ಸರ್ ನಿಮ್ಮ ತರಬೇತಿ ಕೇಂದ್ರದ ಸಿಲೆಬಸ್ ಕೊಡ್ತೀರಾ? ಬೆಂಗಳೂರಿನಿಂದ ಇಂದು ಬಂದ ಪರಿಸರ ಆಸಕ್ತರು ಕೇಳಿದರು. ‘ ಇಲ್ಲ ‘ ತಕ್ಷಣ ಹೇಳಿದೆ.
ಇದು ಬರಿಗಾಲ ಶಾಲೆ, ಇಲ್ಲಿ ಅಕಾಡೆಮಿಕ್ ಶೈಲಿಯ ಪಾಠ ಇಲ್ಲ. ನಿಸರ್ಗ ವಿಶೇಷ ಹೇಳ್ತಾ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನ ನಡೆಯುತ್ತದೆ . ಈ ದಾರಿಯಲ್ಲಿ ಮಳೆಗಾಲದಲ್ಲಿ ಹೋಗುವಾಗ ಕಪ್ಪೆ, ಇಂಬಳ ಪಾಠ ಮಾಡುವ ನಾನು ಚಳಿಗಾಲ ಜೇಡ ತೋರಿಸಿ ಇನ್ನೇನೋ ಹೇಳ್ತೇನೆ. ಕಡು ಬೇಸಿಗೆಯ ಕಾಲದಲ್ಲಿ ಗೆದ್ದಲು, ಕೆಂಪಿರುವೆ ಪಾಠವೂ ಬರಬಹುದು.
ಓಡಾಡುವ ದಾರಿಯಲ್ಲಿ ಕಾಣುವ ಸಾಮಾನ್ಯ ಸಂಗತಿಗಳೇ ಪಾಠದ ವಿಷಯ ಆಗ್ತದೆ. ಇಲ್ಲಿ ಒಂದೆರಡು ತಾಸಿನ ಸೀಮಿತ ಸಮಯದ ಪಾಠ ನಡೆಯುತ್ತದೆ. ಕೆಲವೊಮ್ಮೆ ಮೂರು ದಿನದ ಪರ್ಯಂತ ನದಿ ಕಾಡು ಪಯಣದ ಮರದ ಕಥೆಗಳು ಇರ್ತದೆ. ಮಕ್ಕಳು, ಫಾರೆಸ್ಟ್ ಗಾರ್ಡಗಳು , ಕೃಷಿಕರು ಹೀಗೆ ಯಾರೆಲ್ಲ ಬಂದ ಹಾಗೇ ಪಾಠ ಕ್ರಮ ಬದಲಾಗ್ತದೆ.
ನೋಡಿ ಮುಂದಿನ ವಾರ 300 ಮಕ್ಕಳು ಬರ್ತಾರೆ. ಮತ್ತೇ ಪಠ್ಯ ಬೇರೆಯೇ! ನಮ್ಮ ಅನುಭವ ಹೆಚ್ಚಿದಂತೆ ಬದಲಾಗ್ತಾ ಹೋಗ್ತದೆ” ಎಂದು ನಕ್ಕೆ. ಒಂದು ಮಾಹಿತಿ ಪತ್ರ ಕೂಡಾ ಮುದ್ರಿಸದೇ ವರ್ಷಕ್ಕೆ ಎಂಟತ್ತು ಸಾವಿರ ಮಂದಿಗೆ ಪಾಠ ನಡೆಯುತ್ತದೆ. ಇದೊಂದು ಹುಚ್ಚು.
ನೀರು, ಕಾಡಿನ ಕಥೆಗೆ ಆಸಕ್ತರು ನಮ್ಮಲ್ಲಿಗೆ ಬರೋದು ವಿಶೇಷ ಅಲ್ಲ. ಜನ ಬಂದ ತಕ್ಷಣ ಬೇಗ ಪರಿಚಯ ಮಾಡಿಕೊಂಡು ಮಾತು ಶುರು ಮಾಡೋದು ಅಭ್ಯಾಸ. ಇತ್ತೀಚೆಗೆ ರಾಜ್ಯ ಜೀವ ವೈವಿಧ್ಯ ಮಂಡಳಿ ಹಾಗೂ ಕೆನರಾ ಅರಣ್ಯ ವೃತ್ತದ ಸಹಯೋಗದಲ್ಲಿ ನಡೆದ ಔಷಧ ಸಸ್ಯಗಳ ಕುರಿತ ಕಾರ್ಯಗಾರಕ್ಕೆ ಬಂದವರು ನಮ್ಮಲ್ಲಿ ಬಂದಿದ್ದರು.ಸುಮಾರು
150 ಜನರಿದ್ದ ವಾಹನಗಳ ಸಾಲು ಬಂತು,ನಮ್ಮ ದೇವರ ಕಾಡಿನ ಚಾರಣ ನಡೆಯಿತು. ಅಧಿಕಾರಿಗಳು, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು, ನಾಟಿ ವೈದ್ಯರು, ಮೂಲಿಕಾ ತಜ್ಞರು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು,ಸಿಬ್ಬಂದಿಗಳು ಬಂದಿದ್ದರು. ಸಸ್ಯತಜ್ಞ ಸಿದ್ದಾಪುರದ ಎನ್. ಬಿ. ನಾಯ್ಕ ಕಡಕೇರಿ ಜೊತೆಗಿದ್ದು ಸಸ್ಯಪಾಠಕ್ಕೆ ನೆರವಾದರು.
ಒಂದು ಅಚ್ಚರಿ ಅಂದ್ರೆ ಕಾಡಿನ ಈ ಪುಟ್ಟ ಕಾಲುದಾರಿಯಲ್ಲಿ ನಡೆದು ಬರುವವರ ಸಂಖ್ಯೆ ಯಾಕೋ ಹೆಚ್ಚುತ್ತಾ ಇದೆ. ಎಲ್ಲ ದಾರಿಗಳು ನಗರ ಸೇರುವಾಗ ನಮ್ಮ ಹಳ್ಳಿಯ ಹಸಿರು ಹಾದಿ ಹುಡುಕಿ ಬರುವವರು ಇದ್ದಾರೆನ್ನುವುದು ಖುಷಿಯ ಸಂಗತಿ.
ಚಿತ್ರಗಳ ಛಾಯಾಗ್ರಹಕರು: ಶಿವಾನಂದ ಕಳವೆ