ಕೃಷಿ ಆವಿಷ್ಕಾರ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಆಯೋಜಿಸಿದ್ದ ಕೃಷಿ ನವೋದ್ಯಮಿಗಳ ವಸ್ತುಪ್ರದರ್ಶನ ಹಾಗೂ ಸಂವಹನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ:09-08-2023 ರಂದು ಕೃವಿವಿ, ಜಿಕೆವಿಕೆ, ಬೆಂಗಳೂರಿನಲ್ಲಿ ಜರುಗಿತು. ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್.ವಿ. ಸುರೇಶ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೃಷಿ ಆವಿಷ್ಕಾರ ಕೇಂದ್ರವು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಉತ್ಕೃಷ್ಟ ಕೇಂದ್ರವಾಗಿದೆ. 2017 ರಿಂದ ಕಾರ್ಯನಿರ್ವಹಿಸುತ್ತಿದೆ. ಸ್ಟಾರ್ಟಪ್‌ಗಳ ನವೀನ ಆಲೋಚನೆಗಳನ್ನು ಆರ್ಥಿಕವಾಗಿ ಮತ್ತು ವಾಣಿಜ್ಯಿಕವಾಗಿ ಲಾಭದಾಯಕ ಉತ್ಪನ್ನಗಳಾಗಿ ಪರಿವರ್ತಿಸುವ ಧ್ಯೇಯದ್ದೇಶವನ್ನು ಹೊಂದಿದೆ. ಕೇಂದ್ರವು ಉದ್ಯಮಿಗಳು, ರೈತರು, ಶಿಕ್ಷಣ ತಜ್ಞರು, ಕೃಷಿ ಪದವೀಧರರು, ಕೃಷಿ ವಿಜ್ಞಾನಿಗಳು ಯಶಸ್ವಿ ಉತ್ಪನ್ನ / ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ನವೀನ ಆಲೋಚನೆಗಳನ್ನು ಕಾರ್ಯಗತಗೊಳಿಸಲು ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಕೇಂದ್ರದಲ್ಲಿರುವ ಪ್ರಯೋಗಾಲಯಗಳು ಮತ್ತು ಇತರ ಮೂಲಭೂತಸೌಕರ್ಯಗಳಿಂದ ಕೃಷಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವ, ಹೊಸ ಉತ್ಪನ್ನಗಳನ್ನು ಆವಿಷ್ಕರಿಸಲು ಮತ್ತು ಅಭಿವೃದ್ಧಿಪಡಿಸಲು ಕೃಷಿ ಆಧಾರಿತ ಉದ್ಯಮಿಗಳಿಗೆ ಅವಕಾಶ ಕಲ್ಪಿಸುವ ಸೌಲಭ್ಯಗಳನ್ನು ಹೊಂದಿದೆ. ಕೇಂದ್ರದ ನವೀನತೆಯ ವೈಶಿಷ್ಟತೆಗಳೆಂದರೆ ಜೈವಿಕ ವಸ್ತು ಭಂಡಾರ ಮತ್ತು ಜ್ಞಾನ ಕೋಶ.
ಬೆಳೆ ಸುಧಾರಣೆಗೆ ಜೈವಿಕ ತಂತ್ರಜ್ಞಾನಗಳು, ಜೈವಿಕ ಗೊಬ್ಬರಗಳು, ಜೈವಿಕ ಕೀಟನಾಶಕಗಳು, ಜೈವಿಕ ಇಂಧನಗಳು, ಜೈವಿಕ ಶಕ್ತಿ ಮತ್ತು ಜೈವಿಕ ಕಳೆನಾಶಕಗಳು, ಬೀಜೋತ್ಪಾದನೆ, ಅಂಗಾಂಶ ಕೃಷಿ, ಎರೋಪೋನಿಕ್ಸ್, ಹೈಡ್ರೋಪೋನಿಕ್ಸ್, ಕೃಷಿಯಲ್ಲಿ ನ್ಯಾನೋ ತಂತ್ರಜ್ಞಾನ, ಸಂರಕ್ಷಣೆ ಮತ್ತು ದ್ವಿತೀಯ ಕೃಷಿ ನಾವೀನ್ಯತೆ ಕೇಂದ್ರದ ಪ್ರಮುಖ ಸಂಶೋದನಾ ಆವಿಷ್ಕಾರಗಳ ವಿಷಯಗಳಾಗಿವೆ ಎಂದು ಕುಲಪತಿ ವಿವರಿಸಿದರು.
ಉತ್ಕೃಷ್ಟ ಕೇಂದ್ರದಿಂದ ಇದುವರೆಗೆ 30 ಕೃಷಿ ಉದ್ದಿಮೆದಾರರು ಹೊರಹೊಮ್ಮಿರುತ್ತಾರೆ. 8.83 ಕೋಟಿ ಅನುದಾನ ಸಂದಾಯವಾಗಿರುತ್ತದೆ. 293 ಉದ್ಯೋಗಿಗಳಿಗೆ ಕೆಲಸ ನೀಡಿರುತ್ತದೆ. 33 ತಂತ್ರಜ್ಞಾನಗಳು / ಪದಾರ್ಥಗಳನ್ನು ಅಭಿವೃದ್ಧಿ ಪಡಿಸಿದೆ, 7 ವಾಣಿಜ್ಯಕರಣ ಗೊಂಡಿರುತ್ತವೆ ಮತ್ತು 7 ಹಕ್ಕುಸ್ವಾಮ್ಯ ಪಡೆದಿರುತ್ತವೆ. ವಿದ್ಯಾರ್ಥಿಗಳ ಸಂಶೋಧನಾ ಅಭಿರುಚಿಗೆ ಪ್ರೋತ್ಸಾಹಿಸಿ ಭವಿಷ್ಯದ ವಿಜ್ಞಾನಿಗಳಾಗಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ: ಜಿತೇಂದ್ರ ಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಜೈವಿಕ ತಂತ್ರಜ್ಞಾನ ಸಂಶೋಧನಾ ಸಹಾಯ ಮಂಡಳಿ, ಜೈವಿಕ ತಂತ್ರಜ್ಞಾನ ಸಂಸ್ಥೆ, ಭಾರತ ಸರ್ಕಾರ ಅವರು ಮಾತನಾಡಿದರು. ಕೃಷಿಯನ್ನು ಉದ್ಯಮವಾಗಿ ಪರಿವರ್ತಿಸಿದಾಗ ಮಾತ್ರ ರೈತರು ಆರ್ಥಿಕವಾಗಿ ಸದೃಡವಾಗಲು ಸಾಧ್ಯ. ಆಧುನಿಕ ತಾಂತ್ರಿಕತೆಗಳು ರೈತರ ಮನೆ ಬಾಗಿಲಿಗೆ ತಲುಪುವಂತಾಗಬೇಕು ಮತ್ತು ಜೈವಿಕ ತಾಂತ್ರಿಕತೆಗಳು ಜನಸ್ನೇಹಿಯಾಗಬೇಕು ಎಂದರು.
ಕೈಷಿಯಲ್ಲಿ ಬೀಜ, ಗೊಬ್ಬರ ಮತ್ತು ಔಷಧಿ ಉದ್ಯಮಿಗಳು ಜೈವಿಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳುವಲ್ಲಿ ಹಿಂದೆಬಿದ್ದಿದ್ದಾರೆ. ಕೃಷಿಯಲ್ಲಿ ಮತ್ತಷ್ಟು ಜೈವಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂತಹ ಪೂರಕ ವಾತಾವರಣ ಸೃಷ್ಠಿಯಾಗಬೇಕು. ರೈತರು ತಾವು ಬೆಳೆದ ಪದಾರ್ಥಗಳನ್ನು ಮಧ್ಯವರ್ತಿಗಳಿಗೆ ನೀಡದೆ ಆನ್‌ಲೈನ್ ಮೂಲಕ ಮಾರಾಟ ಮಾಡಬೇಕು. ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ತಾಂತ್ರಿಕತೆಗಳ ಬ್ಯಾಂಕ್ ಆಗಿದೆ. ವಿದ್ಯಾರ್ಥಿಗಳು ಹಾಗೂ ನವೋದ್ಯಮಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಅನುದಾನವನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ರೈತ ಪರ ಸಂಶೋಧನೆಗಳನ್ನು ಕೈಗೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆಯಿತ್ತರು.
ಕಾರ್ಯಕ್ರಮದಲ್ಲಿ ಡಾ. ಕೆ.ಸಿ. ನಾರಾಯಣಸ್ವಾಮಿ, ಶಿಕ್ಷಣ ನಿರ್ದೇಶಕರು, ಡಾ. ಎನ್.ಬಿ. ಪ್ರಕಾಶ್, ಡೀನ್ (ಕೃಷಿ), ಡಾ: ವಿ.ಎಲ್. ಮಧುಪ್ರಸಾದ್, ವಿಸ್ತರಣಾ ನಿರ್ದೇಶಕರು, ಡಾ. ಹೆಚ್.ಸಿ ಪ್ರಕಾಶ್, ಡೀನ್ (ಸ್ನಾತಕೋತ್ತರ) ಮತ್ತು ಡಾ: ಕೆ.ಎಂ. ಹರಿಣಿಕುಮಾರ್, ಆಡಳಿತಾಧಿಕಾರಿಗಳು (ನಿವೃತ್ತ), ಕೃವಿವಿ, ಜಿಕೆವಿಕೆ, ಬೆಂಗಳೂರು ರವರು ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ನವೋದ್ಯಮಿಗಳ ಅವಿಷ್ಕಾರಗಳನ್ನು ಕುರಿತ ಕಿರು ಹೊತ್ತಿಗೆಯನ್ನು ಬಿಡುಗಡೆ ಗೊಳಿಸಲಾಯಿತು. 30 ನವೋದ್ಯಮಿಗಳು ತಮ್ಮ ಅವಿಷ್ಕಾರಗಳನ್ನು ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಿದರು.