ಜೇನುನೊಣಗಳ ಅಚ್ಚರಿ, ವಿಸ್ಮಯಕಾರಿ ಜೀವನಶೈಲಿ

0
ಲೇಖಕರು: ಡಾ. ಮಧುರಿಮಾ ವಿನೋದ

ಕೀಟ ಜಗತ್ತಿನ ನಿಸ್ವಾರ್ಥ ಸೇವಕ ; ಜೇನುನೊಣ

ವಿವಿಧ ಉತ್ಪನ್ನಗಳ ಸಲುವಾಗಿ  ಮುಖ್ಯವಾಗಿ ಮೂರು ತರಹದ ಕೀಟಗಳನ್ನು ಅವಲಂಬಿಸಲಾಗಿದೆ. ಅವುಗಳೆಂದರೆ ರೇಷ್ಮೆ ಹುಳು, ಅರಗು ಕೀಟ ಮತ್ತು ಮಧು ಜೇನು. ಇವುಗಳಲ್ಲಿ ಜೇನುನೊಣದ ದಣಿವರಿಯದ ಜೀವನದಿಂದ ಉಂಟಾಗುವ ಲಾಭಗಳು ಪ್ರಸಿದ್ಧ. ಜೇನುನೊಣದ ದುಡಿಮೆ ಮತ್ತು ಉಪಯುಕ್ತತೆಯ ಬಗ್ಗೆ ಅನೇಕ ದಂತಕಥೆಗಳಿವೆ.

ದೇಹದ ರಚನೆ

ಇತರ ಕೀಟಗಳಂತೆ, ಜೇನುನೊಣವು ಸಹ ಸಾಮಾನ್ಯ ತಲೆ, ಎದೆ ಮತ್ತು ಹೊಟ್ಟೆ ಎಂಬ ಮೂರು ಪ್ರತ್ಯೇಕ ಬಾಗಗಳುಳ್ಳ ದೇಹವನ್ನು ಹೊಂದಿರುತ್ತದೆ. ತಲೆಯಿಂದ ಒಂದು ಜೊತೆ ಕುಡಿಮೀಸೆಗಳು ಹೊರಟಿರುತ್ತವೆ, ಎದೆಯ ಭಾಗದಲ್ಲಿ ಮೂರು ಜೊತೆ ಜಂಟಿ ಕಾಲುಗಳು ಹಾಗೂ ಎರಡು ಜೊತೆ ರೆಕ್ಕೆಗಳು ಇರುತ್ತವೆ. ಇದಲ್ಲದೆ ಇತರ ಕೀಟಗಳಂತೆ ಜೇನುನೊಣವು ಸಹ ಭ್ರೂಣ ಮತ್ತು ಪ್ರೌಢಾವಸ್ಥೆಗಳ ನಡುವಣ ರೂಪಗಳನ್ನು ಹಾದು ಹೋಗುತ್ತದೆ. ಪ್ರಾಣಿ ಪ್ರಪಂಚದಲ್ಲಿ ಜೇನುನೊಣಗಳ ಸ್ಥಾನವನ್ನು ಈ ಕೆಳಗಿನ ವರ್ಗೀಕರಣ ಸೂಚಿಸುತ್ತದೆ:

 ಸಾಮ್ರಾಜ್ಯ : ಪ್ರಾಣಿ

 ಕುಲ : ಸಂಧಿಪದಿ

 ವರ್ಗ : ಹೆಕ್ಸಾಪೋಡಾ ಅಥವಾ ಇನ್ಸೆಕ್ಟಾ

 ಗಣ : ಹೈಮೆನಾಪ್ಟೆರ

 ಕುಟುಂಬ : ಏಪಿಡೇ

 ಜಾತಿ : ಏಪಿಸ್

 ಪ್ರಭೇದಗಳು :

  1. ಮೆಲ್ಲಿಫೆರ
  2. ಇಂಡಿಕ
  3. ಡಾರ್ಸೇಟ
  4. ಫ್ಲೋರಿಯ

ಹೈಮೆನಾಪ್ಟೆರ ಎಂದರೆ ಅಂತರೀಕ್ಷದಲ್ಲಿ ಗರ್ಭಧಾರಣೆ ಹೊಂದುವಂಥದ್ದು ಎಂಬ ಅರ್ಥವಿದೆ. “ಹಾರುತ್ತಿರುವಾಗ ಆಗುವ ಮದುವೆ ” ಎಂಬುದು ಅದರ ಅನುವಾದ. “ಮೆಲ್ಲಿಫೆರ” ಎಂದರೆ ಜೇನನ್ನು ತಯಾರಿಸುವಿಕೆ ಎಂದು ಅರ್ಥ.

ಆಹಾರದ ಸಂಗ್ರಹ, ಮನೆ ಮತ್ತು ಇವುಗಳ ಹಾಗೂ ಸ್ವಂತದ ಜೀವದ ರಕ್ಷಣೆಗಳೇ ಮೇಲ್ಮಟ್ಟದ ಪ್ರಾಣಿಗಳ ಚಿಂತೆಗಳು. ಜೊತೆಯಲ್ಲಿ ವಂಶವು ಅಡೆತಡೆಯಿಲ್ಲದೇ ನಡೆಯ ಬೇಕೆಂಬ ವಿಚಾರ. ದೊಡ್ಡ ಪ್ರಾಣಿಗಳಲ್ಲಿ ಬಲವಿರುವುದರಿಂದ ಇವು ಸಮಸ್ಯೆಯಾಗಿರುವುದಿಲ್ಲ. ಆದರೆ ಸಣ್ಣ ಪ್ರಾಣಿಗಳಲ್ಲಿ ವೈರಿಗಳನ್ನು ಎದುರಿಸುವ ಸಾಮರ್ಥ್ಯವಿರುವುದಿಲ್ಲ. ಜೀವನದ ಪ್ರತಿಯೊಂದು ಪ್ರಕ್ರಿಯೆ ಸಹ ಇವುಗಳಿಗೆ ಮೇಲ್ಮಟ್ಟದ ಪ್ರಾಣಿಗಳಿಗಿಂತ ಕಷ್ಟ. ಅದರಲ್ಲೂ

ಸಂಘ ಜೀವನ

ಜೇನು ನೊಣಗಳು ಕೇವಲ ಆತ್ಮರಕ್ಷಣೆಯಷ್ಟೇ ಅಲ್ಲದೆ, ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಂಘ ಜೀವನವನ್ನು ಅವಲಂಬಿಸಿಕೊಂಡಿರುತ್ತವೆ. ಇವು ಅತ್ಯಂತ ಸಂಘಟಿತ ರೀತಿಯ ಕಾರ್ಮಿಕ ವಿಭಜನೆಯುಳ್ಳವುಗಳಾಗಿದ್ದು, ನೆಲೆಗಳಲ್ಲಿ ವಾಸಿಸುತ್ತವೆ. ಇವುಗಳಲ್ಲಿ ಮೂರು ಜಾತಿಗಳಿವೆ: ರಾಣಿ ಜೇನುನೊಣ, ಕೆಲಸಗಾರ್ತಿ ಜೇನುನೊಣಗಳು ಮತ್ತು ಗಂಡು ಜೇನುನೊಣಗಳು. ಸಾಧಾರಣ ನೆಲೆಯಲ್ಲಿ ಒಂದು ರಾಣಿ ಜೇನುನೊಣ, 20000 ರಿಂದ 30000 ಕೆಲಸಗಾರ್ತಿ ಜೇನುನೊಣಗಳು ಮತ್ತು ಸುಮಾರು 100 ಗಂಡು ಜೇನುನೊಣಗಳೂ ಇರುತ್ತವೆ.

ರಾಣಿಜೇನು

 ಒಂದು ಜೇನುಸಂಸಾರದಲ್ಲಿ ಒಂದೇ ರಾಣಿ ನೊಣ ಇರುವುದು. ಇದು ಉಳಿದೆರಡು ನೊಣಗಳಿಗಿಂತ ಆಕಾರದಲ್ಲಿ ದೊಡ್ಡದಾಗಿ, ಸ್ವಲ್ಪ ಉದ್ದವಾಗಿ ಮೈ ಬಣ್ಣ ಕಪ್ಪಾಗಿ ಹೊಳೆಯುವಂತಿರುತ್ತದೆ. ಇದರ ಕಾಲುಗಳು ತುಸು ಅರಶಿನ ಬಣ್ಣವಾಗಿದ್ದು ಮೈ ಮೇಲೆ ಅತಿ ಸೂಕ್ಷ್ಮವಾದ ತೆಳ್ಳಗಿನ ಕೂದಲುಗಳು ಇರುವುವು. ರಾಣಿ ನೊಣವು ಗಂಡು ನೊಣಗಳೊಡನೆ ಕೂಡಿಕೊಂಡು ಆಕಾಶದಲ್ಲಿ ಜೋಡಿಯಾಗಲು ಗೂಡಿನಿಂದ ಮಧ್ಯಾಹ್ನದ ಮೇಲೆ ಹೊರಗೆ ಹಾರಿಹೋಗುವವು. ಯಾವ ಗಂಡು ನೊಣವು ರಾಣಿಯನ್ನು ಓಟದಲ್ಲಿ ಸೋಲಿಸಿ ಹಿಡಿಯುವುದೋ ಅದರೊಡನೆ ಸಮಾಗಮವಾಗುವುದು. ರಾಣಿಯು ಬಲಹೀನರಿಗೆ ದೊರಕದೆ ಬಲಿಷ್ಠರಿಗೆ ಮಾತ್ರ ದೊರಕಿದಂತಾಗುವುದು.

ನೆಲೆಯ ತಾಯಿ

ರಾಣಿ ನೊಣ ಗಂಡು ನೊಣದೊಡನೆ ಸರಿಯಾಗಿ ಜೋಡಿಯಾಗಿ ಗೂಡಿನೊಳಗೆ ಬಂದಾಕ್ಷಣ ಬಳಲಿದ ರಾಣಿಯ ಶುಶ್ರೂಷೆಯನ್ನು ಕೆಲಸಗಾರ್ತಿ ನೊಣಗಳು ಮಾಡುವುವು. ರಾಣಿ ಮೊಟ್ಟೆಯಿಡಲು ಪ್ರಾರಂಭಿಸಿದ ನಂತರ ಪುನ: ಗಂಡು ನೊಣಗಳೊಡನೆ ಜೋಡಿಯಾಗಲು ಸಾಧ್ಯವಿಲ್ಲ. ಜೋಡಿಯಾಗಿ ಒಂದೆರಡು ದಿವಸಗಳಲ್ಲಿ ತನ್ನ ಕರ್ತವ್ಯದಂತೆ ಗರ್ಭಿಣಿಯಾದ ರಾಣಿನೊಣವು ಕೆಲಸಗಾರ್ತಿ ನೊಣಗಳು ಕೊಡುವ ಆಹಾರದ ಪ್ರಮಾಣಕ್ಕನುಸರಿಸಿ, ಎರಿಯಲ್ಲಿರುವ ಖಾಲಿ ಕಣಗಳಲ್ಲಿ ಸೂಜಿಯಾಕಾರದ ಮೊಟ್ಟೆಗಳನ್ನಿಡುತ್ತದೆ. ಗರ್ಭಿಣಿಯಾದ ರಾಣಿ ನೊಣದಲ್ಲಿ ಲಕ್ಷಾಂತರ ಮೊಟ್ಟೆಗಳನ್ನಿಡುವಷ್ಟು ಗಂಡು ನೊಣದ ವೀರ್ಯಾಣುಗಳು ಸಂಗ್ರಹವಾಗಿರುತ್ತದೆ. ರಾಣಿ ಇಲ್ಲದ ಜೇನು ಸಂಸಾರ ನಾಶ ಹೊಂದುತ್ತದೆ. ಪೂರ್ಣವಾಗಿ ವೃದ್ಧಿಗೊಂಡ ಹೆಣ್ಣಾಗಿರುವುದರಿಂದ ಇದೇ ನೆಲೆಯ ತಾಯಿ.

ಗಂಡು ನೊಣ ಸೋಮಾರಿ ಹಾಗೂ ಸಾಧು ಸ್ವಭಾವ

 ಗಂಡು ನೊಣ ರಾಣಿಗಿಂತ ಕಿರಿದಾಗಿ ಕೆಲಸಗಾರ್ತಿ ನೊಣಕ್ಕಿಂತ ದೊಡ್ಡದಾಗಿದ್ದು, ಗಾತ್ರದಲ್ಲಿ ದುಂಡಗಾಗಿ, ಕಪ್ಪಾಗಿರುವುದು. ಇವುಗಳಲ್ಲಿ ಎರಡು ಭೇದಗಳಿರುವುವು- ರಾಣಿ ನೊಣದ ಮೊಟ್ಟೆಯಿಂದ ಜನಿಸಿದ ಚಿಕ್ಕ ಗಂಡು ನೊಣಗಳು ಮತ್ತು ಕೆಲಸಗಾರ್ತಿ ನೊಣಗಳ ಮೊಟ್ಟೆಯಿಂದ ಜನಿಸಿದ ದೊಡ್ಡ ಗಂಡು ನೊಣಗಳು. ರಾಣಿ ನೊಣದಿಂದ ಹುಟ್ಟಿದ ಗಂಡು ನೊಣವು ಬಹಳ ಚುರುಕಾಗಿದ್ದು ಹೊಸ ರಾಣಿಗೆ ಜೋಡಿಯಾಗಲು ಉಪಯೋಗವಾಗುವುವು. ಗಂಡು ನೊಣಗಳು ಸಾಮಾನ್ಯವಾಗಿ ಸೋಮಾರಿ ಹಾಗೂ ಸಾಧು ಸ್ವಭಾವದವುಗಳು. ಇವುಗಳಿಗೆ ಮಧು ಸಂಗ್ರಹ ಥೈಲಿಯೂ, ಪರಾಗ ಸಂಗ್ರಹಿಸುವ ಭಾಗವೂ ಇಲ್ಲದಿರುವುದಲ್ಲದೆ, ವೈರಿಗಳನ್ನು ಓಡಿಸುವಂತಹ ಚುಚ್ಚುವ ಆಯುಧ ಸಹ ಇಲ್ಲ. ಗಂಡು ನೊಣಗಳಿಗೆ ಪ್ರತಿಯೊಂದು ಜೇನು ಸಂಸಾರದಲ್ಲಿಯೂ ಸ್ವಾಗತವಿದೆ. ಯಾಕೆಂದರೆ, ನಿಜವಾದ ಪ್ರಜ್ಞಾ ಶಕ್ತಿ ಹಾಗೂ ತನ್ನ ಸಂಸಾರ ಯಾವುದೆಂದು ಪತ್ತೆ ಹಚ್ಚಿ ಕೊಳ್ಳುವ ಗುಣ ಇವುಗಳಲ್ಲಿಲ್ಲ. ಮೇಣವನ್ನು ತಯಾರಿಸಬಲ್ಲ ಗ್ರಂಥಿಗಳಿಲ್ಲದಿರುವುದರಿAದ ಇವು ಜೇನು ಸಂಸಾರದ ಯಾವ ಕೆಲಸವನ್ನೂ ಮಾಡಲಾರವು. ಜೇನು ಸಂಸಾರದಲ್ಲಿ ಹೊಸರಾಣಿ ಮೊಟ್ಟೆಯಿಡಬೇಕಾದರೆ ಗಂಡು ನೊಣದೊಡನೆ ಸಂಪರ್ಕವಾಗುವ ಆವಶ್ಯಕತೆ ಇರುವುದರಿಂದ ಇವುಗಳಿಗೆ ರಾಣಿಗೆ ಜೋಡಿ ಮಾಡುವ ಕರ್ತವ್ಯ ಒಂದೇಯಾಗಿರುವುದು.

ಕೆಲಸಗಾರ್ತಿ ನೊಣಗಳು

 ಜೇನು ಕುಟುಂಬದಲ್ಲಿ ಕೆಲಸಗಾರ್ತಿ ನೊಣಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ. ಜೇನು ಸಂಸಾರದಲ್ಲಿ ಇವುಗಳೇ ಅಧಿಕಾರ ಚಲಾಯಿಸುವುದು. ಸರಿಯಾಗಿ ವೃದ್ಧಿಗೊಳ್ಳದ ಕೆಲಸಗಾರ್ತಿ ಜೇನು ನೊಣ ಹೆಣ್ಣುಗಳಾಗಿದ್ದು ಪುನರುತ್ಪತ್ತಿ ಮಾಡಲು ಅಸಮರ್ಥವಾಗಿರುತ್ತವೆ. ಇವು ನೆಲೆಯ ಯೋಗಕ್ಷೇಮವನ್ನು ನೋಡಿಕೊಳ್ಳುವುದಲ್ಲದೆ ಎಲ್ಲ ಅವಶ್ಯಕ ಕೆಲಸಗಳಿಗೂ ಜವಾಬ್ದಾರಿಯಾಗಿರುತ್ತವೆ.

ಪ್ರತಿ ಕೆಲಸಗಾರ್ತಿ ನೊಣವೂ ತನ್ನ ಜೀವಿತಾವಧಿಯಲ್ಲಿ ವಿವಿಧ ರೀತಿಯ ಕೆಲಸವನ್ನು ಮಾಡುತ್ತದೆ. ಅದರ ವಯಸ್ಸು ಹೆಚ್ಚಿದಂತೆ  ಅದು ವಿವಿಧ ಕೆಲಸಕಾರ್ಯಗಳಿಗೆ ಯೋಗ್ಯವಾಗುತ್ತದೆ. ಅದರ ಜೀವನದ ಪೂರ್ವಾರ್ಧದಲ್ಲಿ ಅದು, ಹುಟ್ಟಿನೊಳಗಿನ ಕೆಲಸಕಾರ್ಯಗಳಾದ ಶ್ರೇಷ್ಠದರ್ಜೆಯ ಲೇಹ್ಯವನ್ನು ಸ್ರವಿಸುವುದು, ಮರಿಗಳಿಗೆ ಉಣಿಸುವುದು, ರಾಣಿ ನೊಣಕ್ಕೆ ಉಣಿಸುವುದು ಮತ್ತು ಅದರ ಸೇವೆಯನ್ನು ಮಾಡುವುದು, ಜೇನಿನ ಮೇಣವನ್ನು ಸ್ರವಿಸುವುದು, ಹುಟ್ಟುಗಳನ್ನು ನಿರ್ಮಿಸಿ ಸ್ವಚ್ಛವಾಗಿಡುವುದು, ಗಾಳಿಯಾಡಲು ವ್ಯವಸ್ಥೆ ಮಾಡುವುದು, ತಂಪಾಗಿಡುವುದು, ಹುಟ್ಟನ್ನು ಕಾವಲುಕಾಯುವುದು, ಮಕರಂದವನ್ನು ಆರುವಂತೆ ಮಾಡುವುದು ಹಾಗೂ ಜೇನುತುಪ್ಪವನ್ನು ದಾಸ್ತಾನು ಮಾಡುವುದು, ವೈರಿಗಳ ದಾಳಿಯಿಂದ ರಕ್ಷಿಸುವುದು, ಕುಟುಂಬದ ವಿಭಜನೆಗೆ ಸಹಕರಿಸುವುದು ಮುಂತಾದ ಕೆಲಸಗಳನ್ನು ನೋಡಿಕೊಳ್ಳುತ್ತದೆ.

ಸಂಗ್ರಹಣೆ

ಕೆಲಸಗಾರ್ತಿ ನೊಣದ ಉತ್ತರಾರ್ಥ ಜೀವನವು ಸುಮಾರು ಮೂರು ವಾರಗಳಷ್ಟು ಕಾಲವಿದ್ದು. ಆ ಅವಧಿಯಲ್ಲಿ ಅದು ಹೊರಗಿನ ಕಾರ್ಯಗಳಲ್ಲಿ ಭಾಗವಹಿಸುತ್ತದೆ. ಅಲ್ಲದೆ, ಮಕರಂದ, ಪರಾಗ, ಜೇನಂಟು ಹಾಗೂ ನೀರನ್ನು ಸಂಗ್ರಹಿಸಿ ಹುಟ್ಟಿಗೆ ತರುತ್ತದೆ. ನೆಲೆಯ ದಂಡು ಅನ್ವೇಷಕ ಹಾಗೂ ಸಂಗ್ರಹಕಾರ ಜೇನು ನೊಣಗಳಾಗಿ ವಿಭಾಗಗೊಳ್ಳುತ್ತವೆ. ಸಂಸಾರದ ಎಲ್ಲಾ ಕೆಲಸಗಳನ್ನು ಕೆಲಸಗಾರ್ತಿ ನೊಣಗಳೇ ಮಾಡುವುದು.

ಹೆಣ್ಣು ಜೇನುನೊಣ ಶ್ರಮಜೀವಿ

 ಕೆಲಸಗಾರ್ತಿ ನೊಣಗಳು ಜೇನು ಸಂಸಾರದಷ್ಟೆ ಅಲ್ಲದೆ ಇಡೀ ಕೀಟ ಲೋಕದ ನಿಸ್ವಾರ್ಥ ಸೇವಕರು. ಅವು ತಮ್ಮ ಜೀವಿತಾವಧಿ ಮುಗಿಯುವವರೆಗೂ, ಪ್ರತಿ ನಿತ್ಯವೂ ಕಷ್ಟಪಟ್ಟು ಕೆಲಸ ಮಾಡುತ್ತವೆ. ಕೆಲಸಗಾರ್ತಿ ನೊಣಕ್ಕೆ ವೈಯಕ್ತಿಕ ಅಸ್ತಿತ್ವವಿರುವುದಿಲ್ಲ. ಅದು ತನ್ನ ಜೀವಮಾನದಾದ್ಯಂತ ಎಲ್ಲವುಗಳ ಒಳಿತಿಗಾಗಿ ಶ್ರಮಿಸುತ್ತದೆ. ಒಂದು ಪೌಂಡ್ ಜೇನುತುಪ್ಪವನ್ನು ಸಂಗ್ರಹಿಸಲು, ಇವು ಮೂರು ಮೈಲಿ ದೂರ 40000 ಸಲ ಪರ್ಯಟನೆ ಮಾಡಬೇಕಾಗಬಹುದೆಂದು ಅಂದಾಜು ಮಾಡಲಾಗಿದೆ. ಆದರೆ ವಾಸ್ತವದಲ್ಲಿ ಈ ಅವಿಶ್ರಾಂತ ಜೇನು ನೊಣವು ತನ್ನ ಇಡೀ ಜೀವಮಾನದಲ್ಲಿ ಕೇವಲ ಒಂದು ಟೇಬಲ್ ಚಮಚದಷ್ಟು ಜೇನುತುಪ್ಪವನ್ನು ಮಾತ್ರ ಸಂಗ್ರಹಿಸಬಲ್ಲದು. ಕೆಲಸಗಾರ್ತಿ ನೊಣವು ತನ್ನ ಕರ್ತವ್ಯವನ್ನು ಪೂರೈಸಲು ಸಮರ್ಥವಿದ್ದು, ಆ ಕೆಲಸ ಮುಗಿದ ಕೂಡಲೇ ಸತ್ತು ಹೋಗುತ್ತದೆ.

ತ್ಯಾಗ – ಬಲಿದಾನ

ಅವುಗಳು ಎಷ್ಟು ನಿಸ್ವಾರ್ಥರೆಂದರೆ ಜೇನುಗೂಡಿಗೆ ಮನುಷ್ಯ ಅಥವಾ ಪ್ರಾಣಿ ವೈರಿಗಳ ಸಮಸ್ಯೆ ಕಂಡು ಬಂದಲ್ಲಿ ಕೆಲಸಗಾರ್ತಿ ನೊಣವು ತನ್ನ ಕೊಂಡಿ ಅಥವಾ ಚುಚ್ಚು ಮುಳ್ಳನ್ನು ವೈರಿಗಳ ಶರೀರದಲ್ಲಿ ಚುಚ್ಚಿ, ಅದನ್ನು ಹೊರತೆಗೆಯಲಾರದೆ ಅಲ್ಲಿಯೇ ಬಿಟ್ಟು ತಪ್ಪಿಸಿಕೊಂಡು ನೆಲಕ್ಕೆ ಬಿದ್ದು ಸಾಯುತ್ತದೆ. ಕೊಂಡಿಯ ವಿಷಕ್ಕೆ ತೀಕ್ಷ್ಮ ವಾಸನೆ ಇರುವುದರಿಂದ ಇದು, ಇತರ ಹುಳುಗಳಿಗೆ ವೈರಿಗಳ ಸೂಚನೆಯನ್ನು ನೀಡುತ್ತದೆ. ವಿಷದ ವಾಸನೆಯಿಂದ ಆಕರ್ಷಿಸಲ್ಪಟ್ಟಂತಹ ಹುಳುಗಳು, ಗುಂಪಾಗಿ ಬಂದು ವೈರಿಯ ಮೇಲೆ ಆಕ್ರಮಣ ಮಾಡಿ ಚುಚ್ಚುತ್ತವೆ. ತನ್ನ ಕುಟುಂಬವನ್ನು ವೈರಿಯಿಂದ ಕಾಪಾಡಲು ಸ್ವಂತ ಜೀವವನ್ನೇ ತ್ಯಾಗ ಮಾಡುತ್ತದೆ ಈ ನಿಸ್ವಾರ್ಥ ಜೇನು ನೊಣ.

ಜೇನುನೊಣಗಳಿಂದ ಕಲಿಯಬೇಕಾದ ಪಾಠ

 ಜಗತ್ತಿನ ಜೀವಿಗಳಲ್ಲಿ ಸರ್ವಶ್ರೇಷ್ಠನೂ, ಜ್ಞಾನದಲ್ಲಿ ಅತ್ಯುನ್ನತ ಸ್ಥಾನವನ್ನು ಗಳಿಸಿರುವವನೂ ಆದ ಮಾನವನು, ಈ ಸಣ್ಣ ಜೇನು ನೊಣಗಳಿಂದ ಕಲಿಯಬೇಕಾದಂತಹ ವಿಷಯಗಳು ಅನೇಕ ಇವೆ. ಈ ಜೇನು ನೊಣಗಳ ಅನ್ಯೋನ್ಯ ಸ್ನೇಹ, ಮಮತೆಯ ಬಾಳು ಹಾಗೂ ಸಹಕಾರ ಮನೋಭಾವನೆಯನ್ನು ನೋಡಿ ಮಾನವನು ತಲೆ ತಗ್ಗಿಸುವ ಕಾಲ ಬಂದಿದೆ. ಸಾಮಾನ್ಯ ಜೀವಿಗಳೇ ಒಗ್ಗಟ್ಟಿನ ಮಾದರಿ ಜೀವನವನ್ನು ಸಾಗಿಸುತ್ತಿರುವಾಗ ಜ್ಞಾನದ ಮೇಲ್ಮೆಯಲ್ಲಿ ಮನುಷ್ಯ ಇಂದು ಪರಸ್ಪರ ತಿಳಿವು, ಸ್ನೇಹ ಸಹಕಾರ ಇತ್ಯಾದಿಗಳಿಲ್ಲದೆ ತೊಳಲಾಡುವುದು ತೀರ ಶೋಚನೀಯವಾಗಿದೆ. ಇಂತಹ ಸಂದಿಗ್ಧ ಪರಿಸರದ ಕಾಲದಲ್ಲಿಯಾದರೂ ನಾವು ಪ್ರಕೃತಿಯ ನಿಯಮದ ಕಡೆಗೆ, ಅದರ ಜೀವ ವೈವಿಧ್ಯತೆಯ ಕಡೆಗೆ ದೃಷ್ಟಿ ಹರಿಸಿ, ಅವುಗಳಿಂದ ನಮ್ಮ ಜೀವನದಲ್ಲಿ ಒಂದಿಷ್ಟು ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡರೆ ನಮ್ಮ ಬದುಕು ಅದೆಷ್ಟು ಸುಂದರವಾಗುವುದೋ!!

ಲೇಖಕರು: ಡಾ. ಮಧುರಿಮಾ ವಿನೋದ

ಕೃಷಿ ಕೀಟಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಧಾರವಾಡ – 580 005

LEAVE A REPLY

Please enter your comment!
Please enter your name here