ಮಳೆಯಾಶ್ರಿತ ಕೃಷಿಗೆ ಒತ್ತು ನೀಡಿ

0
ಡಾ. ನಾಗರಾಜ್, ಕೃಷಿಯಂತ್ರ ವಿನ್ಯಾಸಗಾರರು, ತಯಾರಕರು

ಭಾರತದಲ್ಲಿ ಮಳೆಯಾಶ‍್ರಯದಲ್ಲಿ ಕೃಷಿಯಾಗುತ್ತಿರುವ ಜಮೀನಿನ ವಿಸ್ತಾರವೇ ಶೇಕಡ 70ಕ್ಕೂ ಹೆಚ್ಚು. ಶೇಕಡ 30ಕ್ಕಿಂತಲೂ ಕಡಿಮೆ ಜಮೀನುಗಳಲ್ಲಿ ನೀರಾವರಿ ಆಧಾರಿತ ಕೃಷಿಯಾಗುತ್ತಿದೆ. ಎರಡರ ಖರ್ಚುವೆಚ್ಚ ಗಮನಿಸಿದಾಗ ಮಳೆಯಾಶ್ರಯದಲ್ಲಿ ಕೃಷಿ ಮಾಡುವಾಗ ಆಗುವ ವೆಚ್ಚಕ್ಕಿಂತಲೂ ನೂರರಷ್ಟು ಅಧಿಕ ಖರ್ಚು ನೀರಾವರಿ ಆಧಾರಿತ ಕೃಷಿಗೆ ಆಗುತ್ತಿದೆ.

ಪರಿಸರ ಸ್ನೇಹಿ

ಇವೆರಡು ಕೃಷಿಕ್ರಮಗಳಲ್ಲಿ ಯಾವುದು ಪರಿಸರ ಸ್ನೇಹಿ, ರೈತ ಸ್ನೇಹಿ, ಆರೋಗ್ಯ ಸ್ನೇಹಿ ಎಂದು ನೋಡಿದರೆ ಎರಡನೇಯದೇ; ಅಂದರೆ ಮಳೆಯಾಶ್ರಿತ ಕೃಷಿಯೇ ಆಗಿದೆ. ಇಷ್ಟು ಮಹತ್ವದ ಒಣ ಬೇಸಾಯಕ್ಕೆ ಸಿಗಬೇಕಾದ ಮಹತ್ವ ದೊರೆತಿದೆಯೇ ಎಂದು ಗಮನಿಸಿದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ.

ಕೊಳವೆ ಬಾವಿ

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಕೃಷಿ – ತೋಟಗಾರಿಕೆ ಇಲಾಖೆಗಳು, ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳು ಒಣ ಬೇಸಾಯಕ್ಕೆ ನೀಡಬೇಕಾದಷ್ಟು ಗಮನ ನೀಡಿಲ್ಲ. ಇದರಿಂದಾಗಿಯೇ ಒಣ ಬೇಸಾಯದ ಹೊಲಗಳನ್ನು ಉಳ್ಳ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದಾರೆ. ಕನಿಷ್ಟ ಎರಡು ಎಕರೆ ಇರುವ ರೈತ ಸಹ ಸಾಲಸೋಲ ಮಾಡಿ ಕೊಳವೆ ಬಾವಿ ಕೊರೆಸಿದ್ದಾರೆ, ಕೊರೆಸುತ್ತಿದ್ದಾರೆ.

ಖಾತರಿ ಇಲ್ಲ

ಅಪಾರ ಹಣ ಖರ್ಚು ಮಾಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತದೆ ಎಂಬ ಖಾತರಿ ಇಲ್ಲ. ನೀರು ಸಿಕ್ಕರೂ ಸೂಕ್ತ ಪ್ರಮಾಣದಲ್ಲಿ ಸಿಗುವ ಖಾತರಿ ಇಲ್ಲ. ಒಂದು ವೇಳೆ ಸೂಕ್ತ ಪ್ರಮಾಣದಲ್ಲಿ ಸಿಕ್ಕರೂ ಕೃಷಿಗೆ, ಕುಡಿಯಲು ಯೋಗ್ಯವಾದ ನೀರು ಸಿಗುತ್ತದೆ ಎಂಬ ಖಾತರಿ ಇಲ್ಲ. ಹೀಗಾಗಿ ಕೃಷಿಕರ ಪ್ರಯತ್ನಗಳು ನಿಷ್ಪ್ರಯೋಜಕ ಆಗಿರುವುದು, ಆಗುತ್ತಿರುವುದೇ ಹೆಚ್ಚು.

ಕುಸಿದ ಅಂತರ್ಜಲ

ಹಲವಾರು ಪ್ರದೇಶಗಳಲ್ಲಿ ಅಂತರ್ಜಲ 1200  ಅಡಿಗಿಂತಲೂ ಕೆಳಗೆ ಕುಸಿದಿದೆ. ಇಷ್ಟು ಆಳದಿಂದ ನೀರು ತಂದರೂ ಅದು ಪ್ಲೋರೈಡ್ ಅಥವಾ ಅತಿಯಾದ ಗಡುಸುತನ, ಉಪ್ಪಿನಾಂಶದಿಂದ ಕೂಡಿ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಇಂಥ ನೀರನ್ನು ಸಂಸ್ಕರಿಸಿ ಬಳಕೆ ಮಾಡುವುದು ಅತ್ಯಂತ ದುಬಾರಿ ಕೆಲಸ.

ದುಬಾರಿ ಬಡ್ಡಿಯ ಸಾಲ

ನೀರು ಸಿಗಲಿ ಸಿಗದಿರಲಿ ರೈತರು ಸಹಕಾರಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್ ಅಥವಾ ಲೇವಾದೇವಿ ವ್ಯವಹಾರ ನಡೆಸುವ ಖಾಸಗಿಯವರಿಂದ ದುಬಾರಿ ಬಡ್ಡಿ ತೆತ್ತು ತಂದ ಹಣ ಹಿಂದಿರುಗಿಸಲೇಬೇಕು. ಸಕಾಲದಲ್ಲಿ ಸಾಲ ಮರಳಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ, ಮನೆಮಠ ಮಾರಿಕೊಂಡ ರೈತರ  ಉದಾಹರಣೆಗಳು ಸಾಕಷ್ಟಿದೆ. ಇನ್ನೂ ವಿಷಾದನೀಯ ಎಂದರೆ ಆತ್ಮಹತ್ಯೆಗೆ ಶರಣಾಗಿರುವ ರೈತರ ಸಂಖ್ಯೆಯೂ ಗಣನೀಯವಾಗಿದೆ.

ಕೆರೆಯಾಶ್ರಿತ ಕೃಷಿ

ಕೇವಲ 50 ವರ್ಷದ ಹಿಂದೆ ಪ್ರತಿ ಗ್ರಾಮಕ್ಕೊಂದು ಅಥವಾ ಎರಡ್ಮೂರು ಗ್ರಾಮಗಳಿಗೆ ಒಂದು ಕೆರೆಗಳಿದ್ದವು. ಕೆರೆಗೆ ನೀರು ಹರಿದು ಬರುವ ಮಾರ್ಗಗಳಲ್ಲಿ ಯಾವುದೇ ತಡೆಗಳಿಲ್ಲದ ಹಾಗೆ ಜಾಗ್ರತೆ ವಹಿಸುತ್ತಿದ್ದರು. ಕೆರೆಗಳ ಸಮೀಪವೇ ಇರುತ್ತಿದ್ದ ಗೋಮಾಳಗಳಲ್ಲಿ ಯಾವುದೇ ಕಾಮಗಾರಿಗೂ ಅವಕಾಶ ನೀಡುತ್ತಿರಲಿಲ್ಲ. ಬಿದ್ದ ಮಳೆನೀರು ಸರಾಗವಾಗಿ ಕೆರೆ ಸೇರುತ್ತಿತ್ತು. ಈ ನೀರನ್ನು ಬಹಳ ಜಾಗ್ರತೆಯಿಂದ ಬಳಸುತ್ತಿದ್ದರು. ಹನಿನೀರು ಪೋಲಾಗುವುದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಹೆಚ್ಚೆಂದರೆ ವರ್ಷಕ್ಕೆ ಒಂದೇ ಬೆಳೆ, ಅಪರೂಪಕ್ಕೆ ಕೆಲವಾರು ಕೆರೆ ಅಚ್ಚುಕಟ್ಟು ಪ್ರದೇಶಗಳಲ್ಲಿ ಎರಡು ಬೆಳೆ ಬೆಳೆಯುತ್ತಿದ್ದರು. ಆದರೆ ಸಾಮಾನ್ಯವಾಗಿ ಕೆರೆ ನಿರ್ವಹಣೆಗಾರರು ಎರಡು ಬೆಳೆಗೆ ಅವಕಾಶ ನೀಡುತ್ತಿರಲಿಲ್ಲ

ಸಾವಯವ ಬೇಸಾಯ

ಕೆರೆ ಅಚ್ಚುಕಟ್ಟು ಪ್ರದೇಶಗಳಲ್ಲಿ ಕೃಷಿ ಮಾಡುತ್ತಿದ್ದವರು ಸಾವಯವ ಕೃಷಿ ಪದ್ಧತಿಯನ್ನೇ ಅನುಸರಿಸುತ್ತಿದ್ದರು. ಇಂಥ ಪ್ರದೇಶಗಳಲ್ಲಿ ಇಂದಿಗೂ ಹಲವೆಡೆ ಇನ್ನೂ ಈ ಮಾದರಿಯ ಕೃಷಿ ಇರುವುದನ್ನು ಕಾಣಬಹುದು. ನೀರಾವರಿಯಲ್ಲಿ ಒಂದು ಬೆಳೆ ತೆಗೆದ ನಂತರ ಮಳೆಯಾಶ್ರಿತದಲ್ಲಿ ಅಲ್ಪಾವಧಿ ಬೆಳೆ ತೆಗೆಯುತ್ತಿದ್ದರು. ಇದರಿಂದ ಒಂದು ಬೆಳೆಯಿಂದ ಮತ್ತೊಂದು ಬೆಳೆಗೆ ಅಂತರವಿರುತ್ತಿತ್ತು. ಬೆಳೆ ಬದಲಾವಣೆ ಮಾಡುತ್ತಿದ್ದರು. ಸಾವಯವ ಗೊಬ್ಬರ, ಸಸ್ಯಜನ್ಯ ಕೀಟನಾಶಕಗಳ ಬಳಕೆ ಮಾಡುತ್ತಿದ್ದರು. ಇದರಿಂದಾಗಿ ಜಮೀನಿನ ಮಣ್ಣು ಸದಾ ಫಲವತ್ತಾಗಿರುತ್ತಿತ್ತು. ಅಂತರ್ಜಲವೂ ಕಲುಷಿತವಾಗುತ್ತಿರಲಿಲ್ಲ.

ಅಣೆಕಟ್ಟು ಆಧಾರಿತ ಕೃಷಿ

ನದಿಗಳಿಗೆ ದೊಡ್ಡದೊಡ್ಡ ಅಣೆಕಟ್ಟೆಗಳನ್ನು ಕಟ್ಟಿ ಬೃಹತ್ ಕಾಲುವೆಗಳ ಮೂಲಕ ನೀರು ಹಾಯಿಸಲು ಆರಂಭಿಸಲಾಯಿತು. ಈ ನಂತರ ನೀರಾವರಿ ಅಚ್ಚುಕಟ್ಟು ಪ್ರದೇಶಗಳ ಕೃಷಿಯ ಸ್ವರೂಪವೇ ಬದಲಾಯಿತು. ಸಾವಯವ ಗೊಬ್ಬರಗಳ ಬದಲಿಗೆ ರಾಸಾಯನಿಕ ಗೊಬ್ಬರಗಳು ಬಂದವು. ಸಸ್ಯಜನ್ಯ ಕೀಟನಾಶಕಗಳ ಬದಲಿಗೆ ರಾಸಾಯನಿಕ ಕೀಟನಾಶಕಗಳು ಬಂದವು. ಕ್ರಮೇಣ ಎತ್ತುಗಳ ಬದಲಿಗೆ ಟ್ರಾಕ್ಟರ್ ಗಳು ಬಂದವು. ಕೃಷಿಯ ವೆಚ್ಚ ಹಲವು ಪಟ್ಟು ಹೆಚ್ಚಾಯಿತು. ಭೂಮಿಯನ್ನು ಬೆಳೆ ತೆಗೆಯುವ ಫ್ಯಾಕ್ಟರಿ ಎಂಬಂತೆ ಭಾವಿಸಲಾಯಿತು.

ಲಾಭಾಂಶವೇ ಕುಸಿಯಿತು

ನೀರಾವರಿ ಆಶ್ರಿತ ಜಮೀನಿಗೆ ತೆಗೆದುಕೊಂಡು ಹೋಗಿ ಸುರಿಯುವ ಗೊಬ್ಬರದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗತೊಡಗಿತು. ರಾಸಾಯನಿಕ ಕೀಟನಾಶಕಗಳ ಬಳಕೆ ಹೆಚ್ಚಾಯಿತು. ಜೊತೆಗೆ ಟ್ರಾಕ್ಟರ್ ಗಳ ನಿರ್ವಹಣೆ ವೆಚ್ಚವೂ ಹೆಚ್ಚಾಗತೊಡಗಿತು. ವೆಚ್ಚ ಹೆಚ್ಚಾಯಿತೇ ವಿನಃ ಲಾಭಾಂಶ ಹೆಚ್ಚಾಗಲಿಲ್ಲ. ಹಲವೊಮ್ಮೆ ಕಿಂಚಿತ್ತೂ ಲಾಭವೂ ಇಲ್ಲದ ಪರಿಸ್ಥಿತಿಯೇ ಕೃಷಿಕರಿಗೆ ಎದುರಾಗುತ್ತಿದೆ. ಇದರ ಪರಿಣಾಮ ಸಾಲಸೋಲ. ಈ ಸಾಲದ ಚಕ್ರದಲ್ಲಿಯೇ ಗಿರಕಿ ಹೊಡೆಯುವಂತಾಗಿದೆ.

ಮಣ್ಣಿನ ಕಥೆ ಏನಾಯಿತು

ಮಿತಿ ಇಲ್ಲದ ರಸಗೊಬ್ಬರಗಳು, ರಾಸಾಯನಿಕ ಗೊಬ್ಬರಗಳ ಸತತ ಬಳಕೆಯಿಂದ ಕೃಷಿಭೂಮಿಯ ಮಣ್ಣು ಫಲವತ್ತತೆ ಕಳೆದುಕೊಂಡಿದೆ. ಅನೇಕ ಕೃಷಿ ವಲಯಗಳಲ್ಲಿನ ಮಣ್ಣು ಸವಳಾಗಿದೆ. ಅದರ ಉತ್ಪಾದಕ ಶಕ್ತಿ ಕುಗ್ಗಿದೆ. ಇದೆಲ್ಲವೂ ನೀರಾವರಿ ಹಾಗೂ ರಾಸಾಯನಿಕ ಕೃಷಿಪದ್ಧತಿ ಪರಿಣಾಮ ಎಂಬುದನ್ನು ಮರೆಯಬಾರದು.

ಒಣಭೂಮಿಯ ಬೆಳೆ

ಮಳೆಯಾಶ್ರಿತದಲ್ಲಿ ಒಣಭೂಮಿಯಲ್ಲಿ ಬೆಳೆಯುವ ಬೆಳೆಗಳಿಗೆ ಸಾಮಾನ್ಯವಾಗಿ ಯಾರೂ ದುಬಾರಿ ರಸಗೊಬ್ಬರ, ಕೀಟನಾಶಕ ಸುರಿಯುವುದಿಲ್ಲ. ಹೀಗೆ ಮಾಡಿದರೆ ಅವರಿಗೆ ಮಾಡಿದ ಖರ್ಚು ಸಹ ಹಿಂದಿರುಗುವುದಿಲ್ಲ. ಆದ್ದರಿಂದ ಇಲ್ಲಿಯ ಮಣ್ಣಿನ ಫಲವತ್ತತೆ ಸದಾ ಉತ್ಕೃಷ್ಟವಾಗಿರುತ್ತದೆ. ಇಲ್ಲಿ ಬೆಳೆದ ಬೆಳೆಗಳ ಸತ್ವೂ ಹೆಚ್ಚು. ಈ ಪ್ರದೇಶಗಳ ರೈತರ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ.

ಬೇಕಿದೆ ವಿಶೇಷ ಪ್ರೋತ್ಸಾಹ

ಮಳೆಯಾಶ್ರಿತದಲ್ಲಿ ಬೇಸಾಯ ಮಾಡುವ ಕೃಷಿಕರಿಗೆ ವಿಶೇಷ ಪ್ರೋತ್ಸಾಹ ಅಗತ್ಯವಾಗಿದೆ. ಸರ್ಕಾರದಿಂದ ರಿಯಾಯತಿ ದರದಲ್ಲಿ ದೊರೆಯುವ ಬಿತ್ತನೆಬೀಜಗಳು ಇವರಿಗೆ ಉಚಿತವಾಗಿ ದೊರೆಯಬೇಕು, ಕೃಷಿಗೆ ಬೇಕಾದ ಉಪಕರಣ, ಎತ್ತು, ಹಸುಗಳನ್ನು ಖರೀದಿಸಲು ಬಡ್ಡಿರಹಿತ ಸಾಲ ದೊರೆಯಬೇಕು, ಇವರು ಮನೆಗಳನ್ನು ಕಟ್ಟಿಕೊಳ್ಳಲು ನೆರವು ನೀಡಬೇಕು. ಮಳೆ ಇಲ್ಲದ ಸಂದರ್ಭದಲ್ಲಿ ಅಲ್ಪಾವಧಿ ಬೆಳೆ ಬೆಳೆಯಲು ಅಥವಾ ಮೀನುಗಾರಿಕೆಗೆ, ಎತ್ತು ಹಸುಗಳ ಕುಡಿಯುವ ನೀರಿಗಾಗಿ ಕೃಷಿ ಹೊಂಡ ನಿರ್ಮಿಸಲು ಹೆಚ್ಚಿನ ಅನುದಾನ ನೀಡಬೇಕು.

ಮಳೆಯಾಶ್ರಿತ ಬೆಳೆಯ ಬ್ರಾಂಡ್

ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳು ಮಳೆಯಾಶ್ರಯದಲ್ಲಿ ರಸಗೊಬ್ಬರ, ರಾಸಾಯನಿಕ ಕೀಟನಾಶಕ ಬಳಕೆಯಿಲ್ಲದೇ ಸಾವಯವದಲ್ಲಿ ಬೆಳೆದ ಬೆಳೆಗಳನ್ನು ವಿಶೇಷ ಬ್ರಾಂಡ್ ಅಡಿ ನಗರ ಪ್ರದೇಶಗಳಲ್ಲಿ ಮಾರಾಟ ಮಾಡಬಹುದು ಅಥವಾ ರೈತರೇ ಒಗ್ಗೂಡಿ ಈ ಕೆಲಸ ಮಾಡಬಹುದು. ಇಂಥ ಕೃಷಿ ಉತ್ಪನ್ನಗಳಿಗೆ ನಗರವಾಸಿಗಳು ಅಭಿಮಾನದಿಂದ ಪ್ರಿಮಿಯಂ ದರ ನೀಡಿ ಖರೀದಿಸಿ ಪ್ರೋತ್ಸಾಯಿಸುತ್ತಾರೆ.

LEAVE A REPLY

Please enter your comment!
Please enter your name here