯುತ್ತಿದ್ದು ಅದರಲ್ಲಿ ಅಂತರ ಬೆಳೆಯಾಗಿ ಸೌತೆಕಾಯಿ, ಕೊತ್ತಂಬರಿ ಸೊಪ್ಪು, ಕ್ಯಾರೆಟ್, ಕುಂಬಳಕಾಯಿ, ಹೂಕೋಸು, ಆಲೂಗಡ್ಡೆ, ಟೊಮೊಟೊ, ಹೀರೆಕಾಯಿ, ಬೂದುಕುಂಬಳ, ಕಲ್ಲಂಗಡಿ, ಮೂಲಂಗಿ, ಕಲ್ಲಂಗಡಿ, ಗÀಡ್ಡೆಕೋಸು ಮತ್ತು ಚೆಂಡು ಹೂವು ಬೆಳೆಯುತ್ತಿದ್ದಾರೆ.

ಅತ್ಯುತ್ತಮ ನೂತನ ತಳಿಗಳ ಆಯ್ಕೆ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ತರಕಾರಿ ಸ್ಪೆಷಲ್ ಬಳಸುತ್ತಿದ್ದಾರೆ.  ಇದಲ್ಲದೆ ತೆಂಗು, ನೇರಳೆ, ಡ್ರ್ಯಾಗನ್ ಹಣ್ಣು, ನಿಂಬೆ, ಅಡಿಕೆ, ದಾಳಿಂಬೆ, ಬಾಳೆ, ನಲ್ಲಿಕಾಯಿ, ಕಿತ್ತಳೆ, ಪಪ್ಪಾಯ, ಸೀಬೆ, ಅಂಜೂರ, ಸಪೋಟ, ಅನಾನಸ್, ನುಗ್ಗೆ, ಸಿತಾಫಲ,, ಹಲಸು, ಚಕೋತಾ ಮತ್ತು ಗೆಡ್ಡೆಗೆಣಸನ್ನು ಗೃಹ ಬಳಕೆಗಾಗಿ ಬೆಳೆಯುತ್ತಿದ್ದಾರೆ.

ಇವರ ವೈಶಿಷ್ಟವೆಂದರೆ ತಮ್ಮ ಕುಟುಂಬದ ಸದಸ್ಯರುಗಳ ಹುಟ್ಟುಹಬ್ಬಗಳನ್ನು ತಮ್ಮ ಜಮೀನಿನಲ್ಲಿ ಗಿಡನೆಡುವುದರ ಮೂಲಕ ಆಚರಿಸುವುದು. ವರ್ಷ ಪೂರ್ತಿ ವಿವಿಧ ತೋಟಗಾರಿಕೆ ಬೆಳೆಗಳು ಇರುವುದರಿಂದ ಮುಂದೆ ನರ್ಸರಿಯನ್ನು ಸಹ ಪ್ರಾರಂಭಿಸುವ ಉದ್ದೇಶ ಹೊಂದಿದ್ದಾರೆ.

ಉಪ ಕಸುಬುಗಳು ರೈತರ ಸದೃಢ ಆರ್ಥಿಕತೆಯ ಮೂಲ:

ಏಕ ಬೆಳೆ ಪದ್ಧತಿಯಿಂದ ಬರುವ ಆದಾಯವನ್ನು ನೆಚ್ಚಿಕೊಂಡು ಬಹಳಷ್ಟು ರೈತರು ಸಂಕಷ್ಟಗಳಿಗೆ ಸಿಲುಕುತ್ತಿದ್ದಾರೆ. ಬೆಲೆ ಎರುಪೇರು ತೂಗುಯ್ಯಾಲೆ ಪರಿಸ್ಥಿತಿಯಲ್ಲಿ ಉಪ ಕಸುಬುಗಳ ವೈಜ್ಞಾನಿಕ ಅಳವಡಿಕೆಯಿಂದ ನಷ್ಟ ಕಡಿತಗೊಳಿಸಿ ಹೆಚ್ಚಿನ ಲಾಭಗಳಿಸಲು ಸಹಾಯವಾಗುತ್ತದೆ.

ಉಪ ಕಸುಬುಗಳು ಕೃಷಿಕರÀನ್ನು ಆರ್ಥಿಕವಾಗಿ ಸದೃಡನನ್ನಾಗಿ ಮಾಡುತ್ತವೆ ಎನ್ನುತ್ತಾರೆ. ವೈಜ್ಞಾನಿಕ ಬೆಳೆ ಪದ್ಧತಿಯ ಅಳವಡಿಕೆ ರೈತರಿಗೆ ಉತ್ತಮ ಆದಾಯ ತಂದುಕೊಡಬಹುದಾದ ಮೂಲಗಳು. ಕುಟುಂಬದ ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಲು ಉಪಕಸುಬುಗಳು ಪೂರಕವಾಗಿದ್ದು. ಎಲ್ಲಾ ರೈತರು ಉಪಕಸುಬುಗಳನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡುತ್ತಾರೆ.

ಹಂದಿ ಸಾಕಣೆ:

ಸಮಗ್ರ ಕೃಷಿ ಪ್ರಾಯೋಜನೆಯಿಂದ 2014ರಲ್ಲಿ ಪಡೆದ ಎರಡು ಹಂದಿ ಮರಿಗಳಿಂದ ಹಂದಿ ಸಾಕಣೆ ಪ್ರಾರಂಭಿಸಿದ ಇವರು 2016ರಲ್ಲಿ ತಮ್ಮ ಇಬ್ಬರು ಸ್ನೇಹಿತರ ಜೊತೆಯಲ್ಲಿ ಸೇರಿಕೊಂಡು ಪಾಲುದಾರಿಕೆಯಲ್ಲಿ ಹಂದಿ ಸಾಕಣೆಯನ್ನು ದೊಡ್ಡ ಘಟಕವನ್ನಾಗಿಸಿ ಉದ್ದಿಮೆಯಾಗಿಸಿದ್ದಾರೆ.

ಹಂದಿ ಸಾಕಣೆಗೆ ಬೆಂಗಳೂರು (ಗ್ರಾಮಾಂತರ) ಜಿಲ್ಲೆಯ ಹೊಸಕೋಟೆ ಹಾಗೂ ಕೋಲಾರ ಜಿಲ್ಲೆಯ ನರಸಾಪುರದ ಹೋಟಲ್‌ಗಳಲ್ಲಿ ಉಳಿದ ಆಹಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿರುವ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿನಿಲಯಗಳ ಉಳಿಕೆ ಆಹಾರವನ್ನು ಸಂಗ್ರಹಿಸಿ ನೀಡುತ್ತಿದ್ದಾರೆ. ಹಂದಿ ಮರಿಗಳನ್ನು ಸ್ಥಳೀಯ ಮಟ್ಟದಲ್ಲಿ ಮತ್ತು ಹಂದಿಗಳನ್ನು ಪ್ರಮುಖವಾಗಿ ತಮಿಳುನಾಡಿನವರು ಕೊಂಡುಕೊಳ್ಳುತ್ತಿದ್ದಾರೆ.

ಹಿಪ್ಪುನೇರಳೆ:

ಮೊದಲು ರೇಷ್ಮೆ ಬೆಳೆಯುತ್ತಿದ್ದ ಇವರು ಕೂಲಿ ಕಾರ್ಮಿಕರ ಸಮಸ್ಯೆಯಿಂದ ರೇಷ್ಮೆ ಸಾಕಣೆಯನ್ನು ಕೈಬಿಟ್ಟು ಹಿಪ್ಪುನೇರಳೆ ಸೊಪ್ಪನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದಾರೆ.  ಹಿಪ್ಪುನೇರಳೆಯಲ್ಲಿ ವಿ-1 ತಳಿಯನ್ನು ಯು.ಎ.ಎಸ್. ಸೆರಿ ಸುವರ್ಣ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ.

ಮೇಕೆ ಸಾಕಣೆ: ಮೊದಲು ಬೇರೆಯವರ ಮೇಕೆಗಳನ್ನು ತಾವು ಸಾಕಿ ಹುಟ್ಟಿದ ಮರಿಗಳಲ್ಲಿ ಒಂದು ಮರಿಯನ್ನು ಬಳುವಳಿಯಾಗಿ ಪಡೆಯುತ್ತಿದ್ದ ಇವರು ಈಗ ಸ್ವಂತ ಮೇಕೆ ಸಾಕಣೆ ಮಾಡುತ್ತಿದ್ದಾರೆ. ಜಮುನಾಪಾರಿ ಮತ್ತು ನಾಟಿ ಮೇಕೆ ಸಾಕಣೆ ಮಾಡುತ್ತಿದ್ದಾರೆ. ತಮ್ಮ ಜಮೀನಿನ ಬದುಗಳಲ್ಲಿ ಬೆಳೆಸಿರುವ ಹೆಬ್ಬೇವು, ಸುಬಾಬುಲ್ ಹಾಗೂ ಅಗಸೆ  ಮರಗಳ ಸೊಪ್ಪು ಮತ್ತು ಮೇವಿನ ಬೆಳೆಗಳ ಹುಲ್ಲನ್ನು ನೀಡುತ್ತಿದ್ದಾರೆ.

ಕುರಿ ಸಾಕಣೆ: ಕೋಳಿ ಸಾಕಣೆಯಿಂದ ನಷ್ಟ ಅನುಭವಿಸಿದ ಇವರು ಕೋಳಿ ಸಾಕಣೆಯಿಂದ ಕುರಿ ಸಾಕಣೆಯತ್ತ ವಾಲಿದ್ದಾರೆ. ಕೋಳಿ ಸಾಕಣೆ ಮನೆಯನ್ನು ಸ್ಥಳೀಯ ವಸ್ಥುಗಳನ್ನು ಉಪಯೋಗಿಸಿಕೊಂಡು ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡು, 2016ರಲ್ಲಿ ನಾರಿ ಸುವರ್ಣ, ಬಂಡೂರು ಬಿಜಾಪುರ ಮತ್ತು ನಾಟಿ ತಳಿಗಳನ್ನು ಕೊಟ್ಟಿಗೆ ಪದ್ಧತಿಯಲ್ಲಿ ಸಾಕುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಸಿಹಿ ಜೋಳವನ್ನು ಸದಾ ಕಾಲ ಬೆಳೆದು, ರಸಮೇವನ್ನು ತಯಾರಿಸಿ ನೀಡುತ್ತಿದ್ದಾರೆ.

ಮೀನು ಸಾಕಣೆ: ತಮ್ಮ ಊರಿನ ಬೆಟ್ಟದ ತಪ್ಪಲಿನಲ್ಲಿ ಕೆರೆ ಆಶ್ರಯದಲ್ಲಿ ಒಂದುವರೆ ಎಕರೆ ಪ್ರದೇಶದಲ್ಲಿ ಭತ್ತವನ್ನು ಬೆಳೆಯುತ್ತಿದ್ದ ಇವರು ಈಗ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬೆಟ್ಟದಿಂದ ವ್ಯರ್ಥವಾಗಿ ಹರಿಯುತ್ತಿದ್ದ ನೀರಿಗೆ ಕೃಷಿ ಇಲಾಖೆಯ ಸಹಾಯ ಧನದಿಂದ 2016ರಲ್ಲಿ ಕೃಷಿಹೊಂಡವನ್ನು ನಿರ್ಮಿಸಿ ಮೀನು ಸಾಕಣೆ ಕೈಗೊಂಡಿರುತ್ತಾರೆ.

ಕೃಷಿ ಹೊಂಡದ ನೀರನ್ನು ಒಂದುವರೆ ಎಕರೆ ಪ್ರದೇಶದ ಜೊತೆಗೆ ಪಕ್ಕದಲ್ಲಿರುವ ತಮ್ಮ ಮೂರು ಎಕರೆ ಜಮೀನಿಗೂ ಸಹ ಉಪಯೋಗಿಸುತ್ತಿದ್ದಾರೆ. ಮೂರು ಎಕರೆ ಜಮೀನಿನಲ್ಲಿ ಮೊದಲು ನೀಲಗಿರಿ ಬೆಳೆಯುತ್ತಿದ್ದ ಪ್ರದೇಶದಲ್ಲಿ 2015ರಲ್ಲಿ ವಿವಿಧ ತಳಿಗಳ ಮಾವಿನ ಗಿಡಗಳನ್ನು ನೆಟ್ಟು ಮಾವಿನ ತೋಟದಲ್ಲಿ ಟೊಮೊಟೊ, ಕ್ಯಾರೆಟ್, ಸಿಹಿ ಜೋಳ ಮತ್ತು ಸಿಹಿ ಕುಂಬಳವನ್ನು ಅಂತರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ತೋಟಗಾರಿಕೆಯಲ್ಲಿ ನೀಲಗಿರಿಗಿಂತ ವಾರ್ಷಿಕ ಆಧಾಯ ಸುಮಾರು 10 ಪಟ್ಟು ಹೆಚ್ಚಾಗಿರುತ್ತದೆ.

ಕೃಷಿ ಅರಣ್ಯ:

ತಮ್ಮ ಪಿತ್ರಾರ್ಜಿತವಾಗಿ ಬಂದ 3 ಎಕರೆ ಪ್ರದೇಶದಲ್ಲಿ ಹುಣಸೆಯಿಂದ ಪ್ರತಿ ವರ್ಷ 79,000/- ರೂ. ನಿವ್ವಳ ಆದಾಯವನ್ನು ಪಡೆಯುತ್ತಿದ್ದಾರೆ. ತಮ್ಮ ಜಮೀನಿನ ಬದುಗಳಲ್ಲಿ ನೇರಳೆ, ಹೆಬ್ಬೇವು ಮತ್ತು ತೇಗದ ಮರಗಳನ್ನು ಬೆಳೆದಿರುತ್ತಾರೆ. ಹೆಬ್ಬೇವಿನ ಸೊಪ್ಪನ್ನು ಮೇಕೆ ಮತ್ತು ಕುರಿಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ಮರಗಳು ದೀರ್ಘಾವಧಿ ಆದಾಯ ಗಳಿಸಬಹುದಾದ ಮೂಲ ಎನ್ನುತ್ತಾರೆ.

ಜೇನು ಸಾಕಣೆ:

ಕೃಷಿ ವಿಜ್ಞಾನ ಕೇಂದ್ರ, ಚಿಂತಾಮಣಿಯಿAದ ತಂದು ಸಾಕಿದ್ದ ಜೇನು ಕುಟುಂಬಗಳು ನಿಲ್ಲದೆ ನಷ್ಟ ಅನುಭವಿಸುತ್ತಿದ್ದ ಇವರು ನಂತರದ ದಿನಗಳಲ್ಲಿ ಕೃಷಿ ವಿಜ್ಞಾನ ಕೇಂದ್ರ, ಚಿಂತಾಮಣಿ ಮತ್ತು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಜೇನು ಸಾಕಣೆ ವಿಭಾಗದಲ್ಲಿ ತರಬೇತಿಯನ್ನು ಪಡೆದು ತಾಂತ್ರಿಕ ಮಾಹಿತಿಯನ್ನು ಅಳವಡಿಸಿಕೊಂಡ ನಂತರ ಲಾಭಗಳಿಸುತ್ತಿದ್ದಾರೆ. ಜೇನು ತುಪ್ಪದ ಜೊತೆಗೆ ಜೇನು ಕುಟುಂಬಗಳನ್ನು ಜೇನು ಪೆಟ್ಟಿಗೆ ಸಮೇತ ಮಾರಾಟ ಮಾಡುತ್ತಿದ್ದಾರೆ.

ಮೇವಿನ ಬೆಳೆಗಳು: ಮೇವಿನ ಬೆಳೆಗಳಾದ ಸೂಪರ್ ನೇಪಿಯರ್, ಸಿ.ಓ-3, ಮೆಕ್ಕೆಜೋಳ ಮತ್ತು ಸಹಿ ಜೋಳಗಳನ್ನು ಬೆಳೆಯುತ್ತಿದ್ದಾರೆ. ಅಗಸೆ ಮತ್ತು ಸುಬಾಬುಲ್‌ಅನ್ನು ಬದುಗಳಲ್ಲಿ ಬೆಳೆದು ಸೊಪ್ಪನ್ನು ಮೇಕೆ ಮತ್ತು ಕುರಿಗಳ ಸಾಕಣೆಯಲ್ಲಿ ಉಪಯೋಗಿಸುತ್ತಿದ್ದಾರೆÉ. ಅಜೋಲವನ್ನು ಸಹ ಬೆಳೆಯುತ್ತಿದ್ದು ಉತ್ತಮ ಹಾಲಿನ ಇಳುವರಿಗಾಗಿ ಹಸುಗಳಿಗೆ ನೀಡುತ್ತಿದ್ದಾರೆ.

ಸಮಗ್ರ ಪೀಡೆ ನಿರ್ವಹಣೆ :

ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಕಂಡುಬರುವ ಹಾನಿಕಾರಕ ಪೀಡೆಗಳನ್ನು ಹತೋಟಿ ಮಾಡಲು  ಸಮಗ್ರ ಪೀಡೆ ನಿಯಂತ್ರಣಾ ಪದ್ಧತಿಯನ್ನು ಅಳವಡಿಸಿಕೊಂಡಿರುತ್ತಾರೆ. ಸಸ್ಯ ಹೇನು ಮತ್ತು ಬಿಳಿನೋಟ ನಿಯಂತ್ರಣಕ್ಕೆ ಅಂಟು ಟ್ರಾಪನ್ನು ತರಕಾರಿ ಬೆಳೆಗಳಲ್ಲಿ ಬಳಸುತ್ತಿದ್ದಾರೆ. ಹೂಕೋಸಿನಲ್ಲಿ ಸಮಗ್ರ ಪೀಡೆ ನಿರ್ವಹಣೆಗೆ ಬೇವಿನ ಬೀಜದ ಕಷಾಯ ಬಳಕೆ ಮಾಡುತ್ತಿದ್ದಾರೆ. ಬೆಳಕಿನ ಆಕರ್ಷಕ ಬಲೆಗಳು, ಟೈಕೋಡರ್ಮಾ, ಚಿಲೋನಿಸ್ ಮತ್ತು ಪಂತAತ್ರ ಜೀವಿಗಳನ್ನು ಬಳಸಿ ಕೃಷಿಯಲ್ಲಿ ಖರ್ಚು ಕಡಿತಗೊಳಿಸಿದ್ದಾರೆ. ಪಂಚಗವ್ಯವನ್ನು ತಾವೇ ತಯಾರಿಸಿ ಸಮಗ್ರ ಪೀಡೆ ನಿಯಂತ್ರಣ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.

ಹೊರ ರಾಜ್ಯಗಳ ಮಾರುಕಟ್ಟೆ : ರಾಷ್ಟ್ರೀಯ ತೋಟಾಗಾರಿಕೆ ಮಿಷನ್ ಸಹಾಯದಿಂದ ಪ್ಯಾಕಿಂಗ್ ಘಟಕವನ್ನು ನಿರ್ಮಿಸಿಕೊಂಡಿರುವುದರಿಂದ ಶೀಘ್ರವಾಗಿ ಪ್ಯಾಕಿಂಗ್ ಮತ್ತು ಸಾಗಾಣಿಕೆ ಮಾಡಲು ಅನುಕೂಲವಾಗುತ್ತದೆ ಎನ್ನುವ ಇವರು ಗ್ರೇಡಿಂಗ್ ಮತ್ತು ಪ್ಯಾಕಿಂಗ್ ಮಾಡಿ ರಾಷ್ಟ್ರದ ಪ್ರಮುಖ ಮಾರುಕಟ್ಟೆಗಳಾದ ಮುಂಬೈ, ಕೋಲ್ಕತಾ, ದೆಹಲಿ, ಹೈದರಾಬಾದ್ ಮತ್ತು ಬಾಂಗ್ಲಾ ದೇಶಕ್ಕೆ ಮಾರಾಟ ಮಾಡುವ ಮೂಲಕ ಮಾರುಕಟ್ಟೆ ವ್ಯವಸ್ಥೆಗೆ ಹೊಸ ಆಯಾಮ ಕಂಡುಕೊಂಡಿದ್ದಾರೆ.

ಕೃಷಿ ಯಂತ್ರೋಪಕರಣಗಳು:

ಯಂತ್ರೋಪಕರಣ ಬಳಕೆಯಿಂದ ಕೂಲಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಟಿಲ್ಲರ್, ಕೂರಿಗೆ, ಕೊನೋವೀಡರ್, ವೀಡ್ ಕಟ್ಟರ್, ಸ್ಪೇಯರ್ ಮುಂತಾದ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. “ಭೂಮಿ ಇಟ್ಟುಕೊಂಡು ಎಲ್ಲದಕ್ಕೂ ಕೂಲಿ ಕಾರ್ಮಿಕರನ್ನು ಅವಲಂಬಿಸಿ ಸೋಮಾರಿಗಳಾದರೆ ಪ್ರಯೋಜನವಿಲ್ಲ” ಕುಟುಂಬ ಸಮೇತ ದುಡಿದು ಸ್ವಾವಲಂಬಿ ಬದುಕು ಬಾಳಬೇಕು ಎನ್ನುತ್ತಾರೆ.

ತಂತ್ರಜ್ಞಾನಗಳ ಮಾಹಿತಿ : ಸಮಗ್ರ ಕೃಷಿ ಪದ್ಧತಿ, ಬೆಳೆ ಬದಲಾವಣೆ, ಮಿಶ್ರ ಮತ್ತು ಅಂತರ ಬೆಳೆ ಪದ್ಧತಿ ಮತ್ತು ಉಪ ಕಸುಬುಗಳನ್ನು ಅಳವಡಿಸಿಕೊಂಡರೆ, ಒಂದು ಬೆಳೆಯಲ್ಲಿ ನಷ್ಟವಾದರೆ ಇನ್ನೊಂದು ಬೆಳೆಯಲ್ಲಿ ಲಾಭಗಳಿಸಬಹುದು ಎನ್ನುತ್ತಾರೆ.  ನೂತನ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು  ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ, ಚಿಂತಾಮಣಿ ಮತ್ತು ರೈತ ಸಂಪರ್ಕ ಕೇಂದ್ರ, ವಾಟ್ಯಾಪ್  ಮತ್ತು ಪ್ರಗತಿಪರ ರೈತರಿಂದ ನಿರಂತರವಾಗಿ ಪಡೆಯುತ್ತಿದ್ದು ಹಲವು ಸಂಘ-ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವುದರ ಜೊತೆಗೆ ಸದಸ್ಯರಾಗಿದ್ದಾರೆ. ಆಸಕ್ತಿಯಿರುವ ರೈತರಿಗೆ ಸಮಗ್ರ ಕೃಷಿ ಪದ್ಧತಿ ಹಾಗೂ ನೂತನ ತಂತ್ರಜ್ಞಾನಗಳ ಅಳವಡಿಕೆ ಬಗ್ಗೆ ಉತ್ತೇಜಿಸುತ್ತಾ ಯಶಸ್ವಿ ಪ್ರಗತಿಪರ ಕೃಷಿಕರಾಗಿದ್ದಾರೆ.

ಸಾಲದ ವರ್ತುಲದಿಂದ ದಿಂದ ಸಮೃದ್ಧ ಜೀವನದತ್ತ:

ತಮ್ಮ ತಂದೆ,  ಅಣ್ಣ – ತಮ್ಮಂದಿರಿಂದ 1994ರಲ್ಲಿ ವಿಭಜನೆಗೊಂಡು ಮೂರು ಲಕ್ಷ ಸಾಲದ ಹೊರೆಯ ಜೊತೆಗೆ ತಂಗಿ ಮತ್ತು ತಮ್ಮನ  ಮದುವೆಯ ಖರ್ಚಿನ ಹೊರೆಯನ್ನು ಸಹ ಹೊತ್ತಿದ್ದರು.  ರೇಷ್ಮೆ, ಟೊಮೊಟೊ ಮತ್ತು ಭತ್ತವನ್ನು ಏಕ ಬೆಳೆ ಪದ್ಧತಿಯಲ್ಲಿ ಬೆಳೆದು ಮಾರುಕಟ್ಟೆ ಏರುಪೇರುನಿಂದ ನಷ್ಟ ಅನುಭವಿಸಿ ಸಾವಿನ ದವಡೆಗೆ ತಲುಪಿದ್ದರು.

 2015 ರಿಂದ ಸಮಗ್ರ ಕೃಷಿಗೆ ಶರಣಾಗಿ ಸಮೃದ್ಧ ಜೀವನ ಸಾಗಿಸುತ್ತಿದ್ದಾರೆ. ಇಬ್ಬರು ತಮ್ಮಂದಿರ ಜೊತೆ ಕೂಡುಕುಟುಂಬದಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಚಿಂತಾಮಣಿಯಲ್ಲಿ 16.00 ಲಕ್ಷ ರೂ.ಗಳನ್ನು ನೀಡಿ 30 x 40 ವಿಸ್ತೀರ್ಣದ ನಿವೇಶನ, ಬೆಂಗಳೂರಿನಲ್ಲಿ 45.00 ಲಕ್ಷ ನೀಡಿ 60 x 40 ವಿಸ್ತೀರ್ಣದ ನಿವೇಶನ ಮತ್ತು ಕೈವಾರದಲ್ಲಿ 7.00 ಲಕ್ಷ ರೂ.ಗಳನ್ನು ನೀಡಿ 30 x 40 ವಿಸ್ತೀರ್ಣದ ನಿವೇಶನವನ್ನು ಖರೀದಿಸಿರುವುದಲ್ಲದೇ 7 ಎಕರೆ ಜಮೀನನ್ನು ಸಹ ತಮ್ಮ ಜಮೀನ ಅಸುಪಾಸಿನಲ್ಲಿ ಖರೀದಿಸಿರುತ್ತಾರೆ. ಸಮಗ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡು, ವೈಜ್ಞಾನಿಕ ಕೃಷಿಯನ್ನು ಕೈಗೊಂಡು ಸೂಕ್ತ ಮಾರುಕಟ್ಟೆ ಮೂಲಗಳನ್ನು ಆರಿಸಿಕೊಂಡಿರುವುದೇ ತಮ್ಮ ಯಶಸ್ಸಿನ ಗುಟ್ಟು ಎನ್ನುತ್ತಾರೆ.

ಸಂದ ಪ್ರಶಸ್ತಿಗಳು :

ಇವರು  ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ ಅವುಗಳಲ್ಲಿ ಪ್ರಮುಖವಾದುವೆಂದರೆ; ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿಯವರಿಂದ,  2015ರಲ್ಲಿ – ಹೊಸ ತಂತ್ರಜ್ಞಾನ ಕೃಷಿ ಪ್ರಶಸ್ತಿ ಮತ್ತು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಿಂದ 2014ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, 2018ರಲ್ಲಿ – ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ  ಅತ್ಯುತ್ತಮ ರೈತ ಪ್ರಶಸ್ತಿ ಹಾಗೂ 2020ರಲ್ಲಿ –  ಸಿ. ಭೈರೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ.

ತಮ್ಮ ಈ ಸಾಧನೆಗೆ ವಿಜ್ಞಾನಿಗಳ ಮತ್ತು ವಿಸ್ತರಣಾ ಕಾರ್ಯಕರ್ತರ ಜೊತೆ ನಿರಂತರ ಒಡನಾಟ, ಆತ್ಮೀಯತೆ ಮತ್ತು ಸುಮಧುರ ಸಂಬಂಧವೇ ಪ್ರಮುಖ ಕಾರಣವೆನ್ನುತ್ತಾರೆ. ಬದಲಾಗುತ್ತಿರುವ ಸನ್ನಿವೇಶದಲ್ಲಿ ಕೃಷಿಯು ಸಹ ಒಂದು ಉಧ್ಯಮವಾಗಿದ್ದು ಯೋಚಿಸಿ, ಆಲೋಚಿಸಿ, ಯೋಜಿಸಿ, ಕಾರ್ಯಪ್ರವೃತ್ತರಾದರೆ ಕೃಷಿಯಲ್ಲಿ ಸ್ವಾವಲಂಬಿ ಬದುಕು ಕಂಡುಕೊಂಡು ಲಾಭಗಳಿಸಿ ಯಾರ ಹಂಗಿಲ್ಲದೆ ನೆಮ್ಮದಿಯಿಂದ ಜೀವನ ಸಾಗಿಸಬಹುದು. ಅಜ್ಞಾನ ಕೃಷಿಯಿಂದ ಸಾವಿನ ದವಡೆಗೆ ತಲುಪಿದ ತಾವು ಸಜ್ಜನರ ಸಹವಾಸದಿಂದ ವಿಜ್ಞಾನ ಕೃಷಿಯತ್ತ ಮುಖ ಮಾಡಿ ಸಮಗ್ರ ಕೃಷಿ ಅಳವಡಿಸಿಕೊಂಡು ತನ್ನ ಬಾಳನ್ನು ಬೆಳಗಿಸುತ್ತಾ ಇತರ ರೈತರ ಬಾಳನ್ನು ಸಹ ಬೆಳಗಿಸುತ್ತಿದ್ದಾರೆ.

ಕೃಷಿ ಮಾಹಿತಿ ಘಟಕ, ವಿಸ್ತರಣಾ ನಿರ್ದೇಶನಾಲಯ, ಕೃವಿವಿ, ಬೆಂಗಳೂರು

LEAVE A REPLY

Please enter your comment!
Please enter your name here