ಬಳ್ಳಾರಿ ಜಾಲಿ ತೆಗೆದು ಮಿಯಾವಾಕಿ ಅರಣ್ಯ ನಿರ್ಮಿಸಿದ ಸಾಹಸ !

0
ಲೇಖಕಕರು: ಮಂಜುನಾಥ್ ಜಿ., ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕೋಲಜಿ ಅಂಡ್ ದ ಎನ್ವಿರಾರ್ಮೆಂಟ್, (ಏಟ್ರಿ) ಬೆಂಗಳೂರು

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಬಳಸಿ ಜಿಲ್ಲಾಡಳಿತ ಗ್ರಾಮಪಂಚಾಯಿತಿ ಮತ್ತು ಸಮುದಾಯದ ಸಹಯೋಗದಲ್ಲಿ ಬಳ್ಳಾರಿ  ಜಾಲಿ/ಸೀಮೆ ಜಾಲಿ/ಸೀಮೈ ಕರುವೇಲಂ ಮರಗಳನ್ನು ತೆಗೆದು ಆ ಜಾಗದಲ್ಲಿ ವೈವಿಧ್ಯ 25 ಸ್ಥಳೀಯ ಸಸ್ಯಗಳನ್ನು ನೆಟ್ಟು ಮಿಯಾವಾಕಿ ಮಾದರಿ  ಅರಣ್ ನಿರ್ಮಿಸಿದ ಸಾಹಸದತ್ತನೋಟ

ರಾಮನಾಥಪುರಕ್ಕೆ ಸೀಮೈ ಕರುವೇಲಂನ ಇತಿಹಾಸ:

ಬಳ್ಳಾರಿ ಜಾಲಿ/ ಸೀಮೈ ಕರುವೇಲಂ ಹೀಗೆ ಸ್ಥಳೀಯವಾಗಿ ಬೇರೇ ಬೇರೇ ಹೆಸರುಗಳಿಂದ ಕರೆಯಲಾಗುವ ಮರ ರಾಮನಾಥಪುರಂಗೆ ಬಂದಿದ್ದು ಹೇಗೆಂಬುದು ಅಲ್ಲಿನ ಸ್ಥಳೀಯ ರೈತರೊಂದಿಗೆ ನಡೆದ ಮಾತುಕತೆಯಲ್ಲಿ ತಿಳಿಯಿತು. 1960ರ ಆಸುಪಾಸಿನಲ್ಲಿ ಸ್ಥಳೀಯವಾಗಿ ಅಡುಗೆ ಮಾಡಲು ಸೇರಿದಂತೆ ಗೃಹ ಬಳಕೆಗೆ ಉರುವಲು ಕೊರತೆಯಾದಾಗ ಅದನ್ನು ಮನಗಂಡ ಅಂದಿನ ಮುಖ್ಯಮಂತ್ರಿ ಕಾಮರಾಜನ್ರವರು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಯಾವ ಗಿಡ ಅತೀ ವೇಗವಾಗಿ ಮತ್ತು ಎಲ್ಲ ಹವಾಮಾನ ವೈಪರಿತ್ಯಗಳಲ್ಲೂ ಉಳಿದು ಮರವಾಗಿ ಬೆಳೆಯುತ್ತದೆ ಎನ್ನುವ ಕುರಿತ ಸಮಾಲೋಚನೆ ನಡೆಸಿದ ಪರಿಣಾಮ,) ಸೀಮೆ ಜಾಲಿಮರದ ಬೀಜಗಳನ್ನು ತರಿಸಿ ಅದನ್ನು ಹೆಲಿಕಾಪ್ಟರಿನಲ್ಲಿ ರಾಮನಾಥಪುರ ಜಿಲ್ಲೆಯಾದ್ಯಂತ ಬಿತ್ತನೆ ಮಾಡಿದರು, ಸುತ್ತಮುತ್ತಿನ ಜಿಲ್ಲೆಗಳಾದ ಶಿವಗಂಗೈ, ಮಧುರೈ, ವಿರುಧುನಗರ್, ದಿಂಡುಗಲ್, ಥೇಣಿ, ತಿರುನಲ್ವೇಲಿ, ತೂತುಕುಡಿ, ಮತ್ತು ಕನ್ಯಾಕುಮಾರಿ ಜಿಲ್ಲೆಗಳ ಗೋಮಾಳ, (ಪೋರಂಬೋಕು,) ಕೆರೆ ದಂಡೆಗಳು ಮತ್ತಿತರೇ ಸರಕಾರಿ ಸ್ಥಳಗಳಲ್ಲಿ ಬಿತ್ತನೆ ಮಾಡಲು ಸೂಚನೆ ಕೊಟ್ಟರು.

ಈ ಕ್ರಮ ಅಂದಿನ ಕಾಲಕ್ಕೆ ಉರುವಲು ಸಮಸ್ಯೆಯನ್ನು ಶೀಘ್ರವಾಗಿ ಮತ್ತು ಯಶಸ್ವಿಯಾಗಿ ನೀಗಿಸಿತು ಆದರೆ ಕ್ರಮೇಣ ಸರಕಾರಿ ಪಡಿತರದಲ್ಲಿ ನೀಡಲಾಗುತ್ತಿದ್ದ ಸೀಮೆ ಎಣ್ಣೆ ಮತ್ತು ಎಲ್ಪಿಜಿಯನ್ನು ಇಂಧನವಾಗಿ ಬಳಸಲು ಶುರುಮಾಡಿದ ಪರಿಣಾಮ ಸೀಮೆ ಜಾಲಿಯನ್ನು ಉರುವಲಿಗೆ ಬಳಸುವ ಪ್ರಮಾಣ ಕಡಿಮೆಯಾಯಿತು.

ಇಂಧನದ ಖರ್ಚು ಕಡಿಮೆಯಾಗಿದ್ದರ ಕಾರಣ ಉರುವಲಿಗೆ ಜಾಲಿಮರಗಳನ್ನು ಆಶ್ರಯಿಸುವುದು ತೀರಾ ಕುಗ್ಗಿದ ಕಾರಣ ಈ ಸಸ್ಯ  ಅನಾಹುತ-ಆಕ್ರಮಣಕಾರಿ ವೇಗದಲ್ಲಿ ಎಲ್ಲಡೆಯೂ ವ್ಯಾಪಿಸಿತು. ಇಂದು  ಇಲ್ಲಿನ ಸ್ಥಳೀಯ ಸಸ್ಯ ವೈವಿಧ್ಯ-ಪರಿಸರಕ್ಕೆ ದೊಡ್ಡ ಮಟ್ಟದ ಜೈವಿಕ ತೊಂದರೆಯಾಗಿ ಪರಿಣಮಿಸಿದೆ.

ಮೊದಲಿಗೆ 150-750 ಮಿಮೀ ವಾರ್ಷಿಕ ಮಳೆಯ ಪ್ರದೇಶಗಳಲ್ಲಿ ಈ ಸಸ್ಯ ಕಂಡುಬರುತ್ತಿತ್ತು ಎಂದು ವರದಿಯಾಗಿದೆ. “ಆದಾಗ್ಯೂ, ತಮಿಳುನಾಡು ರಾಜ್ಯದ ಕಾವೇರಿ ನದಿಯ ಮುಖಜ ಭೂಮಿಯಲ್ಲಿ ಭತ್ತ ಬೆಳೆಯುವ ಪ್ರದೇಶಗಳು 1500 ಮಿಮೀ ಸರಾಸರಿ ವಾರ್ಷಿಕ ಮಳೆ ಬಿದ್ದಿರುವ ಉದಾಹರಣೆ ಇದೆ ಮತ್ತು ಅಲ್ಲಿ ಪ್ರವಾಹಗಳು ಸಾಮಾನ್ಯವಾಗಿವೆ. ಇಂತಹ ಸ್ಥಳಗಳೂ  ಇಂದು ಬಳ್ಳಾರಿ ಜಾಲಿ ಬೆಳೆಯುವ ಸ್ಥಳವಾಗಿ ಬದಲಾಗಿವೆ. ರಾಮನಾಥಪುರಂ ಜಿಲ್ಲೆಯ ಪರಮಕುಡಿ ಬಳಿಯಲ್ಲಿ ಹರಿಯುವ ವೆಂಗೈನದಿ” ಪಾತ್ರದುದ್ದಕ್ಕೂಈ ಬಳ್ಳಾರಿ ಜಾಲಿ ಆವರಿಸಿ ಬೆಳೆದಿದೆ.

ಎಂಥದ್ದೇ ಹವಾಮಾನ ವೈಪರಿತ್ಯ ಸಂದರ್ಭದಲ್ಲಿಯೂ ಆಳವಾಗಿ ಬೇರೂರಿ ಬೆಳೆಯಬಲ್ಲ ಈ ಗಿಡ ಎಲ್ಲ ಕಡೆ ಬೆಳೆಯುತ್ತಾ ಮೃತ ಹೊಂದದ ಕಳೆಯಾಗಿ ಪರಿಣಮಿಸಿದೆ. ಜೊತೆಗೆ ಮೇಕೆಯಂತಹ ಜಾನುವಾರುಗಳು ಇದರ ಕಾಯಿಗಳನ್ನು ಮೇವಾಗಿ ತಿಂದು ತಮ್ಮ ಹಿಕ್ಕೆಯ ಮೂಲಕ ಎಲ್ಲ ಕಡೆ ಬೀಜ ಪ್ರಸರಣ ಮಾಡುತ್ತವೆ. ಕೆಲವು ವೈಜ್ನಾನಿಕ ಮಾಹಿತಿಯ ಪ್ರಕಾರ ಒಂದು ಗಿಡದ ಬೇರುಗಳು ಮಣ್ಣು ಸಡಿಲ ಇರುವಲ್ಲಿ ಆಳವಾಗಿ ಹೋಗಿ ದಿನಕ್ಕೆ ಸರಾಸರಿ 40 ಲೀಟರ್ ನೀರನ್ನು ಬಳಸಿಕೊಂಡು ಬೆಳೆಯುತ್ತವೆ.

ಗಟ್ಟಿಯಾದ ಮಣ್ಣಿನ ಪದರ ಇರುವೆಡೆಯಲ್ಲಿ ಅಡ್ಡಡ್ಡವಾಗಿ ಬೆಳೆಯುತ್ತಾ ಬಿದ್ದ ಮಳೆನೀರನ್ನು ಅಂತರ್ಜಲಕ್ಕೆ ಹೋಗದಂತೆ ತಡೆದು ಬಳಸಿಕೊಳ್ಳುತ್ತವೆ. ಈ ಆಕ್ರಮಣಕಾರಿ ಗಿಡ ಇಂದು ಒಂದು ದೊಡ್ಡ ಜೈವಿಕ ತೊಂದರೆಯಾಗಿದೆ. ಸೀಮೆ ಜಾಲಿ ಗಿಡಗಳು ಹಕ್ಕಿ-ಪಕ್ಷಿಗಳು ವಾಸಕ್ಕೆ ಸೂಕ್ತವಾಗಿದೆ ಇದರ ಕಾಯಿ ಮತ್ತು ಸೊಪ್ಪು ಆಡುಗಳಂತಹ ಪ್ರಾಣಿಗಳಿಗೆ ಮೇವಿನ ಮೂಲವಾಗಿವೆ. ಇದರಿಂದ  ಪಶುಸಂಗೋಪನೆಗೆ ಸಹಾಯಕಾರಿಯಾಗಿದ್ದರೂ ತುಂಬಾ ಜಾಸ್ತಿ / ತುಂಬ ಕಾಲ ಮೇಕೆಯಂತಹ ಪ್ರಾಣಿಗಳು ಇವನ್ನೇ ಆಹಾರವಾಗಿ ತಿಂದರೆ ಅವುಗಳ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ.  ಕೆಲವೊಮ್ಮೆ ಸಾವು ಕೂಡ ಸಂಭವಿಸುತ್ತದೆ ಎನ್ನುವುದು ಸ್ಥಳೀಯ ಜಾನುವಾರ ಸಾಕಾಣೆದಾರರ ಅಭಿಪ್ರಾಯ.

ಬಳ್ಳಾರಿ/ಸೀಮೆ ಜಾಲಿ/ ಸೀಮೈ ಕರುವೇಲಂ ಮತ್ತು ಜಮೈಕಾದ ವಿವರ

ಈ ಸಸ್ಯವು 1960 ರ ದಶಕದಲ್ಲಿ ಉರುವಲು ಸಮಸ್ಯೆ ನೀಗಿಸಿ ಜನಪ್ರಿಯತೆಯನ್ನು ಗಳಿಸಿದೆ. ಆದರೆ ಇದಕ್ಕೂ ಮುಂಚೆಯೇ   ಸುಮಾರು ಒಂದು ಶತಮಾನದ ಹಿಂದೆ ಭಾರತಕ್ಕೆ ಬಂದಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಪ್ರಕಾರ, ಉತ್ತರ ವೃತ್ತದ (ಮದ್ರಾಸ್) ಅರಣ್ಯ ಸಂರಕ್ಷಣಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಖ.ಊ. ಬೆಂಡೋಮ್ ಈ ಸಸ್ಯವನ್ನು  ಸ್ಥಳೀಯವಾಗಿ ಪರಿಚಯಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಅವರೇ 1876ರಲ್ಲಿ ದಕ್ಷಿಣ ಭಾರತದ ಶುಷ್ಕ ಪ್ರದೇಶಗಳಲ್ಲಿ ನೆಡಲು ಸಸ್ಯದ ಬೀಜಗಳನ್ನು ಪೂರೈಸಲು ಮದ್ರಾಸಿನ ಕಂದಾಯ ಇಲಾಖೆಯ ಕಾರ್ಯದರ್ಶಿಗೆ ವಿನಂತಿಸಿದ್ದರು. ಸೀಮೈ ಕರುವೇಲಂ ಬೀಜಗಳನ್ನು ಜಮೈಕಾದಿಂದ ತರಿಸಲಾಯಿತು. 1877 ರಲ್ಲಿ ದಕ್ಷಿಣ ಭಾರತದ ಬೇರೆ-ಬೇರೆ ಪ್ರದೇಶಗಳಲ್ಲಿ ಬಿತ್ತಲಾಯಿತು.

1953ರಲ್ಲಿ ಮದ್ರಾಸಿನ ಮೇವು ಮತ್ತು ಮೇಯಿಸುವಿಕೆ ಸಮಿತಿ ಇಂಧನ ಪೂರೈಕೆಯನ್ನು ಹೆಚ್ಚಿಸಲು ಬಂಜರು ಬೆಟ್ಟಗಳು ಮತ್ತು ಪಂಚಾಯತ್ ಕಾಡುಗಳ ಇಳಿಜಾರುಗಳಲ್ಲಿ ಬಳ್ಳಾರಿ ಜಾಲಿ/ಸೀಮೈ ಕರುವೆಲಂ ಅನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ನಿರ್ಧರಿಸಿತು.

ಆ ಸಮಯದಲ್ಲಿ ವಿವಿಧ ಜಾತಿಯ ಜಾಲಿ/ ಪ್ರೊಸೊಪಿಸ್ ಅನ್ನು ಇಲ್ಲಿ ಪರಿಚಯಿಸಲಾಯಿತು, ಹಾಗಾಗಿಯೇ ಈ ಸಸ್ಯ ಪ್ರಭೇಧವು ದೊಡ್ಡ ಪ್ರಮಾಣದಲ್ಲಿ ಹರಡಿತು. ಇಂದು ಭಾರತದ ಬಹುತೇಕ ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳಲ್ಲಿ ಹರಡಿದೆ.  ಎಲ್ಲ ಸರಕಾರಿ ಖಾಲಿ ಮತ್ತು ಕೃಷಿ ಮಾಡದೇ ಪಾಳುಬಿಟ್ಟ ಜಮೀನುಗಳನ್ನು ಆಕ್ರಮಿಸಿಕೊಂಡು ಬೆಳೆದಿದೆ.

ವಾಸ್ತವ ಸಂಗತಿ

ಸೀಮೈ ಕರುವೇಲಂ ಒಂದು ಜೈವಿಕ ಸಮಸ್ಯೆಯಷ್ಟೇ ಅಲ್ಲ, ಈಗ ತೆಗೆದುಹಾಕಲು ಸಾಮಾಜಿಕ ಸಮಸ್ಯೆಯೂ ಇದೆ ಏಕೆಂದರೆ ಉರುವಲಾಗಿ ಬಳಸುವ ಪ್ರಮಾಣ ಕಡಿಮೆಯಾದ ಮೇಲೆ ಕಾಲಾನಂತರದಲ್ಲಿ ಸ್ಥಳೀಯ ಜನರಿಗೆ ಈ ಬಳ್ಳಾರಿ ಜಾಲಿ/ಸೀಮೈ ಕರುವೇಲಂ ನಿಂದ ಇದ್ದಿಲು ತಯಾರಿಸಿ ನಗರದ ಉದ್ದಿಮೆಗಳಿಗೆ ಮಾರಾಟ ಮಾಡಬಹುದಾದ ಸಾಧ್ಯತೆ ಕಂಡಿತು. ಜೊತೆಗೆ ಬೇರೆ ಬೇರೆ ರೀತಿಯ ಕಾರಣಗಳಿಂದಾಗಿ ಕೃಷಿಯನ್ನು ಮಾಡದೇ ಬಿಟ್ಟ ರೈತರಿಗೆ ಇದು ಜೀವನೋಪಾಯ ಒದಗಿಸತೊಡಗಿತು. 2012ರಲ್ಲಿ ನಡೆಸಿದ ಒಂದು ಅಧ್ಯಯನವು ಮರವನ್ನು ಇದ್ದಿಲು ಆಗಿ ಪರಿವರ್ತಿಸುವುದರಿಂದ ಗಣನೀಯ ಆದಾಯವಿದೆ ಎಂದು ತಿಳಿಸಿದೆ.

ವಿಶೇಷವಾಗಿ ಸಣ್ಣ ರೈತರಿಗೆ: 3–5 ವರ್ಷದ ಹಳೆಯ ಮರವನ್ನು ನೇರವಾಗಿ ಮಾರಾಟ ಮಾಡುವುದರಿಂದ ಎಕರೆಗೆ ರೂ. 16,500 ಮತ್ತು 5–10 ವರ್ಷ ಹಳೆಯ ಮರ ಎಕರೆಗೆ ರೂ. 24,750 ಆದಾಯ ಒದಗಿಸುತ್ತದೆ.  ಈ ಮರಗಳನ್ನು ಸುಟ್ಟು ಮಾಡುವ ಇದ್ದಿಲಿನಲ್ಲಿ “ಇಂಗಾಲ”ದ ಶೇಖರಣೆ ಅತೀ ಹೆಚ್ಚು ಇರುವ ಕಾರಣ ನಗರದಲ್ಲಿ ಸುಮಾರು ಉದ್ದಿಮೆಗಳಲ್ಲಿ ಬಳಸುತ್ತಾರೆ. ಕೆಲವು ಕಡೆ ವಿದ್ಯುತ್ ಕೂಡ ಉತ್ಪಾದನೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ.

ಪರಿಸರದ ಜೀವವೈವಿಧ್ಯತೆಗೆ ತೊಂದರೆಯಾಗುತ್ತಿರುವ ಕಾರಣಗಳಿಂದಾಗಿ 2015ರಲ್ಲಿ ಮದ್ರಾಸ್ ಹೈಕೋರ್ಟ್ನಲ್ಲಿ ಎಲ್ಲ ಕಡೆ ಬಳ್ಳಾರಿ ಜಾಲಿ/ಸೀಮೆ ಜಾಲಿಯನ್ನು ತೆಗೆಯಲು ಆದೇಶ ಕೊಡಬೇಕೆಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಾಯಿತು. ಎಲ್ಲವನ್ನು ವಿವರವಾಗಿ ಪರಿಶೀಲಿಸಿದ ಹೈಕೋರ್ಟ್ ಕೂಡ  ಸೀಮೆ ಜಾಲಿಯನ್ನು ತೆಗೆಯಬೇಕು ಎನ್ನುವ ಆದೇಶ ನೀಡಿತು. ಎಲ್ಲಡೆಯೂ ಬಳ್ಳಾರಿ ಜಾಲಿ/ಸೀಮೆ ಜಾಲಿಯನ್ನು ತೆಗೆಯುವ ಕಾರ್ಯ ಆಂದೋಲನದಂತೆ ಶುರುವಾಯಿತು.

ನರೇಗಾದ ಮೂಲಕ ಬಳ್ಳಾರಿ ಜಾಲಿ/ಸೀಮೆ ಜಾಲಿಯನ್ನು ತೆಗೆದು ಹಾಕಿ ಅಲ್ಲಿ ಮಿಯಾವಾಕಿ ಮಾದರಿಯಲ್ಲಿ ಕಿರು ಅರಣ್ಯ ನಿರ್ಮಾಣ ಮಾಡುವ ಕಾರ್ಯ

ರಾಮನಾಥಪುರಂ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಬಳ್ಳಾರಿ ಜಾಲಿ/ಸೀಮೆ ಜಾಲಿಯನ್ನು ತೆಗೆಯಲು ನರೇಗಾದಂಥ ಉತ್ತಮ ಯೋಜನೆಯನ್ನು ಬಳಸಿಕೊಳ್ಳಲಾಯಿತು, ನಮ್ಮ ತಂಡದವರು ಈ ಸ್ಥಳಗಳಿಗೆ ಭೇಟಿ ಕೊಟ್ಟು ಅಲ್ಲಿನ ಸ್ಥಿತಿ ಅಧ್ಯಯನ ಮಾಡಿದೆವು

ರಾಮನಾಥಪುರಂ ಜಿಲ್ಲೆಯ ಕೀರಮ ಗ್ರಾಮ ಪಂಚಾಯತಿ ವ್ಯಾಪ್ತಿಯ ತಾತನೆಂತಾಳ್ ಗ್ರಾಮದಲ್ಲಿ “ಡಿಸ್ತ್ಟ್ರಿಕ್ಟ್ ರೂರಲ್ ಡೆವೆಲಪ್ಮೆಂಟ್ ಏಜೆನ್ಸಿ” ಮತ್ತು ಗ್ರಾಮ ಪಂಚಾಯಿತಿ ವತಿಯಿಂದ  3 ಎಕರೆ ಬಳ್ಳಾರಿ ಜಾಲಿ/ಸೀಮೆ ಜಾಲಿಯನ್ನು ತೆಗೆದು ಹಾಕಲು ನಿರ್ಧರಿಸಲಾಯಿತು. ಅಲ್ಲಿ ಗ್ರಾಮ ಪಂಚಾಯಿತಿಯ ಅನುದಾನದಿಂದ 25 ವಿಧದ ಸ್ಥಳೀಯ ಮರಗಳನ್ನು ಮೀಯಾವಾಕಿ ಮಾದರಿಯಲ್ಲಿ ನೆಟ್ಟು ಅದನ್ನು 3 ವರ್ಷಗಳಿಂದ ಪೋಷಿಸಿಕೊಂಡು ಬರುತ್ತಿದ್ದಾರೆ.. ಯಾಕೆಂದರೆ ಜಾಲಿ ತೆಗೆದು ಆ ಜಾಗವನ್ನು ಹಾಗೇ ಬಿಟ್ಟರೇ ಮತ್ತೆ ಜಾಲಿಯೇ ಬೆಳೆದು ಅಕ್ರಮಿಸಿಕೊಳ್ಳುತ್ತದೆ, ಹಾಗಾಗಿ ಮಿಯಾವಾಕಿ ಮಾದರಿಯ ಸ್ಥಳೀಯ ಮರಗಳ ಕಿರು ಅರಣ್ಯ ಬೆಳೆಸಿದರು.

ನರೇಗಾ ಅಡಿಯಲ್ಲಿ ಜಾಲಿ ತೆಗೆದು ಸ್ಥಳೀಯ ಜಾತಿಯ ಮರಗಳನ್ನು ಬೆಳೆಸಿರುವ ಮಿನಿ ಫಾರೆಸ್ಟ್ ಮತ್ತೂ ಅದನ್ನು ನೋಡಿಕೊಳ್ಳುತ್ತಿರುವ ಉದ್ಯೋಗ ಖಾತ್ರಿ ಕಾರ್ಮಿಕರ ಮತ್ತು ಅಧ್ಯಕ್ಷರ ಜೊತೆಗೆ ತಾತ ನೆಂತಾಳ್ ಗ್ರಾಮದಲ್ಲಿ ಮಾತುಕತೆ ನಡೆಸಲಾಗಿದೆ.

ಅಲ್ಲಿನ ನರೇಗಾ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶ್.ರಾಜೇಂದ್ರ ಻ವರ ಜೊತೆಗೆ ಮಾತನಾಡಿದಾಗ “ಈ ಸೀಮೈ ಕರುವೇಲಂ ಗಿಡಗಳಿಂದ ಇಲ್ಲಿ ನೀರು ಭೂಮಿ ಎಲ್ಲವೂ ಹಾಳಾಗುತ್ತಿದೆ ಹಾಗಾಗೀ ನರೇಗಾದ ಅಡಿಯಲ್ಲಿ ಈ ಕಾರ್ಯ ಕೈಗೊಂಡೆವು” ಎನ್ನುವ ಮಾಹಿತಿ ಕೊಟ್ಟರು.

ಜೊತೆಗೆ ಇಲ್ಲಿ ಈ ಕಾರ್ಯಕ್ಕೆಮಹಿಳೆಯರು ಮತ್ತು ವಯಸ್ಸಾದವರು ಮಾತ್ರ ಬರುತ್ತಿದ್ದು. ಸಣ್ಣ ಗಿಡಗಳನ್ನ ‍ತೆಗೆಯಬಹುದು.. ದೊಡ್ಡ ಮರಗಳ ಕೊಂಬೆಗಳನ್ನು ತೆಗೆಯಬಹುದು, ಆದರೆ ಅದರ ಬುಡ ಸಮೇತ ಕೀಳಿಸಬೇಕಾದರೆ ಜೆಸಿಬಿ ಬಳಸಬೇಕು. ನರೆಗಾದ ನಿಯಮಗಳಲ್ಲಿ ಅದಕ್ಕೆ ಅವಕಾಶ ಇಲ್ಲ. ಇದಕ್ಕೆ ಪೂರಕವಾದ ನಿಯಮ ಬದಲಾವಣೆಯಾದರೆ ಮತ್ತು ಸಣ್ಣ ಪ್ರಮಾಣದ ಯಂತ್ರಗಳನ್ನು ಒದಗಿಸಿದರೆ ಮಾತ್ರ ಇನ್ನೂ ವೇಗದಲ್ಲಿ ಈ ಬಳ್ಳಾರಿ ಜಾಲಿ/ಸೀಮೆ ಜಾಲಿಯನ್ನು ತೆಗೆಯಬಹುದು ಎಂದರು.

ನಮ್ಮ ತಂಡದವರು  ಜಿಲ್ಲಾ ಉಪ ಕಲೆಕ್ಟರ್ ಕೆ.ಜೆ.ಪ್ರದೀಪ್ ಕುಮಾರ್ ಅವರನ್ನು  ಭೇಟಿ ಮಾಡಿ ನಮ್ಮ ಅನಿಸಿಕೆಗಳನ್ನು ಹಂಚಿಕೊಂಡೆವು. ಈ ಸಂದರ್ಭದಲ್ಲಿ ಅಬರು ಜಾಲಿಯನ್ನ ತೆಗೆಯಲು ಏನೆಲ್ಲಾ ಆಡಳಿತಾತ್ಮಕ ಸಮಸ್ಯೆಗಳಿವೆ ಎಂಬ ಮಾಹಿತಿಯನ್ನು ಕೊಟ್ಟರು.

ಪ್ರಸ್ತುತ ಕಂದಾಯ ಇಲಾಖೆ ತನ್ನ ಸುಪರ್ದಿಗೆ ಸೇರಿರುವ ಭೂಮಿಯಲ್ಲಿ ಬೆಳೆದಿರುವ ಸೀಮೆ ಜಾಲಿಯನ್ನ  ಆದಾಯ ತರುವ ಮೂಲವಾಗಿ ನೋಡುತ್ತದೆ ಯಾಕೆಂದ್ರೆ ಸಾವಿರಾರು ಹೆಕ್ಟೇರ್ ಭೂಮಿಯಲ್ಲಿ ಸೀಮೆ ಜಾಲಿ ಇದೆ. ಜೊತೆಗೆ ಅರಣ್ಯ ಇಲಾಖೆ ತನ್ನ ವ್ಯಾಪ್ತಿಯ ಭೂಮಿಯಲ್ಲಿ ಬೆಳೆದಿರುವ ಇದನ್ನು ಜಂಗಲ್ ಎಂದೂ ನೋಟಿಫೈ ಮಾಡಿದೆ. ಹಾಗಾಗಿ ಇದನ್ನು ತೆಗೆಯಬೇಕಾದರೆ ಖರ್ಚು ಅಂದಾಜು ಮಾಡಿಸಿ ನಂತರ ಹರಾಜು ಹಾಕಬೇಕಾಗುತ್ತದೆ. ಆ ನಂತರವೇ ಅದನ್ನು ತೆಗೆಯಲು ಅವಕಾಶ ಇದೆ. ಹೀಗಾಗಿ ಈಗ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಮತ್ತಿತರೆ ಇಲಾಖೆಗಳು ಜೊತೆಗೂಡಿ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಸೀಮೆ ಜಾಲಿ ಕಾಡಿನಲ್ಲಿರುವ ಜಾಲಿ ಸೌದೆಯನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಿ ಅದರಲ್ಲಿ ಅತೀ ದಟ್ಟವಾಗಿ ಅಂದರೆ ಎಕರೆಗೆ 4-5 ಟನ್ ಇರುವುದನ್ನು ಬೇರೆಬೇರೆ ಕ್ಯಾಟಗರಿ ಅಡಿಯಲ್ಲಿ ಗುರುತಿಸಲಾಗಿದೆ.

ಕಡಿಮೆ ಪ್ರಮಾಣದಲ್ಲಿ ಸೌದೆ ಸಿಗುವ ಅಂದ್ರೆ 1-1.5 ಟನ್ ಸಿಗುವ ಜಾಗವನ್ನು ಹೀಗೆ ಅಂದಾಜು ಮಾಡಿ ಅದನ್ನೂ ಸರಕಾರಿ ಸಮುದಾಯ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹರಾಜು ಹಾಕಿ ಜಾಲಿಯನ್ನು ತೆಗೆದು ಆ ಸ್ಥಳಗಳಲ್ಲಿ ಸ್ಥಳೀಯ ಮರಗಳನ್ನು ಹಾಕಿ ಅವನ್ನು ಕಿರು ಅರಣ್ಯ ಮತ್ತು ದೊಡ್ಡ ಅರಣ್ಯಗಳನ್ನಾಗಿ ಅಭಿವೃದ್ಧಿ ಮಾಡುವ ಯೋಜನೆ ಇಲಾಖೆಯ ಮುಂದಿದೆ ಎಂಬ ಮಾಹಿತಿಯನ್ನು ಕೊಟ್ಟರು.

ಪರಮಕುಡಿ ತಾಲ್ಲೂಕಿನ ನರ್ಸರಿಗೆ ಭೇಟಿ ಕೊಟ್ಟೆವು. ಇದೂ ವೆಂಗೈ ನದಿ ದಡದಲ್ಲಿದ್ದು ಇಲ್ಲಿ ಸುಮಾರು 30 ಎಕರೆ ವಿಸ್ತೀರ್ಣದಲ್ಲಿ ಸೀಮೆ ಜಾಲಿಯನ್ನು ತೆಗೆದು ಅಲ್ಲಿ 10. ಲಕ್ಷ ಸ್ಥಳೀಯ ಜಾತಿಯ ಬೇರೆ ಮರಗಳ ಸಸಿಗಳನ್ನು ಬೆಳೆಸಲಾಗು್ತಿದೆ. ಅವನ್ನೆಲ್ಲಾ ಎಲ್ಲೆಲ್ಲಿ ಕಿರು ಅರಣ್ಯಗಳನ್ನು ನಿರ್ಮಾಣ ಮಾಡುವ ಸ್ಥಳಗಳಿವೆಯೋ ಅಲ್ಲಿಗೆ ಸರಬರಾಜು ಮಾಡುತ್ತಾರೆ.

ಉರುಪ್ಪುಳಿ ಗ್ರಾಮ ಪಂಚಾಯಿತಿ ಬಿಡಿಒ ಚಂದ್ರಮೋಹನ್ ಮತ್ತವರ ತಂಡದೊಂದಿಗೆ ಮಾತುಕತೆಯಲ್ಲಿ ಅಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಪೂರ್ಣವಾಗಿ ಎಲ್ಲೆಡೆಯೂ ಬಳ್ಳಾರಿ ಜಾಲಿ ಬೆಳೆದಿತ್ತು, ಸುಮಾರು ಜನ ತಮ್ಮ ಸ್ವಂತ ಜಮೀನುಗಳಲ್ಲೂ ಸಹ ಜಾಲಿಯನ್ನು ಬೆಳೆದು ಮೂರ್ನಾಲ್ಕು ವರ್ಷಗಳಿಗೊಮ್ಮೆ ಅದನ್ನು ಇದ್ದಿಲಾಗಿ ಮಾಡುತ್ತಿದ್ದರು. ಅಂತವರು ಈ ಜಾಲಿಯನ್ನು ಪರ‍್ತಿ ತೆಗೆಯುವ ಕುರಿತು ಒಪ್ಪಿರಲಿಲ್ಲ.

ಇಂಥ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯು ಎಲ್ಲರಿಗೂ ಜಾಲಿ ತೆಗೆಯಲು ಆದೇಶ ಕೊಟ್ಟು, ತೆಗೆದಿಲ್ಲವಾದಲ್ಲಿ ಗ್ರಾಮಪಂಚಾಯಿತಿ ವತಿಯಿಂದಲೇ ತೆಗೆದು ಅದನ್ನು ಮಾರಿ ಮಾಲೀಕನಿಗೆ ಕೊಟ್ಟು ಜೊತೆಗೆ 10ಸಾವಿರ ದಂಡ ಹಾಕಲು ಯೋಜನೆ ಮಾಡಿದರು. 50% ಜನ ತೆಗೆದರು ಜೊತೆಗೆ ಗ್ರಾಮ ಪಂಚಾಯಿತಿಯವರು ಜಿಲ್ಲಾ ಕಲೆಕ್ಟರ್ ಅವರ ಜೊತೆ ಮಾತನಾಡಿ ಅನುಮತಿ ಪಡೆದು ಮೊದಲು ಸರ್ಕಾರಿ ಜಮೀನುಗಳಲ್ಲಿ ತೆಗೆಸಿದರು.

ಜಾಲಿ ಮರಗಳನ್ನು ತೆಗೆಯದೇ ಇದ್ದ, ಕೃಷಿ ಹೊಂಡಕ್ಕೆ ಸಲ್ಲಿಸಿದ್ದ 50 ಮಂದಿಯ ಅರ್ಜಿಗಳನ್ನು  ಮಂಜೂರು ಮಾಡಿರಲಿಲ್ಲ ಕಡೆಗೆ ಜಿಲ್ಲಾ ಕಲೆಕ್ಟರ್ ಅವರಿಗೆ ದೂರು ಹೋಯ್ತು ನಂತರ ಬಂದು ಪರಿಶೀಲನೆ ಮಾಡಿದ್ದ ಜಿಲ್ಲಾ ಕಲೆಕ್ಟರ್ ಜಾಲಿ ತೆಗೆದ ಮೇಲೆ ಮಾತ್ರವೇ ಕೃಷಿ ಹೊಂಡ ಮಂಜೂರು ಮಾಡಲು ತಿಳಿಸಿದರು. ನಂತರ 2 ತಿಂಗಳಲ್ಲಿ  ಪಂಚಾಯಿತಿ ನಿಧಿ ಮತ್ತು ವೈಯುಕ್ತಿಕ ಹಣದಲ್ಲಿ ಇಡೀ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜಾಲಿ ತೆಗೆದು ಹಾಕಿದರು. ಒಂದು ಹಳ್ಳಿಯಲ್ಲಂತೂ 1 ಗಂಟೆಯ ಸಭೆಯ ಬಳಿಕ ಇಡೀ ಜನರು ತಾವೇ ತಾವಾಗಿ ಮುಂದಿನ 2-3 ತಿಂಗಳಲ್ಲಿ ಜಾಲಿಮರಗಳನ್ನು ತೆಗೆದು ಹಾಕಿದರು. ಇದು “ಸಮುದಾಯ ಮತ್ತು ಗ್ರಾಮಪಂಚಾಯಿತಿ” ಜೊತೆಯಾಗಿ ಕೆಲಸ ಮಾಡಿದರೆ ತ್ವರಿತವಾಗಿ ಕೆಲಸವಾಗುತ್ತದೆ ಎನ್ನುವುದಕ್ಕೆ ಉದಾಹರಣೆ.

ಹಳ್ಳಿಯ ಕೃಷಿ ಜಮೀನುಗಳಲ್ಲಿ ಬಳ್ಳಾರಿ ಬೆಳೆದು ಇದ್ದಿಲು ಮಾಡುವ ಹಳ್ಳಿ “ಚಿನ್ನ ಅನೈಯೂರಿ”ಗೆ ಭೇಟಿ ನೀಡಿದೆವು. ಈ  ಹಳ್ಳಿಯ ಪಕ್ಕದಲ್ಲೇ ಹಳ್ಳವಿದ್ದರೂ ನೀರಿಗೆ ಬರ. ನೀರು ಬಂದಾಗ ಮಾತ್ರವೇ ಭತ್ತ, ಸಜ್ಜೆ ಮತ್ತಿತರೆ ಬೆಳೆ ಬೆಳೆಯಬಹುದು. ಹವಾಮಾನ ವೈಪರಿತ್ಯದಿಂದಾಗಿ ಹಾಕಿದ ಬೆಳೆ ಬಾರದಿದ್ದಾಗ ಇಡೀ ಹಳ್ಳಿಯ ಜಮೀನುಗಳಲ್ಲಿ ಹುಲುಸಾಗಿ ಬೆಳೆಯುತ್ತಿದ್ದ ಬಳ್ಳಾರಿ ಜಾಲಿ/ಸೀಮೈ ಕರುವೇಲಂಗಳನ್ನುಆದಾಯದ ಮೂಲವಾಗಿ ಕಂಡು ಕೊಳ್ಳಲಾಯಿತು.

ಇಲ್ಲಿ ಅಂತರ್ಜಲ ಮೇಲೆಯೇ ಇದ್ದರೂ ಉಪ್ಪು ನೀರಾಗಿದೆ. ಹಾಗಾಗಿ ಕೃಷಿ ಮಾಡಲು ಕಷ್ಟವಿದೆ. ಮಳೆಗಾಲದಲ್ಲಿ ಮಾತ್ರವೇ ಕೃಷಿ ಅದರಲ್ಲೂ ಭತ್ತ, ಬೆಳೆಯಬಹುದು ಆದರೆ ಇತ್ತೀಚೆಗೆ ಅನಿಯಮಿತ ಮಳೆಯಿಂದಾಗಿ ಕೃಷಿ ಮಾಡದೇ ಎಲ್ಲಾ ಜಮೀನುಗಳಲ್ಲೂ ಜಾಲಿಯೇ ಬೆಳೆದು ನಿಂತಿದೆ. ಇಡೀ ಹಳ್ಳಿಯ ಸುತ್ತಲೂ ಜಾಲಿಯ ಕಾಡೇ ಸುತ್ತುವರೆದಿದೆ. ಇಲ್ಲಿನ ಬಹುಪಾಲು ಜನರ ಮುಖ್ಯ ಉದ್ಯೋಗವೇ ಇದ್ದಿಲು ಮಾಡುವುದು. ಜನರು ಪ್ರತೀ ಮೂರು ರ‍್ಷಗಳಿಗೊಮ್ಮೆ ಕಟಾವು ಮಾಡುತ್ತಾರೆ, ಅದನ್ನು ಇದ್ದಿಲು ಮಾಡುತ್ತಾರೆ. ಜೊತೆಗೆ ಬೇರೆ ಕಡೆಗಳಲ್ಲಿ ಜಾಲಿ ಕಟಾವು ಮಾಡೋಕೆ ಹೋಗುತ್ತಾರೆ.

ಕರ್ನಾಟಕದಲ್ಲಿ ಬಳ್ಳಾರಿ ಜಾಲಿ/ಸೀಮೆ ಜಾಲಿ

ಕರ್ನಾಟಕದಲ್ಲಿಯೂ ಸಹ ಎಲ್ಲ ಕಡೆ ಅದರಲ್ಲೂ ಗೋಮಾಳ, ಖಾಲೀ ಬಿಟ್ಟ ಜಮೀನುಗಳಲ್ಲಿ ಬೆಳೆಯುತ್ತಾ  ಜೈವಿಕ ವೈವಿಧ್ಯಕ್ಕೆ ತೊಂದರೆಯಾಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇದನ್ನು ಬಳಸಿ ಇದ್ದಿಲು ಮಾಡುವ ಕಾರ್ಯ ಸಣ್ಣ ಪ್ರಮಾಣದಲ್ಲಿದೆ. ಆದರೆ ಬೆಂಗಳೂರು ಸುತ್ತಲ ಜಿಲ್ಲೆಗಳಲ್ಲಿ  ಇದ್ದಿಲು ಮಾಡುವ ಚಟುವಟಿಕೆ ಇಲ್ಲ. ಹೀಗಾಗಿ  ಗೋಮಾಳ ಸೇರಿದಂತೆ  ಎಲ್ಲ ಕಡೆ ವೇಗವಾಗಿ ಬೆಳೆಯುತ್ತಾ ಬೇರೇ ಯಾವುದೇ ಸ್ಥಳೀಯ ಜಾತಿಯ ಗಿಡಗಳನ್ನು ಬೆಳೆಯಲು ಬಿಡುವುದಿಲ್ಲ. ಇದು ಜೈವಿಕ ಸಸ್ಯ ವೈವಿಧ್ಯತೆಗೆ ಒಂದು ದೊಡ್ಡ ತೊಂದರೆಯಾಗುತ್ತಿದೆ.

ಮುಖ್ಯವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ  ಭೂಮಿ ಬಳಕೆ ಮತ್ತು ಭೂಮಿ ಮುಚ್ಚಿಗೆಯ ಕುರಿತು ನಡೆಸಿದ ಮಾದರಿ ಸರ್ವೇಯಲ್ಲಿ ಹಸಿರು ಕಾಡಿನಂತೆ ಕಂಡುಬರುವ ಜಾಗಗಳೆಲ್ಲ ಬಹುಪಾಲು ಬಳ್ಳಾರಿ ಜಾಲಿಯ ತೋಪುಗಳೇ ಆಗಿರೋದು ಕಂಡು ಬಂದಿದೆ..

ತಮಿಳುನಾಡು ಮಾದರಿಯಲ್ಲಿ ಸಾಮಾಜಿಕ ಅರಣ್ಯ, ಗ್ರಾಮ ಅರಣ್ಯ ಸಮಿತಿ, ಮೂಲಕ ಗೋಮಾಳಗಳಲ್ಲಿ ಬೆಳೆದಿರುವ ಜಾಲಿಯನ್ನು ವೈಜ್ಞಾನಿಕವಾಗಿ ತೆಗೆದು ಇಲ್ಲಿಯೂ ಮಿಯಾವಾಕಿ ಅರಣ್ಯ ನಿರ್ಮಾಣ ಮಾಡಬಹುದಾಗಿದೆ.

ತಮಿಳುನಾಡಿಗೆ ಭೇಟಿ ನೀಡಿದ್ದ ತಂಡದ ಸದಸ್ಯರು

ಗಿರೀಶ್ ವರ್ಮ (ಎಟ್ರಿ),  ವರ್ಗೀಶ್ (ಲಿಬ್ ಟೆಕ್),  ಮಂಜುನಾಥ ಜಿ. (ಎಟ್ರಿ),  ಡಾ. ಸೆಲ್ವಮುಖಿಲನ್, ಹಿರಿಯ ವಿಜ್ಞಾನಿ, ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಸಮಿತಿ, ರಾಮನಾಥಪುರಂ,  ಡಾ. ಗೋಪಿನಾಥ್, ಹಿರಿಯ ವಿಜ್ಞಾನಿ, ಎಂ.ಎಸ್.ಎಸ್.ಆರ್.ಎಫ್., ಡಾ.  ಗೋಪಾಲಕೃಷ್ಣನ್, ವಿಜ್ಞಾನಿ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಘಟಕ, ರಾಮನಾಥಪುರಂ

LEAVE A REPLY

Please enter your comment!
Please enter your name here