ಕರ್ನಾಟಕದಲ್ಲಿ ಹಲಸು ಪ್ರಧಾನ ಬೆಳೆಯಲ್ಲ. ಜಮೀನು-ತೋಟದ ಬದಿಗಳಲ್ಲಿ ಒಂದೋ ಎರಡೋ ಮರಗಳಿರುತ್ತವೆ. ಹೆಚ್ಚು ಮರಗಳಿರುವೆಡೆಯಲ್ಲಿಯೂ ಇದು ಆದ್ಯತೆಯ ಕೃಷಿಯೇನಲ್ಲ. ಬಹುಮಟ್ಟಿಗೆ ಪ್ರಕೃತಿಯ ಪಾಲನೆಯಿಂದಲೇ ಬೆಳೆಯುವ ಸಸ್ಯವಿದು ಎಂದರೆ ಉತ್ಪ್ರೇಕ್ಷೆ ಮಾತಾಗದು. ಕಾರಣ ಇಲ್ಲಿ ಇದಕ್ಕೆ ಗೊಬ್ಬರ, ನೀರು, ಪ್ರೂನಿಂಗ್ ಇತ್ಯಾದಿ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟು. ಆದರೆ ಹಲಸಿನ ಪ್ರಯೋಜನಗಳನ್ನು ನೋಡಿದಾಗ ಇದು ಅಪತ್ಕಾಲದ ಬಂಧು ಎಂಬುದು ಅರಿವಾಗುತ್ತದೆ. ಇಂಥ ಹಲಸನ್ನು ವಿವಿಧ ರೀತಿ ಮೌಲ್ಯವರ್ಧನೆ ಮಾಡಿ-ವಿಸ್ತಾರ ಮಾರುಕಟ್ಟೆಯನ್ನು ಕಂಡು ಕೊಂಡಿರುವ ಕೇರಳಿಗರ ಸಾಧನೆ ಅಚ್ಚರಿ ಮೂಡಿಸುತ್ತದೆ.
ಹಲಸಿನ ತೊಳೆ ತುಂಬ ಸಿಹಿಯಾಗಿದ್ದರೆ ಒಂದಷ್ಟು ತಿನ್ನುತ್ತಾರೆ. ಕೆಲವರು ಚಿಪ್ಸ್-ಹಪ್ಪಳ ಮಾಡುತ್ತಾರೆ. ಈ ರೀತಿ ಮಾಡುವುದು ದಕ್ಷಿಣ ಕನ್ನಡ-ಉತ್ತರ ಕನ್ನಡ ಭಾಗಗಳಲ್ಲಿ ಹೆಚ್ಚು. ಇತ್ತೀಚಿನ ವರ್ಷಗಳಲ್ಲಿ ಅಲ್ಲಿಯೂ ಇಂಥ ಪರಿಪಾಠ ಕಡಿಮೆಯಾಗಿದೆ. ಇದಕ್ಕೆ ಕಾರಣ ಆಧುನಿಕತೆಯ ನಾಗಲೋಟದೊಂದಿಗೆ ಬಿರುಸಾಗಿ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ. ಇದರಿಂದ ಮನೆಗಳ ತಯಾರಿಕೆಗಷ್ಟೇ ಸೀಮಿತವಾಗಿದ್ದ ಅದೆಷ್ಟೋ ಬಗೆಬಗೆಯ ತಿನಿಸುಗಳಿಂದು ಸಣ್ಣ-ಮಧ್ಯಮ-ಬೃಹತ್ ಪ್ರಮಾಣದ ಕೈಗಾರಿಕೆಗಳ ಸ್ವರೂಪ ಪಡೆದುಕೊಂಡಿದೆ.
ಈ ಬೆಳವಣಿಗೆಯನ್ನು ನಿರಾಕರಿಸದೇ ಒಪ್ಪಿಕೊಳ್ಳುವಂಥ ಸ್ಥಿತಿ ಇಂದು ಇದೆ. ಮುಂದಿನ ದಿನಗಳಲ್ಲಿ ಇದರ ಸ್ವರೂಪ ಮತ್ತಷ್ಟು ವಿಸ್ತಾರವಾಗುತ್ತಾ ಹೋಗುವುದು ಖಚಿತ. ಸಿದ್ಧ ಆಹಾರ ತಯಾರಿಕೆ-ಮಾರಾಟ ಕ್ಷೇತ್ರದಲ್ಲಿ ವಿವಿಧ ರೀತಿಯ ವೈವಿಧ್ಯಮಯ ತಿನಿಸುಗಳು ದೊರೆಯುತ್ತಿವೆ. ಆದರೆ ಇದರಲ್ಲಿ ಹಲಸನ್ನೇ ಆಧಾರಿಸಿದ ತಿನಿಸುಗಳು ಒಂದೆರಡಷ್ಟೇ. ಮೊದಲೇ ಹೇಳಿದ ಹಾಗೆ ಇದು ಆಪತ್ಕಾಲದ ಬಂಧುವಾಗಿದ್ದರೂ ಇದನ್ನು ವಿಧವಿಧವಾಗಿ ಮೌಲ್ಯವರ್ಧನೆ ಮಾಡುವ ಕಲೆಗಾರಿಕೆ ಬಗ್ಗೆ ನಾವೀನ್ನೂ ಅಷ್ಟಾಗಿ ಚಿಂತಿಸಿಲ್ಲ. ಅಷ್ಟರಲ್ಲಿಯೇ ಈ ಹಾದಿಯಲ್ಲಿ ನೆರೆಯ ಕೇರಳ ರಾಜ್ಯ ಸಾಕಷ್ಟು ಮುಂದೆ ಸಾಗಿದೆ. ಬಿರುಗಾಲನ್ನಿಟ್ಟು ಮುಂದೆ ಸಾಗುತ್ತಲೇ ಇದೆ. ಅವರ ಈ ಸಾಧನೆ ಅನೇಕ ಕಾರಣಗಳಿಗಾಗಿ ಗಮನಾರ್ಹ.
ಕೇರಳದಲ್ಲಿ ಹಲಸಿನ ಮೌಲ್ಯವರ್ಧನೆ ಅಕ್ಷರಶಃ ಒಂದು ಬೃಹತ್ ಉದ್ಯಮವಾಗಿದೆ. ಅಲ್ಲಿ ಈ ಉದ್ಯಮ ತೀವ್ರ ಸ್ವರೂಪದಲ್ಲಿ ಬೆಳವಣಿಗೆಯಾಗುತ್ತಿರುವುದು ಗಮನಾರ್ಹ.ಅಲ್ಲಿ ತಿನಿಸುಗಳ ಬಗ್ಗೆಯಷ್ಟೆ ಅಲ್ಲ; ಹಲಸಿನ ಕುರಿತ ಸಮೃದ್ಧ ಮಾಹಿತಿಯೂ ದೊರೆಯುತ್ತದೆ. ಈ ಕುರಿತ ಸಿಡಿಗಳು, ಡಿವಿಡಿಗಳು. ಪುಸ್ತಕಗಳು ಸಾಕಷ್ಟು ಸಂಖ್ಯೆಯಲ್ಲಿ ದೊರೆಯುತ್ತವೆ. ಅಲ್ಲಿನ ಕೃಷಿವಿಶ್ವವಿದ್ಯಾಲಯಗಳು ಸಾಕಷ್ಟು ಹಲಸು ತಳಿಗಳನ್ನು ಅಭಿವೃದ್ಧಿಪಡಿಸಿವೆ.
ಹಲಸಿಗೆ ಸಂಬಧಿಸಿದ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಕೇರಳ ಕೃಷಿ ವಿಶ್ವವಿದ್ಯಾಲಯದ ನುರಿತ ಸಿಬ್ಬಂದಿ ಆಸಕ್ತರಿಗೆ ಸಾಕಷ್ಟು ಮಾಹಿತಿ ಒದಗಿಸುತ್ತಾರೆ. ಇದಲ್ಲದೇ ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಕೂಡ ಹಲಸು ಕೃಷಿ ಕ್ಷೇತ್ರದಲ್ಲಿ ರೈತರಿಗೆ ತಮ್ಮಿಂದ ದೊರೆಯುವ ಸೌಲಭ್ಯಗಳ ವಿವರಗಳನ್ನು ನೀಡುತ್ತಾರೆ. ಹಲಸಿನ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಕಂಪನಿಗಳು ಕೂಡ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ.
ಹಲಸಿನ ವಿವಿಧ ರೀತಿಯ ಭರ್ಪಿ ಪೇಡಾ, ವೈವಿಧ್ಯಮಯ ಸ್ವಾದದ ಹಲ್ವಾಗಳು. ಜಾಮ್-ಜೆಲ್ಲಿಗಳು, ಪಪ್ಸ್, ದೋಸೆ, ಪಾಯಸ, ವಿವಿಧ ರೀತಿಯ ಖಾರ ತಿನಿಸುಗಳು ಮತ್ತು ಇನ್ನೂ ಅನೇಕ ವೈವಿಧ್ಯಮಯ ತಿನಿಸುಗಳು ಅಲ್ಲಿನ ಸಣ್ಣ, ಮಧ್ಯಮ, ಬೃಹತ್ ಘಟಕಗಳಲ್ಲಿ ತಯಾರಾಗುತ್ತವೆ. ಅಲ್ಲಿನ ಇನ್ನೊಂದು ವಿಶೇಷತೆಯೆಂದರೆ ವಿವಿಧ ತಳಿಯ ಹಲಸುಗಳ ತೊಳೆಗಳನ್ನು ಆಕರ್ಷಕ ಪ್ಯಾಕಿಂಗ್ ನಲ್ಲಿಟ್ಟು ಮಾರಾಟ ಮಾಡುವುದು. ಇದರ ಬೆಲೆಯೂ ದುಬಾರಿಯಲ್ಲ.
ಸ್ತ್ರೀ ಶಕ್ತಿ ಸಂಘಟನೆಗಳು: ಕೇರಳದಲ್ಲಿ ಸ್ತ್ರೀ ಶಕ್ತಿ ಸಂಘಟನೆಗಳು ವ್ಯಾಪಕವಾಗಿವೆ. ಇಂಥ ಅನೇಕ ಗುಂಪುಗಳು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ-ಮಾರಾಟದಲ್ಲಿಯೂ ತೊಡಗಿಸಿಕೊಂಡಿವೆ. ತಮ್ಮ ಸದಸ್ಯೆಯರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಮಾರ್ಗದರ್ಶನವನ್ನೂ ಮಾಡುತ್ತಿವೆ. ವಿಶೇಷವಾಗಿ ಹಲಸು ಮೌಲ್ಯವಧನೆಯಲ್ಲಿ ತೊಡಗಿಸಿಕೊಂಡ ಸಂಘಗಳೂ ಇವೆ. ಸ್ವತಃ ಇಂಥ ಒಂದು ಸಂಘಟನೆಯ ಸ್ಥಾಪಕರಾದ ತಿರುವಂತನಪುರದ ನಿವಾಸಿ ಜಯಕುಮಾರಿ ತಮ್ಮ ಯಶೋಗಾಥೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ‘ಕೇರಳಿಗರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯನ್ನು ಅಚ್ಚುಕಟ್ಟಾಗಿ ಮಾಡಿದಾಗ ತುಂಬ ಪ್ರೋತ್ಸಾಹಿಸುತ್ತಾರೆ. ರುಚಿ ಜೊತೆಗೆ ಶುಚಿಯೂ ಮುಖ್ಯ. ಈ ಅಂಶಗಳು ಇರುವಂಥ ಮೌಲ್ಯವರ್ಧನೆ ಉತ್ಪನ್ನಗಳಿಗೆ ಅಪಾರ ಬೇಡಿಕೆ ಇದೆ. ಕೆಲವಾರು ಸದಸ್ಯೆಯರ ಸಹಕಾರದಿಂದ ಮನೆಯಲ್ಲಿಯೇ ಹಲಸಿನ ಜಾಮ್-ಜೆಲ್ಲಿ, ಹಪ್ಪಳ ತಯಾರು ಮಾಡಿ ಮಾರಾಟ ಮಾಡುತ್ತಿದ್ದೇನೆ. ಇದುವರೆಗೂ ಉತ್ಪನ್ನಗಳು ತಯಾರಿಸಿದ ಎರಡು ದಿನಗಳ ಒಳಗೆ ಖಾಲಿಯಾಗದೇ ಉಳಿದ ಉದಾಹರಣೆಗಳೇ ಇಲ್ಲ’
ಈ ಮಾತು ಕೇರಳದಲ್ಲಿನ ಮೌಲ್ಯವರ್ಧನೆ ಕಾರ್ಯ ಮತ್ತು ಅಲ್ಲಿನ ಗ್ರಾಹಕರ ಆಸಕ್ತಿಯನ್ನು ಬಿಂಬಿಸುತ್ತದೆ. ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರು ಮತ್ತು ಮುಂದೆ ತೊಡಗಿಸಿಕೊಳ್ಳಲಿರುವವರ ಉತ್ತೇಜನಕ್ಕೆ ಕೇರಳ ಸರಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂಬುದು ಕೂಡ ಗಮನಾರ್ಹ.
ಪೇಢಾ ಮತ್ತು ಐಸ್ ಕ್ರೀಮ್: ಪೇಢಾ ಎಂದರೆ ನಮ್ಮ ಕಣ್ಮುಂದೆ ಹಾಲು ಖೋವಾದಿಂದ ಮಾಡಿದ ತಿನಿಸು ಬರುತ್ತದೆಯಲ್ಲವೇ. ಕೇರಳದ ಮಿಲ್ಟೋ ಕಂಪನಿಯವರು ಹಲಸಿನಿಂದ ಖೋವಾ ಅಲ್ಲದೇ ಭರ್ಪಿಗಳನ್ನೂ ಮಾಡಿದ್ದಾರೆ. ರುಚಿಯಲ್ಲಿ ಹಾಲಿನ ಖೋವಾ ಪೇಡಾವನ್ನು, ಹಲಸಿನ ಪೇಢಾ ಸರಿಗಟ್ಟುತ್ತದೆ. ಇಂಥ ಪೇಢಾಗಳನ್ನು ಅಚ್ಚುಕಟ್ಟಾಗಿ ಬೇರೆ ಬೇರೆ ಅಳತೆಯಲ್ಲಿ ಗುಣಮಟ್ಟದ ಪ್ಯಾಕಿಂಗ್ ಉತ್ನನ್ನ ಬಳಸಿ ಪ್ಯಾಕ್ ಮಾಡಲಾಗುತ್ತದೆ.
ಕರ್ನಾಟಕದಲ್ಲಿ ಹಲಸು ಮೌಲ್ಯವರ್ಧನೆ: ಹಲಸು ಮೌಲ್ಯವರ್ಧನೆ- ಮಾರುಕಟ್ಟೆ ಸೃಷ್ಟಿ, ಉತ್ತೇಜನ- ಬೆಳವಣಿಗೆಯಲ್ಲಿ ಕೇರಳ ಮಾಡಿರುವ ಸಾಧನೆಗಳನ್ನು ನೋಡಿದಾಗ ಕರ್ನಾಟಕದಲ್ಲಿ ಆಗಬೇಕಿರುವ ಕೆಲಸ ಸಾಕಷ್ಟು. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಯೂ ಹಲಸು ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕಂಡುಕೊಳ್ಳುವ ದಿಶೆಯಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಈ ಕಾರ್ಯಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ಬೆಂಬಲ ನೀಡುವ ಅಗತ್ಯವಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತವೆ.