ಜಾನುವಾರು ಚರ್ಮ ಗಂಟುರೋಗ ಲಕ್ಷಣ, ಚಿಕಿತ್ಸೆ

0
ಡಾ. ಯುವರಾಜ ಹೆಗಡೆ, ಪಶುವೈದ್ಯರು, ತೀರ್ಥಹಳ್ಳಿ

ಗಂಟು ರೋಗವು ಜಾನುವಾರುಗಳಲ್ಲಿ ವೈರಸ್ ನಿಂದ ಭಾದಿಸುವ  ಖಾಯಿಲೆಯಾಗಿದ್ದು,    ಮೇಕೆ ಮತ್ತು ಕುರಿ ಸಿಡುಬಿನ ಹತ್ತಿರದ ಸಂಬಂಧಿಯಾಗಿರುತ್ತದೆ. ರೋಗಗ್ರಸ್ಥ ಜಾನುವಾರುಗಳಲ್ಲಿ  ಮೈಮೇಲೆ  ಗಂಟು/ಗುಳ್ಳೆಗಳು(lumps) ಕಾಣುವ ಕಾರಣ ಇವನ್ನು ಚರ್ಮಗಂಟು ರೋಗ / Lumpy skin disease ಎಂದು ಕರೆಯುತ್ತಾರೆ.

ಇದೊಂದು ಕೀಟಗಳಿಂದ ಹರಡುವ ಖಾಯಿಲೆಯಾಗಿದ್ದು ಜಾನುವಾರುಗಳನ್ನು ಬಾದಿಸುವ ಹೊರ ಪರಾವಲಂಬಿಗಳಾದ ನುಸಿ, ಸೊಳ್ಳೆ, ಉಣ್ಣೆಗಳ ಕೆಲ ಪ್ರಭೇದಗಳು ಸೋಂಕನ್ನು  ರೋಗಗ್ರಸ್ಥ ಜಾನುವಾರುಗಳಿಂದ  ಆರೋಗ್ಯಕರ ರಾಸುಗಳಿಗೆ ಹರಡುವುದು ಈಗಾಗಲೇ ಸಂಶೋಧನೆಯಲ್ಲಿ ದೃಢಪಟ್ಟಿರುತ್ತದೆ. ಕಲುಷಿತ ಆಹಾರ ಮತ್ತು ನೀರಿನ ಮುಖಾಂತರ ಕೂಡ ರೋಗ ಪ್ರಸಾರವಾಗುವ  ಸಾಧ್ಯತೆ ಇರುತ್ತದೆ.

ಈ ರೋಗವು ಮೊದಲು ಆಫ್ರೀಕಾದ ದೇಶಗಳಲ್ಲಿ  ಕಂಡುಬಂದು ನಂತರ ರಷ್ಯಾ, ಯೂರೋಪಿನ ಭಾಗಗಳಲ್ಲಿ ಗೋಚರಿಸಿ ,  ಇತ್ತೀಚಿಗೆ ಎರಡು  ವರ್ಷಗಳಲ್ಲಿ ಭಾರತ ಸೇರಿದಂತೆ ಏಷ್ಯಾವನ್ನು ವ್ಯಾಪಿಸಿತು .

ಮೊದಲ ಭಾರಿಗೆ  ಜಾನುವಾರುಗಳಲ್ಲಿ  ರೋಗ ಲಕ್ಷಣಗಳು ಕಂಡುಬಂದು , ಮೈಮೇಲೆ ಅತಿಯಾದ ಗುಳ್ಳೆಗಳನ್ನು ಕಂಡು ಹೌಹಾರುವ ರೈತರು ತಮ್ಮ ಜಾನುವಾರುಗಳಿಗೆ ಹೆಜ್ಜೇನು ದಾಳಿಮಾಡಿದೆಯೆಂದು, ಇನ್ನು ಕೆಲವರು ಲಸಿಕೆ ಅಥವಾ ಔಷಧಿಯ ಅಡ್ಡ ಪರಿಣಾಮದಿಂದ  ಆಗಿದೆಯೆಂದೂ ಮತ್ತೂ ಕೆಲವರು ತಮ್ಮ ಹಸುಗಳಿಗೆ ಆಹಾರದ ಅಲರ್ಜಿ, ಕಂಬಳಿ ಹುಳಗಳು ತಿಂದಿರುವ ಕಾರಣ ಈ ರೀತಿ ಬಕ್ಕೆಗಳು ಎದ್ದಿವೆಯೆಂದು,  ದೆವ್ವ ಬೂತಗಳ ತೊಂದರೆಯಾಗಿದೆಯೆಂದೂ ಭಾವಿಸಿ ಗಾಬರಿಗೊಳಗಾಗುವುದು ಸಾಮಾನ್ಯ.

ರೋಗ ಲಕ್ಷಣಗಳು:

1)ಮೊದಲಿಗೆ ಅತಿಯಾದ ಜ್ವರ ಭಾದಿಸುವುದು.

2) ನಂತರ ಶರೀರದಲ್ಲಿ ಅಲ್ಲಲ್ಲಿ ಸಿಡುಬಿನಂತಹ ಗುಳ್ಳೆಗಳು / ಗಂಟುಗಳು ಎದ್ದು ಒಡೆಯುವುದು .

3) ಗುಳ್ಳೆಗಳು ಒಡೆದ ಜಾಗದಲ್ಲಿ ಗುಳಿಗಳು / ಗಂತಿಗಳು (ಚಿತ್ರ ಗಮನಿಸಿ) ಕಂಡುಬರುವುದು.

4) ಕೀಲುಗಳಲ್ಲಿ ಊತ ಮತ್ತು ಕುಂಟು  ಹಾಕುವುದು.

5) ಕಾಲುಗಳಲ್ಲಿ ಊತ, ಚರ್ಮ ಸುಲಿಯುವುದು.

6) ದುಗ್ಧ  ಗ್ರಂಥಿಗಳಲ್ಲಿ ಊತ, ಅದರಲ್ಲೂ ಮುಖ್ಯವಾಗಿ ಪಕ್ಕೆಲುಬುಗಳ ಮುಂದಿರುವ ಗ್ರಂಥಿಗಳಲ್ಲಿ ಅತಿಯಾದ ಊತ ಕಂಡು ಬರುತ್ತದೆ.

7) ಹಲವಾರು ದಿನಗಳವರೆಗೆ ವಾಸಿಯಾಗದ ಬಿಲ್ಲೆಯಾಕಾರದ ಗಾಯಗಳು.

ಕೆಲವೊಮ್ಮೆ ಕೆಚ್ಚಲ ಮೇಲೆ ಏಳುವ ಗುಳ್ಳೆಗಳು ಒಡೆಯುವುದರಿಂದ ನಂತರದ ದಿನಗಳಲ್ಲಿ ಬ್ಯಾಕ್ಟೀರಿಯ ಸೋಂಕಿಗೆ ಒಳಗಾಗಿ ಕೆಚ್ಚಲು ಬಾವಿಗೆ  ತಿರುಗುವ ಸಾಧ್ಯತೆ

9) ಗರ್ಭಪಾತ  ಮತ್ತು ಬೆದೆಯ ಪುನರಾವರ್ತನೆ ಸಮಸ್ಯೆ.

10)  ಹೋರಿಗಳಲ್ಲಿ ವೀರ್ಯದ ಉತ್ಪಾದನೆ ಮತ್ತು ಗುಣಮಟ್ಟ  ಕಡಿಮೆಯಾಗುವುದು.

11) ಎದೆ ಗುಂಡಿಗೆಯಲ್ಲಿ ಊತ, ನೀರು ತುಂಬಿದಂತಾಗುವುದು.

12) ಹೊಟ್ಟೆಯ ಅಡಿಭಾಗದಲ್ಲಿ ಊತ ಕಂಡುಬರುವುದು.

13) ಕಣ್ಣು, ಮೂಗಿನಲ್ಲಿ ನೀರು ಸುರಿಸುವುದು.

14) ಅಪರೂಪಕ್ಕೆ ಕೆಲವು ರಾಸುಗಳಲ್ಲಿ  ಕಣ್ಣಿನ ಅಪಾರದರ್ಶಕತೆ ( opacity) ಮತ್ತು ದೃಷ್ಟಿ ಕಡಿಮೆಯಾಗುವುದು.

15) ಕೆಲವು ಜಾನುವಾರುಗಳಲ್ಲಿ ಉಸಿರಾಟದ ಸಮಸ್ಯೆ,ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಳ್ಳುವುದು.

16 2% ಜಾನುವಾರುಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಲೂಬಹುದು

 ಈ ಎಲ್ಲಾ ರೋಗಲಕ್ಷಣಗಳು ಒಂದೇ ಜಾನುವಾರಿನಲ್ಲಿ ಏಕಕಾಲಕ್ಕೆ ಕಂಡುಬರದಿದ್ದರೂ ಒಂದು ಅಥವಾ ಎರಡು ಲಕ್ಷಣಗಳನ್ನು ಮಾತ್ರ ಕಾಣಬಹುದಾಗಿರುತ್ತದೆ.

ನಿಯಂತ್ರಣ:

1) ರೋಗವು ಹೊರಪರಾವಲಂಬಿ ಜೀವಿಗಳಿಂದ ಹರಡುವುದರಿಂದ ಅವುಗಳನ್ನು ನಿಯಂತ್ರಣ ಮಾಡುವುದೇ ಸೂಕ್ತ ಪರಿಹಾರೋಪಾಯವಾಗಿದೆ. ಅದರಲ್ಲೂ ಮುಖ್ಯವಾಗಿ  ಸೊಳ್ಳೆ, ನುಸಿಗಳು ಬಾರದಂತೆ ಕೊಟ್ಟಿಗೆಯನ್ನು ಸೊಳ್ಳೆ ಪರದೆಯಿಂದ ಸುತ್ತುವರೆಸಿ ಜಾನುವಾರುಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಪ್ರಥಮ ಆದ್ಯತೆ ನೀಡಬೇಕಿದೆ.

2) ರೋಗಗ್ರಸ್ಥ ಜಾನುವಾರುಗಳನ್ನು ಬೇರ್ಪಡಿಸಿ, ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಬೇಕು.

3) ದನದ ಕೊಟ್ಟಿಗೆಯನ್ನು ಅಂಟು ಜಾಡ್ಯ ನಿವಾರಕಗಳಾದ 2% ಸೋಡಿಯಂ ಹೈಪೋಕ್ಲೋರೈಡ್, 2% ಫೀನೈಲ್,   1% ಪಾರ್ಮಲಿನ್ ನಂತಹ ದ್ರಾವಣಗಳನ್ನು ಉಪಯೋಗಿಸಿ ಸ್ವಚ್ಚಗೊಳಿಸಬೇಕು.

4) ಸೋಂಕಿನಿಂದ ಮರಣ ಹೊಂದಿದ ಜಾನುವಾರುಗಳನ್ನು ಆಳವಾದ ಗುಂಡಿಗಳಲ್ಲಿ ಹೂಳಬೇಕು.

5) ಕೀಟಗಳನ್ನು ದೂರವಿಡಲು ಕೀಟನಿರೋದಕಗಳನ್ನು ಬಳಸಬಹುದು.

6) ಲಸಿಕೆ – ಸೋಂಕು ಒಂದು ಪ್ರದೇಶದಲ್ಲಿ ಇರುವುದು ಪಶುವೈದ್ಯರಿಂದ ಪ್ರಯೋಗಾಲಯದಲ್ಲಿ ದೃಢಪಟ್ಟ ನಂತರ , ಈ ವೈರಸ್ ನ ಹತ್ತಿರದ ಸಂಬಂದಿಯಾದ ಮೇಕೆ ಸಿಡುಬಿನ ಲಸಿಕೆಯನ್ನು ಜಾನುವಾರುಗಳಿಗೆ ನೀಡಲಾಗುತ್ತಿದೆ. ಆರೋಗ್ಯಕರ ಜಾನುವಾರುಗಳಿಗೆ ಈ ಲಸಿಕೆಯನ್ನು ನೀಡುವುದರಿಂದ ತಕ್ಕಮಟ್ಟಿನ ಯಶಸ್ಸು ಕಾಣಬಹುದಾಗಿದೆ.

  ಚಿಕಿತ್ಸೆ:

ಸಾಮಾನ್ಯವಾಗಿ ವೈರಸ್ ಗಳಿಂದ ಬರುವ ಖಾಯಿಲೆಗಳಿಗೆ ನಿರ್ದಿಷ್ಟ ಚಿಕಿತ್ಸೆಗಳು ಲಭ್ಯವಿರುವುದಿಲ್ಲ. ರೋಗದ ಗುಣಲಕ್ಷಣಗಳನ್ನು ಆದರಿಸಿ ಮೈಮೇಲಿನ  ಗಂಟುಗಳು  ಒಡೆದು ಗಾಯಗಳು ನಂಜಾಗದಂತೆ ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು.

ಗಾಯಗಳನ್ನು ಸೋಂಕು ನಿವಾರಕ ದ್ರಾವಣಗಳಿಂದ ಶುಚಿಗೊಳಿಸಿ ಐಯೋಡಿನ್/ ಆಂಟಿಬಯೋಟಿಕ್  ಮುಲಾಮು  ಲೇಪಿಸಿ ,  ಹುಳುಗಳಾಗದಂತೆ ಎಚ್ಚರವಹಿಸಬೇಕು.

ರೋಗನಿರೋದಕ ಶಕ್ತಿಯನ್ನು  ಬಲಗೊಳಿಸಲು ಉತ್ತಮ ಸಮತೋಲನ ಪಶುಆಹಾರ, ಹಸಿಮೇವು,  ಖನಿಜ ಮಿಶ್ರಣಗಳನ್ನು ನೀಡಿ ಶಾರೀರಿಕ ಸದೃಢತೆಯನ್ನು ಕಾಪಾಡುವುದು ಅತೀ ಮುಖ್ಯವಾಗಿದೆ.  ಸಾಮಾನ್ಯವಾಗಿ ಚಿಕಿತ್ಸೆಗೆ ಒಳಪಟ್ಟ ಹೆಚ್ಚಿನ ರಾಸುಗಳು 5 ರಿಂದ 10 ದಿನಗಳಲ್ಲಿ ಗುಣಮುಖವಾಗುತ್ತವೆ.

ಮನೆಮದ್ದು:

ಜಾನುವಾರುಗಳ ಇಡೀ ದೇಹದಲ್ಲಿ ಗಂಟುಗಳು  ಎದ್ದು ಒಡೆಯುವುದರಿಂದ ಗಾಯಗಳು ಬೇಗನೆ ಗುಣವಾಗುವಂತಹ ಮತ್ತು  ನೊಣಗಳಿಂದ ಗಾಯಗಳನ್ನು ರಕ್ಷಿಸಿಕೊಳ್ಳಲು ತಮ್ಮ ಅನುಭವದಲ್ಲಿ ಇರುವ ಮನೆಮದ್ದುಗಳನ್ನು ಉಪಯೋಗಿಸಬಹುದು. ಉದಾಹರಣೆಯಾಗಿ

ಮಿಶ್ರಣ (1)

 ತುಳಸಿ 100 ಗ್ರಾಂ

ಅರಿಶಿಣ 50 ಗ್ರಾಂ

ಬೆಳ್ಳುಳ್ಳಿ 100 ಗ್ರಾಂ

ಕಹಿಬೇವು 100 ಗ್ರಾಂ

ಮಿಶ್ರಣ (2)

ಅರಿಶಿಣ 20 ಗ್ರಾಂ

ಮೆಹಂದಿ ಸೊಪ್ಪು 1 ಮುಷ್ಠಿ

ಕಹಿ ಬೇವಿನ ಸೊಪ್ಪು 1 ಮುಷ್ಠಿ

ತುಳಸಿ 1 ಮುಷ್ಠಿ

ಬೆಳ್ಳುಳ್ಳಿ 10 ಎಸಳು

 ಮೇಲೆ ತಿಳಿಸಿದ ಮಿಶ್ರಣ (1) ನ್ನು  ಅರೆದು ಅರ್ದಲೀಟರ್ ಬೇವಿನ ಎಣ್ಣೆಯಲ್ಲಿ ಕುದಿಸಿ  ಅಥವಾ  ಮಿಶ್ರಣ (2) ನ್ನು ಎಳ್ಳೆಣ್ಣೆ / ಕೊಬ್ಬರಿ ಎಣ್ಣೆಯಲ್ಲಿ   ಕುದಿಸಿ ಪ್ರತಿದಿನವೂ ಗಾಯಗಳಿಗೆ ಹಚ್ಚುವುದರಿಂದ ಗಾಯ ಬೇಗನೆ ಗುಣವಾಗವುದಲ್ಲದೆ , ನೊಣಗಳಿಂದಲೂ ರಕ್ಷಸಿಕೊಳ್ಳಬಹುದಾಗಿದೆ.

ಗಮನಿಸಿ:

1) ಇದು ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡುಬಂದ ರೋಗವಾದ ಕಾರಣ ಪಶುಪಾಲಕರು ಒಮ್ಮೆಲೇ ಗಾಬರಿ ಬೀಳುವುದು ಸರ್ವೇಸಾಮಾನ್ಯ. ಆದರೆ ಪಶುವೈದ್ಯರಿಂದ ಸೂಕ್ತ ಚಿಕಿತ್ಸೆಗೆ ಒಳಪಡಿಸಿದಾಗ ಸಾಮಾನ್ಯವಾಗಿ ವಾರ – ಹತ್ತು  ದಿನದೊಳಗೆ ಹತೋಟಿಗೆ ಬರುವ ಸಾಧ್ಯತೆ ಇರುತ್ತದೆ.

2)  ಒಮ್ಮೆ ರೋಗದಿಂದ ಗುಣಮುಖವಾದ ರಾಸುಗಳಿಗೆ ಮತ್ತೆ ಈ ರೋಗವು ಎಂದಿಗೂ ಮರುಕಳಿಸುವುದಿಲ್ಲ.

3) ಹಾಲನ್ನು ಕಾಯಿಸಿ ಕುಡಿಯುವುದರಿಂದ ಯಾವ ಅಪಾಯವೂ ಇರುವುದಿಲ್ಲ.

4) ಚಿಕ್ಕ ಕರುಗಳು ಮತ್ತು ವಯಸ್ಸಾದ ಜಾನುವಾರುಗಳಲ್ಲಿ ತೀವೃಸ್ವರೂಪದ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುವ ಕಾರಣ ಅವುಗಳಿಗೆ ವಿಶೇಷ ಕಾಳಜಿ ವಹಿಸಬೇಕು.

5) ಗರ್ಭ ಧರಿಸಿದ ಜಾನುವಾರುಗಳಿಗೆ ಸೋಂಕು ಕಂಡುಬಂದಲ್ಲಿ ಚುಚ್ಚುಮದ್ದು ನೀಡಿದರೆ ಗರ್ಭಪಾತವಾಗುವುದೆಂಬ ತಪ್ಪು ಕಲ್ಪನೆ ಬದಿಗಿಟ್ಟು ಅವುಗಳಿಗೆ ವಿಶೇಷ ಕಾಳಜಿ ವಹಿಸಿ  ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ದೊರಕಿಸುವುದು ಅತಿಮುಖ್ಯವಾಗಿರುತ್ತದೆ.

6) ಈ ಸೋಂಕು ಮನುಷ್ಯನಿಗೆ ವ್ಯಾಪಿಸುವ ಬಗ್ಗೆ ನಂಬಬಹುದಾದ ವೈಜ್ಞಾನಿಕ ಪುರಾವೆಗಳು ಇರುವುದಿಲ್ಲವಾದುದರಿಂದ ಭಯ ಪಡುವ ಅವಶ್ಯಕತೆ ಇರುವುದಿಲ್ಲ ಹಾಗೂ ಭಾರತದಲ್ಲಿ ಮನುಷ್ಯರಿಗೆ ಸೋಂಕು ತಗುಲಿದ ದೃಢಪಟ್ಟ  ವರದಿ  ಲಭ್ಯವಿರುವುದಿಲ್ಲ.

7) ಎಂದಿನಂತೆ ಕೊಟ್ಟಿಗೆಯ ಕೆಲಸ ಮುಗಿದ ನಂತರ ಸೋಂಕು ನಿವಾರಕ ಸಾಬೂನುಗಳಿಂದ ಸ್ವಚ್ಚಗೊಳಿಸಿಕೊಂಡು ತಮ್ಮ ದೈನಂದಿನ ಚಟುವಟಿಕೆಗಳನ್ನು  ಮುಂದುವರೆಸಬಹುದು.

ಲೇಖನದಲ್ಲಿಯ ಫೋಟೋ ಮತ್ತು ಕೆಲವು ಮಾಹಿತಿಗಳನ್ನು ನನ್ನ ಪಶುವೈದ್ಯ ಮಿತ್ರರಿಂದ ಪಡೆದಿರುತ್ತೇನೆ. ಲೇಖನ ಪೂರ್ಣಗೊಳಿಸಲು ಸಹಕರಿಸಿದ ಸರ್ವರಿಗೂ ಧನ್ಯವಾದಗಳು)

LEAVE A REPLY

Please enter your comment!
Please enter your name here