ಕಾಡು ಎನ್ನುವುದು ಕಾಡಾಗಿ ಉಳಿದಿಲ್ಲ. ಸೂಕ್ತ ಆಹಾರ ಲಭಿಸಿದ ಕಾರಣ ವನ್ಯಪ್ರಾಣಿಗಳು ಸಮೀಪದ ಕೃಷಿಭೂಮಿಗಳತ್ತ ಧಾವಿಸುತ್ತವೆ. ಅವುಗಳಿಗೆ ಆಹಾರದ ಹಂಬಲ. ಬೆಳೆಗಾರರಿಗೆ ಬೆಳೆಯ ಆತಂಕ. ಇದರಿಂದ ದಿನದಿಂದ ದಿನಕ್ಕೆ ವನ್ಯಪ್ರಾಣಿ – ಮಾನವ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಇದನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ – ಸಂಶೋಧನಾ ಸಂಸ್ಥೆಗಳು ಬೇರೆಬೇರೆ ಪರಿಹಾರ ಕ್ರಮಗಳನ್ನು ಸೂಚಿಸುತ್ತಿವೆ. ಅವುಗಳಲ್ಲಿ ಸೋಲಾರ್ ಬೇಲಿಯೂ ಒಂದಾಗಿದೆ. ಈಗಂತೂ ಸಾಂಪ್ರದಾಯಿಕ ಬೇಲಿ ಮಾದರಿಗಿಂತ ಭಿನ್ನವಾದ ರಕ್ಷಣಾತ್ಮಕ ಬೇಲಿ ಬಂದಿದೆ.
ಇಂಥ ಬೇಲಿಗಳು ವಿಶೇಷವಾಗಿ ಕಾಡಾನೆಗಳಿಂದ ಬೆಳೆಗಳನ್ನು ರಕ್ಷಿಸುತ್ತವೆ. ಜಿಂಕೆ – ಕಾಡಂದಿಗಳು ಹೊಲ-ತೋಟ – ಗದ್ದೆಗಳಿಗೆ ನುಗ್ಗುವುದನ್ನು ತಡೆಯುತ್ತವೆ. ಇಂಥ ಸೋಲಾರ್ ಬೇಲಿ ಸೋಕಿದರೆ ವನ್ಯಪ್ರಾಣಿಗಳು ಸಾಯುವುದಿಲ್ಲ. ಒಂದಷ್ಟು ಶಾಕ್ ಆಗುತ್ತದೆ. ಇದರಿಂದ ಅವು ಹಿಮ್ಮೆಟ್ಟುತ್ತವೆ. ಇಂಥ ಬೇಲಿ ಅಳವಡಿಸಿಕೊಳ್ಳಲು ಸರ್ಕಾರದಿಂದ ಪ್ರೋತ್ಸಾಹಧನವೂ ದೊರೆಯುತ್ತದೆ. ಇದಲ್ಲದೇ ಸಾಂಪ್ರದಾಯಿಕವಾದ ಬೇರೆಬೇರೆ ಉಪಾಯಗಳೂ ಇವೆ.


ಕಾಡಂಚಿನಲ್ಲಿರುವ ಎಲ್ಲ ರೈತರೂ ಸೋಲಾರ್ ಬೇಲಿಗಳನ್ನು ಅಳವಡಿಸಿಕೊಂಡಿರುವುದಿಲ್ಲ. ಸಣ್ಣಸಣ್ಣ ಹಿಡುವಳಿದಾರರಿಗೆ ಅಂಥ ಬೇಲಿ ನಿರ್ಮಾಣ ಮಾಡಿಸುವ ಆರ್ಥಿಕ ಚೈತನ್ಯವೂ ಅವರಿಗೆ ಇರುವುದಿಲ್ಲ. ಇಂಥ ಸಂಗತಿಗಳತ್ತಲೂ ಗಮನ ಹರಿಸಿರುವ “ಕಟ್ಟಿದಾನ್” ಎಂಬ ಸಂಸ್ಥೆ ನಾಲ್ಕು ವರ್ಷ ನಿರಂತರ ಅಧ್ಯಯನ ಸಂಶೋಧನೆ ಮೂಲಕ “ಪ್ರಾಣಿತಡೆ ಸ್ಮಾರ್ಟ್ ಬ್ಲಿಕ್ಕಿಂಗ್ ಲೈಟ್” ಸಾಧನ ಅಭಿವೃದ್ಧಿಪಡಿಸಿದೆ. ಇದಕ್ಕೆ NIAS, IISc ತಜ್ಞರ ಮಾರ್ಗದರ್ಶನವೂ ದೊರೆತಿದೆ.
“ಕಾಡಂಚಿನ ಗ್ರಾಮಗಳಲ್ಲಿ ಪದೇಪದೇ ವನ್ಯಪ್ರಾಣಿ – ಮಾನವ ಸಂಘರ್ಷ ಆಗುತ್ತಿರುವುದನ್ನು ಮಾಧ್ಯಮಗಳಲ್ಲಿ ಗಮನಿಸುತ್ತಿದ್ದ ಎಲೆಕ್ಟ್ರಾನಿಕ್ ಪದವೀಧರರಾದ ನಾನು, ಮತ್ತು ನನ್ನ ಮೂವರು ಸ್ನೇಹಿತರು ಎರಡೂ ಕಡೆಯೂ ಸಾವು-ನೋವು ಆಗುವುದನ್ನು ತಪ್ಪಿಸಲು ಈ ಸಾಧನ ಅಭಿವೃದ್ಧಿಪಡಿಸಿದೆವು. ಕಾಳಜಿಯಿಂದ ಮಾಡಿರುವ ಈ ಸಾಧನಕ್ಕೆ “ಪರಾಬ್ರಕ್ಷ್” ಎಂದು ಹೆಸರಿಟ್ಟಿದ್ದೇವೆ. ಎಂದು ಅಯಾನ್ ವಿವರಿಸಿದರು.


“ಈ ಸಾಧನದ ಮೂಲಕ ವನ್ಯಪ್ರಾಣಿಗಳು ಕೃಷಿಭೂಮಿಗೆ ನುಗ್ಗುವುದನ್ನು ತಡೆಯಬಹುದು ಎಂದು ಪ್ರಾಯೋಗಿಕ ಸಮೀಕ್ಷೆಗಳಿಂದ ತಿಳಿಯಲಾಗಿದೆ. ಈಗಾಗಲೇ ಕರ್ನಾಟಕ, ಒಡಿಸ್ಸಾ, ಲಡಾಕ್ ಪ್ರಾಂತ್ಯಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಲಡಾಕ್ ಗ್ರಾಮೀಣ ಪ್ರದೇಶದಲ್ಲಿ ಹಿಮಚಿರತೆಗಳ ಹಾವಳಿಯಿದೆ. ಅವುಗಳು ರಾತ್ರಿವೇಳೆ ಕೊಟ್ಟಿಗೆಗಳಿಗೆ ನುಗ್ಗಿ ದಾಳಿ ಮಾಡಿ ಹೊತ್ತುಯ್ಯುತ್ತಿದ್ದವು. ಚಿರತೆಗಳ ದಾಳಿ ಹೆಚ್ಚಾಗಿ ನಡೆಯುತ್ತಿದ್ದ ಐದು ಗ್ರಾಮಗಳನ್ನು ಆಯ್ಕೆ ಮಾಡಿ ಅಲ್ಲಿನ ಕೊಟ್ಟಿಗೆಗಳಲ್ಲಿ ಬ್ಲಿಂಕ್ ಲೈಟ್ ಸಾಧನ ಅಳವಡಿಸಿದೆವು. ಈ ಸಾಧನ ಅಳವಡಿಸಿದ ಏಳೆಂಟು ತಿಂಗಳ ಅವಧಿಯಲ್ಲಿ ಒಮ್ಮೆಯೂ ದಾಳಿ ನಡೆದಿಲ್ಲ” ಎಂದು ಸಂಸ್ಥೆಯ ಸಂಶೋಧಕ ಅಯಾನ್ ತಿಳಿಸಿದರು.
ಒಡಿಸ್ಸಾದ ಕೆಲವು ಗ್ರಾಮಗಳಲ್ಲಿ ಕಾಡಾನೆಗಳು ಬೆಳೆ ಇರುವ ಕೃಷಿಭೂಮಿಗೆ ಮತ್ತೆಮತ್ತೆ ನುಗ್ಗುತ್ತಿರುತ್ತವೆ. ಅಂಥಲ್ಲಿ “ಪ್ರಾಣಿತಡೆ ಸ್ಮಾರ್ಟ್ ಬ್ಲಿಕ್ಕಿಂಗ್ ಲೈಟ್” ಸಾಧನಗಳನ್ನು ಅಳವಡಿಸಿದ ನಂತರ ಅವುಗಳ ದಾಳಿ ನಿಂತಿದೆ. ರೈತರು ಬೆಳೆ ಬೆಳೆದು ನೆಮ್ಮದಿಯಾಗಿ ಕೊಯ್ಲು ಮಾಡುತ್ತಿದ್ದಾರೆ. ಅವರ ಮೊಗಗಳಲ್ಲೀಗ ಸಂತಸ ಕಾಣುತ್ತಿದೆ ಎಂದು ಅಯಾನ್ ವಿವರಿಸಿದರು.

ಈ ಸಾಧನ 360 ಡಿಗ್ರಿ ಬೆಳಕು ಚೆಲ್ಲುತ್ತದೆ. ಇದಲ್ಲದೇ ಮತ್ತೆಮತ್ತೆ ಬೆಳಕಿನ ಪ್ಯಾಟ್ರನ್ ಬದಲಾಗುತ್ತಿರುತ್ತದೆ. ಇದರ ಬೆಳಕು ರಾತ್ರಿಯ ವೇಳೆ ಒಂದು ಕಿಲೋ ಮೀಟರ್ ತನಕ ಗೋಚರವಾಗುವುದರಿಂದ ಬೆಳೆ ಇರುವ ಕೃಷಿಭೂಮಿಯತ್ತ ಧಾವಿಸಿ ಬರುವ ವನ್ಯಪ್ರಾಣಿಗಳು ಭೀತಿಗೊಳ್ಳುವಂತೆ ಮಾಡುತ್ತದೆ. ಇವುಗಳನ್ನು ಅಳವಡಿಸುವ ಮುನ್ನ ಸಂಶೋಧಕರು ಸ್ಥಳಕ್ಕೆ ತೆರಳಿ ಕಾಡು ಯಾವ ದಿಕ್ಕಿನಲ್ಲಿದೆ. ವನ್ಯಪ್ರಾಣಿಗಳು ಯಾವಯಾವ ದಿಕ್ಕಿನಿಂದ ಹೆಚ್ಚು ಬರುತ್ತವೆ ಎಂದು ಅಧ್ಯಯನ ಮಾಡುತ್ತೇವೆ. ಈ ಬಳಿಕ ಸಾಧನ ಅಳವಡಿಸಲಾಗುತ್ತದೆ.
ಪ್ರಾಣಿತಡೆ ಸ್ಮಾರ್ಟ್ ಬ್ಲಿಕ್ಕಿಂಗ್ ಲೈಟ್” “ಸಾಧನವನ್ನು, ಸೌರಶಕ್ತಿ ಮತ್ತು ವಿದ್ಯುತ್ ಎರಡೂ ಬಗೆಯಲ್ಲಿಯೂ ಚಾರ್ಜ್ ಮಾಡಬಹುದು. ಸಾಧನದಲ್ಲಿ ಈ ಆಯ್ಕೆಗಳ ಅವಕಾಶ ನೀಡಲಾಗಿದೆ..ಒಮ್ಮೆ ಚಾರ್ಜ್ ಮಾಡಿದರೆ ಹತ್ತುದಿನ ಅದರ ಶಕ್ತಿ ಇರುತ್ತದೆ.. ನಂತರ ಮತ್ತೆ ರೀಛಾರ್ಜ್ ಮಾಡಬೇಕು. ಮಳೆಗಾಲದಲ್ಲಿಯೂ ಇದರ ಬೆಳಕಿನ ಪ್ರಭಾವ ಕುಂದುವುದಿಲ್ಲ. ಕಾಡಂದಿ, ಜಿಂಕೆಗಳ ಕಾಟ ಹೆಚ್ಚಿದ್ದರೆ ಅದಕ್ಕೆ ತಕ್ಕಂತೆ ಸಾಧನದ ಎತ್ತರ ನಿಗದಿಪಡಿಸಲಾಗುತ್ತದೆ. ಕಾಡಾನೆಗಳು ಹೆಚ್ಚಾಗಿ ಬರುತ್ತಿದ್ದರೆ ಸಾಧನವನ್ನು ಮತ್ತಷ್ಟೂ ಎತ್ತರಿಸಲಾಗುತ್ತದೆ.

ಪ್ರಾಣಿತಡೆ ಸ್ಮಾರ್ಟ್ ಬ್ಲಿಕ್ಕಿಂಗ್ ಲೈಟ್” ಸಾಧನ ಕೇವಲ 600 ಗ್ರಾಮ್ ತೂಕವಿದೆ. ಸಣ್ಣ ಹುಡುಗರು ಸಹ ವನ್ಯಪ್ರಾಣಿಗಳ ದಾಳಿ ಆಗುವ ಹೊಲ- ಗದ್ದೆ – ತೋಟಗಳಲ್ಲಿ ಬೇಕೆಂದಲ್ಲಿ ಅಳವಡಿಸಬಹುದು. ಈಗಾಗಲೇ ಸಾಂಪ್ರದಾಯಿಕ ಬೇಲಿ ಹಾಕಿರುವ ಕೃಷಿಭೂಮಿಯಲ್ಲಿಯೂ ಮುಂಜಾಗ್ರತೆಯಿಂದ ಅಳವಡಿಸಬಹುದು. ಇಬ್ಬರು ಸಣ್ಣ ಹಿಡುವಳಿದಾರರು ಸಹಕಾರ ತತ್ವದಡಿ ಖರೀದಿ ಮಾಡಬಹುದು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

Website – katidhan.com
Email id – [email protected]

LEAVE A REPLY

Please enter your comment!
Please enter your name here