ನಾಗರಿಕತೆ ಬೆಳೆಯುತ್ತಾ ಹತ್ತು ಹಲವು ಬದಲಾವಣೆಗಳನ್ನು ಕಂಡಿದೆ. ಕೃಷಿಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ನಿತ್ಯ ಹಲವು ರೈತರು ಕೃಷಿ ಉತ್ಪನ್ನಗಳನ್ನು ಬೆಳೆಯುವುದರ ಜೊತೆಗೆ ಸುಸ್ಥಿರ ಬದುಕು ಕಂಡುಕೊಳ್ಳಲು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಸಾಕಷ್ಟು ಮಂದಿ ಅಂತಹ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ.
ದಯಾನಂದ ಅಪ್ಪಯ್ಯನವರಮಠ ಅವರು ಬೈಲಹೊಂಗಲ ತಾಲೂಕಿನ ಕರುಗುಂದ ನಿವಾಸಿ . ಚಿತ್ರಕಲೆಯಲ್ಲಿ ಬಿ.ಎಫ್.ಎ ಪದವಿ ಪಡೆದಿದ್ದಾರೆ. ಕೃಷಿಯಲ್ಲಿ ಬದುಕಿನ ದಾರಿ ಕಂಡುಕೊಂಡಿದ್ದಾರೆ. ಇವರಿಗೆ 15 ಏಕರೆ ಜಮೀನಿದೆ. ಅದರಲ್ಲಿ ಮನೆಯ ಸುತ್ತ್ತಲಿನ 2 ಎಕರೆಯಲ್ಲಿ ವೃಕ್ಷಾಧಾರಿತ ಬೇಸಾಯ ಮಾಡುತ್ತಿದ್ದಾರೆ. ಜೇನುಕೃಷಿಯ ಜೊತೆ ಮಾವು ಚಿಕ್ಕು ಬಾಳೆ ಕರಿಬೇವು, ದಾಲ್ಚಿನ್ನಿ ಪೇರು, ಹೀಗೆ ಹಲವು ರೀತಿಯ ಮರಗಳನ್ನು ಇಲ್ಲಿ ಕಾಣಬಹುದಾಗಿದೆ.
ಪಾಲಿಹೌಸ್:ಯೋಜನಾಧರಿತ ಕೃಷಿ ಮಾಡುವ ದಯಾನಂದರು 10 ಗುಂಟೆಯಲ್ಲಿ 10 ಲಕ್ಷ ವ್ಯಯಿಸಿ ಪಾಲಿಹೌಸ ನಿರ್ಮಿಸಿದ್ದಾರೆ. ಅದರಲ್ಲಿ ಸಬ್ಸಿಡಿ 3.5 ಲಕ್ಷ ದೊರೆತಿದೆ. ಪಾಲಿಹೌಸಿನಿಂದ ವಾತವರಣದ ಸಮತೋಲನ ಕಾಪಾಡಲು ಹಾಗೂ ಕೀಟಭಾದೆಯನ್ನು ತಡೆಯುವಲ್ಲಿ ಸಾಧ್ಯವಾಗಿದೆ. ಇಲ್ಲಿ ಸವತೆ ,ಸೇವಂತಿ ಬೆಳೆಗಳನ್ನು ಬೆಳೆದು ಯಶ ಕಂಡಿದ್ದಾರೆ.
ಕೈ ಹಿಡಿದ ಉಪಕಸಬು: ಜೇನುಕೃಷಿ ಬಲು ಕಷ್ಟವಾದರೂ ಇವರಿಗೆ ಸಿದ್ದಿಸಿದೆ. ಮೊದಮೊದಲು ಹುಳು ಕಚ್ಚಿಸಿಕೊಂಡಿದ್ದಿದೆ. ಹಳೆ ಗೋಡೆ ಕಟ್ಟಡಗಳಲ್ಲಿ ಅವಿತ ತೊರವಿ ಜೇನನ್ನು ನಾಜೂಕಾಗಿ ತಂದು ಹಿಡಿದಿಡುವ ಕೆಲಸ ಬಲು ಪ್ರಯಾಸ. ಇದಕ್ಕಾಗಿ ಇತ್ತೀಚಿಗೆ ಬೆಂಗಳೂರಿಂದ ಜೇನು ಬಿಡಿಸುವ ಉಡುಪು ತಂದಿದ್ದಾರೆ. ಸದ್ಯ 10 ಬಾಕ್ಸ್‍ಗಳಲ್ಲಿ ಜೇನುಗೂಡುಗಳಿವೆ.ಒಂದು ಬಾಕ್ಸ್ನಿಂದ 2 ಕೆ.ಜಿ ಜೇನು ತೆಗೆಯುತ್ತಿದ್ದಾರೆ. ಇದನ್ನು ಕೆ.ಜಿಗೆ 450 ರೂಪಾಯಿಯಂತೆ ಮಾರಾಟ ಮಾಡುತ್ತಾರೆ.
ಬಹುಪಯೋಗಿ ಹೈನುಗಾರಿಕೆ: 10 ಹಸುಗಳಿವೆ. ಉತ್ತಮರೀತಿಯಲ್ಲಿ ಹೈನುಗಾರಿಕೆ ನಡೆಯುತ್ತಿದೆ. ಲಭ್ಯವಾಗುವ ಸೆಗಣಿ ಬಳಸಿ ದೊಡ್ಡ ಪ್ರಮಾಣದ ಗೋಬರ್ ಗ್ಯಾಸ್ ನಿರ್ಮಿಸಿದ್ದಾರೆ. ಇದರ ಸ್ಲರಿಯನ್ನು ತೋಟಕ್ಕೆ ಹಾಯಿಸುತ್ತಾರೆ. ಇದು ಅತ್ಯುತ್ತಮ ಸಾವಯವ ಗೊಬ್ಬರವಾಗಿದೆ. ತೋಟದಲ್ಲಿನ ಫಸಲು ಸಹ ಹೆಚ್ಚಾಗಿದೆ.
ಪವರ್ ಕಟ್ ಪ್ರಾಬ್ಲಂ ಇಲ್ಲ: ಗೋಬರ್ ಗ್ಯಾಸ್ ಇರುವುದರಿಂದ ಅಡುಗೆ ಅನಿಲ ಕೊರತೆಯಿಲ್ಲ. ಮನೆಯಲ್ಲಿ ದೀಪಗಳನ್ನು ಬೆಳಗಿಸುವುದು ಸಾಧ್ಯವಾಗಿದೆ. ಈ ವ್ಯವಸ್ಥೆ ಇರುವುದರಿಂದ ಪವರ್ ಕಟ್ ಪ್ರಾಬ್ಲಂ ಇಲ್ಲ ಎಂದು ನಗುತ್ತಾರೆ. ಈ ಕಾರ್ಯಗಳನ್ನು ಇವರು ಅತೀಕಡಿಮೆ ಖರ್ಚಿನಲ್ಲಿ ಮಾಡಿಕೊಂಡಿರುವುದು ಗಮನಾರ್ಹ. ಮೂರು ಪ್ರತ್ಯೇಕ ತೊಟ್ಟಿಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ ತೋಟದ ತ್ಯಾಜ್ಯಗಳನ್ನು ಹಾಕುತ್ತಾರೆ. ಎರೆಹುಳಗಳ ಮುಖಾಂತರ ಅವೆಲ್ಲ ಶೀಘ್ರವಾಗಿ ಗೊಬ್ಬರವಾಗುತ್ತದೆ. ಇದನ್ನು ನಿಯಮಿತವಾಗಿ ತೋಟಗಳಿಗೆ ಪೂರೈಸುತ್ತಾರೆ.
=====================================================
ಸ್ವಯಂ ನಿರ್ವಹಣಾ ಶೌಚಾಲಯ:ಇವರದು ಊರ ಪಕ್ಕದ ಜಮೀನು/ತೋಟ. ಈ ಸುತ್ತಮುತ್ತಲಿಗೆ ನಿತ್ಯವೂ ಮಲವಿಸರ್ಜನೆಗೆ ಬರುವವರನ್ನು ತಡೆಯುವುದೇ ದೊಡ್ಡ ಕೆಲಸವಾಗಿತ್ತು. ಬಯಲು ಬಹಿರ್ದೆಶೆ ಬೇಡ. ಆರೋಗ್ಯಕರವಲ್ಲ. ಮನೆ ಬಳಿಯೇ ಶೌಚಾಲಯ ನಿರ್ಮಿಸಿಕೊಳ್ಳಿ ಎಂದರೂ ಹೆಚ್ಚಿನವರು ಕೇಳುತ್ತಿರಲಿಲ್ಲ. ಆದ್ದರಿಂದ ತೋಟದ ಪಕ್ಕದಲ್ಲಿಯೇ ನಾಲ್ಕು ಶೌಚಾಲಯ ನಿರ್ಮಿಸಿದರು. ಅದನ್ನು ಹಳ್ಳಿಗರ ಬಳಕೆಗೆ ಬಿಟ್ಟುಕೊಟ್ಟರು.
ಯಾಂತ್ರಿಕೃತ ವ್ಯವಸ್ಥೆ: ಶೌಚಾಲಯಗಳ ವಿಶೇಷತೆ ಏನೆಂದರೆ ಸಂಪೂರ್ಣ ಯಾತ್ರಿಕೃತವಾಗಿರುವುದು. ಸುಮಾರು 30 ಕುಟುಂಬದ 100 ಮಂದಿ ನಿತ್ಯವೂ ಈ ಶೌಚಾಲಯಗಳನ್ನು ಉಪಯೋಗಿಸುತ್ತಾರೆ. 4 ಕುಟುಂಬಕ್ಕೆ ಒಂದು ಕೀಲಿ ಕೊಟ್ಟಿದ್ದಾರೆ.ಕೀಲಿ ತಗೆಯುವಾಗಲೆ ಒತ್ತುಗುಂಡಿಗಳ ಮೂಲಕ ಶೌಚದ ಗುಂಡಿಯಲ್ಲಿ ರಭಸದಿಂದ ನೀರು ಹರಿಯುತ್ತದೆ. ಇದರಿಂದ ಸದಾ ಸ್ವಚ್ಚತೆ ನಿರ್ವಹಣೆ ಸಾಧ್ಯವಾಗಿದೆ. ಇಲ್ಲಿಯ ತ್ಯಾಜ್ಯ, ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿತವಾಗುವಂತೆ ವ್ಯವಸ್ಥೆ ಮಾಡಿದ್ದಾರೆ.
=====================================================
ಚಿತ್ರಕಲೆಯಲ್ಲಿ ಪದವಿ ಪಡೆದ ದಯಾನಂದ, ಪ್ರಯತ್ನಿಸಿದ್ದರೆ ನಗರದಲ್ಲಿ ಆಕರ್ಷಕ ಸಂಬಳದ ನೌಕರಿ ದೊರೆಯುತ್ತಿತ್ತು. ಆದರೆ ಸ್ವಾವಲಂಬಿ ಉದ್ಯೋಗದ ಮೂಲಕವೇ ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡಿದರು. ವ್ಯವಸ್ಥಿತ ಯೋಜನೆಗಳನ್ನು ಹಾಕಿಕೊಂಡು ಯಶಸ್ವಿಯೂ ಆದರು. ಕೃಷಿಯಿಂದ ಇವರಿಗೆ ಪ್ರಸ್ತುತ ದೊರೆಯುತ್ತಿರುವ ನಿವ್ವಳ ವಾರ್ಷಿಕ ಆದಾಯ 9 ಲಕ್ಷ ರೂಪಾಯಿ.
ಇವರ ಯಶೋಗಾಥೆಯನ್ನು ಪ್ರತ್ಯಕ್ಷವಾಗಿ ನೋಡಿ ಅರಿತುಕೊಳ್ಳಲು ಸಾಕಷ್ಟು ಮಂದಿ ಕೃಷಿಕರು ಇಲ್ಲಿಗೆ ಬರುತ್ತಾರೆ. ಸ್ವಲ್ಪವೂ ಬೇಸರವಿಲ್ಲದೇ ಅವರ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ದೊರೆಯುತ್ತದೆ. “ಆರಂಭದ ಹಾದಿ ಸುಗಮವಾಗಿರಲಿಲ್ಲ. ಕಲ್ಲುಮುಳ್ಳುಗಳನ್ನು ತುಳಿದಿದ್ದೇನೆ. ಅದೇ ಹಾದಿಯನ್ನು ಸರಿ ಮಾಡಿಕೊಂಡು ನಡೆಯುತ್ತಿದ್ದೇನೆ. ಕಷ್ಟ ಎಂದು ಹಿಂಜರಿಯಬಾರದು” ಇದು ದಯಾನಂದ ಅವರ ಅನುಭವದ ಮಾತು.
ಹೆಚ್ಚಿನ ಮಾಹಿತಿಗೆ : 99641 24176