ಹಸಿ ತೆಂಗಿನೆಣ್ಣೆ ಮಾಡುವ ವಿಧಾನವನ್ನು ಬಹಳಷ್ಟು ಜನ ಕೇಳುತ್ತಿರುತ್ತಾರೆ. ಆದ್ದರಿಂದ ಈ ಮುಂದಿನ ಮಾಹಿತಿಯನ್ನು ನೀಡಲಾಗಿದೆ.
1. ನಿಮಗೆ ಲಭ್ಯ ಇರುವಷ್ಟು ಬಲಿತ ಹಸಿ ತೆಂಗಿನಕಾಯಿ ತಿರುಳನ್ನು ತೀರಾ ನುಣ್ಣಗೆಯೂ ಅಲ್ಲದೆ, ತರಿತರಿಯಾಗಿಯೂ ಅಲ್ಲದೆ ನೀರು ಬೆರೆಸಿ ರುಬ್ಬಿಕೊಳ್ಳಿ, ನಂತರ ಒಂದು ಸ್ಟೀಲ್ ಪಾತ್ರೆಗೆ ಅದನ್ನು ಹಾಕಿಕೊಳ್ಳಿ. ಮಿಕ್ಸಿ ಜಾರಿನೊಳಗೆ ಇರುವ ಕಾಯಿಹಾಲಿಗೆ ಸ್ವಲ್ಪ ನೀರು ಸೇರಿಸಿ ಅಲ್ಲಾಡಿಸಿ ಅದನ್ನೂ ಸ್ಟೀಲ್ ಪಾತ್ರೆಗೆ ಸೇರಿಸಿಕೊಂಡು ಚೆನ್ನಾಗಿ ಚೌಡಿನಿಂದ ತಿರುವಿ ಒಂದು ರಾತ್ರಿ ಮುಚ್ಚಿಡಿ.
2. ಬೆಳಗೆದ್ದು ನೋಡಿದರೇ ತೆಂಗಿನ ಬೆಣ್ಣೆ ಆವರಿಸಿರುತ್ತದೆ. ಅದನ್ನು ಮತ್ತೊಂದು ಸ್ಟೀಲ್ ಪಾತ್ರೆಗೆ ಹಾಕಿಟ್ಟುಕೊಳ್ಳಿ (ತಳದಲ್ಲಿ ತೆಂಗಿನ ನೀರಿನಾಂಶ ಉಳಿದಿರುತ್ತದೆ. ಅದು ಎಣ್ಣೆ ತಯಾರಿಗೆ ಅಗತ್ಯ ಇರುವುದಿಲ್ಲ. ನೀವು ಈ ಹಾಲನ್ನು ಅನ್ನ ಮಾಡುವಾಗ ತೊಳೆದ ಅಕ್ಕಿಗೆ ಸೇರಿಸಿ ಬೇಯಿಸಿಕೊಳ್ಳಬಹುದು, ಪಶುಗಳಿಗಾದರೂ ನೀಡಬಹುದು)
3. ನನ್ನ ಕೆಲಸದ ಒತ್ತಡಗಳನ್ನೆಲ್ಲ ಮುಗಿಸಿಕೊಂಡು ರಾತ್ರಿ ವೇಳೆಗೆ ತೆಂಗಿನಬೆಣ್ಣೆ ಸೇರಿಸಿದ ಪಾತ್ರೆ ಮುಚ್ಚಳವನ್ನು ತೆರೆದೆ. ನಂತರ ಅದರಲ್ಲಿ ಮತ್ತಷ್ಟು ನೀರಿನಾಂಶ ಬಿಟ್ಟುಕೊಂಡಿತ್ತು. ಬೆರಳುಗಳ ಸಹಾಯದಿಂದ ಬೆಣ್ಣೆಯನ್ನು ಹಿಡಿದು ನೀರನ್ನು ಬಗ್ಗಿಸಿದೆ.
4.ಸ್ಟೀಲಿನ ಪಾತ್ರೆಯನ್ನು ಒಲೆಯ ಮೇಲಿಟ್ಟು ಕಡಿಮೆ ಉರಿಯಲ್ಲಿ ಬೇಯಿಸೋಕೆ ಇಟ್ಟೆ, ತಳಹಿಡಿಯದಂತೆ ಚೌಟಿನಿಂದ ತಿರುಗಿಸುತ್ತಿದ್ದೆ. ಥೇಟ್ ಬೆಣ್ಣೆಕಾಯಿಸುವಾಗಿನ ಶಬ್ಧವನ್ನ ನೀವು ಇದರಿಂದ ಆಲಿಸಬಹುದು. 30-40 ನಿಮಿಷದ ಒಳಗೆ ಎಣ್ಣೆ ಬಿಟ್ಟಿರುತ್ತದೆ. ತೆಂಗಿನ ಅಂಶ ಸ್ವಲ್ಪ ಕಂದುಬಣ್ಣಕ್ಕೆ ಬದಲಾಗಿ ಒಳ್ಳೆ ಪರಿಮಳ ಸೂಸುತ್ತದೆ. ಆವೇಳೆಗೆ ಸ್ಟೌ ಆಫ್ ಮಾಡಿ ತಣ್ಣಗಾದ ನಂತರ ಸೋಸಿಕೊಳ್ಳಿ.
ಈಗ ತೆಂಗಿನೆಣ್ಣೆಯ ಪರಿಮಳ ಮನೆಯಲೆಲ್ಲ ಹಬ್ಬದ ವಾತಾವರಣ ಮೂಡಿಸಿರುತ್ತದೆ. ಅದರಲ್ಲೂ ಮಂಜಾನೆ ವೇಳೆಗೆ ಆ ಖುಷಿಯೇ ಬೇರೆ. ನಿಮ್ಮ ಮೇಲೇ ನಿಮಗೆ ಲವ್ವಾಗದೇ ಇರದಿದ್ದರೇ ಕೇಳಿ.
ತೆಂಗಿನೆಣ್ಣೆ ಚರ್ಮದ ಕಾಂತಿಗೆ,
ಕೂದಲಿನ ಆರೈಕೆಗೆ
ದೇಹದ ಆರೋಗ್ಯಕ್ಕೆ ತುಂಬಾ ಉಪಕಾರಿ.
ಈ ಪರಂಪರೆಯನ್ನ ನಾವು ಮುಂದುವರಿಸದಿದ್ದರೇ ನಮ್ಮ ಬದುಕಿಗೆ ಅರ್ಥವೇ ಇರುವುದಿಲ್ಲ. ಯಾವುದೋ ಕಂಪನಿಯೊಂದು ಬಂದು ಈ ಜಾಗದಲ್ಲಿ ಕೂತು ಹಣ ಮಾಡುವುದು ಬಿಟ್ಟರೆ ಪ್ರೀತಿ ಆರೋಗ್ಯ ಕಾಳಜಿಯಂತು ಕನಸಾಗೇ ಉಳಿಯುವುದು. ನಮ್ಮ ಅಜ್ಜಿ ಮತ್ತು ತಾಯಿಯರ ನೆನಪಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ.