ರೈತರ ಜಮೀನುಗಳಲ್ಲಿ ಸಂಶೋಧನೆ ನಡೆಯಬೇಕು: ಸಿಎಂ ಬೊಮ್ಮಾಯಿ

0

ಬೆಂಗಳೂರು: (ಜಿಕೆವಿಕೆ- ಕೃಷಿಮೇಳ) ನವೆಂಬರ್ 05:  ಕೃಷಿ ವಿಶ್ವ ವಿದ್ಯಾನಿಲಯದ  ಸಂಶೋಧನೆಗಳನ್ನು ಕೇವಲ ನಾಲ್ಕು ಗೋಡೆಗಳ ನಡುವೆ ಕೈಗೊಳ್ಳುವ ಬದಲು ರೈತರ ಜಮೀನಿನಲ್ಲಿ ಕೈಗೊಳ್ಳುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಪ್ರತಿಪಾದಿಸಿದರು.

ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ 3ನೇ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ರೈತ ಉತ್ಪಾದಕರ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಅದರಂತೆ, ಮುಂದಿನ ದಿನಗಳಲ್ಲಿ ಸಮಗ್ರ ಕೃಷಿಯನ್ನು ಮಿಷನ್ ಮಾದರಿಯಲ್ಲಿ ಜಾರಿಗೊಳಿಸಬೇಕು. ರಾಜ್ಯ ಸರ್ಕಾರವು ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ಮತ್ತು ಮಹತ್ವ ನೀಡುತ್ತಿದೆ. ಹಣಕ್ಕಿಂತ ದುಡಿಮೆ ಮುಖ್ಯ, ದುಡಿಯುವ ಕೈಗಳು ಸದೃಡವಾದಾಗ ಮಾತ್ರ ರಾಜ್ಯದ ಮತ್ತು ದೇಶದ ಅಭಿವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ,  ರೈತರ ಮಕ್ಕಳ ಶಿಕ್ಷಣಕ್ಕಾಗಿ ರೈತ ನಿಧಿಯನ್ನು ಪ್ರಾರಂಭಿಸಿದೆ. ಇದನ್ನು ಕೂಲಿ ಕಾರ್ಮಿಕರ ಮಕ್ಕಳಿಗೂ ಸಹ ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ ನೇಕಾರರ ಮಕ್ಕಳು, ಮೀನುಗಾರರ ಮಕ್ಕಳು ಇತರೆ ದುಡಿಯುವ ಮಕ್ಕಳಿಗೂ  ವಿಸ್ತರಿಸಿ ಸರ್ವರಿಗೂ ಶಿಕ್ಷಣ ಸಿಗುವಂತಾಗಲು ದೃಡ ಮನಸ್ಸು ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷಿ ಸಚಿವ  ಬಿ.ಸಿ ಪಾಟೀಲ್ ಕರ್ನಾಟಕ ಸರ್ಕಾರ ಕೃಷಿ ವಿಶ್ವವಿದ್ಯಾನಿಲಯದಲ್ಲಿ ರೈತರ ಮಕ್ಕಳಿಗೆ ಶೇ.40 ರಷ್ಟಿದ್ದ ಮೀಸಲಾತಿ ಪ್ರಮಾಣವನ್ನು ಶೆ.50ರಷ್ಟಕ್ಕೆ ಹೆಚ್ಚಿಸಿರುವುದರಿಂದ ಹೆಚ್ಚಿನ ಸಂಖ್ಯೆಯ ರೈತರ ಮಕ್ಕಳು ಕೃಷಿ ಶಿಕ್ಷಣವನ್ನು ಪಡೆಯಲು ಸಹಾಯವಾಗಿದೆ. ಕೃಷಿ ವಿಶ್ವವಿದ್ಯಾನಿಲಯದ ಶಿಕ್ಷಕರು 15 ದಿನಗಳಿಗೊಮ್ಮೆ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡುವುದರಿಂದ ಕೃಷಿ ವಿಶ್ವವಿದ್ಯಾನಿಲಯಗಳ ಸಂಶೋಧನೆಗಳು ಶೀಘ್ರವಾಗಿ ರೈತರ ಜಮೀನಿಗೆ ತಲುಪಲು ಸಹಾಯವಾಗುತ್ತದೆ ಮತ್ತು ಸ್ಥಳೀಯವಾಗಿ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಿದೆ ಎಂದು ತಿಳಿಸಿದರು.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಶಾಸಕ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಬೆಂಗಳೂರು, ಧಾರವಾಡದ  ಕೃಷಿ ವಿಶ್ವವಿದ್ಯಾನಿಲಯಗಳು  ಕೃಷಿಕ್ಷೇತ್ರದಲ್ಲಿ ಹಲವಾರು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ರೈತರ ಮತ್ತು ರಾಜ್ಯದ ಕೃಷಿ ಅಭಿವೃದ್ಧಿಗೆ ಮಹತ್ತರವಾದ ಕೊಡುಗೆಯನ್ನು ನೀಡಿವೆ. ಈ ವಿಶ್ವವಿದ್ಯಾನಿಲಯಗಳ ಸಂಶೋಧನೆಗಳು ರೈತ ಪರವಾಗಿದ್ದರೆ ಹೆಚ್ಚು ಅನುಕೂಲಕರ ಎಂದು ಅಭಿಪ್ರಾಯಪಟ್ಟರು.

ಕಂದಾಯ ಸಚಿವ  ಆರ್. ಅಶೋಕ್ ಮಾತನಾಡಿ,  ಕೋವಿಡ್ ಸಮಯದಲ್ಲಿ ಎಲ್ಲಾ ರಂಗವೂ ವಿಫಲವಾದರೂ ಸಹ ಬದುಕುಳಿದು ಪ್ರಗತಿ ಸಾಧಿಸಿದ ರಂಗವೆಂದರೆ ಕೃಷಿರಂಗ. ಕೋವಿಡ್ ಸಮಯದಲ್ಲಿ ಪಟ್ಟಣಗಳನ್ನು ತೊರೆದು ಗ್ರಾಮೀಣ ಪ್ರದೇಶಕ್ಕೆ ತೆರಳಿ ಕೃಷಿಯನ್ನು ಕೈಗೊಂಡ ಐ.ಟಿ.ಬಿ.ಟಿ ಉದ್ಯೋಗಿಗಳು ಕೃಷಿಯನ್ನು ಲಾಭದಾಯಕ ಉದ್ದಿಮೆಯೆಂದು ತೋರಿಸಿದ್ದಾರೆ. ಈ ಪ್ರಯತ್ನವು ಹೀಗೆ ಮುಂದುವರೆದು ಯುವಕರು ಕೃಷಿಯಲ್ಲಿ ತೊಡಗಿಕೊಂಡು ಕೃಷಿಯೂ ಸಹ ಲಾಭದಾಯಕ ಉದ್ದಿಮೆಯೆಂದು ಸಾಧಿಸಿ ತೋರಿಸಬೇಕೆಂದು  ಹೇಳಿದರು.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಕುಲಪತಿ ಡಾ:. ಎಸ್. ವಿ. ಸುರೇಶ, ಕೃಷಿ ವಿಶ್ವವಿದ್ಯಾನಿಲಯ, ರಾಯಚೂರು ಕುಲಪತಿ  ಡಾ: ಎಂ. ಹನುಮಂತಪ್ಪ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ವಿಶ್ರಾಂತ ಕುಲಪತಿ ಡಾ:.ಪಿ.ಜಿ. ಚಂಗಪ್ಪ, ಸಿ.ಎನ್. ಕೃಷಿ ಇಲಾಖೆ ನಿರ್ದೇಶಕಿ ನಂದಿನಿಕುಮಾರಿ, ಜಲಾನಯನ ಅಭಿವೃದ್ಧಿ ಇಲಾಖೆ  ನಿರ್ದೇಶಕ ಡಾ: ಬಿ.ವೈ. ಶ್ರೀನಿವಾಸ್, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ವಿಸ್ತರಣಾ ನಿರ್ದೆಶಕ  ಕೃವಿವಿ, ಡಾ. ಕೆ. ನಾರಾಯಣಗೌಡ,   ವಿಶ್ವದ್ಯಾಲಯ ಬೆಂಗಳೂರಿನ ಸಂಶೋಧನಾ ನಿರ್ದೇಶಕರು  ಡಾ. ಕೆ.ಬಿ.   ಉಮೇಶ್,  ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ. ಪಿ.ಹೆಚ್. ರಾಮಾಂಜನಿ ಗೌಡ, ಟಿ.ಎಂ. ಅರವಿಂದ್,  ಓ.ಎಸ್. ದಯಾನಂದ,  ಸುರೇಶ್ ಮಾರ್ಗದ್, ಮತ್ತು  ಆರ್. ಶ್ರೀರಾಮ ಹಾಜರಿದ್ದರು.

LEAVE A REPLY

Please enter your comment!
Please enter your name here