ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ತೆಂಗುಗಳಿಗೆ ಕೀಟಭಾದೆ ಜಾಸ್ತಿಯಾಗುತ್ತಿದೆ. ಈ ಸಂಬಂಧ ಕ್ರಮವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರಿಂದು ಮೈಸೂರು ಜಿಪಂನಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ರೈತರಿಗೆ ಅನಾನುಕೂಲ ಆಗದಂತೆ ಕೆಲಸ ಮಾಡಿ. ತಕ್ಷಣವೇ ರೈತರನ್ನು ಕರೆದು ರೋಗ ಪರಿಹಾರಕ್ಕೆ ಕ್ರಮವಹಿಸಬೇಕು. ವಿಜ್ಞಾನಿಗಳ ಜೊತೆ ಚರ್ಚಿಸಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು. ತೆಂಗಿಗೆ ಯಾವುದೇ ತೊಂದರೆಯಾಗದಂತೆ ತೋಟಗಾರಿಕೆ ಇಲಾಖೆಯವರು ಕ್ರಮವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮೈಸೂರು ಜಿಲ್ಲೆಯಲ್ಲಿ 88 ಸಾವಿರ ಹೆಕ್ಟರ್ ತೋಟಗಾರಿಕೆ ಪ್ರದೇಶವಿದೆ. ಪ್ರತಿ ವರ್ಷ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಬಂದ ನಂತರ ಮೂರು ಸಾವಿರ ಎಕರೆ ಪ್ರದೇಶ ಹೆಚ್ಚಾಗುತ್ತಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಮಾಹಿತಿ ನೀಡಿದರು.
ತೋಟಗಾರಿಕೆ ಬೆಳೆಗಳಿಗೆ ರೋಗ ತಡೆಗಟ್ಟುವ ಸಂಬಂಧ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು. ಹುಳಗಳ ಉಪಟಳ ಕಡಿಮೆ ಮಾಡಲು ಪರೋಪಜೀವಿ ಬಿಡಲಾಗುತ್ತಿದೆ. ಔಷಧಿಗಳನ್ನು ಬೇರುಗಳ ಮೂಲಕ ಉಪಚರಿಸಲಾಗುತ್ತಿದೆ ಎಂದು ಅಧಿಕಾರಿ ವಿವರಣೆ ನೀಡಿದರು.