ಅಂಗೈಯಲ್ಲಿ ಆರೋಗ್ಯ; ಸಕಲ ಸಮಸ್ಯೆಗೂ ಅಲೋವೆರಾದಲ್ಲಿದೆ ಪರಿಹಾರ

0
ಅಲೋವೆರಾ ಸೌಂದರ್ಯವರ್ಧಕ ಪೇಸ್ಟ್

ಅಲೋವೆರಾ ( Alovera medicinal plant ) ಸಣ್ಣ ಸಣ್ಣ ಪಾಟ್‌ನಲ್ಲಿ ಮನೆ ಮುಂದೆಯೇ , ಬೇಕಾದರೆ ಮನೆಯೊಳಗೆಯೇ ಬೆಳೆಸಬಹುದಾದಂತ ಪುಟ್ಟ ಗಿಡ. ಇದನ್ನು ಆರೋಗ್ಯ, ಸೌಂದರ್ಯಕ್ಕೂ ಬಹಳ ಉತ್ತಮ. ಸೌಂದರ್ಯವರ್ಧಕ ( Cosmetics )ವಾಗಿರುವ ವರ್ಧಕವಾಗಿರುವ ಇದರ ಪೇಸ್ಟ್‌, ಜೆಲ್‌ ಇತ್ಯಾದಿಯನ್ನು ಕೆಲವು ದಿನ ಶೇಖರಿಸಿಯೂ ಇಡಬಹುದು.

ಆರೋಗ್ಯ ಲಾಭ

ಅಲೋವೆರಾವು ಹಲವಾರು ಆರೋಗ್ಯ ಲಾಭಗಳನ್ನು ( Health benefits )ಹೊಂದಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಇಂದಿನ ದಿನಗಳಲ್ಲಿ ಸೌಂದರ್ಯವರ್ಧಕವಾಗಿ ಅಲೋವೆರಾವನ್ನು ಬಳಸದೆ ಇರುವವರು ತುಂಬ ಕಡಿಮೆ. ಯಾಕೆಂದರೆ ಅಲೋವೆರಾದಲ್ಲಿ ಇರುವಂತಹ ಸೌಂದರ್ಯವರ್ಧಕ ಗುಣಗಳು ಬೇರೆ ಯಾವುದೇ ರೀತಿಯ ಸಾಮಗ್ರಿಗಳಲ್ಲೂ ನಿಮಗೆ ಸಿಗಲಾರದು. ಹೀಗಾಗಿ ಅಲೋವೆರಾವು ತುಂಬಾ ಪರಿಣಮಕಾರಿ ಆಗಿ ಸೌಂದರ್ಯವರ್ಧಕ ಉತ್ಪನ್ನಗಳಲ್ಲೂ ಬಳಕೆಯಾಗುತ್ತಿದೆ. ನೇರವಾಗಿ ಅಲೋವೆರಾ ಲೋಳೆಯನ್ನು ಮೈಗೆ ಹಚ್ಚಿಕೊಂಡರೂ ಅದರ ಲಾಭಗಳು ಸಿಗುತ್ತದೆ. ಇದು ಕೆಲವೊಂದು ಚರ್ಮದ ಸಮಸ್ಯೆಗಳನ್ನು ನಿವಾರಿಸುವ ಜತೆಗೆ ಚರ್ಮಕ್ಕೆ ಮೊಶ್ಚಿರೈಸ್ ನೀಡುತ್ತದೆ.‌

ಅಲೋವೆರಾ ಸಸ್ಯ

ತಾಜಾ ಅಲೋವೆರಾ ಲೋಳೆಯನ್ನು ಕುಡಿದರೆ ಅದರಿಂದ ಜೀರ್ಣಕ್ರಿಯೆ ಸುಧಾರಣೆ ಆಗುತ್ತದೆ.  ಅಸಿಡಿಟಿಯಿಂದ ಬಳಲುವ ಸಮಸ್ಯೆಗೆ ಇದು ಪರಿಹಾರ ನೀಡುತ್ತದೆ. ನೀವು ಅಲೋವೆರಾ ಲೋಳೆಯನ್ನು ಬೇರೆ ಜ್ಯೂಸ್ ಜತಗೆ ಸೇರಿಸಿಕೊಂಡು ಕುಡಿಯಬಹುದು. ಇದು ದೇಹವನ್ನು ಒಳಗಿನಿಂದಲೇ ಶುದ್ಧೀಕರಿಸುವುದು. ಹೀಗಾಗಿ ಇದರ ಪರಿಣಾಮವು ಚರ್ಮದಲ್ಲಿ ಕಾಣಸಿಗುವುದು. ಚರ್ಮವು ಸ್ವಚ್ಛವಾಗಿ ಕಾಂತಿಯುತವಾಗಿರುವುದು. ನೀವು ಅಲೋವೆರಾವನ್ನು ಚರ್ಮದ ಆರೈಕೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

ರಾತ್ರಿ ವೇಳೆ ಕ್ರೀಮ್ ಆಗಿ ಬಳಸಿ
ಬೇಸಗೆ ಕಾಲದಲ್ಲಿ ನೀವು ಮುಖಕ್ಕೆ ತುಂಬಾ ಜಿಡ್ಡಿನ ಕ್ರೀಮ್ ಬಳಸಿಕೊಂಡರೆ ಅದರಿಂದ ತುಂಬ ಸಮಸ್ಯೆ ಆಗಬಹುದು. ಯಾಕೆಂದರೆ ಉಷ್ಣತೆ ಹೆಚ್ಚಿರುತ್ತದೆ ಮತ್ತು ದೇಹ  ಬೆವರುತ್ತಿರುತ್ತದೆ. ಹೀಗಾಗಿ ಮುಖಕ್ಕೆ ಈ ಸಮಯದಲ್ಲಿ ನೀವು ಜಿಡ್ಡಿನ ಕ್ರೀಮ್ ಬಳಸಬೇಡಿ. ರಾತ್ರಿ ಮಲಗಲು ಹೋಗುವ ಮೊದಲು ನೀವು ಅಲೋವೆರಾ ಲೋಳೆ ಹಚ್ಚಿಕೊಳ್ಳಿ. ಇದು ಚರ್ಮದಲ್ಲಿ ನಿಧಾನವಾಗಿ ಹೀರಿಕೊಳ್ಳುತ್ತದೆ ಮತ್ತು ಚರ್ಮಕ್ಕೆ ಬೇಕಾಗುವಂತಹ ಮೊಶ್ಚಿರೈಸ್ ನ್ನು ಇದು ಒದಗಿಸುವುದು. ಈ ಲೋಳೆಯು ಚರ್ಮವನ್ನು ತುಂಬಾ ತಂಪಾಗಿಡಲು ನೆರವಾಗುತ್ತದೆ.

ಸುಡುವ ಬಿಸಿಲಿಗೆ
ಬಿಸಿಲಿಗೆ ಹೊರಗಡೆ ಹೋದರೆ ಆಗ ಚರ್ಮವು ಸುಡುವುದು ಖಚಿತ. ಹೀಗಾಗಿ ಬೇಸಗೆ ಕಾಲದಲ್ಲಿ ಹೊರಗಡೆ ಹೋದರೆ ಆಗ ಬಿಸಿಲಿನಿಂದಾಗಿ ಮುಖದ ಮೇಲೆ ಕಲೆಗಳು ಮೂಡಬಹುದು. ಇದರಿಂದ ಚರ್ಮವು ಕೆಂಪಾಗುವುದು, ಸುಡುವುದು ಮತ್ತು ಎದ್ದು ಬರಲು ಆರಂಭಿಸುವುದು. ಇದನ್ನು ತಡೆಯಲು ಅಲೋವೆರಾ ಹಚ್ಚಿಕೊಳ್ಳಬೇಕು. ಬಿಸಿಲಿನಿಂದ ಮನೆಗೆ ಬಂದ ಬಳಿಕ ನೀವು ಸಂಪೂರ್ಣ ಮೈಗೆ ಅಲೋವೆರಾ ಲೋಳೆ ಹಚ್ಚಿಕೊಳ್ಳಿ. ಇದು ನಿಮಗೆ ಶಮನ ನೀಡುವುದು. ಇದರಿಂದ ಚರ್ಮಕ್ಕೆ ತಂಪು ಸಿಗುವುದು ಮತ್ತು ಕಲೆಗಳು ಮಾಯವಾಗುವುದು. ಅಲೋವೆರಾ ಚರ್ಮದಲ್ಲಿನ ತಾಪಮಾನ ಕಡಿಮೆ ಮಾಡಿ ತಂಪು ಉಂಟು ಮಾಡುವುದು.

ಡಾ. ಮಹಾಂತೇಶ ಜೋಗಿ ಅವರು ಅಲೋವೆರಾ ಸಸ್ಯದ ತಾಕಿನ ವೀಕ್ಷಣೆ ಮಾಡುತ್ತಿರುವುದು

ಬಿಸಿಲಿನ ಕಲೆಗಳಿಗೆ
ಬಿಸಿಲಿಗೆ ಹೊರಗಡೆ ಹೋದರೆ ಆಗ ಚರ್ಮದ ಮೇಲೆ ಕಪ್ಪು ಕಲೆಗಳು ಮೂಡುವುದು ಖಚಿತ. ಬಿಸಿಲಿನಿಂದಾಗಿ ಚರ್ಮದ ಬಣ್ಣವು ಕುಂದುವುದು. ಬಿಸಿಲಿನಿಂದ ಚರ್ಮದ ಬಣ್ಣ ಕುಂದಿರುವ ಸಮಸ್ಯೆ ನಿವಾರಣೆ ಮಾಡಲು ಅರ್ಧ ಲಿಂಬೆ ರಸಕ್ಕೆ ಒಂದು ಚಮಚ ಅಲೋವೆರಾ ಲೋಳೆ ಹಾಕಿಕೊಂಡು ಸರಿಯಾಗಿ ಅದನ್ನು ಮಿಶ್ರಣ ಮಾಡಿ. ಇದರ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ಲಿಂಬೆಯಲ್ಲಿ ನೈಸರ್ಗಿಕವಾಗಿ ಬ್ಲೀಚಿಂಗ್ ಗುಣಗಳು ಇವೆ ಮತ್ತು ಅಲೋವೆರಾವು ಮೂಲ ಮಾಸ್ಕ್ ಆಗಿ ಕೆಲಸ ಮಾಡುವುದು. ಇದು ಚರ್ಮಕ್ಕೆ ತೇವಾಂಶ ನೀಡುತ್ತದೆ. ಲಿಂಬೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿನ ಸಿಟ್ರಿಕ್ ಆಮ್ಲವು ಇರುವ ಪರಿಣಾಮವಾಗಿ ಕೆಲವೊಂದು ಸಲ ನೇರವಾಗಿ ಲಿಂಬೆಯನ್ನು ಹಚ್ಚಿಕೊಂಡರೆ ಅದರಿಂದ ಸಮಸ್ಯೆಯಾಗ ಬಹುದು. ಹೀಗಾಗಿ ಅಲೋವೆರಾದ ಜತೆಗೆ ಸೇರಿಸಿಕೊಂಡು ಹಚ್ಚಿದರೆ ಅದು ಆಮ್ಲವನ್ನು ಸಮತೋಲನದಲ್ಲಿ ಇಡುವುದು. ಹೀಗಾಗಿ ತುಂಬಾ ಸೂಕ್ಷ್ಮವಾದ ಚರ್ಮಕ್ಕೂ ಇದು ನೆರವಾಗುವುದು.

ಮೊಡವೆಗಳ ನಿವಾರಣೆ
ಬೇಸಿಗೆ ಸಮಯದಲ್ಲಿ ಹೆಚ್ಚಿನ ಜನರಲ್ಲಿ ಮೊಡವೆ ಹಾಗೂ ಬೊಕ್ಕೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಯಾಕೆಂದರೆ ಗಾಳಿಯಲ್ಲಿ ಹೆಚ್ಚಿನ ಪ್ರಮಾಣ ಮೊಶ್ಚಿರೈಸರ್ ಇರುವ ಕಾರಣದಿಂದಾಗಿ ಹೀಗೆ ಆಗುವುದು ಇದೆ. ಮೊಡವೆಗಳು ಕೆಲವೊಂದು ಸಂದರ್ಭದಲ್ಲಿ ತುಂಬ ನೋವುಂಟು ಮಾಡುತ್ತದೆ. ಇದರಿಂದ ಅಲೋವೆರಾವನ್ನು ಹಚ್ಚಿಕೊಂಡರೆ ಆಗ ಮೊಡವೆಗಳಿಂದ ಆಗುವಂತಹ ನೋವು ಹಾಗೂ ಕಿರಿಕಿರಿಗೆ ಪರಿಹಾರ ಒದಗಿಸುವುದು. ಇದು ಚರ್ಮಕ್ಕೆ ಶಮನ ನೀಡುವ ಕಾರಣದಿಂದಾಗಿ ಮೊಡವೆಗಳ ಗಾತ್ರವು ಕುಗ್ಗುವುದು. ಮೊಡವೆಗಳಿಂದಾಗಿ ನೋವು ಕಾಣಿಸಿಕೊಂಡರೆ ಆಗ ನೀವು ಈ ವಿಧಾನ ಅಳವಡಿಸಿಕೊಳ್ಳಿ.

ಬಿಸಿ ದದ್ದುಗಳ ಉಪಶಮನ
ಬಿಸಿ ದದ್ದುಗಳು ಬೇಸಿಗೆ ಸಮಯದಲ್ಲಿ ಕಾಡುವಂತಹ ಮತ್ತೊಂದು ಸಮಸ್ಯೆ. ಬೇಸಗೆ ತಿಂಗಳುಗಳಲ್ಲಿ ಬಿಸಿ ದದ್ದುಗಳು ಸಾಮಾನ್ಯವಾಗಿ ಪ್ರತಿಯೊಬ್ಬರ ದೇಹದಲ್ಲೂ ಮೂಡುವುದು. ಬೆವರಿನ ಗ್ರಂಥಿಗಳು ಬ್ಲಾಕ್ ಆದ ವೇಳೆ ಸಣ್ಣ ಬೊಕ್ಕೆಗಳು ಚರ್ಮದ ಮೇಲೆ ಮೂಡುವುದು. ಈ ಭಾಗಕ್ಕೆ ಅಲೋವೆರಾ ಲೋಳೆ ಹಚ್ಚಿಕೊಂಡರೆ ಆಗ ಒಳ್ಳೆಯ ಶಮನ ಸಿಗುವುದು. ನಿಮ್ಮ ಸಮಸ್ಯೆಯು ಪರಿಹಾರ ಕಂಡುಕೊಳ್ಳುವ ತನಕ ಹೀಗೆ ಮಾಡಿ.

ತುರಿಕೆಯ ಚರ್ಮ
ಬೇಸಗೆಯಲ್ಲಿ ಹೆಚ್ಚಾಗಿ ಬೆವರುವ ಪರಿಣಾಮವಾಗಿ ಚರ್ಮದಲ್ಲಿ ಸಾಮಾನ್ಯವಾಗಿ ತುರಿಕೆ ಕಾಣಿಸುವುದು. ತೇವವು ಹೆಚ್ಚಾಗುವ ಪರಿಣಾಮ ತುರಿಕೆ ಕಾಣಿಸುವುದು ಮತ್ತು ಇಡೀ ದಿನ ಬಿಗಿಯಾದ ಬಟ್ಟೆ ಧರಿಸಿಕೊಂಡರೆ ಆಗ ಖಂಡಿತವಾಗಿಯೂ ಈ ಸಮಸ್ಯೆಯು ಬರುವುದು. ಚರ್ಮಕ್ಕೆ ಹೆಚ್ಚಿನ ಗಾಳಿಯು ಸಿಗದೆ ಇರುವ ಪರಿಣಾಮವಾಗಿ ತುರಿಕೆ ಕಂಡುಬರುವುದು.

ಗಾಯದ ಕಲೆ
ಅಲೋವೆರಾ ಲೋಳೆಯು ಗಾಯದಿಂದಾಗಿ ಉಂಟಾಗಿರುವ ಕಲೆ ನಿವಾರಣೆ ಮಾಡುವುದು. ಅದೇ ರೀತಿಯಾಗಿ ಮೊಡವೆ ಹಾಗೂ ಬೊಕ್ಕೆಗಳಿಂದ ಆದ ಕಲೆಗಳು ಕೂಡ ಅಲೋವೆರಾ ಹಚ್ಚಿ ನಿವಾರಿಸಬಹುದು.

ತರುಚಿದ ಕಲೆಗಳು
ತರುಚಿದ ಕಲೆಗಳು ಇರುವಂತಹ ಜಾಗಕ್ಕೆ ಅಲೋವೆರಾ ಲೋಳೆ ಮತ್ತು ವಿಟಮಿನ್ ಇ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ನೇರವಾಗಿ ಹಚ್ಚಿಬಿಡಿ. ಇದು ಗಾಯದ ಕಲೆಗಳು ಹಾಗೆ ಮಾಸುವಂತೆ ಮಾಡುವುದು.

ತಲೆಹೊಟ್ಟು
ತಲೆಹೊಟ್ಟು ಎನ್ನುವುದು ಚರ್ಮದ ಸಮಸ್ಯೆ ಅಲ್ಲದೆ ಇದ್ದರೂ ಇದು ತಲೆಬುರುಡೆಯ ಸಮಸ್ಯೆಯಾಗಿರುವುದು. ಹೀಗಾಗಿ ಇದು ಚರ್ಮದ ಮೇಳೆ ಪರಿಣಾಮ ಬೀರುವುದು. ಇದರಿಂದ ಅಲೋವೆರಾ ಹಚ್ಚಿಕೊಂಡರೆ ಅದು ತಲೆಹೊಟ್ಟು ನಿವಾರಣೆ ಮಾಡುವುದು.

ಲೇಖಕರು: ಡಾ. ಮಹಾಂತೇಶ್‌ ಜೋಗಿ, ಸಹಾಯಕ ಪ್ರಾಧ್ಯಾಪಕರು, ಕೃಷಿ ಕಾಲೇಜು, ಕಲ್ಬುರ್ಗಿ, ದೂ:8105453873

LEAVE A REPLY

Please enter your comment!
Please enter your name here