ಹದ್ದುಗಳ ಸಂಖ್ಯೆಯ ಇಳಿಮುಖ: ಪಶು ನೋವು ನಿವಾರಕಗಳು ಎಷ್ಟರ ಮಟ್ಟಿಗೆ ಕಾರಣ 

0
ಲೇಖಕರು: ಡಾ. ಶ್ರೀಧರ್ ಎನ್.ಬಿ. ಹಿರಿಯ ಪಶುವೈದ್ಯರು

—ಹೌದು. ಒಂದು ಕಾಲದಲ್ಲಿ ಡೈಕ್ಲೋನಾಕ್ ಎಂಬ ನೋವು ನಿವಾರಕ ಪಶುವೈದ್ಯರ ಕಣ್ಮಣಿಯಾಗಿತ್ತು. ಹಾಗೆಯೇ ವೈದ್ಯ ಪ್ರಪಂಚ ಯಾವುದಾದರೂ ಔಷಧ ಕಿಂಚಿತ್ತಾದರೂ ಅಡ್ಡ ಪರಿಣಾಮ ತೋರಿಸಿದರೆ ನಿಷ್ಕರುಣಿಯಾಗಿ ಅದನ್ನು ಬ್ಯಾನ್ ಮಾಡಿಯೇ ಬಿಡುತ್ತದೆ. ಈ ಡೈಕ್ಲೋನಾಕ್ ಔಷಧ ಕಥೆಯೂ  ಇದೆ.

ಇದೊಂದು ಸ್ಟಿರಾಯ್ಡ್ ಅಲ್ಲದ ಉರಿಯೂತ ನಿವಾರಕ ಔಷಧ. ಜ್ವರ ನಿವಾರಕವಾಗಿ ಪ್ಯಾರಾಸೆಟಮಾಲ್ ಹೇಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆಯೋ ಹಾಗೆಯೇ ಪ್ರಥಮ ಉರಿಯೂತ ನಿವಾರಕವಾಗಿ ಕಣಕ್ಕಿಳಿದಿದ್ದು ಫಿನೈಲ್ ಬ್ಯುಟಜೋನ್ ೧೯೫೨ ರಲ್ಲಿ. ಇದಾದ ಮೇಲೆ ಸರಣಿಯಾಗಿ ದಶಕಗಳ ಅಂತರದಲ್ಲಿ ಮೆಫೆನಮಿಕ್ ಎಸಿಡ್, ಇಬುಪ್ರೊಫೆನ್, ಇಂಡೊಮೆಥಾಸಿನ್ ಇತ್ಯಾದಿ ಔಷಧಿಗಳು ಕಣಕ್ಕಿಳಿದವು. ನಂತರ ಉರಿಯೂತ ನಿವಾರಕವಾಗಿಯೇ ಉತ್ಪತ್ತಿಯಾದದ್ದು ಡೈಕ್ಲೋ¥s಼Éನಕ್. ಅದರಲ್ಲೂ ಯಾವ ಔಷಧಿಯ ಬಡಪಟ್ಟಿಗೆ ಬಗ್ಗದ ಕಾಲು ಗಂಟಿನ ಯಾತನಾಮಯ ನೋವಿಗೆ ಡೈಕ್ಲೋಫೆನಾಕ್ ರಾಮಬಾಣವೆಂದು ಉದಯವಾಯಿತು.

೧೯೬೫ ರ ಸಿಬಾ ಗೈಗಿ ಕಂಪನಿ ಇದನ್ನು ಪೇಟೆಂಟ್ ಪಡೆಯಿತು ಮತ್ತು ಅನೇಕ ವರ್ಷಗಳ ಸಂಶೋಧನೆಯ ನಂತರ ೧೯೮೬ ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ೨೦೧೯ ರ ವಿಮರ್ಶೆಯ ಪ್ರಕಾರ ಇದು ಪ್ರಪಂಚದಲ್ಲಿ ಸಾಮಾನ್ಯವಾಗಿ ವೈದ್ಯರಿಂದ ಬರೆಯಲ್ಪಡುವ ಔಷಧಗಳಲ್ಲಿ ೭೪ ನೇ ಸ್ಥಾನ ಪಡೆಯಿತು.

ಹೇಗೆ ಕಾರ್ಯ ನಿರ್ವಹಿಸುತ್ತದೆ?

ಶರೀರದಲ್ಲಿ ಯಾವುದೇ ಜೀವಕೋಶಕ್ಕೆ ಧಕ್ಕೆಯಾದಾಗ ಅದರ ಹೊರಪೊರೆಯೊಡೆದು ಫಾಸ್ಫೋಲಿಪಿಡ್ಡುಗಳು ಉತ್ಪನ್ನವಾಗುತ್ತವೆ. ಇವು ಫಾಸ್ಫೋಲೈಪೇಸ್ ಎ೨ ಎಂಬ ಕಿಣ್ವದ ಸಹಾಯದಿಂದ ಅರೆಕಿಡೋನಿಕ್ ಆಮ್ಲವಾಗಿ ಪರಿವರ್ತಿಸಲ್ಪಡುತ್ತವೆ. ಇದನ್ನು ಸೈಕ್ಲೋಆಕ್ಸಿಜನೇಸ್ ೧ ಮತ್ತು ೨ ಎಂಬ ಕಿಣ್ವಗಳು ಪ್ರೋಸ್ಟಾಗ್ಲಾಂಡಿನ್ನುಗಳೆಂಬ ರಸವಸ್ತುಗಳನ್ನಾಗಿ ಪರಿವರ್ತಿಸುತ್ತವೆ.

ಇವು ಅನೇಕಾನೇಕ ನೋವುಗಳಿಗೆ, ಜ್ವರಕ್ಕೆ, ಉರಿಯೂತಕ್ಕೆ ಮೂಲ ಕಾರಣ. ಪ್ಯಾರಾಸೆಟಮಾಲ್ ಸೇರಿದಮ್ತೆ ಬಹುತೇಕ ನೋವುನಿವಾರಕಗಳು ಸೈಕ್ಲೋಆಕ್ಸಿಜನೇಸ್ ೧ ಮತ್ತು ೨ ಎಂಬ ಕಿಣ್ವಗಳ ಕಾರ್ಯವನ್ನು ಪ್ರತಿಬಂಧಿಸುವುದರಿಂದ ಪ್ರೋಸ್ಟಾಗ್ಲಾಂಡಿನ್ನುಗಳು ಉತ್ಪನ್ನವಾಗುವುದೇ ಇಲ್ಲ. ಇದರಿಂದ ಜ್ವರ, ನೋವು, ಉರಿಯೂತ ಕಡಿಮೆಯಾಗಿಬಿಡುತ್ತದೆ. ಆದರೆ ಪ್ರೋಸ್ಟಾಗ್ಲಾಂಡಿನ್ನುಗಳು ಹೊಟ್ಟೆಯಲ್ಲಿ ಮ್ಯುಸಿನ್ ಎಂಬ ಲೋಳೆಯಂತ ವಸ್ತುವನ್ನು ಮತ್ತು ಬೈಕಾರ್ಬೋನೇಟ್ ಅಣುಗಳನ್ನು ಉತ್ಪಾದಿಸಿ ಹೊಟ್ಟೆಯ ಪದರವನ್ನು ಹೈಡ್ರೋಕ್ಲೋರಿಕ್ ಆಮ್ಲದಿಂದ ಕಾಪಾಡುತ್ತವೆ. ಕಾರಣ ನೋವು ನಿವಾರಕಗಳನ್ನು ಅನಿಯಮಿತವಾಗಿ ಸೇವಿಸಿದಲ್ಲಿ ಹೊಟ್ಟೆಯಲ್ಲಿ ಹುಣ್ಣು ಆಗುವುದು ಸಹಜ.

ಅಡ್ಡ ಪರಿಣಾಮಗಳೇನು?

ಯಾವುದೇ ಔಷಧಕ್ಕೆ ಪರಿಣಾಮವಿದ್ದರೆ ಅದಕ್ಕೆ ಅಡ್ಡಪರಿಣಾಮವಿರುವುದು ಶತ: ಸಿದ್ದ. ಅಡ್ಡ ಪರಿಣಾಮವಿಲ್ಲದಿದ್ದರೆ ಅದಕ್ಕೆ ಪರಿಣಾಮವೂ ಇಲ್ಲ. ಅಡ್ಡ ಪರಿಣಾಮವಿಲ್ಲದಿದ್ದರೆ ಅದು ಪ್ಲಾಸೆಬೋ ಅಥವಾ ಸುಳ್ಳೌಷಧಿಯಾಗಿ ಕಾರ್ಯನಿರ್ವಹಿಸಬಹುದು ಅಥವಾ ಆ ಕುರಿತು ಅಧ್ಯಯನ ಆಗಿರುವುದಿಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾದ ಮಾತು. ಹಾಗೇಯೇ ಡೈಕ್ಲೋಫೆನಿಕಿಗೂ ಸಹ ಸಾಕಷ್ಟು ಅಡ್ಡಪರಿಣಾಮಗಳಿವೆ. ಇದನ್ನು ಖಾಲಿ ಹೊಟ್ಟೆಯಲ್ಲಿ ನುಂಗಿದಲ್ಲಿ ಹೊಟ್ಟೆಯಲ್ಲಿ ಹುಣ್ಣಾಗುವುದು ಖಚಿತ. ಜಾಸ್ತಿ ಪ್ರಮಾಣದಲ್ಲಿ ಹೆಚ್ಚು ದಿನ ಸೇವಿಸಿದರೆ ಪಿತ್ತಜನಕಾಂಗ ಹಾಳಾಗಿ ಹೋಗುವುದರಲ್ಲಿ ಸಂಶಯವೇ ಇಲ್ಲ. ಕೆಲವೊಮ್ಮೆ ಮೂತ್ರಜನಕಾಂಗಕ್ಕೂ ಸಹ ತೊಂದರೆಯಾಗಬಹುದು.

ರಕ್ತದಲ್ಲಿ ಬಿಳಿ ರಕ್ತಕಣಗಳು ಗಣನೀಯವಾಗಿ ಕಡಿಮೆಯಾಗಬಹುದು. ಎರಡು ತಿಂಗಳಿಗಿಂತ ಚಿಕ್ಕ ಮಕ್ಕಳಲ್ಲಿ ಇದರ ಉಪಯೋಗ ಸಲ್ಲದು. ಕೆಲವೊಮ್ಮೆ ಅಲರ್ಜಿ,ವಾಂತಿ, ಹಳದಿ ಮೂತ್ರ, ರಕ್ತಕಣಗಳ ಒಡೆಯುವಿಕೆ, ಹಳದಿ ಚರ್ಮ ಇವೆಲ್ಲಾ ಲಕ್ಷಣಗಳು ಕಂಡು ಬರಬಹುದು. ಇದರ ಜೊತೆ ಆಲ್ಕೋಹಾಲ್ ಸೇವನೆ ವರ್ಜ್ಯ. ಸಾಮಾನ್ಯವಾಗಿ ಆಹಾರ ಸೇವನೆಯ ನಂತರ ಮಾತ್ರೆಯ ಜೊತೆ ೧-೨ ಲೋಟ ನೀರು ಸೇವಿಸಿದರೆ ಉತ್ತಮ. ಗರ್ಭಿಣಿ ಸ್ತ್ರೀಯರು ಸಹ ಸುಮ್ಮ ಸುಮ್ಮನೆ ತೆಗೆದುಕೊಳ್ಳಬಾರದು ಮತ್ತು ಅಡ್ಡಪರಿಣಾಮಗಳಾದಾಗ ತಕ್ಷಣ ವೈದ್ಯರನ್ನು ಕಾಣುವುದು ಜಾಣತನ.

ಏಕೆ ಪಶುವೈದ್ಯಕೀಯದಲ್ಲಿ ನಿಷೇಧ?

ನಿಜ. ಡೈಕ್ಲೋಫೆನಾಕ್ ಔಷಧವನ್ನು ಪಶುಗಳಲ್ಲಿ ಉಪಯೋಗಿಸುವ ಹಾಗಿಲ್ಲ. ಇದಕ್ಕೆ ಮೂಲ ಕಾರಣ ಲಿಂಡ್ಸೇ ಓಕ್ಸ್ ಮತ್ತಿತರು ೨೦೦೪ ರ ಫೆಬ್ರವರಿಯಲ್ಲಿ ಪ್ರಸಿದ್ಧ ವೈಜ್ಞಾನಿಕ ಪತ್ರಿಕೆ ನೇರ‍್ನಲ್ಲಿ ಪ್ರಕಟಿಸಿದ ಒಂದು ಲೇಖನ. ಅದರಲ್ಲಿ ಪಾಕಿಸ್ಥಾನದಲ್ಲಿ ಮಾಯವಾಗುತ್ತಿರುವ ಜಿಪ್ಸ್ ಬೆಂಗಾಲೆನ್ಸಿಸ್, ಜಿಪ್ಸ್ ಇಂಡಿಕಸ್ ಜಾತಿಗೆ ಸೇರಿದ ರಣಹದ್ದುಗಳಿಗೂ ಮತ್ತು ಪಶುಗಳ ಶವದಲ್ಲಿರುವ ಡೈಕ್ಲೋನಾಕ್ ಅಂಶಕ್ಕೂ ಸಂಬ0ಧವಿದೆ ಎಂದು ಸಂಶೋಧನೆಯ ಮೂಲಕ ಹೇಳಲಾಗಿತ್ತು. ಈ ಲೇಖನದಲ್ಲಿ ಭಾರತ ಮತ್ತು ಪಾಕಿಸ್ಥಾನದ ವಿವಿಧ ಪ್ರದೇಶಗಳಲ್ಲಿ ೧೯೯೦ ರಿಂದ ಶೇ ೯೫ ರಷ್ಟು ರಣಹದ್ದುಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದಕ್ಕೂ ಹಾಗೂ  ಪಶುಗಳಲ್ಲಿ ನೀಡುವ ಡೈಕ್ಲೊನಾಕ್ ಔಷಧಿಗೂ ಸಂಬಂಧ ಕಲ್ಪಿಸಿ ಈ ಔಷಧ ಶೇಷ ಹೊಂದಿದ ಪಶುಗಳ ಶರೀರವನ್ನು ರಣಹದ್ದುಗಳು ತಿಂದಾಗ ಅವುಗಳ ಮಾಂಸದಲ್ಲಿನ ಔಷಧವು ಅವುಗಳ ದೇಹಕ್ಕೆ ಸೇರಿ ಕಿಡ್ನಿ ವೈಫಲ್ಯ ಮತ್ತು ನರದೌರ್ಬಲ್ಯ ಇತ್ಯಾದಿ ಉಂಟು ಮಾಡಿ ಅವುಗಳ ಮರಣಕ್ಕೆ ಕಾರಣವಾಗುತ್ತದೆಯೆಂದು ತಿಳಿಸಲಾಗಿತ್ತು.

ಈ ಲೇಖನದಲ್ಲಿ ಹೇಳಿದಂತೆ ೨೫೯ ರಣಹದ್ದುಗಳ ಮರಣೋತ್ತರ ಪರೀಕ್ಷೆ ಮಾಡಿದಾಗ ೨೧೯ (ಶೇ ೮೫) ರಣಹದ್ದುಗಳ ಶರೀರದಲ್ಲಿ ಯುರಿಕ್ ಆಮ್ಲದ ಅಂಶ ಪತ್ತೆಯಾಯಿತು. ಆದರೆ ಕೇವಲ ೨೫ (ಶೇ: ೯.೬೫%) ರಣಹದ್ದುಗಳಲ್ಲಿ ಮಾತ್ರ ಡೈಕ್ಲೋಫೆನಾಕ್ ಔಷಧಿಯ ಪ್ರಮಾಣ ಗಣನೀಯ ಮಟ್ಟದಲ್ಲಿ ಪತ್ತೆಯಾಯಿತು. ಅಂದರೆ ಉಳಿದ ಶೇ ೯೦ ರಷ್ಟರಲ್ಲಿ ಕಾರಣ ಬೇರೆಯೇ ಇತ್ತು. (ಲಿಂಡ್ಸೇ ಓಕ್ಸ್ ಮತ್ತು ಇತರರು, ೨೦೦೪). ಇವರ ಪ್ರಕಾರ ಡೈಕ್ಲೋಫೆನಾಕ್ ಔಷಧಿ ಪಶುಗಳಿಗೆ ಈ ಚುಚ್ಚುಮದ್ದು ನೀಡಿ ಯಾವುದೋ ಕಾರಣದಿಂದ ಅವು ಮೃತಪಟ್ಟಾಗ ಅವುಗಳ ಕಳೆಬರವನ್ನು ರಣಹದ್ದುಗಳು ತಿಂದ ಸಂದರ್ಭದಲ್ಲಿ ಅವು ಮೃತಪಟ್ಟು ಅವುಗಳ ಸಂಖ್ಯೆಯೇ ಇಲ್ಲವಾಗುತ್ತದೆ ಎಂಬ ಕಳವಳ ವ್ಯಕ್ತಪಡಿಸಿದ್ದರು.

ನಮ್ಮಲ್ಲಿ ಹೀಗೆಯೇ ಯಾವುದೋ ಕೋಪ ಯಾವುದೋ ಒಂದರಲ್ಲಿ ಅಂತ್ಯವಾಗುತ್ತದೆ. ಕಾರಣ ಭಾರತ ಸರ್ಕಾರದ ಔಷಧ ಮಹಾನಿಯಂತ್ರಕರು ಪಶುಚಿಕಿತ್ಸೆಯಲ್ಲಿ ಈ ಔಷಧಿಯ ಬಳಕೆಯನ್ನು ೨೦೦೮ ರಲ್ಲಿ ನಿಷೇಧಿಸಿದರು. ಮನುಷ್ಯರಲ್ಲಿಯೂ ಸಹ ಇದನ್ನು ಕೇವಲ ಒಂದು ಸಲ ನೀಡುವುದಕ್ಕೆ ೨೦೧೫ ರಲ್ಲಿ ಅನುಮತಿ ನೀಡಲಾಯಿತು. ಪ್ರಸಕ್ತ ಮನುಷ್ಯರಲ್ಲಿ ಬಳಸುವುದಕ್ಕೆ ಮಾತ್ರ ಇದಕ್ಕೆ ಅನುಮತಿ ಇದೆ.

ಪಶುವೈದ್ಯರು ಮತ್ತು ವಿಜ್ಞಾನಿಗಳು ಹೇಳುವುದೇನು?

ಇದಕ್ಕೆ ಪಶುವೈದ್ಯ ವಿಜ್ಞಾನಿಗಳು ಹೇಳುವುದೇ ಬೇರೆ. ರಣಹದ್ದುಗಳು ಸಾಯುವುದಕ್ಕೆ ಡೈಕ್ಲೋನಾಕ್ ಕೇವಲ ಒಂದು ಕಾರಣ ಮಾತ್ರ. ಅವು ಸಾಯಲು ಮತ್ತು ನಿಶ್ಯೇಷವಾಗಲು ಇನ್ನೂ ಅನೇಕ ಜ್ವಲಂತ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಆಹಾರ ವಿಷಬಾಧೆ ಅಥವಾ ಫುಡ್ ಪಾಯ್ಸನಿಂಗ್ ಮತ್ತು ಇತರ ಹಲವಾರು ಕಾಯಿಲೆಗಳು. ಇದು ಈ ಔಷಧವನ್ನು ನಿಷೇಧಿಸಲು ನಡೆಸಿದ ಒಂದು ಕೃತ್ಯ ಹುನ್ನಾರ ಅಷ್ಟೇ. ಇದರಲ್ಲಿ ಅಷ್ಟೊಂದು ಹುರುಳಿಲ್ಲ. ಭಾರತದ ಜಾನುವಾರುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಡೈಕ್ಲೋಫೆನಾಕ್ ಔಷಧವನ್ನು ಪಶುಗಳಲ್ಲಿ ನೀಡುತ್ತಾರೆ? ಎಷ್ಟು ಪ್ರಮಾಣದಲ್ಲಿ ಅದು ಅವುಗಳ ಶರೀರದಲ್ಲಿ ಉಳಿಯುತ್ತದೆ? ಅದು ಶರೀರದಿಂದ ವಿಸರ್ಜನೆಗೊಳ್ಳುವ ಮೊದಲು ಸಾಯುವ ಪ್ರಾಣಿಗಳ ಸಂಖ್ಯೆ ಎಷ್ಟು? ಅವುಗಳ ಶರೀರ ರಣಹದ್ದುಗಳ ಪಾಲಾದ ಘಟನೆಗಳೆಷ್ಟು? ಅಷ್ಟಕ್ಕೂ ನಮ್ಮಲ್ಲಿ ರೈತರು ಪಶುಗಳಿಗೆ ಸೂಕ್ತ ಪ್ರಮಾಣದಲ್ಲಿ ಚುಚ್ಚುಮದ್ದು ಕೊಡಿಸುತ್ತಾರೆಯೇ? ಇದೆಲ್ಲಾ ಅಂಕಿ ಅಂಶ ಗಮನಿಸುವುದೇ ಔಷಧ ನಿಷೇಧ ಎಷ್ಟರ ಮಟ್ಟಿಗೆ ಸೂಕ್ತ ಎಂಬ ಪ್ರಶ್ನೆ ಎದ್ದಿದೆ. ಆದರೆ ಇದೆಲ್ಲಾ ಔಷಧವನ್ನು ನಿಷೇಧಿಸಿಬೇಕೆಂಬುವವರ ಕೂಗಿನ ಮುಂದೆ ಕರಗಿ ಹೋಗಿದೆ. ಇದೆಲ್ಲಾ ಯಾಕೆ ಬಂತೆಂದರೆ ಡೈಕ್ಲೋಫೆನಾಕ್ ಹದ್ದುಗಳ ಸಾವಿಗೆ ಮುಖ್ಯವಾದ ಕಾರಣವಾದರೆ ಔಷಧ ಬ್ಯಾನಾದ ಮೇಲೆ ಹದ್ದುಗಳ ಸಂಖ್ಯೆ ಏರಬೇಕಿತ್ತಲ್ಲ? ಆದರೆ ಇದು ಗಣನೀಯವಾಗಿ ಏರಲೇ ಇಲ್ಲ. ಇದಕ್ಕಿಲ್ಲ ಉತ್ತರ. ಆದ್ರೇನು. ಪಶುವೈದ್ಯರುಗಳು ಬೇರೆ ನೋವು ನಿವಾರಕಗಳಾದ ನಿಮೆಸುಲೈಡ್, ಮೆಲಾಕ್ಸಿಕ್ಯಾಮ್, ಕಿಟೊಪ್ರೆಫೆನ್, ಲನಿಕ್ಸಿನ್, ಐಬುಪ್ರೊಫೆನ್ ಇತ್ಯಾದಿಗಳೆಲ್ಲ ಇವೆಯಲ್ಲ? ಇವನ್ನು ಪಶುವೈದ್ಯರು ಉಪಯೋಗಿಸುವುದರಿಂದ ರಣಹದ್ದುಗಳ ಸಂಖ್ಯೆ ಏರಿಲ್ಲ ಎಂಬುದು ಮತ್ತೊಂದು ವಾದವಾಗಿತ್ತು.

ಎಲ್ಲವನ್ನು ಸಾರಾಸಾಗಾಟಾಗಿ ಬ್ಯಾನು ಮಾಡಿದರೆ ಬಡಪ್ರಾಣಿಗಳ ನೋವು ನಿವಾರಣೆ ಮಾಡುವುದು ಹೇಗೆ? ರಣಹದ್ದುಗಳು ಸಾಯುತ್ತಿದ್ದರೆ ಅದಕ್ಕೆಲ್ಲಾ ನೋವು ನಿವಾರಕಗಳ ಮೇಲೆಯೇ ಗೂಬೆ ಕೂರಿಸುವುದು ಎಷ್ಟರ ಮಟ್ಟಿಗೆ ಸರಿ? ಅಷ್ಟಕ್ಕೂ ಬದುಕುವ ಹಕ್ಕು ಜಾನುವಾರುಗಳಿಗೆ ಇಲ್ಲವೇ? ಅವು ನೋವನ್ನು ಅನುಭವಿಸುವುದು ಪ್ರಾಣಿಗಳ ದೃಷ್ಟಿಯಿಂದ ಎಷ್ಟರ ಮಟ್ಟಿಗೆ ಸರಿ ಎಂಬೆಲ್ಲಾ ಚರ್ಚೆಗಳೂ ಬಂದವು. ಮೆಲಾಕ್ಸಿಕ್ಯಾಮ್ ಎಂಬ ಔಷಧವನ್ನು ಎಲ್ಲ ನೋವಿನಲ್ಲಿಯೂ ಬಳಸಬಹುದೇ? ಅದರ ಲಭ್ಯತೆ ಎಷ್ಟರ ಮಟ್ಟಿಗೆ ಇದೆ? ಅದರ ಬೆಲೆ ಇದ್ದಕ್ಕಿದ್ದಂತೆ ದುಬಾರಿಯಾದರೆ ಅದರ ವೆಚ್ಚವನ್ನು ಸಾಮಾನ್ಯ ರೈತರು ಭರಿಸಿಯಾರೆ? ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡವು.

ಅಷ್ಟಕ್ಕೂ ಅನೇಕ ವೈಜ್ಞಾನಿಕ ಲೇಖನಗಳು ಹೇಳುವಂತೆ ಡೈಕ್ಲೋನಾಕ್ ಔಷಧ, ಹದ್ದುಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ವಿಷಕಾರಿಯಾದರೂ ಸಹ ಪ್ರತಿ ದಿನವೂ ಸಹ ಹದ್ದುಗಳು ಹಸುಗಳ ದೇಹವನ್ನೇ ಆಹಾರವಾಗಿ ತಿನ್ನಲು ಅವಕಾಶ ಸಿಗುವುದು ಕಡಿಮೆ. ಅವುಗಳ ಆಹಾರದಲ್ಲಿ ಇತರ ಅನೇಕ ಜೀವಿಗಳೂ ಸಹ ಇರುತ್ತವೆ. ಈ ಔಷಧವೇ ಇರುವ ದನದ ಶರೀರ ಅವುಗಳಿಗೆ ಸಿಗುವುದು ಕಾಕತಾಳಿಯವಾಗಿಯೂ ಸಹ ಇರಬಹುದು ಎನ್ನುತ್ತವೆ ಮಾಹಿತಿಗಳು (ಟಗರ್ಟ್ ಮತ್ತಿತರು, ೨೦೦೬).

ಹದ್ದುಗಳ ಸಾವಿಗೆ ಮತ್ತು ಅವುಗಳ ಸಂತಾನದ ಇಳಿಕೆಗೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಬಹಳ ಮುಖ್ಯವಾದವುಗಳೆಂದರೆ ಗಣಿಗಾರಿಕೆಯಿಂದ ಸತತವಾಗಿ ಆಗುವ ವಾಯು ಮತ್ತು ಪರಿಸರ ಮಾಲಿನ್ಯ, ದೊಡ್ಡ ದೊಡ್ಡ ಶಬ್ಧಗಳಿಂದ ಆಗುವ ಬಂಡೆಗಳ ಒಡೆಯುವಿಕೆ, ವಿವಿಧ ವಿಕಿರಣಗಳು, ಕೀಟನಾಶಕಗಳ ಅತಿಯಾದ ಬಳಕೆ, ಅವುಗಳ ಮೊಟ್ಟೆ ಕಾವಿಟ್ಟು ಮರಿಯಾಗಲು ಇರುವ ವಿವಿಧ ತೊಂದರೆಗಳು, ಆಹಾರದ ದುರ್ಲಭ್ಯತೆ, ಕಾಡು ಮೃಗಗಳ ದಾಳಿ, ವೈರಸ್ ಮತ್ತು ಬ್ಯಾಕ್ಟಿರಿಯಾದ ಹಲವಾರು ಕಾರಣಗಳು ಕೊನೆಯಿಲ್ಲದಂತಿವೆ. ಆದರೆ ಪಶುವಿನ ಶರೀರದಲ್ಲಿ ಅತ್ಯಲ್ಪ ಕಾಲದಲ್ಲಿದ್ದು ನಿಷ್ಕಿçಯಗೊಳ್ಳುವ ಡೈಕ್ಲೊನಾಕ್ ಔಷಧಿಯ ಪಾತ್ರ ಇವುಗಳ ಸಂಖ್ಯೆಯ ಇಳಿತದಲ್ಲಿ ಗಣನೀಯ ಪಾತ್ರ ವಹಿಸಿರಲಿಕ್ಕಿಲ್ಲ ಎಂಬುದು ಒಂದು ವಾದ (ಅನಿಲ್ ಕುಮಾರ್, ೨೦೦೭).

ಮೋರ್ಫಿನ್, ಅಫೀಮು, ಗಾಂಜಾ ಇವೆಲ್ಲಾ ಒಂದು ಕಾಲದಲ್ಲಿ ಔಷಧಗಳಾಗಿ ಬಳಕೆಯಾಗಿವೆ. ಆದರೆ ಇವು ತಪ್ಪಾಗಿ ಬಳಸುವವರ ಕೈ ಸೇರಿ ದುಶ್ಚಟವಾಗಿ ಪರಿಣಮಿಸಿವೆ. ಇವುಗಳ ಅನಧಿಕೃತ ಬಳಕೆ ಅಪರಾಧ. ಆದರೆ ವೈದ್ಯಕೀಯದಲ್ಲಿ ಇದರ ಬಳಕೆ ಇನ್ನೂ ಇದೆ. ಕ್ಯಾನ್ಸರ್ ರೋಗಿ ಅತೀವ ನೋವಿನಿಂದ ಬಳಲುತ್ತಿದ್ದರೆ, ಇತರ ನೋವು ನಿವಾರಕಗಳು ವಿಫಲವಾದಲ್ಲಿ ವೈದ್ಯರ ಚೀಟಿಯ ಮೇಲೆ ಇದನ್ನು ಪಡೆದು ಬಳಸಬಹುದಾಗಿದೆ.

ತಜ್ಞ ಪಶುವೈದ್ಯರ ಚೀಟಿ ಇದ್ದರೆ ಮಾತ್ರ ನೋವು ನಿವಾರಕಗಳನ್ನು ಔಷಧ ಅಂಗಡಿಯವರು ಮಾರಾಟ ಮಾಡಬೇಕೆಂದು ನಿಯಮ ಮಾಡಿ ಅದನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಕಾನೂನು ಬಿಗಿಗೊಳಿಸುವ ಬದಲು ಔಷಧವನ್ನೇ ನಿಷೇಧಿಸುವುದು ಅಷ್ಟೊಂದು ಒಳ್ಳಯ ಬೆಳವಣಿಗೆ ಖಂಡಿತಾ ಅಲ್ಲ. ಮನುಷ್ಯರಿಗೊಂದು ನಿಯಮ ಪಶುಗಳಿಗೊಂದು ನಿಯಮ ಸಲ್ಲದು.

ಬೀಡಿ, ಸಿಗರೇಟು, ತಂಬಾಕು, ಹೆಂಡ ಇವುಗಳ ಮೆಲೆ ಶಾಸನ ವಿಧಿಸಿದ ಎಚ್ಚರಿಕೆ ಎಂದು ನಮೂದಿಸಿ ಇವುಗಳ ಬಾಟಲಿ ಮೇಲೆ “ಹೊರಗೆ ಎಸೆಯುವ ಹದ್ದುಗಳ ಆಹಾರವಾಗುವ ಜಾನುವಾರುಗಳಲ್ಲಿ ಬಳಕೆ ಸಲ್ಲ” ಎಂದು ಬರೆಯ ಬೇಕು ಎಂಬ ಸಲಹೆ ಬಂದವು. ನಿಷೇಧವೇ ಅಂತಿಮ ಅಸ್ತ್ರವಲ್ಲ.. ಪಶುವೈದ್ಯರು ಇದನ್ನು ಎಚ್ಚರಿಕೆಯಿಂದ ಬಳಸಬೇಕು ಮತ್ತು ರೈತರು ಈ ರೀತಿ ಚುಚ್ಚುಮದ್ದು ನೀಡಿ ಆಕಸ್ಮಾತ್ ದನ ಸತ್ತಾಗ ಅದನ್ನು ಹದ್ದುಗಳ ಆಹಾರವಾಗಿ ಹೊರಗೆ ಬಿಸಾಡದೇ ಹೂಳಬೇಕು ಎಂಬೆಲ್ಲಾ ಸಲಹೆಗಳೂ ಇವೆ.

ಕೆಲವೊಮ್ಮೆ ವೈಜ್ಞಾನಿಕ ವಿಚಾರಗಳು ಮತ್ತು ವಾಸ್ತವತೆಗಿಂತ ಭಾವನೆಗಳು, ಪರಿಸರವನ್ನು ಪ್ರೀತಿಸುವ ಭರಾಟೆಯಲ್ಲಿ ಜವಾಬ್ದಾರಿ ಮರೆತು ಅನೇಕ ವರ್ಷಗಳ ಸತತವಾಗಿ ಸಂಶೋಧನೆ ಮಾಡಿ ಕಂಡು ಹಿಡಿದ ಔಷಧವನ್ನು ನಿಷೇಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬೆಲ್ಲಾ ವಾದಗಳಿವೆ.

ವಿಜ್ಞಾನದ ಬಹುತೇಕ ಆವಿಷ್ಕಾರಗಳು ಮಾನವನ ಅನುಕೂಲಕ್ಕೆ ಹೊರತು ಪಶುಪಕ್ಷಿಗಳಿಗಂತೂ ಖಂಡಿತಾ ಅಲ್ಲ. ವಿಜ್ಞಾನದ ಅತ್ಯಂತ ದೊಡ್ಡ ಫಲಾನುಭವಿ ಮನುಷ್ಯ ಮಾತ್ರ. ಆದರೆ ಪ್ರಾಣಿ, ಪಕ್ಷಿ, ಪೃಕೃತಿಯಿಲ್ಲದೆ ಮನುಷ್ಯನಿಲ್ಲ. ಸಂಶೋಧನೆಯ ಅಂತಿಮ ಫಲಾನುಭವಿ ಮನುಷ್ಯನಾದರೂ ಅದರ ಬಳಕೆ ಮಾಡುವಾಗ ಸಹ ಜೀವಿಗಳಿಗೆ ಪರಿಸರಕ್ಕೆ ಆದಷ್ಟು ಕಡಿಮೆ ಹಾನಿಯಾಗುವ ರೀತಿಯಲ್ಲಿ ವಿವೇಚನೆಯಿಂದ ಬಳಸಬೇಕು. ಹಳೆಯದೆಲ್ಲಾ ಶ್ರೇಷ್ಟ ಎನ್ನುತ್ತಾ ಶಿಲಾಯುಗದಲ್ಲಿ ಬದುಕಲು ಖಂಡಿತಾ ಸಾಧ್ಯವಿಲ್ಲ. ಪ್ರಕೃತಿ ಪ್ರಿಯತೆಯನ್ನೂ ಆಧುನಿಕತೆಯ ಜೊತೆಯೇ ರೂಢಿಸಿಕೊಂಡು ಪರ್ಯಾಯಗಳ ಬಗ್ಗೆ ಚಿಂತನೆಯ ಜೊತೆ ಬದುಕುವ ಅವಶ್ಯಕತೆ ಇದೆ.

ವಿಜ್ಞಾನಿಗಳು, ವೈಜ್ಞಾನಿಕ ಚಿಂತಕರನ್ನು ಲೇಖಕರನ್ನು ಧರ್ಮ, ಆಚರಣೆ ಇತ್ಯಾದಿಗಳ ಹಿನ್ನೆಲೆಯಲ್ಲಿ ಮತ್ತು ಬಹು ಸಂಖ್ಯೆಯಲ್ಲಿ ಮೂಲೆಗಟ್ಟುವುದು ಅತ್ಯಂತ ಸಹಜವಾದ ಚರಿತ್ರೆಯುಳ್ಳ ಕ್ರಿಯೆ ಮತ್ತು ಅವರ ಸಂಖ್ಯೆ ಬಹಳ ದೊಡ್ದದು. ಈ ಕಾಲಘಟ್ಟದಲ್ಲಿ ಈ ಕುರಿತು ಯೋಚಿಸುವವರ ಸಂಖ್ಯೆಯೂ ಸಹ ಜಾಸ್ತಿಯಾಗಬೇಕಿದೆ.

ಡಾ: ಎನ್ ಬಿ.ಶ್ರೀಧರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

LEAVE A REPLY

Please enter your comment!
Please enter your name here