ಇತಿಹಾಸವು ನಡೆದುಹೋದ ಘಟನೆಗಳನ್ನು ಅರ್ಥ ಮಾಡಿಸುತ್ತದೆ. ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿಯೂ ಮಹತ್ತರ ಪಾತ್ರವನ್ನು ವಹಿಸುತ್ತದೆ, ಭಾರತದ ಮಣ್ಣಿನ ನಾಗರೀಕತೆ ಸಂಸ್ಕೃತಿಗಳನ್ನು ಕುರಿತ ಜ್ಞಾನಭಂಡಾರವೇ ಈ ಕೃತಿಯಾಗಿದೆ. ಕೃಷಿ ಕ್ಷೇತ್ರದಲ್ಲಿ ಮರೆಯಾಗಿರುವ ಅದೆಷ್ಟೊ ಸತ್ಯ ಸಂಗತಿಗಳನ್ನು “ಕೃಷಿ ಕರಗುವ ಸಮಯ” ಕೃತಿ ತೆರೆದಿಡುತ್ತದೆ.
ಭಾರತ, ವೈವಿಧ್ಯತೆಯಲ್ಲಿ ಪ್ರಪಂಚದಲ್ಲೆ ಅಗ್ರಸ್ಥಾನದಲ್ಲಿದೆ. ಜೊತೆಗೆ ಕೃಷಿಯನ್ನು ಸಂಸ್ಕೃತಿಯಾಗಿ ನೋಡಿದ ದೇಶ ಎಂದು ಹೇಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಮಹತ್ವ ಕಳೆದುಕೊಳ್ಳುತ್ತಿದ್ದು ಪಾಶ್ಚಾತ್ಯ ಸಂಸ್ಕೃತಿ ಹಾಗು ನಾಗರೀಕತೆಗಳನ್ನು ಆಳವಡಿಸಿಕೊಳ್ಳುತ್ತಿದೆ. ಇಂತಹ ಸಂಸ್ಕೃತಿ ಹೊಂದಿರುವ ದೇಶದಲ್ಲಿ ಕೃಷಿಯನ್ನೆ ಅವಲಂಬಿಸಿರುವ ರೈತ ತನ್ನ ಭೂಮಿಯಲ್ಲಿ ಜೀವನ ಕಂಡುಕೊಳ್ಳಲಾರದೆ ತಾನು ಮತ್ತು ತನ್ನ ಕುಟುಂಬದವರೆಲ್ಲಾ ಸಾವಿನ ಮೊರೆ ಹೋಗುತ್ತಿದ್ದಾರೆ. ಇಷ್ಟು ದೊಡ್ಡ ಸಂಸ್ಕೃತಿ ಹೇಗೆ ನಾಶಹೊಂದುತ್ತಿದೆ? ಅದಕ್ಕೆ ಕಾರಣಗಳೇನು? ಮತ್ತೆ ಕೃಷಿ ಅಷ್ಟು ಎತ್ತರಕ್ಕೆ ಏರುಬೇಕಾದರೆ ಇರುವ ಆಯ್ಕೆಗಳೇನು? ಇರುವ ತೊಡಕುಗಳನ್ನು ಹೇಗೆ ನಿವಾರಿಸಬೇಕು? ಎಂಬುದನ್ನು ಈ ಕೃತಿಯಲ್ಲಿ ವಿವರವಾಗಿ ನೀಡಲಾಗಿದೆ.
ಈ ಕೃತಿಯನ್ನು ಓದಿದವರಿಗೆ ಅನ್ನದಾತನ ಬಗ್ಗೆ ಒಲವಿರುವ, ಕೃಷಿಯಿಂದ ನೊಂದವರು ಕೃಷಿಯಲ್ಲಾಗಿರುವ ಅನಾಹುತಗಳನ್ನು ನೆನೆದು ಕಣ್ಣು ತುಂಬಿದರೆ ಆಶ್ಚರ್ಯವಿಲ್ಲ. ಬೆನ್ನುಲುಬಾಗಿರುವ ಕೃಷಿ ಈಗ ರೈತರನ್ನು ಸಾವಿನೆಡೆಗೆ ತೆಗೆದುಕೊಂಡು ಹೋಗುತ್ತಿರುವ ಅಂಶಗಳನ್ನು ಹಂತಹಂತವಾಗಿ ವಿವರಿಸುತ್ತದೆ. ಪಾಶ್ಚಾತ್ಯ ಹಾಗು ಬಹುರಾಷ್ಟ್ರೀಯ ಕಂಪನಿಗಳ ಸ್ವ ಹಿತಾಸಕ್ತಿಗಳು ನಮ್ಮ ಕೃಷಿ ಕ್ಷೇತ್ರಕ್ಕೆ ಲಗ್ಗೆ ಇಟ್ಟು ಹೇಗೆ ಕೃಷಿ ಹೇಗೆ ಅವಸಾನದ ಸ್ಥಿತಿಗೆ ಬಂದಿದೆ ಎಂಬುದು ಇದರಲ್ಲಿ ತಿಳಿಯುತ್ತದೆ. ಈ ಕೃತಿಯ ಬಂದಿರುವ ಶೀರ್ಷಿಕೆಗಳು ಮಾರ್ಮಿಕವಾಗಿವೆ. ಉದಾಹರಣೆಗೆ ಬಿಸಿ ಭೂಮಿಗೆ ತಂಪು ಕೃಷಿ ಮತ್ತು ಮನುಷ್ಯ ಸತ್ತರೆ ಭೂಮಿಗೆ – ಭೂಮಿಯೇ ಸತ್ತರೆ? ಇತ್ಯಾದಿ ಹಾಗು ಕೃಷಿಯಲ್ಲಿ ಸಾಧನೆ ಮಾಡಿರುವಂತವರ ಉಲ್ಲೆಖಿಸಿರುವುದು ಸೂಕ್ತವಾಗಿದೆ.
ಕೃಷಿ ಎಂದರೆ ಬರೀ ಬೀಜ ಬಿತ್ತುವುದು, ಬೆಳೆಯುವುದು ತಿನ್ನುವುದು ಅಷ್ಟೆ ಅಲ್ಲ. ಕೃಷಿಗೊಂದು ಸಾಮಾಜಿಕ ಆಯಾಮವಿದೆ, ಆರ್ಥಿಕ-ರಾಜಕಾರಣದ ಆಯಾಮವಿದೆ, ಸಾಂಸ್ಕೃತಿಕ ಆಯಾಮವಿದೆ. ಇದೆಲ್ಲನ್ನೂ ಅರ್ಥ ಮಾಡಿಕೊಳ್ಳದೆ ಬರೀ ಭಾವನಾತ್ಮಕ ಬದಲಾವಣೆಯಿಂದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ. ಜಗತ್ತಿನ ಕೇಂದ್ರ ಕೃಷಿ ಎಂಬುದನ್ನು ಫುಕುವೋಕಾ ಕೂಡ ಹೇಳಿದ್ದಾರೆ. ಈ ಮಾತನ್ನು ಒಪ್ಪಿಕೊಳ್ಳುವುದಾದರೆ ಕೃಷಿಯನ್ನು ವಿಶಾಲವಾದ ಅರ್ಥದಲ್ಲಿ ಗ್ರಹಿಸಬೇಕು.
ಈ ನಿಟ್ಟಿನಲ್ಲಿ ಅನೇಕ ಲೇಖನಗಳನ್ನು ಆಯ್ದು ಒಂದು ಪುಸ್ತಕವನ್ನು ಮಂಜುನಾಥ ಹೊಳಲು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ತಮ್ಮ ವಿದ್ಯಾಭ್ಯಾಸ ಮುಗಿಸಿ, ನೇರವಾಗಿ ಹಳ್ಳಿಗೆ ಬಂದು, ಹಳ್ಳಿಯ ಬದುಕನ್ನು ಅರ್ಥಮಾಡಿಕೊಂಡು, ಸುಮಾರು 20 ವರ್ಷದಿಂದ ಕೃಷಿಕರ ಅಭಿವೃದ್ದಿಗೆ ದುಡಿಯುತ್ತಿದ್ದಾರೆ. ಕೃಷಿಕರ ಬಗ್ಗೆ ಇರುವ ಇವರ ಕಾಳಜಿ ಹಾಗೂ ಪರಿಸರ ಬಗ್ಗೆ ಇರುವ ಇವರ ಮಿಡಿತ ಈ ಪುಸ್ತಕವನ್ನು ಹೊರ ತರಲು ಪ್ರೇರೆಪಿಸಿದೆ.
ಪುಸ್ತಕದ ಹೆಸರು: ಕೃಷಿ ಕರಗುವ ಸಮಯ, ಪುಟಗಳ ಸಂಖ್ಯೆ: 182 ಬೆಲೆ:165/- (ಅಂಚೆ ವೆಚ್ಚ ರಹಿತ) ಲೇಖಕರು: ಮಂಜುನಾಥ ಹೊನ್ನಪ್ಪನವರ (ಹೊಳಲು) ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 91104 49755
ಪುಸ್ತಕ ಪರಿಚಯ: ಸಿ. ಹೊಸಮನಿ ಶಿಗ್ಗಾಂವ