ಕೇಂದ್ರ ಸರ್ಕಾರದ ಆದೇಶದಂತೆ ಕೃಷಿ ಪರಿಕರ ಉದ್ದಿಮೆದಾರರು ಲೈಸನ್ಸ್ ಪಡೆಯಲು ಕೃಷಿ ಸಂಬಂಧಿಸಿದ ವಿಷಯಗಳಲ್ಲಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳಲ್ಲಿ ತೇರ್ಗಡೆ ಹೊಂದಿರುವುದು ಅನಿವಾರ್ಯ. ಇದರಿಂದ ಕೃಷಿ ಪರಿಕರಗಳ ಉದ್ಧಿಮೆದಾರರಿಗೆ ವೈಜ್ಞಾನಿಕ ಕೃಷಿ ಬಗ್ಗೆ ಜ್ಞಾನಾರ್ಜನೆಯಾಗುತ್ತದೆ. ಸರಿಯಾದ ರಸಗೊಬ್ಬರ , ಔಷಧವನ್ನು ಸರಿಯಾದ ಪ್ರಮಾಣದಲ್ಲಿ ವಿತರಿಸಲು ಅನುಕೂಲ ಎಂದು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ವಿಸ್ತರಣಾ ನಿರ್ದೇಶಕ ಡಾ. ದೇವಕುಮಾರ್ ಹೇಳಿದರು.
ಅವರಿಂದು ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ( ಜಿಕೆವಿಕೆ) ಆವರಣದಲ್ಲಿ ಜರುಗಿದ ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕೃಷಿ ಒಳಸುರಿಗಳನ್ನು ಸೂಕ್ತ ಪ್ರಮಾಣದಲ್ಲಿ ನೀಡಿದಾಗ ಹಣದ ಉಳಿತಾಯವಾಗುವುದರ ಜೊತೆಗೆ ರಾಸಾಯನಿಕಗಳ ವ್ಯರ್ಥ ಬಳಕೆಯನ್ನು ಕಡಿತಗೊಳಿಸಬಹುದು.ಕೃಷಿ ಪರಿಕರಗಳ ಉದ್ದಿಮೆದಾರರ ವ್ಯಾಪಾರ ವೃದ್ಧಿಯಾಗುವುದರ ಜೊತೆಗೆ ಕೃಷಿ ತಂತ್ರಜ್ಞಾನಗಳ ವರ್ಗಾವಣೆಗೆ ಸಹಕಾರಿಯಾಗುತ್ತದೆ. ಸ್ಥಳೀಯ ಮಟ್ಟದಲ್ಲಿ ರೈತರಿಗೆ ಸದಾ ಕಾಲ ಸಿಗುವ ಕೃಷಿ ಪರಿಕರಗಳ ಮಾರಾಟಗಾರರು ಹೊಸ ತಂತ್ರಜ್ಞಾನ, ಪರಿಕರಗಳು ಮತ್ತು ಅಗತ್ಯ ಸೇವೆಗಳನ್ನು ರೈತರಿಗೆ ಸಕಾಲದಲ್ಲಿ ತಲುಪಿಸಿ ಕೃಷಿ ಏಳಿಗೆಗೆ ಶ್ರಮಿಸಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಕೋರ್ಸಿಗೆ ಚಾಲನೆ ನೀಡಿ ಮಾತನಾಡಿದ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ಶಿಕ್ಷಣ ನಿರ್ದೇಶಕ ಡಾ. ಕೆ. ಸಿ. ನಾರಾಯಣಸ್ವಾಮಿ ಮಣ್ಣು ರೈತರ ಕಣ್ಣು, ರೈತರ ಅಳಿವು ಉಳಿವು ಮಣ್ಣಿನ ಫಲವತ್ತತೆಯ ಮೇಲೆ ಅವಲಂಬಿತ. ಇದರಿಂದ ಸಮಗ್ರ ಪೋಷಕಾಂಶ ನಿರ್ವಹಣೆ ಅನಿವಾರ್ಯ. ಕೃಷಿಕರು ತಮ್ಮ ದೇಹದ ರಕ್ತ ಪರೀಕ್ಷೆ ಮಾಡಿಸಿದಂತೆ ಮಣ್ಣು ಪರೀಕ್ಷೆಯನ್ನು ಸಹ ಮಾಡಿಸುವುದು ಅತ್ಯವಶ್ಯಕ. ಇದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳ ಮಟ್ಟ ತಿಳಿಯುತ್ತದೆ. ಮಣ್ಣು ಪರೀಕ್ಷೆ ಆಧಾರದ ಮೇಲೆ ಗೊಬ್ಬರಗಳನ್ನು ಬೆಳೆಗೆ ಒದಗಿಸಿದರೆ ಹಣದ ಉಳಿತಾಯ ಮತ್ತು ಪರಿಸರ ಸಂರಕ್ಷಣೆಯಾಗುತ್ತದೆ. ತಮ್ಮಲಿರುವ ಸಾವಯವ ಪದಾರ್ಥಗಳಾದ ಬೆಳೆ ಉಳಿಕೆಗಳು, ಹೊಂಗೆ, ಏಕ್ಕ ಮುಂತಾದ ಹಸಿಲೆ ಪದಾರ್ಥಗಳನ್ನು ವೈಜ್ಞಾನಿಕವಾಗಿ ಕಾಂಪೋಸ್ಟ್ ಮಾಡಿ ಉಪಯೋಗಿಸಲು ಮುಂದಾಗಬೇಕು. ಜಪಾನ್ ಮಾದರಿಯಲ್ಲಿ ಕಾಪೋಸ್ಟ್ ಮತ್ತು ಎರೆಗೊಬ್ಬರ ತಯಾರಿಸಿದರೆ ಅತಿ ಕಡಿಮೆ ಅವಧಿಯಲ್ಲಿ ಉತ್ಕೃಷ್ಟ ಗೊಬ್ಬರವನ್ನು ಪಡೆಯಬಹುದು, ಆದುದರಿಂದ ರೈತರು ಕಸದಿಂದ ರಸವನ್ನು ತೆಗೆಯಲು ಸಂಕಲ್ಪ ಮಾಡಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಇದೇ ವಿಶ್ವವಿದ್ಯಾಲಯದ ತರಬೇತಿ ಸಂಯೋಜಕರು ಮತ್ತು ಹಿರಿಯ ವಾರ್ತಾತಜ್ಞ, ಸಿಬ್ಬಂದಿ ತರಬೇತಿ ಘಟಕದ ಮುಖ್ಯಸ್ಥ ಡಾ. ಕೆ. ಶಿವರಾಮು ಅವರು ಪ್ರಾಸ್ತಾವಿಕ ಮಾತನಾಡಿದರು. ೧೫ ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕದ ಕೃಷಿ ಪರಿಸರ ಪರಿಚಯ, ಕರ್ನಾಟಕದ ವಿವಿಧ ಮಣ್ಣುಗಳು, ಕೃಷಿ ಬೆಳೆಗಳಲ್ಲಿ ಪೋಷಕಾಂಶಗಳ ಪಾತ್ರ, ಸಸ್ಯ ಪೋಷಕಾಂಶಗಳ ಕೊರತೆ ಹಾಗೂ ಅವುಗಳ ನಿವಾರಣೆ ಕುರಿತ ವಿಷಯಗಳನ್ನು ತಿಳಿಸಲಾಗುವುದು.
ಇದರ ಜೊತೆಗೆ ಮಣ್ಣು ಪರೀಕ್ಷೆ, ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಾಯನಿಕ ಗೊಬ್ಬರಗಳ ಬಳಕೆ, ರಾಸಾಯನಿಕ ಗೊಬ್ಬರಗಳು, ರಾಸಾಯನಿಕ ಗೊಬ್ಬರ ಪೋಷಕಾಂಶಗಳ ಪ್ರಮಾಣ, ರಸಗೊಬ್ಬರ ಲೆಕ್ಕಾಚಾರ ಹಾಗೂ ಪೂರೈಸುವ ಕಾಲ ಮತ್ತು ಪದ್ಧತಿಗಳು, ರಸಾಯನಿಕ ಗೊಬ್ಬರಗಳ ಲೆಕ್ಕಾಚಾರ ಮತ್ತು ಸಿದ್ಧಗಣಿತ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಮಣ್ಣಿನ ಫಲವತ್ತತೆ, ಮಣ್ಣಿನ ಆರೋಗ್ಯ ಮತ್ತು ರಸಗೊಬ್ಬರಗಳ ನಿರ್ವಹಣೆ, ಸಮಸ್ಯಾತ್ಮಕ ಮಣ್ಣುಗಳು ಮತ್ತು ಅವುಗಳ ನಿರ್ವಹಣೆ ಬಗ್ಗೆಯೂ ತಿಳಿಸಲಾಗುವುದು.
ಜೈವಿಕ ಗೊಬ್ಬರಗಳು, ವಿವಿಧ ಸಾವಯವ ಗೊಬ್ಬರಗಳು ಮತ್ತು ತಯಾರಿಕಾ ವಿಧಾನಗಳು, ಸಂವೇದಕಗಳ ಮೂಲಕ ರಸಾವರಿ, ನೀರಾವರಿ, ರಸಗೊಬ್ಬರಗಳ ಪೂರೈಕೆ ಮತ್ತು ಸಮಗ್ರ ಕೃಷಿ ಪದ್ಧತಿ, ಪ್ರಮುಖ ಬೆಳೆಗಳಿಗೆ ಶಿಫಾರಸ್ಸು ಮಾಡಿರುವ ಗೊಬ್ಬರಗಳು, ಪ್ರಮುಖ ಬೆಳೆಗಳ ಬೇಸಾಯ ಕ್ರಮಗಳು, ರಸಗೊಬ್ಬರ ನಿಯಂತ್ರಣ ಆದೇಶ ೧೯೮೫, ರಾಸಾಯನಿಕ ಗೊಬ್ಬರಗಳಲ್ಲಿ ಕಲಬೆರೆಕೆ ಕಂಡು ಹಿಡಿಯುವ ವಿಧಾನಗಳು ಮತ್ತು ಸಂವಹನ ಕೌಶಲ್ಯಗಳು ಬಗ್ಗೆ ಉಪನ್ಯಾಸ, ಕ್ಷೇತ್ರ ಭೇಟಿ ಮತ್ತು ಶೈಕ್ಷಣಿಕ ಪ್ರವಾಸಗಳ ಮೂಲಕ ಜ್ಞಾನ ಮತ್ತು ಕೌಶಲ್ಯಕ್ಕೆ ಒತ್ತು ನೀಡಿ ತರಬೇತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಕೃಷಿ ಇಂಜಿನಿಯರಿಂಗ್ ಸಹ ಪ್ರಾಧ್ಯಾಪಕ ಸಿ.ವಿ.ವೆಂಕಟೇಶಮೂರ್ತಿ, ರೇಷ್ಮೆ ಕೃಷಿ ವಿಭಾಗದ ಪ್ರಾಧ್ಯಾಪಕ ಡಾ. ಆರ್. ನಾರಾಯಣರೆಡ್ಡಿ,ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎ. ಮೂರ್ತಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ೩೦ ಮಂದಿ ರಸಗೊಬ್ಬರ ಸಗಟು/ಚಿಲ್ಲರೆ ಮಾರಾಟಗಾರು ಭಾಗವಹಿಸಿದ್ದಾರೆ.