ಸಮಗ್ರ ಪೋಷಕಾಂಶ ನಿರ್ವಹಣೆ ಸರ್ಟಿಫಿಕೇಟ್ ಕೋರ್ಸ್ ಆರಂಭ

0

ಬೆಂಗಳೂರು: ಡಿಸೆಂಬರ್  19:  ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಸಿಬ್ಬಂದಿ ತರಬೇತಿ ಘಟಕ, ವಿಸ್ತರಣಾ ನಿರ್ದೇಶನಾಲಯ, ಮ್ಯಾನೇಜ್, ಹೈದರಾಬಾದ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ನಿಯಮಿತ, ತುಮಕೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ, ತುಮಕೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ರಸಗೊಬ್ಬರ ಸಗಟು/ಚಿಲ್ಲರೆ ಮಾರಾಟಗಾರರಿಗೆ 15 ದಿನಗಳ “ಸಮಗ್ರ ಪೋಷಕಾಂಶಗಳ ನಿರ್ವಹಣೆ-ಸರ್ಟಿಫಿಕೇಟ್ ಕೋರ್ಸ್”ಚಾಲನೆ  ಸಮಾರಂಭ ಇಂದು ಆಯೋಜಿತವಾಗಿತ್ತು,

ಕೃವಿವಿ, ಜಿಕೆವಿಕೆ, ಬೆಂಗಳೂರಿನಲ್ಲಿ ಜರುಗಿದ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದ ಡಾ. ಎಸ್.ವಿ. ಸುರೇಶ, ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಜೀವ ಸಂಕುಲನವು ಮಣ್ಣನ್ನು ಆಧರಿಸಿದೆ, ಎಲ್ಲ ಜೀವರಾಶಿಗಳಿಗೂ ಸಹ ಮಣ್ಣು ಅವಶ್ಯಕವಾಗಿರುತ್ತದೆ. ನಮ್ಮ ಎಲ್ಲ ಅಗತ್ಯಗಳಿಗೆ ಮಣ್ಣು ಮೂಲ ಅಧಾರ ಎಂದರು.

ನಾವು ಮಣ್ಣಿನ ಬಗ್ಗೆ ಕಾಳಜಿ ವಹಿಸಬೇಕು. ನಾವು ಸೇವಿಸುವ ಆಹಾರ, ತೊಡುವ ಬಟ್ಟೆ, ವಾಸಿಸುವ ಮನೆ, ಎಲ್ಲಾದಕ್ಕು ಮಣ್ಣೇ ಆಧಾರ. ನಮ್ಮ ಪೂರ್ವಜರು ಮಣ್ಣನ್ನು ಅತೀ ಶ್ರೇಷ್ಠ ಮತ್ತು ಪವಿತ್ರ ಎಂದು ಪರಿಗಣಿಸಿದ್ದರು. ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ನಾನಾ ಮಾಲಿನ್ಯಕಾರಕಗಳಿಂದ ಮಣ್ಣು ಕಲುಷಿತಗೊಳ್ಳುತ್ತಿದೆ. ಮಣ್ಣಿನ ಸವಕಳಿ ಹೆಚ್ಚುತ್ತಿದ್ದು ಬೆಳೆಗಳಿಗೆ ಪೋಷಕಾಂಶಗಳ ದೊರೆಯುವಿಕೆಯ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ವಿವರಿಸಿದರು.

ಮಣ್ಣಿನ ಗುಣಮಟ್ಟದಲ್ಲಿ ವ್ಯತ್ಯಯವಾದಲ್ಲಿ ಆಹಾರ, ನೀರು, ಗಾಳಿ ಸೇರಿದಂತೆ ಇಡೀ ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಕೃಷಿ ಪರಿಕರ ಉದ್ದಿಮೆದಾರರು ವ್ಯಾಪಾರದ ಜೊತೆಗೆ ಮಾನವ ಗುಣಧರ್ಮಗಳನ್ನು ಸಹ ರೂಡಿಸಿಕೊಳ್ಳಬೇಕು. ಕೇವಲ ಸರ್ಟಿಫಿಕೇಟನ್ನು ಪಡೆಯುವುದೇ ಮೂಲ ಉದ್ದೇಶವಾಗದೇ ರೈತರ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದು ಮೂಲ ಉದ್ದೇಶವಾಗಬೇಕು ಎಂದವರು ತಿಳಿಸಿದರು.

 ವ್ಯಾಪಾರ ವೃದ್ಧಿಸಿಕೊಳ್ಳುವ ಜೊತೆಗೆ ಕಲಿತಂತ ಜ್ಞಾನವನ್ನು ರೈತರಿಗೆ ತಲುಪಿಸುವುದು ಸಹ ಅವಶ್ಯಕವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಕೆ. ನಾರಾಯಣಗೌಡ, ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು ರವರು ಶಿಫಾರಸ್ಸಿನ ಆಧಾರದ ಮೇಲೆ ರಸಗೊಬ್ಬರಗಳನ್ನು ಬೆಳೆಗೆ ಒದಗಿಸಿದರೆ ವಿದೇಶಿ ವಿನಿಮಯ, ರೈತರಿಗೆ ಹಣದ ಉಳಿತಾಯ ಮತ್ತು ಪರಿಸರ ಸಂರಕ್ಷಣೆಯಾಗುತ್ತದೆ. ರಸಗೊಬ್ಬರ ಸಗಟು/ಚಿಲ್ಲರೆ ಮಾರಾಟಗಾರರಿಗೆ ವಿವಿಧ ರಸಗೊಬ್ಬರಗಳು, ಸಾವಯವ ಗೊಬ್ಬರಗಳು ಮತ್ತು ಜೈವಿಕ ಗೊಬ್ಬರಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಕೃಷಿ ವಿಶ್ವವಿದ್ಯಾನಿಲಯದ ಪರಿಣಿತರಿಂದ ಪಡೆಯಲು ಈ ತರಬೇತಿಯು ಸಹಕಾರಿಯಾಗುತ್ತದೆ ಎಂದು ವಿವರಿಸಿದರು.

 ಇವೆಲ್ಲದರಿಂದ ವ್ಯಾಪಾರ ವೃದ್ಧಿಯ ಜೊತೆಗೆ ಕೃಷಿ ತಂತ್ರಜ್ಞಾನಗಳ ವರ್ಗಾವಣೆಗೆ ಸಹಕಾರಿಯಾಗುತ್ತದೆ ಸ್ಥಳೀಯ ಮಟ್ಟದಲ್ಲಿ ರೈತರಿಗೆ ಸದಾ ಕಾಲ ಸಿಗುವ ಕೃಷಿ ಪರಿಕರಗಳ ಮಾರಾಟಗಾರರು ಹೊಸ ತಂತ್ರಜ್ಞಾನ, ಪರಿಕರಗಳು ಮತ್ತು ಅಗತ್ಯ ಸೇವೆಗಳನ್ನು ರೈತರಿಗೆ ಸಕಾಲದಲ್ಲಿ ತಲುಪಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಕುರಿತ ಪ್ರಸ್ತಾವಿಕ ನುಡಿಯಲ್ಲಿ ಡಾ: ಕೆ. ಶಿವರಾಮು, ತರಬೇತಿ ಸಂಯೋಜಕರು ಮತ್ತು ಹಿರಿಯ ವಾರ್ತಾತಜ್ಞರು, ಸಿಬ್ಬಂದಿ ತರಬೇತಿ ಘಟಕ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರವರು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ತನ್ನ ಸಂಶೋಧನೆಗಳನ್ನು ರೈತರಿಗೆ ಶೀಘ್ರವಾಗಿ ತಲುಪಿಸಲು ನಿರಂತರವಾಗಿ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಕೌಶಲ್ಯಭರಿತ ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.

ಈ ಪ್ರಸರಣಾ ವೇಗವನ್ನು ಮತ್ತಷ್ಟು ಹೆಚ್ಚಿಸಲು, ರೈತರ ಮನೆಬಾಗಿಲಿಗೆ ತಲುಪಿಸಲು ರಸಗೊಬ್ಬರ ಸಗಟು/ಚಿಲ್ಲರೆ ಮಾರಾಟಗಾರರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಸಗೊಬ್ಬರ ಮಾರಾಟಗಾರರಿಗೆ ಕೃಷಿಯಲ್ಲಿ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ನೀಡಿದರೆ ಸ್ಥಳೀಯ ಮಟ್ಟದಲ್ಲಿ ರೈತರಿಗೆ ಸದಾಕಾಲ ಸಿಗುವ ಇವರು ಕೃಷಿ ಪರಿಕರಗಳ ಮಾರಾಟದ ಜೊತೆಗೆ ಮಾಹಿತಿಯನ್ನು ನೀಡಿದರೆ ರಸಗೊಬ್ಬರಗಳನ್ನು ಶಿಫಾರಸ್ಸು ಮಾಡಿದಂತೆ ಮಾರಾಟ ಮಾಡಲು ಸಹಕಾರಿಯಾಗುತ್ತದೆ ಎಂದು ವಿವರಿಸಿದರು.

ಕೃಷಿ ವಿಶ್ವವಿದ್ಯಾನಿಲಯಗಳ ತಂತ್ರಜ್ಞಾನ ವರ್ಗಾವಣೆಯಲ್ಲಿ ರಾಯಭಾರಿಗಳಾಗಿ ಕಾರ್ಯನಿರ್ವಹಿಸಿ ಸರ್ವತೋಮುಖ ಕೃಷಿ ಅಭಿವೃದ್ಧಿಗೆ ನಾಂದಿಯಾಗಬಲ್ಲರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ತರಬೇತಿ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ: ಬಿ. ಕಲ್ಪನ, ರಾಜ್ಯ ನೋಡಲ್ ಅಧಿಕಾರಿ (ದೇಸಿ), ಮತ್ತು ಡಾ. ಆರ್. ನಾರಾಯಣರೆಡ್ಡಿ, ಪ್ರಾಧ್ಯಾಪಕರು, ಸಿಬ್ಬಂದಿ ತರಬೇತಿ ಘಟಕ ರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ, ತುಮಕೂರಿನ 29 ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here