ಸಮಗ್ರಕೃಷಿ ಮತ್ತು ಪಾರಿಸಾರಿಕ ಮಹತ್ವ

0

ಲೇಖಕರು: ಶ್ರೀನಿವಾಸ ಮೂರ್ತಿ ಮುಂಡಗೋಡು ಶೃಂಗೇರಿ., ಅಗ್ರಿಕಲ್ಚರ್ ಇಂಡಿಯಾ ಸಂಪಾದಕೀಯ ಸಲಹೆಗಾರರು

ಪ್ರಾರಂಭದಲ್ಲಿ ಮನುಷ್ಯ ನಾಗರಿಕತೆ ಸರಿದಾರಿಯಲ್ಲೇ ಸಾಗಿತ್ತು. ಪ್ರಕೃತಿ ಪುರುಷ ಹೊಂದಾಣಿಕೆಯ ಮಾರ್ಗ ಮನುಷ್ಯನ ಬದುಕನ್ನು ಹಸನಾಗಿಸಿತ್ತು.  ಬರಬರುತ್ತಾ ವಿಜ್ಞಾನ ತಂತ್ರಜ್ಞಾನದ ಅಹಂಕಾರ ನೆತ್ತಿಗೇರಿತು. ಅದರೊಂದಿಗೆ ದುರಾಸೆ, ವೈಭೋಗದ ತೆವಲೂ, ಸ್ವಚ್ಛತೆಯ ಗೀಳೂ ಹತ್ತಿಕೊಂಡು ನೆಲದ ನಂಟನ್ನೇ ತಿರಸ್ಕರಿಸಿ ಈಗ ಅಧೋಗತಿಯತ್ತ ಸಾಗುತ್ತಿರುವಂತೆ ತೋರುತ್ತಿದೆ.

ಭೂಮಿಯ ಪ್ರತಿಯೊಂದು ಪ್ರದೇಶಕ್ಕೂ ಅದರದ್ದೇ ಆದ ಪರಿಸರ ವ್ಯವಸ್ಥೆ ಇದ್ದೇ ಇರುತ್ತದೆ. ಅಲ್ಲಿನ ಭೂಗುಣ, ಹವಾಗುಣ ಇತ್ಯಾದಿಗಳಿಗೆ ಅನುಗುಣವಾಗಿ ಬೆಳೆಯುವ ಸಸ್ಯಗಳೂ, ಅದನ್ನು ಆಧರಿಸಿ ಬದುಕುವ ಕೀಟ, ಸರೀಸೃಪ, ಉಭಯವಾಸಿ  ಸಸ್ತನಿ, ಪಕ್ಷಿಗಳೂ ಅದಕ್ಕೆ ಪೂರಕ ಎಂಬುದು ಗೊತ್ತಿರದ ವಿಷಯವೇನೂ ಅಲ್ಲ.

ಮನುಷ್ಯ ನಿರ್ಮಿತ ಅಥವಾ ಮಾರ್ಪಡಿಸಿಕೊಂಡ ಪರಿಸರದ ವಿಷಯಕ್ಕೆ ಬಂದರೆ ಅದೂ ಆ ಪರಿಸರ ನಿಯಮಗಳಿಗೆ ಹೊರತಾಗಿಲ್ಲ, ಹೊರತಾಗಲೂ ಬಾರದು/ಆಗದು. ಅಂತೆಯೇ ಮನುಷ್ಯ ತಾನು ತನ್ನ ವಾಸಸ್ಥಳ/ಕೃಷಿ ಭೂಮಿಯಲ್ಲಿ ತನ್ನಾಯ್ಕೆಯ ಸಸ್ಯಗಳ ಜೊತೆಗೆ ವಿವಿಧ ಕೀಟ (ಜೇನು, ರೇಷ್ಮೆ), ಸಸ್ತನಿ ( ಹಸು, ಎಮ್ಮೆ, ನಾಯಿ ಬೆಕ್ಕು, ಕುದುರೆ), ಪಕ್ಷಿ (ಕೋಳಿ, ಗುಬ್ಬಿ,ಪಾರಿವಾಳ…) ಇತ್ಯಾದಿಗಳನ್ನು ವಿವಿಧ ಉಪಯೋಗಗಳಿಗಾಗಿ ಪ್ರಯತ್ನ ಪೂರ್ವಕವಾಗಿಯೂ ಹಾಗೂ ಕೆಲವನ್ನು ಪರೋಕ್ಷವಾಗಿಯೂ ( ಸೊಳ್ಳೆ, ನೊಣ, ಜಿರಳೆ, ಕೋತಿ, ಇಣಚಿ, ಕಾಗೆ, ಬಾವಲಿ, ಹದ್ದು) ಸಾಕಿಕೊಂಡ.

ಹೀಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ತನಗರಿವಿಲ್ಲದೇ ನಿಸರ್ಗದಿಂದ ಪಡೆದು ತಂದ ತನ್ನ ಪಾಲಿನ ಪರಿಕರಗಳು ತನ್ನದೇ ಆದ (ನಿಸರ್ಗದ ಭಾಗವೂ ಆದ) ಕೃತಕ/ಮಾರ್ಪಡಿಸಿಕೊಂಡ ಪರಿಸರದ ಅಗತ್ಯಗಳಿಗೆ ಪೂರಕವಾಗಿಯೇ ಇದ್ದುದು ವಿಶೇಷ.

ಆ ಕಾರಣಕ್ಕೆ ಅವುಗಳ ಅಸಮತೋಲನ ನಿವಾರಿಸುವುದೂ ಅವನ ಕೈಯೊಳಗೇ ಇತ್ತು. ಪ್ರತಿಯೊಂದು ನೆಲದ ತುಣುಕೂ ಸಹಜ ಜೈವಿಕ ಚಟುವಟಿಕೆ ಬಯಸುತ್ತದೆ. ಅಂತೆಯೇ ಮನುಷ್ಯನ ಹತೋಟಿಗೆ ಬಂದ ನೆಲ ಕೂಡಾ. ಅದು ಅದರ ಕೆಲಸ. ಅಷ್ಟೇ ಅಲ್ಲ, ಅದು ಅದರ ಜೀವಾಳ ಕೂಡಾ.

ಇದೇ ಕಾರಣಕ್ಕೆ ಅಲ್ಲಿ ಮನುಷ್ಯ ಬಿತ್ತಿದ/ನೆಟ್ಟ ಗಿಡ ಮರಗಳು ಇರಬೇಕು. ಜೀವ ಜಂತು ಪ್ರಾಣಿ ಪಕ್ಷಿಗಳು ಅಲ್ಲಿದ್ದು, ತಿನ್ನಬೇಕಾಗಿದ್ದು ತಿಂದು ಮಲ ಮೂತ್ರ ವಿಸರ್ಜನೆ ಮಾಡುತ್ತಿರಬೇಕು. ಸತ್ತು ಮಣ್ಣು ಸೇರುತ್ತಲೂ ಇರಬೇಕು. ಅಂತಹ ವಿಸರ್ಜನೆಗಳು ಆ ಮನುಷ್ಯ ನಿರ್ಮಿತ ಪರಿಸರ ವ್ಯವಸ್ಥೆಗೆ ಪೂರಕ ಕೂಡಾ.

ಹೀಗೆ ಆರ್ಥಿಕ, ಸಾಂಸ್ಕೃತಿಕ ಕಾರಣಗಳ ಹೊರತಾಗಿಯೂ ಕೃಷಿ ಪರಿಸರದ ಸುಸ್ಥಿತಿಯ ದೃಷ್ಟಿಯಿಂದ ರೈತಾಪಿಯ ಜೊತೆಗೆ ಪಶುಸಂಗೋಪನೆ, ಕೋಳಿ ಸಾಕಾಣಿಕೆ,ಜೇನು ಸಾಕಾಣಿಕೆಗಳೂ ಅತಿ ಅಗತ್ಯ ಎಂಬುದನ್ನು ಮನಗಾಣಬೇಕಾಗಿದೆ.

ಶ್ರೀನಿವಾಸ ಮೂರ್ತಿ ಮುಂಡಗೋಡು ಶೃಂಗೇರಿ., ಅಗ್ರಿಕಲ್ಚರ್ ಇಂಡಿಯಾ ಸಂಪಾದಕೀಯ ಸಲಹೆಗಾರರು

LEAVE A REPLY

Please enter your comment!
Please enter your name here