ಲೇಖಕರು: ಎಸ್.ವಿ. ವಾಸುದೇವಮೂರ್ತಿ, ಗ್ರಾಮೀಣಾಭಿವೃದ್ಧಿ ತಜ್ಞರು

ಗ್ರಾಮೀಣ ಭಾರತದ ಅಭಿವೃದ್ಧಿಗೋಸ್ಕರ ಇಲ್ಲಿಯವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ 90ಕ್ಕೂ ಹೆಚ್ಚು ಯೋಜನೆಗಳನ್ನು ರೂಪಿಸಿವೆ. ಆದರೂ ಗ್ರಾಮೀಣಾಭಿವೃದ್ಧಿಯಲ್ಲಿ ಉದ್ದೇಶಿತ ಗುರಿಗಳನ್ನು ಸಾಧಿಸಿಲ್ಲ; ಎಲ್ಲಿ ವಿಫಲವಾಗಿದ್ದೇವೆ ಎಂಬುದರ ವಿಮರ್ಶೆ ಅತ್ಯಗತ್ಯ. ದೇಶದ ಜನಸಂಖ್ಯೆಯಲ್ಲಿ ಶೇಕಡ 68ರಷ್ಟು ಗ್ರಾಮೀಣ ಭಾಗದಲ್ಲಿದ್ದರೆ ಉಳಿದ ಶೇಕಡ 32ರಷ್ಟು ಜನಸಂಖ್ಯೆ ನಗರ ಪ್ರದೇಶದಲ್ಲಿದೆ. 6 ಲಕ್ಷದ 32 ಸಾವಿರದ 596 ಹಳ್ಳಿಗಳಿವೆ. ಇವುಗಳಲ್ಲಿ 44 ಸಾವಿರದ 800 ಹಳ್ಳಿಗಳಲ್ಲಿ ಜನವಸತಿಯೇ ಇಲ್ಲ. ಜನವಸತಿ ಇರುವ ಗ್ರಾಮಗಳ ಸಂಖ್ಯೆ 5 ಲಕ್ಷ 93 ಸಾವಿರದ 731.
ಬಡತನ ರೇಖೆ ಕೆಳಗಿರುವವರು:
2011-12ರ ಅಂಕಿಅಂಶದ ಪ್ರಕಾರ ಬಡತನದ ರೇಖೆಗಿಂತ ಕೆಳಗೆ ಇರುವವರ ಸಂಖ್ಯೆ ಶೇಕಡ 15.3. 19 ಕೋಟಿಗಿಂತ ಹೆಚ್ಚು ಜನ ಬಡತನದ ರೇಖೆಗಿಂತ ಕೆಳಗಿನ ದುಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. 141 ಮಿಲಿಯನ್ ಹೆಕ್ಟೇರ್ ಸಾಗುವಳಿ ಪ್ರದೇಶವಿದೆ. ಅದರಲ್ಲಿ 39 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ವಾರ್ಷಿಕ ಎರಡು ಬೆಳೆ ತೆಗೆಯುವುದಕ್ಕೆ ಸಾಧ್ಯ. ಸುಮಾರು ನೂರು ನದಿ, ಉಪನದಿಗಳಿವೆ.
ಸಣ್ಣಸಣ್ಣ ಹಿಡುವಳಿಗಳು:
ಇಷ್ಟೆಲ್ಲ ಇದ್ದರೂ ನಮ್ಮ ಉದ್ದೇಶಿತ ಗುರಿಯನ್ನು ಏಕೆ ಸಾಧಿಸಲು ಸಾಧ್ಯವಾಗಿಲ್ಲ ಎಂದರೆ ನಮ್ಮ ಸರಾಸರಿ ಭೂ ಹಿಡುವಳಿ ಮಾಲಿಕತ್ವ 1.1 ಹೆಕ್ಟೇರ್. ಎಲ್ಲ ಯೋಜನೆಗಳನ್ನು ಈ ಸೀಮಿತ ಪ್ರದೇಶಕ್ಕೆ ಅಳವಡಿಸಿ ಜಾರಿಗೊಳಿಸುವ ಸಂದರ್ಭದಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಇವುಗಳನ್ನು ನೋಡಿದಾಗ ಮುಖ್ಯವಾಗಿ ಸಣ್ಣ ಹಿಡುವಳಿ, ಬಹಳ ಕಡಿಮೆ ಆದಾಯ, ಬಂಡವಾಳ ಹೂಡಲು ಇರುವ ಮಿತಿಗಳು, ರೈತಾಪಿಗಳಿಗೆ ಯಾವುದೇ ರೀತಿಯ ನಿರ್ದಿಷ್ಟ – ನಿಶ್ಚಿತ ಆದಾಯಗಳು ಇಲ್ಲದೇ ಇರುವುದು, ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದಿರುವುದು, ಬಳಸುತ್ತಿರುವ ಪದಾರ್ಥಗಳ ಬೆಲೆ ನಿಯಂತ್ರಣ ಸಾಧ್ಯ ಇಲ್ಲದೇ ಇರುವುದು ಇತ್ಯಾದಿ ಕಾರಣಗಳಿರುವುದು ತಿಳಿಯುತ್ತದೆ.
ಇವುಗಳ ಜೊತೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮತ್ತು ಅವುಗಳನ್ನು ಕಾರ್ಯಗತ ಮಾಡುವುದಕ್ಕೆ ಇರುವ ಮಿತಿಗಳು ಸಹ ಅಡ್ಡಿಯಾಗಿವೆ. ಹಳ್ಳಿಗರಿಗೆ ವ್ಯವಸಾಯ ಹೊರತುಪಡಿಸಿ ಇತರ ಉದ್ಯೋಗಗಳು ಮತ್ತು ಆದಾಯ ಮೂಲಗಳು ಇಲ್ಲ. ಬಹುತೇಕರಿಗೆ ಪಾರಂಪಾರಿಕ ಸಾಲಗಳ ಹೊರೆ ಇದೆ. ಇವೆಲ್ಲ ದೊಡ್ಡ ಸಮಸ್ಯೆಗಳು.
ನ್ಯಾಯಯುತ ಬೆಲೆಯೇ ದೊರಕುತ್ತಿಲ್ಲ:
ಈ ಎಲ್ಲ ಹಿನ್ನೆಲೆಗಳನ್ನು ನೋಡಿದಾಗ ಗ್ರಾಮೀಣರಿಗೆ ಭವಿಷ್ಯ ಇಲ್ಲವೇ ಎಂಬ ಆತಂಕ ಉಂಟಾಗುತ್ತದೆ. ಒಮ್ಮೆ ಹೆಚ್ಚು ಬೆಳೆಯಾದರೆ ಅದಕ್ಕೆ ಸೂಕ್ತ ಬೆಲೆಯೇ ದೊರೆಯುವುದಿಲ್ಲ. ಮಳೆ ಕಡಿಮೆಯಾದಾಗ ಬೆಳೆ ಆಗಿರುವುದಿಲ್ಲ. ಆಗಲೂ ಬೆಳೆಗೆ ಬೆಲೆ ಇರುವುದಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಕೃಷಿ ಮಾಡುವುದರಿಂದ ಜೀವನಕ್ಕೆ ಅವಶ್ಯಕತೆ ಇರುವಷ್ಟು ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇವೆಲ್ಲದರ ಪರಿಣಾಮ ಸರ್ಕಾರಗಳು ನಿರಂತರವಾಗಿ ಬಡ್ಡಿಮನ್ನಾ ಅಥವಾ ಸಾಲಮನ್ನಾ, ಬೆಳೆಗೆ ಬೆಂಬಲ ಬೆಲೆ, ಬರ ಪರಿಹಾರ, ನೆರೆ ಪರಿಹಾರ ಘೋಷಣೆ ಮಾಡುತ್ತಾ ಬಂದಿವೆ.


ಶಾಶ್ವತ ಪರಿಹಾರದ ಅಗತ್ಯವಿದೆ:
ಇವ್ಯಾವುದೂ ಶಾಶ್ವತ ಪರಿಹಾರ ನೀಡುತ್ತಿಲ್ಲ. ಹಾಗಿದ್ದರೆ ಸಮಸ್ಯೆ ಪರಿಹಾರಕ್ಕೆ ಏನು ಮಾಡಬೇಕು ಎಂದು ಚಿಂತನೆ ನಡೆಸುವ ಅಗತ್ಯವಿದೆ. ರೈತರ ಜಮೀನು ರೈತರ ಬಳಿಯೇ ಉಳಿಯಬೇಕು. ಇವರು ಬಂಡವಾಳ ಹೂಡಲು ಸಾಧ್ಯವಿಲ್ಲದೇ ಇರುವುದರಿಂದ ಯೋಜನೆ ಸ್ವರೂಪ ಭಿನ್ನವಾಗಿರಬೇಕಾದ ಅಗತ್ಯವಿದೆ. ಅವರಿಂದ ಬಂಡವಾಳ ಪಡೆಯದೇ ಹೆಚ್ಚಿನ ಲಾಭಾಂಶ ನೀಡುವ ರೀತಿ ಇರಬೇಕು. ಇದೇ ನಾನು ಯೋಜಿಸಿರುವ ಸ್ಮಾರ್ಟ್ ವಿಲೇಜ್ ಎಕನಾಮಿಕ್ ಜೋನ್ ತಿರುಳು. ಈ ದಿಶೆಯಲ್ಲಿ ಬೇರೆಬೇರೆ ಮೂಲಗಳಿಂದ ಆದಾಯ ಬರುವಂಥ ವ್ಯವಸ್ಥೆ ಮಾಡಬಹುದು. ತನ್ಮೂಲಕ ಅವರ ಬಾಳಿನಲ್ಲಿ ಭರವಸೆ ಬೆಳಕು ಉಂಟಾಗಬೇಕು.
ಈಗಾಗಲೇ ಹೇಳಿರುವಂತೆ ಸರಾಸರಿ ಭೂ ಹಿಡುವಳಿ 1.1 ಹೆಕ್ಟೇರ್. ಇಷ್ಟರಿಂದಲೇ ಒಂದು ಕುಟುಂಬದ ಕನಿಷ್ಟ ನಾಲ್ವರು ಸದಸ್ಯರು ನೆಮ್ಮದಿಯಿಂದ ಬದುಕಲು ಸಾಧ್ಯವಾಗದೇ ಅವರೆಲ್ಲ ನಗರ ಪ್ರದೇಶದಲ್ಲಿ ಕೂಲಿಯಾಳುಗಳಾಗಿರಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಿ ಜಮೀನುಗಳಲ್ಲಿಯೇ ಹೆಚ್ಚಿನ ಉತ್ಪಾದನೆ ಸಾಧ್ಯವಾಗುವಂತೆ ಮಾಡುವುದು ಮತ್ತು ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವುದು.
ಸಂಸದರ ಕ್ಷೇತ್ರವೇ ಘಟಕ:
ಸ್ಮಾರ್ಟ್ ವಿಲೇಜ್ ಎಕನಾಮಿಕ್ ಜೋನ್ ಗಾಗಿ ಸಂಸದರ ಕ್ಷೇತ್ರವನ್ನು ಒಂದು ಘಟಕವಾಗಿ ಪರಿಗಣಿಸಬೇಕು. ಮೊದಲ ಹಂತದಲ್ಲಿ 470 ಹೆಕ್ಟೇರ್ ಭೂಮಿಯನ್ನು ಪರಿಗಣಿಸಲಾಗುತ್ತದೆ. ಇದರ 16.75 ಹೆಕ್ಟೇರ್ನಲ್ಲಿ ವಿವಿಧ ರಿತಿಯ ದುಡಿಮೆ ಸಾಧ್ಯತೆಗಳನ್ನು ಸೃಷ್ಟಿಸಲಾಗುತ್ತದೆ. ಇನ್ನು ಉಳಿದ 64. 25 ಹೆಕ್ಟೇರಿನಲ್ಲಿ ಕೃಷಿ ಉತ್ಪನ್ನಗಳ ಕಾರ್ಯ ನಡೆಯುತ್ತದೆ. 81 ಹೆಕ್ಟೇರ್ ಭೂಮಿಯನ್ನು ಗುಂಪು ವ್ಯವಸ್ಥೆ ಅಡಿ ಪಡೆದು ಇದರಲ್ಲಿ ಎಸ್.ವಿ.ಇ.ಜೆಡ್. ಸ್ಥಾಪನೆ ಮಾಡಲಾಗುತ್ತದೆ. ಉಳಿದ 389 ಹೆಕ್ಟೇರ್ ಜಮೀನನ್ನು ವ್ಯವಸ್ಥಾಪನೆಗಾಗಿ ಅಳವಡಿಸಲಾಗುತ್ತದೆ.
ಕೇಂದ್ರ ಸರ್ಕಾರದ ‘ಸೆಂಟ್ರಲ್ ಪ್ರೊಡಕ್ಷನ್ & ರೆಗ್ಯುಲೇಶನ್ ಅಥಾರಿಟಿ’ ಅನುಸಾರ ಕೃಷಿ ಉತ್ಪನ್ನಗಳ ಬೇಸಾಯ ಕಾರ್ಯ ನಡೆಯುತ್ತದೆ. ಜೊತೆಗೆ ನಿರಂತರವಾಗಿ ಸರಬರಾಜು ಆಗುವುದಕ್ಕೆ ಅವಕಾಶವಾಗುತ್ತದೆ. ಇವೆಲ್ಲದರ ಜೊತೆಗೆ ದೇಶದ 543 ಎಂ.ಪಿ. ಕ್ಷೇತ್ರಗಳ ಪೈಕಿ ಗ್ರಾಮೀಣ ಮತ್ತು ನಗರ ಪ್ರದೇಶ ಎರಡನ್ನೂ ಹೊಂದಿರುವ 500 ಎಂ.ಪಿ. ಕ್ಷೇತ್ರಗಳಲ್ಲಿ ಎಸ್.ವಿ.ಇ.ಜೆಡ್. ಸ್ಥಾಪನೆ ಸೂಕ್ತ.
ಜಿಡಿಪಿಯ ಶೇಕಡ 1ರಷ್ಟು ಹಣ ಸಾಕು:
ಈ ಎಲ್ಲ ಕಾರ್ಯಗಳನ್ನು ವ್ಯವಸ್ಥಿತವಾಗಿ, ಸುಗಮವಾಗಿ ಮಾಡಲು ಬಂಡವಾಳ ಮತ್ತು ಬೆಂಬಲದ ಅಗತ್ಯವಿದೆ. ಇದಕ್ಕೆ ರಾಷ್ಟ್ರದ ಜಿಡಿಪಿಯ ಶೇಕಡ 1 ರಷ್ಟು ಹಣ ಸಾಕು. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕೃಷಿ ವಲಯದಲ್ಲಿ 30ಕ್ಕೂ ಹೆಚ್ಚು ಸಬ್ಸಿಡಿ ಯೋಜನೆ ಚಾಲ್ತಿಯಲ್ಲಿವೆ. ಈ ರೀತಿಯ ಎಲ್ಲ ಕೃಷಿ ಸಂಬಂಧಿತ ಯೋಜನೆಗಳನ್ನು ಏಕಗವಾಕ್ಷಿ ಅಡಿ ತರುವ ಅಗತ್ಯವಿರುತ್ತದೆ.
ರೈತರೇ ಜಮೀನಿನ ಮಾಲೀಕರು:
ಎಸ್.ವಿ.ಇ.ಜೆಡ್. ವಿಶೇಷತೆ ಎಂದರೆ ಇಲ್ಲಿ ರೈತರೇ ತಮ್ಮತಮ್ಮ ಜಮೀನುಗಳ ಮಾಲಿಕತ್ವ ಹೊಂದಿರುತ್ತಾರೆ. ಇದು ಯಾವ ಕಾರಣಕ್ಕೂ ಆಡಳಿತ ಸಮಿತಿಗಾಗಲಿ, ಸರ್ಕಾರಕ್ಕಾಗಲಿ ವರ್ಗಾವಣೆಯಾಗುವುದಿಲ್ಲ. ಕೃಷಿ ಚಟುವಟಿಕೆ ಸಾಗಲು ಜಮೀನುಗಳ ಮಾಲಿಕರೊಂದಿಗೆ 12 ವರ್ಷಗಳ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ. ನಿರ್ವಹಣಾ ವೆಚ್ಚ ಕಳೆದು ಬರುವ ಲಾಭವೆಲ್ಲ ಇವರಿಗೆ ಹಂಚಿಕೆಯಾಗುತ್ತದೆ.
ಕ್ಷೇತ್ರದಲ್ಲಿ ಬೆಳೆದ ಬೆಳೆಗಳನ್ನು ನೇರ ಮಾರುಕಟ್ಟೆಗೆ ಸಾಗಿಸುವುದಿಲ್ಲ. ಗೋದಾಮುಗಳಲ್ಲಿ ಸಂರಕ್ಷಿಸಿ ಇಡಲಾಗುತ್ತದೆ. ಇದಕ್ಕಾಗಿ ಸ್ವಂತ ಗೋದಾಮುಗಳ ಜಾಲ ನಿರ್ಮಿಸಲಾಗುತ್ತದೆ. ಜಮೀನುಗಳ ಮಾಲಿಕರಿಗೆ ಅಗತ್ಯವಿರುವಾಗ ಸಾಲ ಕೊಡಿಸಲಾಗುತ್ತದೆ. ಇದರ ಜವಾಬ್ದಾರಿಯನ್ನು ಆಡಳಿತ ಮಂಡಳಿಯೇ ವಹಿಸಿಕೊಂಡಿರುತ್ತದೆ. ಬೆಳೆದ ಬೆಳೆ ಮಂಡಳಿ ಮುಖಾಂತರವೇ ಮಾರಲ್ಪಡುವುದರಿಂದ ಅದರಿಂದ ರೈತನಿಗೆ ಬರುವ ಹಣದಲ್ಲಿ ಸಾಲದ ಕಂತು ಮುರಿದುಕೊಳ್ಳಲಾಗುತ್ತದೆ. ಉಳಿದ ಹಣ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ಇದರಿಂದ ರೈತರಿಗೆ ಅನೇಕ ರೀತಿ ಅನುಕೂಲವಾಗುತ್ತದೆ. ಮೊದಲನೇಯದಾಗಿ ಅವರು ಜಮೀನನ್ನು ಗುಂಪು ವ್ಯವಸ್ಥೆಗೆ ನೀಡುವುದರ ಹೊರತಾಗಿ ಹಣದ ಬಂಡವಾಳ ಹಾಕಿರುವುದಿಲ್ಲ. ಎರಡನೇಯದು ಬಂದ ಉತ್ಪತ್ತಿ ಹಂಚಿಕೆಯಾಗುತ್ತದೆ. ಆಡಳಿತ ಮಂಡಳಿಯಲ್ಲಿಯೂ ರೈತರ ಪ್ರತಿನಿಧಿಗಳು ಇರುತ್ತಾರೆ.
ಆಡಳಿತ ಮಂಡಳಿಯಲ್ಲಿ ರೈತರ ಪ್ರಾತಿನಿಧ್ಯ:
ಕೆಲವು ವರ್ಷಗಳು ಕಳೆದ ಬಳಿಕ ಎಸ್.ವಿ.ಇ.ಜೆಡ್. ನಿರ್ವಹಣೆಯನ್ನು ಸ್ವತಂತ್ರವಾಗಿ ನಿರ್ವಹಣೆ ಮಾಡುವ ಶಕ್ತಿ ಮಂಡಳಿಯಲ್ಲಿರುವ ರೈತ ಪ್ರತಿನಿಧಿಗಳಿಗೆ ದೊರೆಯುತ್ತದೆ. ಇದಕ್ಕೆ ಬೇಕಾದ ತರಬೇತಿಯನ್ನು ಅವರಿಗೆ ನೀಡಲಾಗುತ್ತದೆ. ಒಂದು ಎಸ್.ವಿ.ಜೆಡ್. ಅಡಿಯಲ್ಲಿ ಯೋಜನೆ ನಿರ್ವಹಣೆಗಾಗಿ 11 ಕೋಟಿ 60 ಲಕ್ಷ ರೂಪಾಯಿ ಬಂಡವಾಳ ಬೇಕಾಗುತ್ತದೆ. ಇದನ್ನು ಬೇರೆಬೇರೆ ಮೂಲಗಳಿಂದ ಸಂಗ್ರಹಿಸಬೇಕಾಗುತ್ತದೆ. ಹೂಡಿಕೆದಾರರಿಂದ 3 ಕೋಟಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸೇರಿ ಪ್ಲಾಟ್ ಸಬ್ಸಿಡಿ ನೀಡುತ್ತಾರೆ. ಇದು ಒಂದೇ ಬಾರಿ ಒಂದೇ ಕಂತಿನಲ್ಲಿ ನೀಡುವ ಸಬ್ಸಿಡಿಯಾಗಿರುತ್ತದೆ. ಇದು ಸುಮಾರು 3 ಕೋಟಿ 50 ಲಕ್ಷ ರೂಪಾಯಿ ಆಗುತ್ತದೆ. ಇದಲ್ಲದೇ ಹಾಲಿ ಇರುವ ಸಾಮಾನ್ಯ ಸಬ್ಸಿಡಿ ಯೋಜನೆಗಳಿಂದಲೇ 2. ಕೋಟಿ 79 ಲಕ್ಷ ಪಡೆಯುವ ಅರ್ಹತೆ ಎಸ್.ವಿ,ಇ.ಜೆಡ್. ಗೆ ಬಂದಿರುತ್ತದೆ. ಆದ್ದರಿಂದ ಸರ್ಕಾರ, ಹೆಚ್ಚುವರಿಯಾಗಿ ನೀಡುವುದು 71 ಲಕ್ಷ ರೂ. ಮಾತ್ರ.
ಛಾವಣಿ ಆಧಾರಿತ ಸೌರಶಕ್ತಿ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಇದಕ್ಕೆ 140 ಲಕ್ಷ ರೂಪಾಯಿ ಬೇಕಾಗುತ್ತದೆ. ಇದನ್ನು ಬೂಟ್ ಮಾಡೆಲ್ ಅಡಿ ನಿರ್ವಹಿಸಲಾಗುತ್ತದೆ. ಇದೇ ಮಾದರಿಯಲ್ಲಿ ಹಾಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ವಹಿಸಲಾಗುತ್ತಿದೆ. ಕೃಷಿ ಯೋಜನೆಗಳಿಗಾಗಿ ಸಾಲ ನೀಡುವ ರಾಷ್ಟ್ರೀಕೃತ ಬ್ಯಾಂಕುಗಳಿಂದ 3 ಕೋಟಿ 20 ಲಕ್ಷ ಸಾಲ ಪಡೆಯಲಾಗುತ್ತದೆ. ಇದಲ್ಲದೇ ವರ್ಕಿಂಗ್ ಕ್ಯಾಪಿಟಲ್ ಎಂದು 50 ಲಕ್ಷ ರೂ. ಇರುತ್ತದೆ. ಇದೆಲ್ಲ ಸೇರಿ 11. ಕೋಟಿ 60 ಲಕ್ಷ ರೂಪಾಯಿ ಆಗುತ್ತದೆ.
ಹೂಡಿಕೆದಾರರಿಗೂ ಲಾಭ:
ಹೂಡಿಕೆದಾರರಿಗೆ ಶೇಕಡ 20 ರಷ್ಟು ಲಾಭ ಬರುವ ಹಾಗೆ ಮಾಡಲಾಗುತ್ತದೆ. ಇದು ಅವರಿಗೆ ಆಕರ್ಷಣೆಯಾಗಿರುತ್ತದೆ. ಇಲ್ಲದಿದ್ದರೆ ಬಂಡವಾಳ ಹೂಡಲು ಯಾರೂ ಮುಂದೆ ಬರುವುದಿಲ್ಲ. ಬ್ಯಾಂಕುಗಳು ಕೊಟ್ಟ ಸಾಲ ಸಹ ನೂರಕ್ಕೆ ನೂರರಷ್ಟು ಮರು ಪಾವತಿಯಾಗುತ್ತದೆ.
ಬ್ಯಾಂಕುಗಳು ಹಾಲಿ ಕೃಷಿರಂಗಕ್ಕೆ ಒಟ್ಟು 8 ಲಕ್ಷ ಕೋಟಿ ರೂಪಾಯಿ ಸಾಲ ನೀಡುತ್ತಿವೆ. ಇದರಲ್ಲಿ 9. ಕೋಟಿ 60 ಲಕ್ಷ ರೂಪಾಯಿಗಳನ್ನು ಯೋಜನೆಗಾಗಿ ನೀಡುತ್ತವೆ. ಇಡೀ ಯೋಜನೆ 5 ವರ್ಷದ ಅವಧಿಯದ್ದಾಗಿರುತ್ತದೆ. ಪ್ರತಿ ವರ್ಷ ಒಂದು ಸಂಸತ್ ಕ್ಷೇತ್ರದಲ್ಲಿ 600 ಎಸ್.ವಿ.ಇ.ಜೆಡ್ ಸ್ಥಾಪನೆಯಾಗುತ್ತವೆ.
ಎಕರೆವಾರು ಲಾಭಾಂಶ:
ಒಂದು ಎಕರೆಗೆ ವಾರ್ಷಿಕ 1 ಲಕ್ಷ ರೂಪಾಯಿನಂತೆ ಎರಡೂವರೆ ಎಕರೆಗೆ 2 ಲಕ್ಷ 50 ಸಾವಿರ ರೂ. ಲಾಭ ದೊರೆಯುತ್ತದೆ. ಖರ್ಚುಗಳೆಲ್ಲವನ್ನೂ ಕಳೆದರೂ ಒಂದು ಎಸ್.ವಿ.ಇ.ಜೆಡ್. ವಾರ್ಷಿಕ 200 ಲಕ್ಷ ರೂಪಾಯಿ ಲಾಭ ಮಾಡುತ್ತದೆ.
ಮಲ್ಟಿ ಪರ್ಫಸ್ ಬಿಲ್ಡಿಂಗ್ ಕಾಂಪ್ಲೆಕ್:
ಇದು ಎಸ್.ವಿ.ಇ.ಜೆಡ್. ವಿಶೇಷತೆ. ಇದರಲ್ಲಿ ಸುಮಾರು 800 ಟನ್ ಕೃಷಿ ಉತ್ಪನ್ನ ಸ್ಟಾಕ್ ಮಾಡುವಂಥ ಬೃಹತ್ ಗೋದಾಮುಗಳು, 200 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸೌರಶಕ್ತಿ ಘಟಕಗಳು ಇರುತ್ತವೆ. ಇದಲ್ಲದೇ ಕಸ್ಟಮ್ ಹೈರಿಂಗ್ ಸೆಂಟರ್ ಸಹ ಇರುತ್ತದೆ. ಪ್ರಯೋಗಾಲಯ ಇರುತ್ತದೆ. ವಾತಾವರಣ ಮಾಪಕ ಕೇಂದ್ರವಿರುತ್ತದೆ. ಮಾಹಿತಿ ಕೇಂದ್ರ ಇರುತ್ತದೆ. ಗೊಬ್ಬರ ಸಂಗ್ರಹಣಾ ಘಟಕವಿರುತ್ತದೆ. ಅಧಿಕಾರಿಗಳಿಗಾಗಿ ಮೂಲಭೂತ ಸೌಕರ್ಯ ಇರುವ ಕನ್ಸಲ್ಟಿಂಗ್ ರೂಮ್ ಇರುತ್ತದೆ. ಸದಸ್ಯರೆಲ್ಲರೂ ಕುಳಿತು ಚರ್ಚಸುವುದಕ್ಕಾಗಿ ಸಭಾಂಗಣ ಇರುತ್ತದೆ. ಇದು ಬಹುಪಯೋಗಿ ಆಗಿರುವಂತೆ ವಿನ್ಯಾಸ ಮಾಡಲಾಗುತ್ತದೆ.
ಕೇಂದ್ರದಲ್ಲಿ ಹೈನುಗಾರಿಕೆ, ಕುರಿ ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಣೆ, ಪೋಷಕಾಂಶ ಉತ್ಪಾದನೆ, ಮೌಲ್ಯವರ್ಧನೆ, ಪಶು ಆಹಾರ ತಯಾರಿಕೆ ಇತ್ಯಾದಿ ಘಟಕಗಳು ಇರುತ್ತವೆ. ಒಂದೇ ಸ್ಥಳದಲ್ಲಿ ಇಷ್ಟೆಲ್ಲ ಘಟಕಗಳಿರುವ ಯೋಜನೆ ಅಪರೂಪ.


ಅರಣ್ಯಗಳ ಪ್ರಾಮುಖ್ಯತೆ:
ಹಿಂದೆಲ್ಲ ಹೆಚ್ಚು ಕಡಿಮೆ ಪ್ರತಿ ಹಳ್ಳಿಗಳು ಗುಂಡು ತೋಪು, ನೆಡು ತೋಪುಗಳನ್ನು ಹೊಂದಿರುತ್ತಿದ್ದವು. ಇದೇ ಮಾದರಿಯಲ್ಲಿ ಪ್ರತಿ ಒಂದು ಎಸ್.ವಿ.ಇ.ಜೆಡ್ ಅರಣ್ಯಗಳನ್ನು ನಿರ್ಮಾಣ ಮಾಡುತ್ತದೆ. ಇಲ್ಲಿ ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆ ದೊರೆಯುವ ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗುತ್ತದೆ. ಎರಡು ದಶಕ ಕಳೆದರೆ ಇವುಗಳ ಮಾರಾಟದಿಂದಲೂ ಉತ್ತಮ ಲಾಭ ದೊರೆಯುತ್ತದೆ.
ಬೆಳೆಗಾರರಿಂದ ಬಳಕೆದಾರರಿಗೆ:
ಎಸ್.ವಿ.ಇ.ಜೆಡ್. ಧ್ಯೆಯ ವಾಕ್ಯವೇನೆಂದರೆ ಬೆಳೆಗಾರರಿಂದ ಬಳಕೆದಾರರಿಗೆ. ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶವೇ ಇರುವುದಿಲ್ಲ. ಇದರ ಪ್ರಯೋಜನ ರೈತರು ಮತ್ತು ಗ್ರಾಹಕರಿಗೆ ದೊರೆಯುತ್ತದೆ. ಉತ್ಪನ್ನಕ್ಕೆ ಉತ್ತಮ ಬೆಲೆ ದೊರೆತ ಸಮಾಧಾನ ರೈತರಿಗೆ ಉಂಟಾದರೆ ಸೂಕ್ತ ಬೆಲೆಗೆ ಅತ್ಯುತ್ತಮ ಕೃಷಿ ಉತ್ಪನ್ನ ಖರೀದಿಸಿದ ಸಮಾಧಾನ ಗ್ರಾಹಕರಿಗೆ ಇರುತ್ತದೆ.

ಕೃಷಿಕರು ನೆಮ್ಮದಿಯಿರಬೇಕೆಂದು ಸದಾ ಚಿಂತನೆ ನಡೆಸುವ ಎಸ್.ವಿ. ವಾಸುದೇವಮೂರ್ತಿ ಅವರಿಗೆ ಪೋನ್ ಮಾಡಿ ನಿಮ್ಮ ಬೆಂಬಲ ಸೂಚಿಸಬಹುದು. ದೂರವಾಣಿ ಸಂಖ್ಯೆ: 080 26985100 ಅಥವಾ 080 26985101 ಇಮೈಲ್: [email protected]

LEAVE A REPLY

Please enter your comment!
Please enter your name here