ಲೇಖಕರು: ಡಾ. ಮಿರ್ಜಾ ಬಶೀರ್, ಖ್ಯಾತ ಪಶುವೈದ್ಯರು ಮತ್ತು ಸಾಹಿತಿ

ಪಶು ಚಿಕಿತ್ಸಾಲಯದ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ನನ್ನನ್ನು ಕಪಿನಪ್ಪ ತಡೆದು ನಿಲ್ಲಿಸಿಕೊಂಡು ತನ್ನ ಮನೆಗೆ ಬರಬೇಕೆಂದು ತೊದಲುತ್ತ ಜೋಲಿ ಹೊಡೆದಾಗ ಸಂಜೆ ಇಳಿಹೊತ್ತಾಗಿತ್ತು. ದಿನದ ಬೆಳಕು ಇರುಳ ಕತ್ತಲೆಗೆ ಶರಣಾಗುತ್ತಿತ್ತು. ಪಶುಪಕ್ಷಿಗಳು ತಮ್ಮ ಗೂಡುಗಳತ್ತ ಮುಖ ಮಾಡಿದ್ದವು. ದಿನವಿಡೀ ಪಶುಚಿಕಿತ್ಸಾಲಯದ ಕೆಲಸಗಳಿಂದ ಹಣ್ಣುಹಣ್ಣಾಗಿದ್ದೆ. ಮನೆ ಸೇರಿದರೆ ಸಾಕೆಂದು ಮನಸ್ಸು ಹಾತೊರೆಯುತ್ತಿತ್ತು. ರೈತರು ಹೊಲಗದ್ದೆ ತೋಟಗಳಿಂದ ಹಿಂತಿರುಗುತ್ತಿದ್ದರು. ರಸ್ತೆಯಲ್ಲಿ ಹೋಗಿಬರುತ್ತಿದ್ದ ಅವರು ನಮಸ್ಕರಿಸುತ್ತ ಸಾಗುತ್ತಿದ್ದರು.

ಆಸ್ಪತ್ರೆಯಿದ್ದ ತಂಡಗ ಗ್ರಾಮದಿಂದ ಮನೆಯಿದ್ದ ನೊಣವಿನಕೆರೆಗೆ ಹೋಗುತ್ತಿದ್ದೆ. ಅರ್ಧ ದಾರಿ ಬಂದಿದ್ದೆ. ಆಗ ಕಪಿನಪ್ಪ ಎದುರಾದದ್ದು, ಆಲ್ಬೂರು ಕೆರೆ ಏರಿಯ ಬಳಿ. ಮನೆಗಾ ಸಾರ್? ಎಲಾ ಕಪಿನಿ! ಬೆಳಿಗ್ಗೆಯಿಂದ ಕುಡಿಯಾದ್ ಬಿಟ್ಟು ತೋರ್ಸಕಾಯ್ತಿರಲಿಲ್ಲವೇನ್ಲ ಎಮ್ಮೆನ? ಮೊಲ ಎದ್ದಾಗ ನಾಯಿ ಉಚ್ಚೆ ಹೊಯ್ಯಕೋಯ್ತಂತೆ! ಈತ ನನಗೆ ಪರಿಚಿತನಿದ್ದ ವ್ಯಕ್ತಿಯೇ ಆಗಿದ್ದ. ಮುಖ್ಯ ರಸ್ತೆಯ ಪಕ್ಕದಲ್ಲಿ ಅವನ ಮನೆಯಿತ್ತು. ಮನೆ ಹಿಂದೆ ತೋಟ. ಪ್ರತಿದಿನ ಬೆಳಿಗ್ಗೆ ಸಂಜೆ ಅವನ ಮನೆ ಮುಂದೆ ನಾನು ಬೈಕಿನಲ್ಲಿ ಅಡ್ಡಾಡುತ್ತಿದ್ದೆ.
ಕಪಿನಪ್ಪ ಯಾವತ್ತೂ ಅವನಾಗಿ ಮಾತನಾಡಿಸಿದವನಲ್ಲ. ವಿಪರೀತ ಸಂಕೋಚದ ವ್ಯಕ್ತಿ. ಅದೂ ಅಲ್ಲದೆ ಯಾವಾಗಲೂ ಕುಡಿದಿರುತ್ತಿದ್ದ. ಮೊದಲಿಗೆ ಶ್ರೀಮಂತನಾಗಿದ್ದವ. ದಿನಕಳೆದಂತೆ ನಾನಾ ಕಾರಣಗಳಿಂದ ಅವನ ಸಿರಿತನ ಸವೆದುಹೋಗಿತ್ತು. ಅವನ ಮನೆ ಮುಂದೆ ನಾನು ಹೋಗುವಾಗ ಬರುವಾಗ ಮುಖ ತಪ್ಪಿಸಿ ಓಡಾಡುತ್ತಿದ್ದ. ಎಷ್ಟು ಕುಡಿದರೂ ಬೇರೆಯವರೊಡನೆ ಜಗಳವಾಡಿದವನಲ್ಲ. ಬಹಳ ವಿನಯವಂತ ಮತ್ತು ಸೌಮ್ಯ ಸ್ವಭಾವದವನಾಗಿದ್ದ.
ಇಂಥ ವ್ಯಕ್ತಿ ತಾನಾಗಿ ಬೈಕು ತಡೆದು ನನ್ನೊಡನೆ ಎಮ್ಮೆಗುಷಾರಿಲ್ಲ ಬರ್ಲೇಬೇಕು ಎಂದು ಜೋರಾಗಿ ಜೋಲಿ ಹೊಡೆದ. ವಾಲಾಡದೆ ನೇರ ನಿಲ್ಲಲು, ತೊದಲದೆ ಮಾತಾಡಲು ಅವನ ದೇಹ ಸೇರಿದ್ದ `ಪರಮಾತ್ಮ’ ಬಿಡುತ್ತಿರಲಿಲ್ಲ. ಸುಮಾರು ಐವತ್ತು ವರ್ಷದ ಕಪಿನಪ್ಪನ ಜೊತೆ ಐದಾರು ವರ್ಷದ ಹುಡುಗನಿದ್ದ. ಕಪಿನಪ್ಪ ಹುಡುಗನನ್ನು ಹಿಡಿದುಕೊಂಡಿರದೆ ಹುಡುಗನೇ ಕಪಿನಪ್ಪನ ಕೈ ಹಿಡಿದುಕೊಂಡಿದ್ದ. ಕಪಿನಪ್ಪ ಎಡಕ್ಕೆ ಜೋಲಿ ಹೊಡೆದರೆ ಬಲಕ್ಕೆ ಓಡುತ್ತ ಮತ್ತು ಬಲಕ್ಕೆ ಜೋಲಿ ಹೊಡೆದರೆ ಎಡಕ್ಕೆ ಓಡುತ್ತ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದ್ದ ಆ ಹುಡುಗ. ಬಲು ಚೂಟಿಯಾಗಿದ್ದ ಹುಡುಗನ ಬಾಯಿಂದ ಮಾತುಗಳು ಪಟಾಕಿಯಂತೆ ಸಿಡಿಯುತ್ತಿದ್ದವು. ಅವನು ಕಪಿನಪ್ಪನ ಮಗ ಎಂದು ಆಮೇಲೆ ತಿಳಿಯಿತು.

ಕಪಿನಪ್ಪನಿಂದ ಯಾವ ಮಾಹಿತಿಯನ್ನೂ ಪಡೆಯಲಾಗುತ್ತಿರಲಿಲ್ಲವಾದ್ದರಿಂದ ಬೈಕ್ ನಿಲ್ಲಿಸಿ ಅವನ ಮನೆ ಕಡೆ ಹೆಜ್ಜೆ ಹಾಕಿದೆ. ಸಕಲೆಂಟು ದಿಕ್ಕಿನಲ್ಲಿ ವಾಲಾಡುತ್ತಿದ್ದ ಕಪಿನಪ್ಪ ಎಮ್ಮೆಯ ಗುಣಗಾನ ಮಾಡುತ್ತ ಇದ್ದಕ್ಕಿದ್ದಂತೆ ಅಳತೊಡಗಿದ. ಇದೇನೋ ಬಹಳ ‘ಸೀರಿಯಸ್ ಕೇಸ್’ ಇರಬೇಕೆಂದುಕೊಂಡೆ. ಔಷಧದ ಬ್ಯಾಗನ್ನು ಹಿಡಿದುಕೊಳ್ಳಲು ಬಹಳ ಒತ್ತಾಯ ಮಾಡಿದವನಿಗೆ ಗದರಿಸಿ ನಾನೇ ಹಿಡಿದುಕೊಂಡು ಮುನ್ನಡೆದೆ. ಆತ ತೂರಾಡುತ್ತ ಬ್ಯಾಗನ್ನು ಎತ್ತಾಕಿ ಅದರಲ್ಲಿರುವ ಎಲ್ಲ ಔಷಧದ ಬಾಟಲುಗಳನ್ನು ನುಣ್ಣಗೆ ಒಡೆದು ಹಾಕಿದರೆ ಗತಿ ?

ಅಳುತ್ತಿದ್ದ ಕಪಿನಪ್ಪನನ್ನು ಪಕ್ಕಕ್ಕೆ ಸರಿಸಿ ಎಮ್ಮೆಗೇನಾಗಿರಬಹುದೋ ಎಂದು ಹೆದರುತ್ತ ನೋಡಿದರೆ ಕೊಟ್ಟಿಗೆಯ ಕುರುಡುಗತ್ತಲಿನಲ್ಲಿ ಒಂದು ಭಾರೀ ಎಮ್ಮೆ ಮೆಲುಕು ಹಾಕುತ್ತ ನಿಂತಿತ್ತು. ಕೊಟ್ಟಿಗೆಯ ನೆಲವೆಲ್ಲ ಬರಿ ಗುಂಡಿಗೊಟ್ರಗಳಿಂದ ಕೂಡಿದ್ದು, ಕತ್ತಲಿನಲ್ಲಿ ಒಳಗೆ ಹೆಜ್ಜೆ ಇಡುವುದೇ ಅಪಾಯಕಾರಿಯಾಗಿತ್ತು. ಎಮ್ಮೆಯನ್ನು ಕೊಟ್ಟಿಗೆಯಿಂದ ಹೊರಕ್ಕೆ ತರಿಸಿದೆ. ಎಮ್ಮೆ ಕುಂಟುತ್ತ ಹಿತ್ತಲಿಗೆ ಬಂತು. ಪರೀಕ್ಷಿಸಿ ನೋಡಿದರೆ, ಎಮ್ಮೆಯ ಹಿಂದಿನ ಎಡಗಾಲಿನ ತೊಡೆಯ ಒಳಭಾಗದಲ್ಲಿ ದೊಡ್ಡ ಗಾಯವಿತ್ತು. ಮನೆಯ ಜನರ ಹೇಳಿಕೆ ಪ್ರಕಾರ ಎಮ್ಮೆಗೆ ಗಾಯವಾಗಿ ವಾರದ ಮೇಲಾಗಿತ್ತು. ಒಂದು ಸಣ್ಣ ಗಾಯವು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೆ ನಂಜಾಗಿ ಊದಿಕೊಂಡು, ನೊಣ ಕೂತು, ಮೊಟ್ಟೆ ಇಟ್ಟು, ಮೊಟ್ಟೆ ಒಡೆದು ಹುಳುಗಳಾಗಿ ಮತ್ತಷ್ಟು ಊದಿಕೊಂಡು, ಒಂದಷ್ಟು ಭಾಗ ಕೊಳೆತು, ವಿಪರೀತ ನೋವಾಗಿ ಕುಂಟುತ್ತ ನಡೆಯುತ್ತಿತ್ತು. ಗಾಯ ಎಷ್ಟು ಗಬ್ಬು ವಾಸನೆ ಹೊಡೆಯುತ್ತಿತ್ತೆಂದರೆ ಕಪಿನಪ್ಪ ಸಹ ಟವಲ್ಲಿನಿಂದ ಮೂಗು ಮುಚ್ಚಿಕೊಂಡಿದ್ದ.

ಅಸಹಾಯಕ ಎಮ್ಮೆ ಇಡೀ ಜಗತ್ತನ್ನು ಕ್ಷಮಿಸಿ, ಬ್ರಹ್ಮಾಂಡ ನೋವನ್ನು ಸದ್ದಿಲ್ಲದೆ ಅನುಭವಿಸುತ್ತ ನನ್ನೆದುರು ನಿಂತಿತ್ತು. ಹೊತ್ತಲ್ಲದ ಹೊತ್ತಲ್ಲಿ ಅತ್ತಿಂದಿತ್ತ ಎಳೆದಾಡುತ್ತಿದ್ದ ನಮ್ಮಿಂದಾಗಿ ಗಾಬರಿ ಮತ್ತು ಸಿಟ್ಟಿನಿಂದ ಬುಸುಗುಡುತ್ತಿತ್ತು. ಹಿತ್ತಲಲ್ಲಿ ಕತ್ತಲಾಗಿದ್ದುದರಿಂದ ‘ಬೆಳಕು ತನ್ನಿ’ ಎಂದೆ. ಮಕ್ಕಳೆಲ್ಲ ಮನೆಯ ಮೂಲೆಮೂಲೆ ಹುಡುಕಿ ಒಂದು ಎಡವಟ್ಟು ಬ್ಯಾಟರಿ ತಂದರು. ಅದು ಹತ್ತಿಸಿದರೆ ಆರಿಹೋಗುತ್ತಿತ್ತು ಮತ್ತು ಆರಿಸಿದರೆ ಹತ್ತುತ್ತಿತ್ತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಮಾತ್ರ ಅದು ಹತ್ತಿದೆಯೋ ಇಲ್ಲವೋ ಎಂಬುದು ತಿಳಿಯುತ್ತಿತ್ತು. ಅದು ಅಷ್ಟು ಪ್ರಕಾಶಮಾನವಾಗಿತ್ತು! ಆ ಬ್ಯಾಟರಿಯಲ್ಲಿ ನಾವು ಗತಿ ಮುಟ್ಟುವುದಿಲ್ಲವೆಂದು ಯಾರೋ ಲಾಟೀನು ತಂದರು. ಲಾಟೀನಿನ ಮಂದ ಬೆಳಕಿನಲ್ಲಿ ನಮ್ಮ ಕೆಲಸ ಸಾಗುವುದಿಲ್ಲವೆಂದು ಬೇಗನೆ ಅರಿವಿಗೆ ಬಂತು. ಗಾಬರಿ ಮತ್ತು ಸಿಟ್ಟಿನಿಂದ ಕುಣಿಯುತ್ತಿದ್ದ ಎಮ್ಮೆ ಹಿಡಿಯಲು ಎಂಟತ್ತು ಜನ ಹಿತ್ತಲಲ್ಲಿ ತುಂಬಿಕೊಂಡಿದ್ದರು. ಅವರೆಲ್ಲ ಸುತ್ತಮುತ್ತಲ ತೋಟದವರಾಗಿದ್ದರು. ಅವರಲ್ಲೊಬ್ಬ ಓಡಿ ಹೋಗಿ ಚೆನ್ನಾಗಿರುವ ಬ್ಯಾಟರಿ ತಂದು ನಾನು ಹೇಳಿದ ಕಡೆ ಬೆಳಕು ಬಿಡುತ್ತಾ ನಿಂತ. ಕಪಿನಪ್ಪ ಕ್ವಾಟ್ರು ಸೀಸೆಯಲ್ಲಿ ಮಾಡಿದ ಸೀಮೆಎಣ್ಣೆ ದೀಪಗಳೆರಡನ್ನು ತಂದಿಟ್ಟ.

ಇದೇ ಸಮಯದಲ್ಲಿ ಇದೇ ಆಗಸದ ಕೆಳಗೆ ಜಗತ್ತಿನ ಯಾವ ಮೂಲೆಯಲ್ಲಿ ಯಾವ ಮಂತ್ರಿಯ, ಯಾವ ನೊಬೆಲ್ ವಿಜ್ಞಾನಿಯ, ಯಾವ ಶತಕೋಟಿ ಶ್ರೀಮಂತನ, ಯಾವ ಒಲಂಪಿಕ್ ಕ್ರೀಡಾಪಟುವಿನ, ಎಂಥ ಉನ್ನತ ತಂತ್ರಜ್ಞಾನದ ಚಿಕಿತ್ಸೆ ನಡೆಯುತ್ತಿತ್ತೋ ಗೊತ್ತಿಲ್ಲ. ಆದರಿಲ್ಲಿ ಕಪಿನಪ್ಪ ಎಂಬ ಬಡ ರೈತನ ನಿಷ್ಪಾಪಿ ಎಮ್ಮೆಯ ಕನಿಷ್ಟ ಸೌಕರ್ಯ ಬಳಸಿ ಮಬ್ಬುಗತ್ತಲಿನಲ್ಲಿ ನಡೆಯುತ್ತಿದ್ದ ಚಿಕಿತ್ಸೆ ಯಾವ ರೀತಿಯಲ್ಲಿಯೂ ಅದಕ್ಕಿಂತ ಕಡಿಮೆಯದ್ದೇನಾಗಿರಲಿಲ್ಲ.

ಹಿತ್ತಲಿನಲ್ಲಿ ಒಂದು ದೊಡ್ಡ ‘ಸೀನ್’ ಅನಾವರಣಗೊಳ್ಳತೊಡಗಿತು. ಹಿತ್ತಲು ವಿಶಾಲವಾಗಿದ್ದು ಸುತ್ತಲೂ ಅಲ್ಲಲ್ಲಿ ಬಿದ್ದು ಹೋಗಿದ್ದ ಗೋಡೆ ಇತ್ತು. ಎಂಟತ್ತು ಜನರ ಗುಂಪು ಎಮ್ಮೆಯ ಬಳಿಸಾರಿದ ಕೂಡಲೆ ಎಮ್ಮೆ ಹಿತ್ತಲು ತುಂಬ ನೋವಿಗೆ ಕೇರು ಮಾಡದೆ ಕುಣಿದಾಡತೊಡಗಿತು. ಎಲ್ಲರಿಂದಲೂ ತಪ್ಪಿಸಿಕೊಳ್ಳುತ್ತ ಮಾಯಾಮೃಗದಂತೆ ವತರ್ಿಸಲಾರಂಭಿಸಿತು. ಎಮ್ಮೆ ಹಿಡಿಯುವ ಭರದಲ್ಲಿ ಮಾಯಣ್ಣ ಎಂಬುವವನಂತೂ ಬಿದ್ದು ಚೆಲ್ಲಾಡಿ ಹೋದ. ಅವನ ಮಂಡಿ ಮತ್ತು ತೊಡೆಗಳೆಲ್ಲ ತರಿದು ಹೋದವು. ಎರಡು ಮೂರು ಹಗ್ಗ ಹಾಕಿ ಎಮ್ಮೆಯನ್ನು ಕೆಡವಿ ಕಾಲುಗಳನ್ನು ಕಟ್ಟಿ ಹಾಕಿದ ನಂತರ ಚಿಕಿತ್ಸೆ ಪ್ರಾರಂಭವಾಯಿತು.

ಇಬ್ಬರು ಕಾಲುಗಳನ್ನು ಕಟ್ಟಿದ್ದ ಹಗ್ಗ ಹಿಡಿದಿದ್ದರು. ಇಬ್ಬರು ತಲೆ ಮತ್ತು ಕೊಂಬುಗಳನ್ನು ಹಿಡಿದಿದ್ದರು. ಒಬ್ಬ ಪಕ್ಕೆಯ ಮೇಲೆ ಹಗುರವಾಗಿ ಕುಳಿತಿದ್ದ. ಒಬ್ಬ ಬಾಲವನ್ನು ಹಿಡಿದು ಕೂತಿದ್ದ. ಒಂದಿಬ್ಬರು ಈ ಎಲ್ಲದರ ಮೇಲುಸ್ತುವಾರಿ ವಹಿಸಿದ್ದರು. ಎಲ್ಲರ ಗಮನವವೂ ನನ್ನ ಚಲನವಲನಗಳ ಮೇಲೆ ಕೇಂದ್ರೀಕೃತವಾಗಿತ್ತು. ದೂರಕ್ಕೆ ಎಮ್ಮೆಯ ಮೇಲೆ ಮುಗಿಬಿದ್ದವರ ತರ ಕಾಣುತ್ತಿದ್ದೆವು.

ಒಳತೊಡೆಯ ಅಗಲಕ್ಕೂ ಹಬ್ಬಿಕೊಂಡಿದ್ದ ಗಾಯವನ್ನು ಒಂದು ಬಕೆಟ್ ಪೊಟಾಸಿಯಂ ಪೆರ್ಮಂಗನೇಟ್ ದ್ರಾವಣದಿಂದ ಚೆನ್ನಾಗಿ ತೊಳೆದು ಒಣ ಬಟ್ಟೆಯಿಂದ ಒರೆಸಿ, ಗಾಯದಲ್ಲಿದ್ದ ಅಸಂಖ್ಯಾತ ಹುಳುಗಳನ್ನು ಇಕ್ಕಳದಲ್ಲಿ ಬಗೆದು ತೆಗೆದು ಹಾಕಿದೆ. ಹುಳುಗಳನ್ನು ತೆಗೆತೆಗೆದಂತೆ ಸುತ್ತ ನೆರೆತಿದ್ದ ಜನರು ನಾನಾತರದ ಉದ್ಗಾರಗಳನ್ನು ತೆಗೆಯುತ್ತ ಬೆರಗನ್ನು ವ್ಯಕ್ತಪಡಿಸಿದರು. ನಾನು ಆ ಗಾಯದ ಕುಳಿಯಲ್ಲಿ ನುಸಿಉಂಡೆಯ ಪುಡಿಯನ್ನು ತುಂಬಿದೆ. ಗಾಯದಿಂದ ಹೊರಬಿದ್ದ ಹುಳುಗಳು ಅಲ್ಲೆಲ್ಲ ಹರಿದಾಡತೊಡಗಿದವು. ಗಾಯ, ರಕ್ತ, ಹುಳುಗಳು, ಎಮ್ಮೆ ಕುಣಿತ, ಬಿದ್ದು ಚೆಲ್ಲಾಡಿದ್ದ ಮಾಯಣ್ಣನ ಮೈ ಕೈ ಮೇಲಾಗಿದ್ದ ಗಾಯಗಳು ಎಲ್ಲ ನೋಡಿ ಅಂಗಡಿ ಕೃಷ್ಣ ಎಂಬಾತ ತಲೆ ತಿರುಗಿ ಕಣ್ಣು ಬೆಳ್ಳಗೆ ಮಾಡಿಕೊಂಡು ನಿಂತ ಜಾಗದಲ್ಲೆ ದಬ್ ಎಂದು ಬಿದ್ದುಬಿಟ್ಟ. ಚಿಕಿತ್ಸೆ ಮಾಡುತ್ತಿದ್ದುದನ್ನು ನೋಡುವುದರಲ್ಲಿ ಮುಳುಗಿ ಹೋಗಿದ್ದ ಜನರೆಲ್ಲ ಈ ಲೋಕಕ್ಕೆ ಬಂದು, ಒಳಗಿನಿಂದ ನೀರು ತಂದು ಕೃಷ್ಣನ ಮುಖಕ್ಕೆ ಚಿಮುಕಿಸಿ, ಕಟ್ಟೆಯ ಮೇಲೆ ಎಳೆದು ಮಲಗಿಸಿದರು. ಐದು ನಿಮಿಷದಲ್ಲಿ ಸುಧಾರಿಸಿಕೊಂಡ ಕೃಷ್ಣ ಸುತ್ತಮುತ್ತಲಿನವರೆಲ್ಲ ಕೆಮ್ಮುವಂತೆ ಬೀಡಿ ಸೇದತೊಡಗಿದ.

ನಾನು ಮತ್ತೆ ಚಿಕಿತ್ಸೆಯನ್ನು ಮುಂದುವರೆಸಿ ಗಾಯಕ್ಕೆ ಔಷಧ ಮತ್ತು ಬೇವಿನ ಎಣ್ಣೆಯನ್ನು ಸುರಿದೆ. ಅವಶ್ಯವಿದ್ದ ಇಂಜೆಕ್ಷನ್ಗಳನ್ನು ಮಾಡಿದ ನಂತರ ಎಮ್ಮೆಯ ಕಾಲು ಬಿಚ್ಚಿದೆವು. ಎಮ್ಮೆಯನ್ನು ಬೀಳಿಸಲು ಹೋಗಿ ತಾನೇ ಬಿದ್ದು ಮಂಡಿ ಮತ್ತು ತೊಡೆಗಳಲ್ಲಿ ತರಚು ಗಾಯಗಳಾಗಿದ್ದ ಮಾಯಣ್ಣ ನನ್ನ ಬ್ಯಾಗಿನಲ್ಲಿದ್ದ ಟಿಂಚರ್ರನ್ನೆ ಹಚ್ಚಿಕೊಂಡು ಸ್ವಯಂವೈದ್ಯ ಮಾಡಿಕೊಳ್ಳತೊಡಗಿದ. ಟಿಂಚರ್ ಗಾಯಕ್ಕೆ ಬಿದ್ದ ಕೂಡಲೆ ಉರಿಗೆ ‘ಯವ್ವಯಪ್ಪ’ ಎನ್ನತೊಡಗಿದ. ಇದನ್ನು ನೋಡಿ ಕಪಿನಪ್ಪ ‘ಈ ಲೌಡಿ ಮಗನಿಗೆ ಎಮ್ಮೆವೆ ಎಲ್ಡು ಇಂಜೆಕ್ಷನ್ ದಳೀರಿ ಸಾರ್’ ಎಂದ. ಆಗ ಹಿತ್ತಲಿನಲ್ಲಿ ದೊಡ್ಡ ನಗೆಯೊಂದು ಸ್ಫೋಟಗೊಂಡು ಸುತ್ತ ಕವಿದಿದ್ದ ಕತ್ತಲೆಯ ಮೌನದಲ್ಲಿ ಕರಗಿಹೋಯಿತು.

ಹಿತ್ತಲಲ್ಲಿ ನೆರೆದಿದ್ದ ಎಲ್ಲರೂ ಒಬ್ಬೊಬ್ಬರೇ ಹೊರಟರು. ಹೋಗುವಾಗ ಕೆಲವರು ನನ್ನ ಕಡೆ ತಿರುಗಿ ‘ಬಾಳ ಪುಣ್ಯದ ಕೆಲಸ ಸಾರ್ ನಿಮ್ಮದು’ ಬರ್ರಿ ಸಾರ್, ನಮ್ಮನೆಗೆ ಊಟಕ್ಕೋಗಣ’ ಇತ್ಯಾದಿ ಹೇಳುತ್ತ ಮರೆಯಾದರು. ಮೂರ್ನಾಲು ಸಲ ಸೋಪು ಹಾಕಿಕೊಂಡು ಕೈಕಾಲು ಮುಖ ತೊಳೆದುಕೊಂಡೆ. ಚಳಿಯಲ್ಲಿ ಬಿಸಿನೀರಿನ ಸ್ಪರ್ಶ ಆಹ್ಲಾದಕರವಾಗಿತ್ತು. ಚಿಕಿತ್ಸೆ ಪ್ರಾರಂಭಿಸಿದಾಗ ಸಿಟ್ಟೇರಿದ್ದ ನನಗೆ ನಿಧಾನಕ್ಕೆ ಶಾಂತಿ ಸಮಾಧಾನಗಳು ಎಲ್ಲಿಂದಲೋ ಅಂತರಾಳಕ್ಕಿಳಿದಿದ್ದವು. ಕ್ಷುದ್ರತೆ ಕರಗಿ ನಿರುಮ್ಮಳತೆ ತುಂಬಿ ಹಗುರಾಗಿದ್ದೆ.

‘ಬನ್ನಿ ಸಾರ್’ ಎಂದು ಕಪಿನಪ್ಪ ನನ್ನ ಕೈ ಹಿಡಿದುಕೊಂಡು ಮನೆಯೊಳಗೆ ಕರೆತಂದಾಗ ಎಂಟು ಗಂಟೆಯಾಗಿತ್ತು. ಜಾಸ್ತಿ ಸಕ್ಕರೆ ಹಾಕಿ ಕಾಫಿ ಮಾಡಲು ಹೆಂಡತಿಗೆ ಆದೇಶಿಸಿದ. ಕಪಿನಪ್ಪನ ವಾಲಾಟ, ತೊದಲು ಹತ್ತು ಪರ್ಸೆಂಟು ಮಾತ್ರ ಕಡಿಮೆಯಾಗಿದ್ದವು. ಅಲ್ಲೆ ಇದ್ದ ತನ್ನ ಮಕ್ಕಳನ್ನು ತೋರಿಸಿ ಪರಿಚಯಿಸಿದ. ಒಬ್ಬ ಮಗ ಮತ್ತು ಮಗಳು ತುರುವೇಕೆರೆಯಲ್ಲಿ ಬಿಎ ಓದುತ್ತಿರುವುದು ಗೊತ್ತಾಯಿತು. ಗಂಡು ಹೆಣ್ಣು ಎಲ್ಲ ಸೇರಿ ಕಪಿನಪ್ಪನಿಗೆ ಆರು ಜನ ಮಕ್ಕಳಿದ್ದರು. ಪಟಾಕಿ ಸಿಡಿದಂತೆ ಮಾತಾಡುತ್ತಿದ್ದ ಹುಡುಗ ಕೊನೆಯ ಮಗನಾಗಿದ್ದ.

ಪದವಿ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ಮಕ್ಕಳ ಜೊತೆ ಇಷ್ಟು ಸಣ್ಣ ಮಗನಿರುವ ಬಗ್ಗೆ ಸೋಜಿಗಪಡುತ್ತ ಕುಳಿತೆ. ಮಕ್ಕಳೆಲ್ಲ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದರೂ ಸಹ ಮನೆಯ ಯಜಮಾನ ಎಲ್ಲರೆದುರು ವಾಲಾಡುತ್ತಿದ್ದುದರಿಂದ ಮುಜುಗರ ಹಾಗೂ ಸಂಕೋಚಕ್ಕೊಳಗಾಗಿ ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ಮನೆಯ ವಾತಾವರಣ ಖಾಲಿಖಾಲಿಯಾಗಿದ್ದು ಆರ್ಥಿಕ ಸ್ಥಿತಿ ಎಕ್ಕುಟ್ಟಿ ಹೋಗಿರುವುದು ಗೋಚರಿಸುತ್ತಿತ್ತು.

ಅಷ್ಟು ಹೊತ್ತಿಗೆ ಕಪಿನಪ್ಪನ ಹೆಂಡತಿ ಕಾಫಿ ಹಿಡಿದು ಬಂದಳು. ವಯಸ್ಸಿನಲ್ಲಿ ಕಪಿನಪ್ಪನಿಗೂ ಅವನ ಹೆಂಡತಿಗೂ ತಾಳಮೇಳ ಇರದಷ್ಟು ಚಿಕ್ಕವಳಾಗಿದ್ದಳು. ಈ ವಯಸ್ಸಿಗೆ ಈಕೆಗೆ ಇಷ್ಟು ದೊಡ್ಡ ಮಕ್ಕಳಿರುವುದು ಸಾಧ್ಯವೇ ಎಂದು ಅಚ್ಚರಿಯಾಯಿತು. ಇವಳು ನನ್ನ ಎರಡನೆಯ ಹೆಂಡತಿ ಸಾರ್ ಎಂದವನು ಮಾತಿಗೆ ಸುರು ಹಚ್ಚಿಕೊಂಡ. ಪಾಪ! ಆಕೆ ಒಂದು ಕ್ಷಣವೂ ಅಲ್ಲಿ ನಿಲ್ಲದೆ ಒಳಕ್ಕೆ ಓಡಿದಳು. ಇಷ್ಟು ಸಣ್ಣ ವಯಸ್ಸಿನವಳನ್ನು ಕಪಿನಪ್ಪ ಯಾಕೆ ಮದುವೆಯಾದನೊ ಅನಿಸಿತು. ನಾನು ಬಾಯ್ಬಿಟ್ಟು ಏನೂ ಹೇಳಲಿಲ್ಲ. ದೊಡ್ಡ ಮಕ್ಕಳು ಮೊದಲ ಹೆಂಡತಿಯ ಮಕ್ಕಳು ಹಾಗೂ ಚಿಕ್ಕವು ಎರಡನೆ ಹೆಂಡತಿಯ ಮಕ್ಕಳಿರಬಹುದೆಂದುಕೊಂಡೆ.
‘ನನ್ನಜ್ಜ ಎರಡು ಮದುವೆ ಆಗಿದ್ದ ಸಾರ್’ ಎಂದ ಕಪಿನಪ್ಪ. ನಾನು ಸುಮ್ಮನಿದ್ದೆ. ನಮ್ಮಪ್ಪನೂ ಅಷ್ಟೆ. ಎರಡು ಮದುವೆ ಮಾಡ್ಕಂಡಿದ್ದ’ ಎಂದ. ನಾನು ಉತ್ತರಿಸುವುದೇನೂ ಇರಲಿಲ್ಲ. ‘ನಮ್ಮಣ್ಣನೂ ಎರಡು ಮದುವೆ ಮಾಡ್ಕಂಡಿದಾನೆ ಸಾರ್. ಪಕ್ಕದ್ಮನೇಲವ್ನೆ ಬೇಕಿದ್ರೆ ನೋಡ್ಕಂಡು ಬನ್ನಿ. ಕುಡುದ್ಮೇಲೆ ನಾನು ಸುಳ್ಳೇಳಕಿಲ್ಲ ಸಾರ್’ ಎಂದ. ನಾನು ಸುಮ್ಮನಿದ್ದೆ. ಇದೆಲ್ಲ ಯಾಕೆ ಹೇಳುತ್ತಿದ್ದಾನೋ ಎಂಬುದು ಗೊತ್ತಾಗಲಿಲ್ಲ. ಕಪಿನಪ್ಪ ಮುಂದುವರೆದು ‘ನಾನೆರಡು ಮದುವೆ ಆಗಿದಿನಿ ಅಂತ ಬೈದ್ಕೊಬೇಡಿ. ನಂದೇನು ತಪ್ಪಿಲ್ಲ ಸಾರ್. ಅದ್ಯಾರೋ ಮೆಂಡ್ಲ ಎಂಬ ಇಜ್ಞಾನಿ ಎಲ್ಲ ಹೇಳವುನಂತಲ್ಲ. ಗುಣಗಳು ಅಪ್ನಿಂದ ಮಕ್ಳಿಗೆ ಬರ್ತವೆ, ಮಕ್ಳಿಂದ ಮೊಮ್ಮಕ್ಳಿಗೆ ಬರ್ತವೆ ಅಂತ. ಹೆರ್ಡಿಟಿ ಸಾರ್. ಹೆರ್ಡಿಟಿ ಬಾಳ ಡೇಂಜರ್ ಸಾರ್. ಅದಕ್ಕೆ ನನಗೆ ಎರಡು ಮದುವೆ’. ಬಹಳ ಗಂಭೀರವಾಗಿ ನುಡಿದು ಅರ್ಧ ಬೀಡಿ ಸುಟ್ಟುಹೋಗುವಂತೆ ಸುದೀರ್ಘವಾದ ದಮ್ ಎಳೆದು ಹೊಗೆ ಬಿಟ್ಟ.

ನಾನು ಥಂಡ ಹೊಡೆದು ಹೊದೆ. ‘ಜಾನ್ ಗ್ರೆಗರ್ ಮೆಂಡಲ್’ ಕಪಿನಪ್ಪನ ಬಾಯಲ್ಲಿ ‘ಮೆಂಡ್ಲ’ ಎಂಬುದಾಗಿ ಪ್ರತ್ಯಕ್ಷನಾಗಿದ್ದ. ಮೆಂಡಲನ ಅನುವಂಶೀಯತೆಯ ನಿಯಮಗಳಿಗೆ ಬರಬಾರದ ಸ್ಥಿತಿ ಬಂದಿತ್ತು. ಪದವಿ ತರಗತಿಯಲ್ಲಿ ಓದುತ್ತಿದ್ದ ಕಪಿನಪ್ಪನ ಮಕ್ಕಳು ಬಿಟ್ಟ ಬಾಯಿ ಬಿಟ್ಟಂತೆ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಜಗತ್ತಿನಲ್ಲಿ ಯಾರಾದರೂ ಮೆಂಡಲ್ನನ್ನು ಈ ರೀತಿ ಅರ್ಥೈಸಿಕೊಂಡಿರಬಹುದೇ ಎಂದು ಯೋಚಿಸುತ್ತ ಮೆಟ್ಟಿಲಿಳಿದು ಬೈಕಿನ ಬಳಿ ಬಂದೆ. ಹಿಂದಿಂದೆ ಕಪಿನಪ್ಪನೂ ಬಂದ. ‘ಬೇಜಾರಾಗ್ಬೇಡಿ ಸಾರ್ ಬಾಳಾ ಕುಡ್ದಿದೀನಿ’ ಎಂದ. ಇನ್ನೂ ವಾಲಾಟ ಮತ್ತು ತೊದಲು ಹೋಗಿರಲಿಲ್ಲ.

ಆತ ಇದ್ದಕ್ಕಿದ್ದಂತೆ ಭಾವುಕನಾಗಿಬಿಟ್ಟ. ಕಪಿನಪ್ಪನ ಕಣ್ಣು ತುಂಬಿಬಂದವು. ‘ಇರ್ಲಿ ಬಿಡು ಕಪಿನಪ್ಪ, ಪರ್ವಾಗಿಲ್ಲ’ ಎಂದು ಹೆಗಲ ಮೇಲೆ ಕೈಯಿಟ್ಟು ಹೇಳಿದೆ. ಸ್ವಲ್ಪ ಸುಧಾರಿಸಿಕೊಳ್ಳಲಿ ಎಂದು ಒಂದೆರಡು ನಿಮಿಷ ಸುಮ್ಮನೆ ನಿಂತೆ. ಮಕ್ಕಳ ತರ ಅಂಗಿಯ ತೋಳಿನಲ್ಲಿ ಕಣ್ಣೀರು ಒರೆಸಿಕೊಂಡ. ನಾನು ಕುಡಿತ ಬಿಟ್ಬಿಡೋಕೆ ಬಹಳ ಪ್ರಯತ್ನ ಪಟ್ಟೆ ಸಾರ್. ನಮ್ಮ ವಂಶದಲ್ಲಿ ಕುಡೀದೆ ಇರೋವ್ರು ಒಬ್ರೂ ಇಲ್ಲ. ಬಿಡಕಾಯ್ತಿಲ್ಲ. ಹೆರ್ಡಿಟಿ ಕಾಟ ಸಾರ್ ಎಂದು ನಿಟ್ಟುಸಿರುಬಿಟ್ಟ.

ನನಗೆ ಏನು ಹೇಳಲೂ ತೋಚಲಿಲ್ಲ. ಫುಲ್ ಚಾರ್ಜಾಗಿದ್ದ ಆತನಿಗೆ ಏನು ಹೇಳಿದರೂ ಪ್ರಯೋಜನವಿರಲಿಲ್ಲ. ನಾನಿನ್ನು ಬರ್ತೀನಿ ಈಗಾಗ್ಲೆ ಲೇಟಾಗಿದೆ. ಮತ್ತೆ ಸಿಗ್ತೀನಿ ಎಂದು ಹೇಳುತ್ತ ಬೈಕ್ ಹತ್ತಿದೆ. ಆತನ ಕಣ್ಣೀರಿಗೆ ಕಾರಣಗಳು ಸರಳ ಎಂದು ನನಗನ್ನಿಸಲಿಲ್ಲ.

ಆಲ್ಬೂರು ಕೆರೆಯೇರಿಯ ಮೇಲೆ ಹೋಗುತ್ತ ಸುದೂರದಲ್ಲಿ ಊರಿನ ದೀಪಗಳು ಮತ್ತು ಮೇಲೆ ಶುಭ್ರ ಆಕಾಶದಲ್ಲಿ ಮಿನುಗುತ್ತಿದ್ದ ನಕ್ಷತ್ರಗಳು ಮಾಯಾಲೋಕವನ್ನು ಸೃಷ್ಟಿಸಿದ್ದವು. ಆ ಮಾಯಾಲೋಕದಲ್ಲಿ ಬೈಕು ಓಡುತ್ತಿತ್ತು. ನನ್ನ ಮನಸ್ಸು ಕಪಿನಪ್ಪ ಮತ್ತು ಅವನ ಹೆಂಡತಿ ಮಕ್ಕಳ ಬಗ್ಗೆ ಕಸಿವಿಸಿಯಿಂದ ಕೂಡಿತ್ತು.

ಡಾ. ಮಿರ್ಜಾ ಬಶೀರ್ ಅವರ ಸಂಪರ್ಕ ಸಂಖ್ಯೆ: 94481 04973

4 COMMENTS

  1. Dr. Bashir this article is very good realistic, narration is fantastic. I felt very happy, keep on writing…….. All the best. From Dr. Devarajuli

  2. Sir, very nicely and humorously you depict professional experiences, which remind me of k.p.thejaswi’s writing.
    I don’t know how good this comparison is.
    Indeed yours is very appealing and heart touching narration.
    I felt as if I was associating with you when you were with dasappa and kapinappa.
    Sir, have you published these articles in a book form? If so, please let me know where can I can get the book?

LEAVE A REPLY

Please enter your comment!
Please enter your name here