- ಭಾರತೀಯ ಉಪಖಂಡದಲ್ಲಿ ಕಾಡಿನ ಕಳೆಯಾದ ಲಂಟಾನಾ ಕ್ಯಾಮೆರಾದ ನಿರ್ವಹಣೆಗಾಗಿ ವಿನೂತನ ವಿಕೇಂದ್ರೀಕೃತ ಮಾದರಿ
ಪರಿಚಯ:
ಬ್ರಿಟಿಷ್ ವಸಾಹತೀಕರಣದ ಸಂದರ್ಭದಲ್ಲಿ 1807ರಲ್ಲಿ ಭಾರತಕ್ಕೆ ಲಂಟಾನಾ ಅಡಿಯಿರಿಸಿತು. ಬಹು ಶೀಘ್ರವಾಗಿ ದೇಶದಾದ್ಯಂತ ಆಕ್ರಮಣಕಾರಿಯಾಗಿ ಹರಡಿ ಜೀವ ವೈವಿದ್ಯೆತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಕಳೆದ ಕೆಲವು ದಶಕಗಳಲ್ಲಿ, ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಸ್ಥಳೀಯ ಬುಡಕಟ್ಟು ಸಮುದಾಯಗಳ ಜೀವನೋಪಾಯದ ಮತ್ತು ಸ್ಥಳೀಯ ಜೀವವೈವಿಧ್ಯತೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುವ ಮೂಲಕ ಇದು ಹಲವು ಪ್ರದೇಶಗಳಿಗೆ ಹರಡಿದೆ.
ಲಂಟಾನಾ ಆಕ್ರಮಣ:
IUCN-ವಿಶ್ವ ಸಂರಕ್ಷಣಾ ಒಕ್ಕೂಟದ ಪ್ರಕಾರ ಜಾಗತಿಕ ಭೂ ಮೇಲ್ಮೈಯನಲ್ಲಿ ಆರನೇ ಒಂದು ಭಾಗವು ಲಂಟಾನಾ ಆಕ್ರಮಣಕ್ಕೆ ತುತ್ತಾಗಿದೆ. ಕಠಿಣ ನಿಯಂತ್ರಣ ಕಾರ್ಯಕ್ರಮಗಳಿಲ್ಲದ ಕಾರಣ ಲಂಟಾನಾ ಹರಡುವಿಕೆಯು ಅಡೆತಡೆಯಿಲ್ಲದೆ ಸಾಗಿದೆ. ಮತ್ತು ಇದರಿಂದಾಗಿ ಜೀವನೋಪಾಯ ಮತ್ತು ಜೀವವೈವಿಧ್ಯತೆಯ ಎರಡರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇದನ್ನು IUCN-ವಿಶ್ವ ಸಂರಕ್ಷಣಾ ಒಕ್ಕೂಟವು ವಿಶ್ವದ 10 ಅತ್ಯಂತ ಆಕ್ರಮಣಕಾರಿ ಕಳೆ ಜಾತಿಗಳಲ್ಲಿ ಒಂದೆಂದು ಪಟ್ಟಿ ಮಾಡಿದೆ.
ಲಂಟಾನಾ ಸಸ್ಯದ ಗುಣಲಕ್ಷಣಗಳು:
ಸಸ್ಯವನ್ನು ವಿಶಿಷ್ಟವಾಗಿ ಮರದ ದಪ್ಪ-ಕಾಂಡದ ಪೊದೆಸಸ್ಯ ಎಂದು ವರ್ಗೀಕರಿಸಬಹುದು; ಅಸಂಖ್ಯಾತ ಗಾಢ ಬಣ್ಣದ ಹೂವುಗಳು ಪರಾಗಸ್ಪರ್ಶಕ್ಕಾಗಿ ವಿಶೇಷವಾಗಿ ಚಿಟ್ಟೆಗಳನ್ನು ಆಕರ್ಷಿಸುತ್ತವೆ. ಲಕ್ಷಾಂತರ ಹೆಕ್ಟೇರ್ ಅರಣ್ಯ ಮತ್ತು ಹುಲ್ಲುಗಾವಲು ಭೂಮಿಯನ್ನು ಯಶಸ್ವಿಯಾಗಿ ಆಕ್ರಮಣಮಾಡಿದೆ; ಕೃಷಿ ಭೂಮಿ ಒಳಗೊಂಡಂತೆ ಹೆಚ್ಚಿನ ಪ್ರದೇಶಗಳಲ್ಲಿ ಪಕ್ಷಿಗಳು, ಕರಡಿ, ನರಿ ಮುಂತಾದವುಗಳ ಮೂಲಕ ಹರಡಿ ಎಲ್ಲ ತರಹದ ಭೂ ಪ್ರದೇಶಗಳಲ್ಲಿ ಚದುರಿಹೋಗಿದೆ.
ಆಕ್ರಮಣದ ಕಾರ್ಯವಿಧಾನ:
ಲಂಟಾನವು ವೇಗವಾಗಿ ಬೆಳವಣಿಗೆ ಮತ್ತು ಹೆಚ್ಚಿನ ಸಂತಾನೋತ್ಪತ್ತಿ ಸಾಮರ್ಥ್ಯದ ವಿಷಯದಲ್ಲಿ ಹೆಚ್ಚು ಆಕ್ರಮಣಕಾರಿಯಾಗಿದೆ, ಇದು ಸ್ಥಳೀಯ ಸಸ್ಯ ಪ್ರಭೇದಗಳೊಂದಿಗೆ (ಸ್ಥಳ, ಬೆಳಕು, ತೇವಾಂಶ, ಪೋಷಕಾಂಶಗಳು ಮತ್ತು ಪರಾಗಸ್ಪರ್ಶಕ್ಕಾಗಿ) ಸ್ಪರ್ಧಿಸುತ್ತದೆ.
ಲಂಟಾನಾ ಸಸ್ಯ ಅವಕಾಶವಾದಿ ಗುಣ ಹೊಂದಿದೆ. ಅದರ ಹೆಚ್ಚಿನ ಪ್ಲಾಸ್ಟಿಟಿಯಿಂದಾಗಿ (ವಿಶಾಲ ಶ್ರೇಣಿಯ ಸಹಿಷ್ಣುತೆ ಮತ್ತು ಹೊಂದಿಕೊಳ್ಳುವಿಕೆ) ಕನಿಷ್ಠ ಸಂಪನ್ಮೂಲಗಳೊಂದಿಗೆ ಬದುಕುಳಿಯುತ್ತದೆ ಮತ್ತು ತೊಂದರೆಗೊಳಗಾದ ಮತ್ತು ಕ್ಷೀಣಿಸಿದ ಆವಾಸಸ್ಥಾನದ ಲಾಭವನ್ನು ಪಡೆದುಕೊಳ್ಳುತ್ತದೆ.
ಅಲೆಲೋಪತಿ; ಲಂಟಾನ ಸಸ್ಯದಿಂದ ಬಿಡುಗಡೆಯಾದ ರಾಸಾಯನಿಕಗಳು ಸ್ಥಳೀಯ ಸಸ್ಯಗಳ ಬೆಳವಣಿಗೆಯನ್ನು ನಿರುತ್ಸಾಹಗೊಳಿಸುವಂತಹ ಒಂದು ವಿದ್ಯಮಾನದಿಂದ ಹರಡುವಿಕೆ ಸಾಮರ್ಥ್ಯ ಹೆಚ್ಚುಮಾಡಿಕೊಳ್ಳುತ್ತದೆ.
ಫಿನೋಟೈಪಿಕ್ ಪ್ಲಾಸ್ಟಿಟಿ; ಈ ಗುಣದಿಂದ ವಿಶಾಲವಾದ ಭೌಗೋಳಿಕ ಪ್ರದೇಶ, ಸ್ಥಳೀಯ ಸಸ್ಯಗಳೊಂದಿಗೆ ಪರಿಣಾಮಕಾರಿಯಾಗಿ ಸ್ಪರ್ಧಿಸುವ ಸಾಮರ್ಥ್ಯ ಮತ್ತು ಸಸ್ಯ ಸಂತಾನೋತ್ಪತ್ತಿ ಸ್ಪರ್ದೆಯಿಂದ ನೈಸರ್ಗಿಕ ಆವಾಸಸ್ಥಾನವನ್ನು ಆವರಿಸಿಕೊಂಡಿದೆ.
ಪರಿಣಾಮಕಾರಿ ಬೀಜ ಪ್ರಸರಣ ಮತ್ತು ವಿಸ್ತೃತ ಬೀಜ ಸುಪ್ತ; ಅದರ ಹಣ್ಣುಗಳನ್ನು ತಿನ್ನುವ ಹಕ್ಕಿಗಳಿಂದ ವ್ಯಾಪಕವಾದ ಹರಡುವಿಕೆ, (ಹೆಚ್ಚಿನ ಸಂಖ್ಯೆಯ ಬೆರ್ರಿ, ಉತ್ಪಾದಿಸುವ ಬೀಜಗಳು) ಮತ್ತು ಬೀಜಗಳು (ಹೆಚ್ಚಿನ ಸುಪ್ತಾವಸ್ಥೆ) ಮಣ್ಣಿನಲ್ಲಿ ಹೆಚ್ಚಿನ ಬದುಕುಳಿಯುವಿಕೆಯ ಪ್ರಮಾಣದಿಂದ ನೈಸರ್ಗಿಕ ಆವಾಸಸ್ಥಾನವನ್ನು ಆವರಿಸಿಕೊಂಡಿದೆ.
ಈ ಲೇಖನವು ಲಂಟಾನಾ ನಿಯಂತ್ರಣಕ್ಕೆ ಸ್ಥಳೀಯ ತಂತ್ರಜ್ಞಾನಗಳ ಬಳಕೆಯ ಮಹತ್ವವನ್ನು ತಿಳಿಸುತ್ತದೆ. ಸ್ಥಳೀಯ ವಿಕೇಂದ್ರೀಕೃತ ವ್ಯವಸ್ಥೆ ಮತ್ತು ಪುನರಾವರ್ತನೆಯ ತಂತ್ರಗಳ ಬಗ್ಗೆ ತಿಳಿವಳಿಕೆ ಮತ್ತು ಲಂಟಾನ ನಿರ್ವಹಣೆಯ ಮೇಲೆ ದೀರ್ಘಾವಧಿಯ ಪರಿಣಾಮಗಳ ಬಗ್ಗೆಯೂ ಮಾಹಿತಿ ನೀಡುತ್ತದೆ.
ಲಂಟಾನಾ ಆಕ್ರಮಣದಿಂದ ಉಂಟಾಗುವ ತೊಂದರೆಗಳು:
ಜೀವವೈವಿಧ್ಯ, ಜೀವನೋಪಾಯಗಳು, ಪರಿಸರ ವ್ಯವಸ್ಥೆ ಸೇವೆಗಳು ಮತ್ತು ಅರಣ್ಯ ನಿರ್ವಹಣೆಯ ಮೇಲಿನ ಪರಿಣಾಮಗಳು: ವಿಲಕ್ಷಣ ಕಳೆಗಳ ಆಕ್ರಮಣ ಮತ್ತು ಸ್ಥಳೀಯ ಪ್ರಭೇದಗಳ ಅವನತಿ ಅಥವಾ ಅಳಿವು ಉಂಟಾಗುತ್ತದೆ ಎಂದು ಅನೇಕ ಅಧ್ಯಯನಗಳು ದಾಖಲಿಸಿವೆ (ಅರವಿಂದ್ ಮತ್ತು ಇತರರು 2010; ಪ್ರಿಯಾಂಕಾ & ಜೋಶಿ 2013). ನೈಸರ್ಗಿಕ ಅರಣ್ಯದಲ್ಲಿ ಲಂಟಾನಾ ಆಕ್ರಮಣ ಮತ್ತು ಅದರ ಪ್ರಭಾವವು ಜಾಗತಿಕ ಮಟ್ಟದಲ್ಲಿ ಆತಂಕ ಉಂಟು ಮಾಡಿದೆ.
ಲಂಟಾನಾವು ಜೀವವೈವಿಧ್ಯತೆ, ಜೀವನೋಪಾಯ ಮತ್ತು ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ (GISD 2010). ಪರಿಸರ ವ್ಯವಸ್ಥೆಯ ಸೇವೆಗಳನ್ನು ಬದಲಾಯಿಸುವ, ಸಾಮಾಜಿಕ-ಪರಿಸರ ಬದಲಾವಣೆಗೆ ಚಾಲನೆ ನೀಡುವ, ಉಷ್ಣವಲಯದ ಅರಣ್ಯದ ಉತ್ಪನ್ನಗಳ ಉತ್ಪಾದನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವ ವಿಶ್ವದ ಹತ್ತು ಅತ್ಯಂತ ಕೆಟ್ಟ ಆಕ್ರಮಣಕಾರಿ ಸಸ್ಯ ಪ್ರಭೇದಗಳಲ್ಲಿ ಲಂಟಾನ ಒಂದಾಗಿದೆ (ಸುಂದರ್ಮಾ ಮತ್ತು ಹಿರೇಮಠ 2012).
ಅರಣ್ಯ ಪ್ರದೇಶಗಳಲ್ಲಿ ಸಾಮಾಜಿಕ-ಸಾಂಸ್ಕೃತಿಕ ಸಂಪರ್ಕಗಳನ್ನು ಹೊಂದಿರುವ ಸ್ಥಳೀಯ ಸಮುದಾಯಗಳಿಗೆ ಪ್ರಮುಖ ಮೂಲವಾಗಿರುವ ಸ್ಥಳೀಯ ಔಷಧೀಯ ಸಸ್ಯಗಳು ಮತ್ತು ಕಾಡು ಆಹಾರ ಸಸ್ಯಗಳ ಜಾಗಗಳನ್ನೂ ಲಂಟಾನಾ ಆಕ್ರಮಿಸಿದೆ (ಮುರಳಿ ಮತ್ತು ಸೆಟ್ಟಿ 2001). ಒಣ ಎಲೆ ಉದುರುವ ಕಾಡುಗಳಲ್ಲಿ ಲಂಟಾನದ ಉಪಸ್ಥಿತಿಯು ಮೂಲಿಕೆಯ ಸಸ್ಯವರ್ಗಗಳ ಪ್ರದೇಶ ಕಡಿಮೆಯಾಗಲು ಕಾರಣವಾಗಿದೆ. (ಶೌಕತ್ & ಸಿದ್ದಿಕಿ, 2002).
ಲಂಟಾನಾ ಕ್ಯಾಮೆರಾ ಸಸ್ಯ ಆಕ್ರಮಣವು ಮಾನವ-ವನ್ಯಜೀವಿ ಸಂಘರ್ಷವನ್ನು ಹೆಚ್ಚಿಸುತ್ತದೆ:
ಹುಲ್ಲು ಮತ್ತು ಸ್ಥಳೀಯ ಸಸ್ಯಗಳ ಅವನತಿಯು ಕಾಡು ಸಸ್ಯಹಾರಿ ಪ್ರಾಣಿಗಳನ್ನು (ಕಾಡುಹಂದಿ, ಸಾಂಬಾರ್, ಜಿಂಕೆ, ಆನೆಗಳು) ಆಹಾರಕ್ಕಾಗಿ ಕೃಷಿಕರು ಬೆಳೆಸುವ ಬೆಳೆಗಳ ಮೇಲೆ ದಾಳಿ ಮಾಡಲು ಕಾರಣವಾಗಿದೆ. ಹೆಚ್ಚುವರಿಯಾಗಿ, ದಟ್ಟವಾದ ಲಂಟಾನಾ ಪೊದೆಗಳ ಮೂಲಕ ಕಡಿಮೆ ಗೋಚರತೆಯಿಂದಾಗಿ, ಮಾನವ ಮತ್ತು ಕಾಡು ಪ್ರಾಣಿಗಳು ಮುಖಾಮುಖಿಯಾಗುವ ಮೂಲಕ ಅಪಾಯಗಳನ್ನು ಹೆಚ್ಚಿಸುತ್ತದೆ.
ಲಂಟಾನಾ ಮತ್ತು ಬೆಂಕಿಯ ಪರಸ್ಪರ ಕ್ರಿಯೆಗಳು:
ಲಂಟಾನಾ ಆಕ್ರಮಣದ ಪ್ರದೇಶವು ಬೆಂಕಿಗೆ ಗುರಿಯಾಗುತ್ತದೆ ಏಕೆಂದರೆ ಲಂಟಾನ ಉರುವಲು ರಾಶಿಯು ಹೆಚ್ಚಿನ ತೀವ್ರತೆಯ ಬೆಂಕಿಗೆ ಕಾರಣವಾಗುತ್ತಿದೆ. ಅರಣ್ಯ ಪರಿಸರ ವ್ಯವಸ್ಥೆಗಳ ಮೇಲೆ ಬೆಂಕಿಯ ಪರಿಣಾಮಗಳು ಸೇರಿವೆ; ಮರಗಳ ಸಾವಿನ ಹೆಚ್ಚಳ, ಪೊದೆಗಳು, ಗಿಡಮೂಲಿಕೆಗಳು ಮತ್ತು ಅವಲಂಬಿತ ಪ್ರಾಣಿಗಳ ನಷ್ಟ. ಸ್ಥಳೀಯ ಸಸ್ಯ ಜಾತಿಗಳ ಪುನರುತ್ಪಾದನೆ ಮತ್ತು ಸಸ್ಯವರ್ಗದ ಸಂಯೋಜನೆ ಮತ್ತು ರಚನೆಯ ಮೇಲೆ ಗಮನಾರ್ಹ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ (ಶರ್ಮಾ ಮತ್ತು ಇತರರು 2005).
ಏಟ್ರಿ ಸಂಸ್ಥೆಯ “ಕಳೆಯಿಂದ ಸಂಪತ್ತು ಪರಿಕಲ್ಪನೆ”
ಇತರ ಬಳಕೆಗಳಲ್ಲದೆ, ಲಂಟಾನಾದಿಂದ ಪೀಠೋಪಕರಣಗಳನ್ನು ತಯಾರಿಸುವುದು ನೇರ ಬಳಕೆಯಾಗಿದೆ. ಲಂಟಾನ ಕಾಂಡಗಳು ತೆಳುವಾಗಿದ್ದರೂ ತುಂಬಾ ಕಠಿಣ ಮತ್ತು ಬಾಳಿಕೆ ಬರುವಂತಹದ್ದಾಗಿದೆ ಮತ್ತು ಹೀಗೆ ವಿವಿಧ ಕರಕುಶಲ ವಸ್ತುಗಳಿಗೆ ಉಪಯುಕ್ತವಾಗಿದೆ.
ಮಲೈ ಮಹದೇಶ್ವರ (ಎಂಎಂ) ಹಿಲ್ಸ್ ವನ್ಯಜೀವಿ ಅಭಯಾರಣ್ಯದಲ್ಲಿರುವ ಸೋಲಿಗ ಸಮುದಾಯವು ಬಿದಿರು ಸಂಪನ್ಮೂಲಗಳು ವಿರಳ ಮತ್ತು ದುಬಾರಿಯಾಗಿದ್ದರಿಂದ ತಮ್ಮ ಕರಕುಶಲತೆಗಾಗಿ ಲಂಟಾನವನ್ನು ಬಳಸಿಕೊಳ್ಳುತ್ತಾರೆ. ಈ ಮೂಲಕ ಅವರು ಆದಾಯಗಳಿಸಲು ಸಾಧ್ಯವಾಗುತ್ತಿದೆ ಜೊತೆಗೆ ಸ್ಥಳೀಯ ಪರಿಸರ ವ್ಯವಸ್ಥೆಯ ಚೇತರಿಕೆಗೂ ಸಹಾಯ ಮಾಡುತ್ತಿದ್ದಾರೆ. ತನ್ಮೂಲಕ ಕಾಡ್ಗಿಚ್ಚುಗಳ ಅಪಾಯವನ್ನು ಕಡಿಮೆ ಮಾಡುತ್ತಿದ್ದಾರೆ.
ಏಟ್ರಿ ಸಂಸ್ಥೆಯು ಕಳೆದ ಎರಡು ದಶಕಗಳಿಂದ ಮಾದೇಶ್ವರ ಬೆಟ್ಟದಲ್ಲಿರುವ ಸೋಲಿಗ ಸಮುದಾಯ (ಅರಣ್ಯ-ಅವಲಂಬಿತ) ಬುಡಕಟ್ಟುಗಳೊಂದಿಗೆ (2004 ರಲ್ಲಿ ಪ್ರಾರಂಭವಾಯಿತು) ಕೆಲಸ ಮಾಡುತ್ತಿದೆ. ಲಂಟಾನಾ ಕ್ರಾಫ್ಟ್ ಸೆಂಟರ್ (LCC) ಬುಡಕಟ್ಟು ಜೀವನೋಪಾಯವನ್ನು ರಚಿಸಲು ಲಂಟಾನಾವನ್ನು ಬಳಸಿಕೊಂಡು ಸಮುದಾಯ-ಆಧಾರಿತ ಉಪಕ್ರಮದಿಂದ ಇದು ಗೆಲುವು-ಗೆಲುವು ಪರಿಹಾರವಾಗಿದೆ. ಈ ಮೂಲಕ ಅರಣ್ಯ-ಅವಲಂಬಿತ ಸಮುದಾಯಗಳಿಗೆ ಜೀವನೋಪಾಯ ಕಲ್ಪಿಸಿದೆ. ಈ ಮೂಲಕ ಲಂಟಾನಾ ಸಮಸ್ಯೆಗೆ ನೈಜ-ಜಗತ್ತಿನ ಪರಿಹಾರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.
ಇದರ ಪರಿಣಾಮವಾಗಿ, ಲಂಟಾನಾ ಕ್ರಾಫ್ಟ್ ಅನ್ನು ಬಳಸಿಕೊಂಡು, ಏಟ್ರಿ ಸಂಸ್ಥೆಯು ಸ್ಥಳೀಯ ಸಮುದಾಯವನ್ನು ಅರಣ್ಯ ಮರುಸ್ಥಾಪನೆಯ ಪ್ರಯತ್ನಗಳಿಗೆ ತೊಡಗಿಸುತ್ತಿದೆ. ಅವರಿಗೆ ಜೀವನೋಪಾಯದ ಮೂಲವನ್ನು ಒದಗಿಸುತ್ತಿದೆ. ಈ ಅವಧಿಯಲ್ಲಿ, ಸಮುದಾಯದ ಪ್ರಾಥಮಿಕ ಆದಾಯದ ಮೂಲ ಹೆಚ್ಚಳವಾಗಿದೆ. ಲಂಟಾನಾವನ್ನು ಬಳಸಿಕೊಂಡು ಪೀಠೋಪಕರಣಗಳು ಮತ್ತು ಕರಕುಶಲ ವಸ್ತುಗಳನ್ನು ರೂಪಿಸಲು ಸುಮಾರು 300 ಯುವಜನರಿಗೆ ತರಬೇತಿ ನೀಡಿದೆ.
ಎಲ್ ಸಿ ಸಿ ಯನ್ನು ಸಂಸ್ಥೆಯಾಗಿಸುವಿಕೆ:
ಏಟ್ರಿ ಸಂಸ್ಥೆಯು ಯಶಸ್ಸಿನ ಆಧಾರದ ಮೇಲೆ ಮಾರ್ಗದರ್ಶನ ಜೊತೆಜೊತೆಗೆ ಯೋಜನೆಗಳನ್ನು ರೂಪಿಸುವುದನ್ನು ಮುಂದುವರೆಸಿದೆ. ಎಲ್ ಸಿ ಸಿ ಯು ಕುಶಲಕರ್ಮಿಗಳನ್ನು ಒಳಗೊಂಡ ನೋಂದಾಯಿತ ಸಂಸ್ಥೆಯಾಗಿ ಬೆಳೆಯುತ್ತಿದೆ. ಇದು ಕುಶಲಕರ್ಮಿಗಳನ್ನು ಅವರ ಹಿತಾಸಕ್ತಿಗಳನ್ನು ಕಾಪಾಡುವ ಸಮೂಹವಾಗಿ ಕೆಲಸ ಮಾಡುತ್ತಿದೆ.
ಲೇಖಕರು: ಸಿದ್ದಪ್ಪ ಶೆಟ್ಟಿ., ಹರೀಶ್ ಆರ್.ಪಿ., ನಾರಾಯಣ ಬಿ.