ಔಷಧೀಯ ಮೌಲ್ಯದ ಬಾಸ್ಮತಿ ಸಸ್ಯ

0
ಚಿತ್ರ – ಲೇಖನ: ಅನೂಷಾ ಹೊನ್ನೇಕೂಲು

ಆಹಾರಕ್ಕೆ ವಿಶಿಷ್ಟ ರುಚಿ ಮತ್ತು ಪರಿಮಳ ನೀಡುವ ಬಾಸ್ಮತಿ ಗಿಡವು (Basmati plant) ಪೌಷ್ಟಿಕಾಂಶಗಳ ಆಗರವಾಗಿದೆ. ಇದು ಉಷ್ಣ ವಲಯ ಮತ್ತು ಸಮಶೀತೋಷ್ಣ ವಲಯದ ಕಾಡುಗಳಲ್ಲಿ (Forest) ನೈಸರ್ಗಿಕವಾಗಿ ಬೆಳೆಯುವ ಸಸ್ಯ. ಪಾಂಡನೇಸಿಯೇ ಕುಟುಂಬಕ್ಕೆ ಸೇರಿದೆ. ಗಾಢ ಹಸಿರು ಬಣ್ಣದ ಉದ್ದದ ಎಲೆಗಳನ್ನು ಹೊಂದಿರುತ್ತದೆ. ಇದರ ಮೂಲ ದಕ್ಷಿಣ ಪೂರ್ವ ಏಷ್ಯಾ. ಆಹಾರವಾಗಿ, ಔಷಧಿಯಾಗಿ, ಅಲಂಕಾರಿಕ ಗಿಡವಾಗಿ ಬಳಕೆಯಲ್ಲಿದೆ.

ಭಾರತೀಯ, ಇಂಡೋನೇಷ್ಯಾ, ಸಿಂಗಪುರ, ಫಿಲಿಪೈನ್ಸ್, ಮಲೇಷ್ಯಾ, ಥಾಯಿ, ಬಾಂಗ್ಲಾದೇಶ ವಿಯೆಟ್ನಾಂ, ಬರ್ಮಾ ಅಡಿಗೆಗಳಲ್ಲಿ ಯಥೇಚ್ಛ ಉಪಯೋಗಿಸುವ ಸೊಪ್ಪು ಇದು. ಆಯುರ್ವೇದ, ಸಾಂಪ್ರದಾಯಿಕ ಔಷಧ ಪದ್ಧತಿಗಳಲ್ಲಿ ಇದನ್ನು ಬಳಸಿ ಅನೇಕ ಔಷಧಗಳನ್ನು (Medicine) ತಯಾರಿಸುವುದು ಇದೆ. ಇದರಲ್ಲಿ ಸಪೋನಿನ್, ಪಾಲಿಹಿನಲ್, ತಯಮಿನ್, ಅಲ್ಕೊಲೈಡ್ಸ್ ಮುಂತಾದ ಅಂಶಗಳಿದ್ದು ಇವು ಆರೋಗ್ಯಕ್ಕೆ ಪೂರಕವಾಗಿವೆ.

ಔಷಧಿಯಾಗಿ ಬಾಸ್ಮತಿ ಸೊಪ್ಪು:

ಇದರ ಸೊಪ್ಪನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯ ಸೇವನೆಯಿಂದ ಜ್ವರ ಕಡಿಮೆಯಾಗುತ್ತದೆ. ಭಯ, ಉದ್ವೇಗ, ಆತಂಕ, ಒತ್ತಡ ನಿವಾರಣೆಯಲ್ಲಿ ಬಾಸ್ಮತಿ ಎಲೆಗಳ ಕಷಾಯ ಪರಿಣಾಮಕಾರಿ ಔಷಧ.

ಕುಷ್ಠ, ಗಾಯ, ಕಜ್ಜಿ, ಕಿವಿನೋವು, ತಲೆನೋವು, ಹೊಟ್ಟೆ ನೋವು, ಎದೆನೋವು ಆರ್ಥೈಟಿಸ್(ವಾತ)ಗೆ ಒಳ್ಳೆಯದು. ಆಹಾರದಲ್ಲಿ ಇದರ ಬಳಕೆಯಿಂದ ಬಾಣಂತಿಯರ ನಿಃಶಕ್ತಿ ನಿವಾರಣೆಯಾಗುವುದು. ಜತೆಗೆ ಹೆರಿಗೆಯ ಗಾಯಗಳು ಬಹು ಬೇಗನೆ ಒಣಗುತ್ತವೆ.

ಎಲೆಗಳನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುವುದಲ್ಲದೆ ವಸಡು ದೃಢವಾಗುತ್ತದೆ.  ಇದರ ರಸವನ್ನು ಚರ್ಮಕ್ಕೆ ಲೇಪಿಸುವುದರಿಂದ ಸೊಳ್ಳೆ ಕಡಿತದಿಂದ ರಕ್ಷಣೆ ಸಿಗುತ್ತದೆ.

ಆಹಾರವಾಗಿ ಉಪಯೋಗಿಸುತ್ತಿದ್ದರೆ ಕೆಲವು ವಿಧದ ಕ್ಯಾನ್ಸರ್‍ಗಳು ವಾಸಿಯಾಗುವುದಲ್ಲದೆ ಕೆಲವು ವಿಧದ ಕ್ಯಾನ್ಸರ್ ಬಾರದಂತೆ ತಡೆಯುತ್ತದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ.

ಈ ಗಿಡದ ಕಷಾಯದಿಂದ ರಕ್ತದ ಒತ್ತಡ ನಿವಾರಣೆಯಾಗುತ್ತದೆ. ಚರ್ಮದಲ್ಲಿ ಫಂಗಸ್ ಆಗಿ ಅಲರ್ಜಿ, ಚರ್ಮ ತುರಿಕೆಯಿಂದ ಬಿಳಿ ಆದರೆ ಇದರ ರಸ ಹಚ್ಚಿದರೆ ವಾಸಿಯಾಗುವುದು.  ಬಾಸ್ಮತಿ ಎಲೆಗಳನ್ನು ನೀರಿನಲ್ಲಿ ಅರೆದು ತಲೆಗೆ ಲೇಪಿಸಿದರೆ ತಲೆ ಹೊಟ್ಟು ನಿವಾರಣೆಯಾಗುವುದರ ಜತೆಗೆ ಕೂದಲು ಉದುರುವುದು ನಿಲ್ಲುತ್ತದೆ.

ಇದರ 3 ಎಲೆಗಳನ್ನು 3 ಕಪ್ ನೀರಿನಲ್ಲಿ ಕುದಿಸಿ. 2 ಕಪ್ ಆದಾಗ ಇಳಿಸಬೇಕು. ಬೆಳಿಗ್ಗೆ,ಸಂಜೆ ಈ ಕಷಾಯ ಸೇವಿಸಿದರೆ ನರ ದೌರ್ಬಲ್ಯ ಗುಣವಾಗುತ್ತದೆ.  ವಾತದ ಸಮಸ್ಯೆಯಿಂದ ಬಳಲುವವರು ಈ ಎಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ ತಣಿಸಿ ನೋವಿರುವ ಭಾಗಕ್ಕೆ ಹಚ್ಚಿದರೆ ಪರಿಹಾರ ದೊರೆಯುತ್ತದೆ.

ಬಾಸ್ಮತಿ ಚಹಾ: 4 ಬಾಸ್ಮತಿ ಎಲೆ, 5 ಏಲಕ್ಕಿ, ಶುಂಠಿ, ಸಕ್ಕರೆ ಸೇರಿಸಿ ಮಾಡಿದ ಚಹಾ ಮಕ್ಕಳಿಗೆ ಒಳ್ಳೆಯದು.

ಲಿವರ್‍ಗೆ ಉತ್ತಮ ಟಾನಿಕ್. ಇದನ್ನು ಬಳಸಿ ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದ ಚರ್ಮ ಕಪ್ಪಾಗುವುದನ್ನು ತಡೆಯಬಹುದು. ಸ್ನಾನದ ನೀರಿಗೆ ಇದರ ರಸ ಹಾಕಿದರೆ ಒಳ್ಳೆ ಸುಗಂಧ. ಆಹಾರಕ್ಕೆ ನೈಸರ್ಗಿಕ ಹಸಿರು ಬಣ್ಣ ನೀಡಲು ಇದನ್ನು ಬಳಸಿ ಪ್ರಯೋಜನ ಪಡೆಯಬಹುದಾಗಿದೆ.

ಬೆಳೆಯುವುದು ಸುಲಭ:

ಯಾವುದೇ ವಿಶೇಷ ಆರೈಕೆ ಇಲ್ಲದೆ ಬೆಳೆಯುವ ಸಸ್ಯ. ತೋಟ ಅಥವಾ ಮನೆಯ ಹಿತ್ತಿಲಿನಲ್ಲಿ ಒಂದು ಬದಿಗೆ ನೆಟ್ಟರೆ ಯಾವುದೇ ಆರೈಕೆ ಇಲ್ಲದೆ ತನ್ನಿಂದ ತಾನೇ ಬೆಳೆದು ವೃದ್ಧಿಯಾಗುತ್ತದೆ. ಸ್ಥಳಾವಕಾಶದ ಕೊರತೆ ಇರುವವರು ಕುಂಡಗಳಲ್ಲಿಯೂ ಸಮೃದ್ಧವಾಗಿ ಬೆಳೆಸಬಹುದು. ಅಲಂಕಾರಿಕ ಸಸ್ಯದಂತೆ ಕಂಡುಬರುವ ಇದು ಮನೆ ಅಂಗಳದ ಸೌಂದರ್ಯವನ್ನೂ ಹೆಚ್ಚಿಸುತ್ತದೆ.

ಪಲಾವ್ ಮಾಡುವಾಗ ಒಂದು ತುಂಡು ಎಲೆ ಬಳಸಿದರೆ ಸಾಮಾನ್ಯ ಸೋನಾ ಮಸೂರಿ ಅಕ್ಕಿಗೂ ಬಾಸ್ಮತಿ ಅಕ್ಕಿಯ ಪರಿಮಳ ಹಾಗೂ ರುಚಿಯನ್ನು ನೀಡುತ್ತದೆ. ಪಲಾವ್, ಚಹಾ, ಕಷಾಯ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಇದನ್ನು ಆಹಾರದಲ್ಲಿ ಬಳಸುತ್ತಿದ್ದರೆ ಹಲವು ವ್ಯಾಧಿಗಳಿಂದ ದೂರವಿದ್ದು ಆರೋಗ್ಯ ಭಾಗ್ಯವನ್ನು (Health Benefit) ನಮ್ಮದಾಗಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here