ಬೆಳೆಗಳಿಗೆ ವಿಮೆ ಸುರಕ್ಷೆ ಪಡೆಯುವುದು ಅತ್ಯಗತ್ಯ !

0

ಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ (AIC) ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಮಾಲೀಕತ್ವದ ರಾಷ್ಟ್ರೀಕೃತ ವಿಮಾ ಕಂಪನಿಯಾಗಿದೆ. ಇದು ಭಾರತದ ಸುಮಾರು 500 ಜಿಲ್ಲೆಗಳಲ್ಲಿ ಇಳುವರಿ ಆಧಾರಿತ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಕಾರ್ಯಕ್ರಮಗಳನ್ನು ನೀಡುತ್ತದೆ. ಇದು ಸುಮಾರು 20 ಮಿಲಿಯನ್ ರೈತರನ್ನು ಒಳಗೊಂಡಿದೆ. ಇದು ರೈತರಿಗೆ ಸೇವೆ ಸಲ್ಲಿಸುತ್ತಿರುವ ವಿಶ್ವದ ಅತಿದೊಡ್ಡ ಬೆಳೆ ವಿಮಾದಾರ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ನವ ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

ಈ ಸಂಸ್ಥೆಯ ಬೆಂಗಳೂರು ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಡಿ. ಉಷಾ ಅವರು ಸಂಸ್ಥೆಯ ಧೈಯೋದ್ದೇಶಗಳ ಬಗ್ಗೆ ಮಾತನಾಡಿದ್ದಾರೆ.

ಅಗ್ರಿಕಲ್ಚರ್ ಇಂಡಿಯಾ: ಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಬಗ್ಗೆ ಪ್ರಾಸ್ತಾವಿಕ ಪರಿಚಯ ಮಾಡಿಕೊಡಿ

ಡಿ. ಉಷಾ: ಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪನಿ ಆಫ್ ಇಂಡಿಯಾವನ್ನು ಸಂಕ್ಷಿಪ್ತವಾಗಿ ಎಐಸಿ ಎಂದು ಕರೆಯಲಾಗುತ್ತದೆ. ಇದು ಮೂಲತಃ ಪಬ್ಲಿಕ್ ಸೆಕ್ಟರ್ ಅಂಡರ್ ಟೆಕ್ಕಿಂಗ್ ಆಗಿದೆ. ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ನಮ್ಮ ಕಂಪನಿಯ ಮುಖ್ಯ ಧೈಯೋದ್ದೇಶ ಬೆಳೆಗಳಿಗೆ ವಿಮಾ ರಕ್ಷಣೆ ಒದಗಿಸುವುದೇ ಆಗಿದೆ.

ಅಗ್ರಿಕಲ್ಚರ್ ಇಂಡಿಯಾ: ಯಾವಯಾವ ರೀತಿಯ ವಿಮೆಗಳನ್ನು ನೀಡಲಾಗುತ್ತಿದೆ ?

ಡಿ. ಉಷಾ: ಬೆಳೆಗೆ ಸಂಬಂಧಿಸಿದ ವಿಮೆಗಳನ್ನು ಮಾತ್ರ ನೀಡಲಾಗುತ್ತಿದೆ. ಮೊದಲು ಬೆಳೆ ವಿಮಾ ಯೋಜನೆ ಅಂದರೆ ಸಿಸಿಎಸ್ಐ ಅಂತ ಇತ್ತು. ನಂತರ ನ್ಯಾಷನಲ್ ಅಗ್ರಿಕಲ್ಚರ್ ಇನ್ಸೂರೆನ್ಸ್ ಸ್ಕೀಮ್ (ಎನ್ಎಐಎಸ್) ಅಂತ ಇತ್ತು. ನಂತರ ರಾಷ್ಟ್ರೀಯ ಕೃಷಿವಿಮೆ ಯೋಜನೆ ಎಂದಾಯಿತು. ಅದೀಗ ೨೦೧೬ ರಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಎಂದು ಹೆಸರಾಗಿದೆ. ಮೊದಲು ಅದು ಸರ್ಕಾರಿ ಯೋಜನೆಯಾಗಿಯೇ ಇತ್ತು. ಇದೀಗ ಈ ಯೋಜನೆಗೆ ಟೆಂಡರ್ ಎಲ್ಲ ಆಗಿ ಶುರುವಾಗುತ್ತದೆ. ರೈತರಿಗೆ ಆಹಾರಧಾನ್ಯಗಳು ಮತ್ತು ಎಣ್ಣೆಕಾಳು ಬೆಳೆಗಳಿಗೆ ಎರಡೇ ಪರ್ಸೆಂಟ್ ಪ್ರೀಮಿಯಂ ಇರುತ್ತದೆ. ತೋಟಗಾರಿಕಾ ಬೆಳೆಗಳಿಗೆ ೫ ಪರ್ಸೆಂಟ್ ಇರುತ್ತದೆ. ಅದರ ಜೊತೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸಬ್ಸಿಡಿಯಾಗಿ ಕೊಡುತ್ತದೆ.

ಅಗ್ರಿಕಲ್ಚರ್ ಇಂಡಿಯಾ: ನಿರ್ದಿಷ್ಟವಾಗಿ ಇಂಥದ್ದೇ ಹಂಗಾಮಿನ ಬೆಳೆಗೆ ಎಂದು ವಿಮೆ ನೀಡುತ್ತೀರಾ ?

ಡಿ. ಉಷಾ: ಹಾಗೇನೂ ಇಲ್ಲ. ಎಲ್ಲ ಹಂಗಾಮಿನ ಬೆಳೆಗಳಿಗೂ ವಿಮೆ ನೀಡುತ್ತೇವೆ. ಬೆಳೆವಿಮೆ ಯೋಜನೆ ಜಾರಿಗೆ ಮುನ್ನ ನೋಟಿಫಿಕೇಶನ್ ಆಗುತ್ತದೆ. ರಾಜ್ಯ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಟೆಂಡರ್ ಹಾಕ್ತಾರೆ. ಟೆಂಡರ್ ನಲ್ಲಿ ಎಲ್ಲ ಕಂಪನಿಗಳು ಪ್ರೀಮಿಯಂ ಕೋಟ್ ಮಾಡ್ತಾರೆ. ಇದರಲ್ಲಿ ಸುಮಾರು ೧೬ ಖಾಸಗಿ ಕಂಪನಿಗಳವರು ಭಾಗವಹಿಸುತ್ತಾರೆ. ಅವರೂ ಕೋಟ್ ಮಾಡ್ತಾರೆ. ಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ (AIC) ಕೂಡ ಕೋಟ್ ಮಾಡುತ್ತದೆ. ನಾವು ಬೆಳೆವಿಮೆ ಮಾತ್ರ ಮಾಡುತ್ತೇವೆ.

ಅಗ್ರಿಕಲ್ಚರ್ ಇಂಡಿಯಾ: ನಿಮ್ಮ ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಎಷ್ಟು ಜಿಲ್ಲೆಗಳು ಒಳಪಡುತ್ತವೆ ?

ಡಿ. ಉಷಾ: ನಮ್ಮ ಪ್ರಾದೇಶಿಕ ಕಚೇರಿಗೆ ಈಗ ಮೂರು ವರ್ಷದ ಟೆಂಡರ್ ಆಗಿದೆ. ೨೦೨೦ ರಿಂದ ೨೨ – ೨೩ರವರೆಗೂ ಅವಧಿಯಿದೆ. ರಬ್ಬಿ ಸೀಸನ್ ತನಕ ಇದೆ. ಮುಂಗಾರು ಮತ್ತು ಹಿಂಗಾರಿಗೆ ಪ್ರತ್ಯೇಕವಾಗಿ ನೋಟಿಫಿಕೇಶನ್ ಆಗುತ್ತದೆ. ಡಬ್ಲ್ಯು ಬಿಸಿಎಸ್ ಇರುತ್ತದೆ. ಹೀಗೆಂದರೆ ಹವಾಮಾನ ಆಧಾರಿತ ಬೆಳೆವಿಮೆ. ಇದು ತೋಟಗಾರಿಕಾ ಬೆಳೆಗಳಿಗೆ ಅನ್ವಯಿಸುತ್ತದೆ. ನಮ್ಮ ವ್ಯಾಪ್ತಿಗೆ ಹತ್ತು ಜಿಲ್ಲೆಗಳು ಒಳಪಡುತ್ತವೆ. ಇದರಲ್ಲಿ ಹವಾಮಾನ ಆಧಾರಿತ ಹತ್ತು ಜಿಲ್ಲೆಗಳು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಆರು ಜಿಲ್ಲೆಗಳು ಬರುತ್ತವೆ. ಕರ್ನಾಟಕದಲ್ಲಿ ೩೦ ಜಿಲ್ಲೆಗಳಿವೆ. ಕ್ಲಸ್ಟರ್ ಮಾಡಿದ್ದಾರೆ. ಎರಡು ಯೋಜನೆಗಳಿಂದ ತಲಾ ಎರಡು ಕ್ಲಸ್ಟರ್ ನಮ್ಮ ಸಂಸ್ಥೆಯ ವಿಮೆ ವ್ಯಾಪ್ತಿಗೆ ಬರುತ್ತವೆ.

ಅಗ್ರಿಕಲ್ಚರ್ ಇಂಡಿಯಾ: ನೀವು ಯಾವಾಗ ಬೆಳೆವಿಮೆ ಸಂಬಂಧ ಪ್ರಕಟಣೆ ಹೊರಡಿಸುತ್ತೀರಿ ? ಅವರು ಯಾವಾಗ ಅರ್ಜಿ ಹಾಕಿಕೊಳ್ಳಬೇಕು ?

ಡಿ. ಉಷಾ: ಕರ್ನಾಟಕದಲ್ಲಿ ಸಂರಕ್ಷಣೆ ಅಂತ ಪೋರ್ಟಲ್ ಇದೆ. ಬ್ಯಾಂಕ್ಗಳ ಮೂಲಕವೂ ರೈತರು ನೋಂದಾಯಿಸಬಹುದು ಅಥವಾ ಗ್ರಾಮ ಒನ್ ಸೆಂಟರ್ ಮೂಲಕವೂ ನೋಂದಾಯಿಸಬಹುದು. ಕಾಮನ್ ಸರ್ವೀಸ್ ಸೆಂಟರ್ ಮೂಲಕವೂ ನೋಂದಾಯಿಸಬಹುದು. ಈಗ ತಾಲ್ಲೂಕುವಾರು ಗ್ರಾಮ ಒನ್ ಇದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಕೂಡ ವಿಚಾರಿಸಬಹುದು.

ಅಗ್ರಿಕಲ್ಚರ್ ಇಂಡಿಯಾ: ರೈತರು ಕೊಡಬೇಕಾದ ದಾಖಲಾತಿ ಏನು ? ಬೆಳೆವಿಮೆ ಪಡೆಯಲು ನಿರ್ದಿಷ್ಟವಾಗಿ ಇಂತಿಷ್ಟೇ ವಿಸ್ತೀರ್ಣದ ಜಮೀನು ಇರಬೇಕೆಂಬ ನಿಯಮವಿದೆಯೇ ?

ಡಿ. ಉಷಾ: ಇಂತಿಷ್ಟೇ ಎಕರೆ ಇರಬೇಕೆಂಬ ನಿಯಮವೇನು ಇಲ್ಲ. ಕುಂಟೆಗಳ ಲೆಕ್ಕದಲ್ಲಾದರೂ ಜಮೀನು ಇರಬಹುದು. ಕೃಷಿಜಮೀನು ಇರುವ ಯಾರೂ ಬೇಕಾದರೂ ಬೆಳೆವಿಮೆ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಅವರು ನೋಂದಾಯಿಸಿದ್ದು ಭೂಮಿ ಸಾಫ್ಟ್ ವೇರ್ ಗೆ ಲಿಂಕ್ ಆಗುತ್ತದೆ. ಸೀಸನ್ ಶುರುವಾದ ತಕ್ಷಣ ನೋಂದಾಯಿಸಬಹುದು.

ಮುಂಗಾರು ಸೀಸನ್ ನೋಂದಾವಣೆ ಏಪ್ರಿಲ್ ನಲ್ಲಿ ಆರಂಭವಾಗುತ್ತದೆ. ಏಪ್ರಿಲ್ ನಿಂದ ಸೆಪ್ಟೆಂಬರ್ ತನಕ ಇರುತ್ತದೆ. ಜುಲೈ ೩೧ರ ತನಕ ಪ್ರೀಮಿಯಂ ಕಟ್ಟಬಹುದು. ಕೆಲವು ಬೆಳೆಗಳಿಗೆ ಪ್ರೀಮಿಯಂ ಕಟ್ಟಿಸಿಕೊಳ್ಳುವ ಅವಧಿ ಜೂನ್ ನಲ್ಲಿಯೇ ಮುಕ್ತಾಯವಾಗುತ್ತದೆ. ಈ ಅವಧಿಯಲ್ಲಿಯೇ ಪ್ರೀಮಿಯಂ ಕಟ್ಟಬೇಕು. ಮುಂಗಾರಿನಲ್ಲಿ ಎರಡು ಪರ್ಸೆಂಟ್ ಅಷ್ಟೇ ಪ್ರೀಮಿಯಂ ಪಾವತಿಸಬೇಕು. ಹಿಂಗಾರಿನಲ್ಲಿ ಒಂದೂವರೆ ಪರ್ಸೆಂಟ್ ಪ್ರೀಮಿಯಂ ಅಷ್ಟೇ ಇರುತ್ತದೆ. ಹಿಂಗಾರಿನಲ್ಲಿ ಗೋಧಿ, ಸೂರ್ಯಕಾಂತಿ ಎಲ್ಲ ಬರುತ್ತವೆ. ಹವಾಮಾನ ಆಧಾರಿತ ಬೆಳೆವಿಮೆಗೆ ಪ್ರೀಮಿಯಂ ಪಾವತಿಸಲು ಜೂನ್ ೩೦ ಕೊನೆಯ ದಿನವಾಗಿರುತ್ತದೆ. ಮಾವು ಅಂತ ಬೆಳೆಗಳಿಗೆ ಜುಲೈ ೩೧ರ ತನಕ ಅವಧಿ ಇರುತ್ತದೆ.

ಅಗ್ರಿಕಲ್ಚರ್ ಇಂಡಿಯಾ: ಬೆಳೆ ವಿಫಲವಾದರೆ ಎಷ್ಟು ದಿನಗಳ ಒಳಗೆ ರೈತರು ಯಾರ ಗಮನಕ್ಕೆ ತರಬೇಕು ?

ಡಿ. ಉಷಾ: ಬೆಳೆವಿಮೆ ಮೊದಲಿನಿಂದಲೂ ಹೋಬಳಿ ಮಟ್ಟದಿಂದಲೂ ನಡೆಯುತ್ತಿದೆ. ಬೆಳೆ ಇಳುವರಿಗೆ ಸಂಬಂಧಿಸಿದ ಮಾಹಿತಿ ಸಾಂಖ್ಯಿಕ ನಿರ್ದೇಶನಾಯದಲ್ಲಿ ದಾಖಲಾಗುತ್ತದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಇಳುವರಿ ಕಟಾಪ್ ಡೇಟ್ ನಡೆಯುತ್ತದೆ. ಇದನ್ನು ಆವರೇಜ್ ತೆಗೆದುಕೊಂಡು ಡ್ರೈಏಜ್ ಅಪ್ಲೈ ಮಾಡಿ ಇಂತಿಷ್ಟು ಇಳುವರಿ ಬಂದಿದೆ ಎಂದು ಮಾಹಿತಿ ನೀಡುತ್ತಾರೆ. ಇವೆಲ್ಲ ಬೆಳೆವಾರು, ಏರಿಯಾವಾರು ನಡೆಯುತ್ತದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಷ್ಟು ನೋಟಿಫೈ ಆಗಿದೆಯೋ ಅಷ್ಟು ಡೇಟಾ ನಮಗೆ ಆರ್ಥಿಕ ಅಂಕಿಅಂಶಗಳ ಇಲಾಖೆಯಿಂದ ದೊರೆಯುತ್ತದೆ. ಕೃಷಿ ಇಲಾಖೆ, ಕಂದಾಯ ಇಲಾಖೆ, ಸಾಂಖ್ಯಿಕ ಇಲಾಖೆ ಎಲ್ಲ ಸೇರಿ ಒಂದು ಯೋಜನೆ ರೂಪಿಸಿ ನೀಡುತ್ತಾರೆ. ಕ್ರಾಪ್ ಕಟಿಂಗ್ ಎಕ್ಸ್ಪೆರಿಮೆಂಟ್ಸ್ ಅಂತ ಬೆಳೆವಿಮೆ ಆಪ್ ಇದೆ. ಅದನ್ನು ಅವರೇಜ್ ತೆಗೆದುಕೊಂಡು ಇಳುವರಿ ಕೊಡುತ್ತಾರೆ.

ಪ್ರಾರಂಭಿಕ ಇಳುವರಿ ಅಂತ ಒಂದಿರುತ್ತದೆ. ಅದು ಕಳೆದ ಏಳುವರ್ಷದ ಸರಾಸರಿಯದಾಗಿರುತ್ತದೆ. ಅದರಲ್ಲಿ ತುಂಬ ಕಡಿಮೆ ಇರುವ ಇಳುವರಿಯನ್ನು ಮೈನಸ್ ಮಾಡಿ ಐದು ವರ್ಷದ್ದು ಮಾತ್ರ ತೆಗೆದುಕೊಂಡು ಅದರ ಸರಾಸರಿ ತೆಗೆದುಕೊಂಡು ಅದರ ಇಳುವರಿ ಮಾಹಿತಿ ತೆಗೆದುಕೊಳ್ಳಲಾಗುತ್ತದೆ. ಪ್ರತಿವರ್ಷದಲ್ಲಿಯೂ ತ್ರಷ್ ಹೋಲ್ಡ್ ಹೀಲ್ಡ್ ಆ ಇಳುವರಿಗೂ ಈ ವರ್ಷದ ಇಳುವರಿಗೂ ಹೋಲಿಕೆ ಮಾಡಿದಾಗ ಕೊರತೆ ಇದ್ದರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಬೆಳೆವಿಮೆ ಮಾಡಿದ ಎಲ್ಲರಿಗೂ ಕ್ಲೈಮ್ ದೊರೆಯುತ್ತದೆ.

ಒಂದು ಪರ್ಸೇಂಟ್ ಆಗಿರಲಿ ಅಥವಾ ಹದಿನೆಂಟು ಹತ್ತೊಂಬತ್ತು ಪರ್ಸೇಂಟ್ ಆಗಿರಲಿ ಸಮ್ ಇನ್ಸೂರ್ಡ್ ಕೊಡಲಾಗುತ್ತದೆ. ಇವುಗಳನ್ನೇ ಸಾಮುದಾಯಿಕವಾಗಿ ಮಾಡಲಾಗುತ್ತದೆ ಹೊರತು ವೈಯಕ್ತಿಕ ಮಟ್ಟದಲ್ಲಿ ಮಾಡುವುದಿಲ್ಲ. ಆದರೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ವೈಯಕ್ತಿಕ ಮಟ್ಟದ ವಿಮೆಯೂ ಬಂದಿದೆ. ಏಕೆ ಅಂದರೆ ಬಿತ್ತನೆ ಮಾಡಲೂ ಆಗದಷ್ಟೂ ಭೂಮಿ ಡ್ರೈ ಆಗಿದೆ, ಮಳೆಯೇ ಬಂದಿಲ್ಲ ಎಂಬ ಪರಿಸ್ಥಿತಿ ಇರುವಾಗ ಜೂನ್ ಜುಲೈ ಆದರೂ ಮಳೆ ಬಂದಿಲ್ಲ ಎಂದಾಗ ಪ್ರೀಮಿಯಂ ಕಟ್ಟಿದವರಿಗೆ ೨೫ ಪರ್ಸೇಂಟ್ ಸಮ್ ಇನ್ಸೂರ್ಡ್ ಮೊದಲೇ ಕೊಡುತ್ತಾರೆ.

ಒಂದು ಏರಿಯಾದ ಶೇಕಡ ೭೫ ಭಾಗದಲ್ಲಿ ಬಿತ್ತನೆಯೇ ಆಗಿಲ್ಲ ಎಂದಾಗ ಸಂಬಂಧಿತ ಇಲಾಖೆಗಳು ಅದನ್ನು ಗುರುತಿಸುತ್ತವೆ. ಭಾರಿ ಬೆಳೆ ಬಂದು ಒಂದು ನಿರ್ದಿಷ್ಟ ಏರಿಯಾದ ಇಂತಿಷ್ಟು ಭಾಗದಲ್ಲಿ ಬೆಳೆಹಾನಿಯಾಗಿದೆ ಎಂಬ ಪರಿಸ್ಥಿತಿಯಲ್ಲಿಯೂ ಪ್ರೀಮಿಯಂ ಕಟ್ಟಿದವರಿಗೆ ಇಂತಿಷ್ಟು ಭಾಗ ವಿಮಾ ಪರಿಹಾರ ನೀಡಲಾಗುತ್ತದೆ.

ಅಗ್ರಿಕಲ್ಚರ್ ಇಂಡಿಯಾ: ಇಂತಿಷ್ಟೇ ಪ್ರೀಮಿಯಂ ಕಟ್ಟಬೇಕು ಎಂದು ನಿರ್ಧಾರ ಮಾಡುವವರು ಯಾರು ?

ಡಿ. ಉಷಾ: ಆಯಾ ಏರಿಯಾಗಳಿಗೆ ತಕ್ಕಂತೆ ವಿಮಾ ಕಂಪನಿಗಳವರು ನಿರ್ಧಾರ ಮಾಡುತ್ತಾರೆ. ಒಂದು ಕ್ಲಸ್ಟರ್ ಗೆ ಇಂತಿಷ್ಟು ಎಂದು ಇರುತ್ತದೆ. ರಾಜ್ಯ ಸರ್ಕಾರ ಟೆಂಡರ್ ಹಾಕುತ್ತಾರೆ. ಆಗ ನಾವು ದರ ಕೋಟ್ ಮಾಡುತ್ತೇವೆ. . ಯಾರು ಕಡಿಮೆ ಕೋಟ್ ಮಾಡಿರುತ್ತಾರೋ ಅವರಿಗೆ ಟೆಂಡರ್ ಕೊಡುತ್ತಾರೆ.

ಅಗ್ರಿಕಲ್ಚರ್ ಇಂಡಿಯಾ: ಒಂದೊಂದು ಏರಿಯಾಕ್ಕೆ ಪ್ರತ್ಯೇಕ ಪ್ರೀಮಿಯಂ ಇರುತ್ತದೆಯೇ ?

ಡಿ. ಉಷಾ: ಒಂದೊಂದು ಬೆಳೆಗೆ, ಒಂದೊಂದು ಏರಿಯಾಕ್ಕೆ ಪ್ರೀಮಿಯಂನಲ್ಲಿ ವ್ಯತ್ಯಾಸವಾಗುತ್ತದೆ. ತೋಟಗಾರಿಕಾ ಬೆಳೆಗಳಿಗೆ ಕೊಂಚ ಹೆಚ್ಚು ಪ್ರೀಮಿಯಂ ಇರುತ್ತದೆ. ಆದರೆ ರೈತರುಗಳಿಗೆ ಇದರ ಹೊರೆ ಬೀಳುವುದಿಲ್ಲ. ಅವರು ಕಟ್ಟುವ ಪ್ರೀಮಿಯಂ ನಿರ್ದಿಷ್ಟವಾಗಿರುತ್ತದೆ. ಉದಾಹರಣೆಗೆ ಆಹಾರಧಾನ್ಯಗಳ ವಿಮೆಗೆ ಅವರು ಶೇಕಡ ಎರಡರಷ್ಟು ಪ್ರೀಮಿಯಂ ಅಷ್ಟೇ ಪಾವತಿಸಬೇಕು.

ಅಗ್ರಿಕಲ್ಚರ್ ಇಂಡಿಯಾ: ಇದುವರೆಗೂ ಸಂಸ್ಥೆ ಗರಿಷ್ಟ ಎಷ್ಟು ಪರ್ಸೇಂಟ್ ವಿಮೆ ನೀಡಿದ್ದೀರಿ

ಡಿ. ಉಷಾ: ಎಲ್ಲ ಸಂದರ್ಭದಲ್ಲಿಯೂ ಇದು ಒಂದೇ ಆಗಿರುವುದಿಲ್ಲ. ಚಿಕ್ಕಬಳ್ಳಾಪುರದಲ್ಲಿ ಕಳೆದ ವರ್ಷ ಬೆಳೆ ಹಾನಿ ಆದ ಸಂದರ್ಭದಲ್ಲಿ ಶೇಕಡ ೮೦ರ ತನಕ ವಿಮಾ ಹಣ ನೀಡಲಾಗಿದೆ.

ಅಗ್ರಿಕಲ್ಚರ್ ಇಂಡಿಯಾ: ರೈತರಿಗೂ ವಿಮಾ ಕಂಪನಿಗೂ ನೇರ ಸಂಬಂಧ ಇರುವುದಿಲ್ಲವೇ ?

ಡಿ. ಉಷಾ: ನಾವು ವಿಮೆ ಜಾರಿಗೊಳಿಸುತ್ತೇವೆ. ಪ್ರೀಮಿಯಂ ತೆಗೆದುಕೊಳ್ಳುತ್ತೇವೆ. ಕ್ಲೈಮ್ ಬಂದಾಗ ಕ್ಲೈಮ್ ಕೊಡುತ್ತೇವೆ. ನಾವು ಸಂಬಂಧಿತ ಇಲಾಖೆಗಳಿಗೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತೇವೆ. ಮಳೆ ಆದಾಗ ಕೆ.ಎಸ್.ಎಂ.ಡಿ.ಸಿ. ಅವರು ಅದರ ಅಂಕಿಅಂಶ ಕೊಡುತ್ತಾರೆ. ಬೆಳೆವಿಮೆಗೆ ಸಂಬಂಧಿಸಿದಂತೆ ಅಡ್ವಾನ್ಸಡ್ ಟೆಕ್ನಾಲಜಿ ಬಳಸಲಾಗುತ್ತದೆ.

ಅಗ್ರಿಕಲ್ಚರ್ ಇಂಡಿಯಾ: ರೈತರು ಬೆಳೆವಿಮಾ ಹಣವನ್ನು ಯಾರಿಗೆ ಪಾವತಿಸುತ್ತಾರೆ ?

ಡಿ. ಉಷಾ: ರೈತರು ಬೆಳೆವಿಮಾ ಪ್ರೀಮಿಯಂ ಅನ್ನು ಸಂರಕ್ಷಣಾ ಪೋರ್ಟಲಿನಲ್ಲಿ ಪಾವತಿಸುತ್ತಾರೆ. ಯಾರಿಗೆ ಬೆಳೆವಿಮೆ ಟೆಂಡರ್ ಆಗುತ್ತದೆಯೋ ಆ ಕಂಪನಿಗೆ ಆ ಪ್ರೀಮಿಯಂ ಹಣ ಹೋಗುತ್ತದೆ.

ಅಗ್ರಿಕಲ್ಚರ್ ಇಂಡಿಯಾ: ಬೆಳೆವಿಮೆಗೆ ಸಂಬಂಧಿಸಿದ ಆಪ್ ಬಗ್ಗೆ ಹೆಚ್ಚು ಮಾಹಿತಿ ಕೊಡಿ

ಡಿ. ಉಷಾ: ರೈತರು ಪ್ರೀಮಿಯಂ ಕಟ್ಟಿದಾಕ್ಷಣ ಅವರಿಗೆ ಒಂದು ರಸೀದಿ ಬರುತ್ತದೆ. ಅದರ ನಂಬರ್ ಕೊಟ್ಟರೆ ಏನೇನು ವಿಮೆ ಕವರ್ ಆಗಿದೆ ಎಂದು ತಿಳಿಯುತ್ತದೆ. ನೋಂದಾಯಿತ ಮೊಬೈಲ್ ನಂಬರಿಗೆ ರಶೀದಿ ಬರುವುದರಿಂದ ಗೊಂದಲವಾಗುವುದಿಲ್ಲ. ಬೆಳೆಯ ಪೋಟೋ ತೆಗೆದು ಅಪ್ ಲೋಡ್ ಮಾಡುವ ಕೆಲಸವನ್ನೂ ರೈತರೇ ಮಾಡಬಹುದು. ಬೆಳೆ ದರ್ಶಕ್ ಆಪ್ ಮೂಲಕ ಈ ಕಾರ್ಯ ಮಾಡಬಹುದು. ಸರ್ಕಾರದ ಇಲಾಖೆಗಳು ಕೂಡ ಬೆಳೆ ಸಮೀಕ್ಷೆ ಮಾಡುತ್ತಾರೆ. ಬೆಳೆ ಸಮೀಕ್ಷೆಯಾದ ಮೇಲೆ ಕ್ಲೈಮ್ ಸೆಟ್ ಆಗುತ್ತದೆ.

ಅಗ್ರಿಕಲ್ಚರ್ ಇಂಡಿಯಾ: ಕೀಟಗಳು ಮತ್ತು ರೋಗಬಾಧೆಯಿಂದಲೂ ಬೆಳೆ ಹಾಳಾಗುತ್ತದೆ. ಆಗಲೂ ಬೆಳೆವಿಮೆ ಪಡೆಯಬಹುದೇ

ಡಿ. ಉಷಾ: ಅಂಥ ಸಂದರ್ಭಗಳಲ್ಲಿಯೂ ಬೆಳೆವಿಮೆ ದೊರೆಯುತ್ತದೆ. ನೈಸರ್ಗಿಕವಾಗಿ ಆಗುವ ಹಾನಿಗಳಿಂದಾದ ನಷ್ಟ ವಿಮೆ ದೊರೆಯುತ್ತದೆ. ಇಡ್ ಸೀಸನ್ ಅಡ್ವರ್ಸಿಟಿ ಅಂತಾರಲ್ಲ; ಒಮ್ಮೆ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಮಳೆ ಜಾಸ್ತಿ ಆಯಿತು. ಅದೇ ರೀತಿ ಎಲ್ಲೆಲ್ಲಿ ಕೀಟಬಾಧೆ ಇದೆಯೋ ಅದರ ಬಗ್ಗೆ ಸರ್ಕಾರದ ಸಂಬಂಧಿಸಿದ ಇಲಾಖೆಗಳವರು ಹೇಳುತ್ತಾರೆ. ನೋಟಿಫೈ ಮಾಡುತ್ತಾರೆ. ಆಗ ನಾವು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುತ್ತೇವೆ. ಮೊದಲು ಶೇಕಡ ೫೦ರಷ್ಟು ವಿಮೆ ಸೆಟಲ್ ಮಾಡುತ್ತೇವೆ. ಉಳಿಕೆಯನ್ನು ಕೊಯ್ಲು ಆದ ಮೇಲೆ ಬಂದ ಇಳುವರಿ ಆಧರಿಸಿ ನೀಡುತ್ತೇವೆ. ಸೆಟಲ್ ಮಾಡುವುದು ಪೋರ್ಟಲಿನಲ್ಲಿಯೇ. ಅದು ಫಾರ್ಮರ್ಸ್ ವೈಸ್ ಹೋಗುತ್ತದೆ. ಅವರ ಆಧಾರ್ ನಂಬರ್ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟಿಗೆ ಹೋಗುತ್ತದೆ.

ಅಗ್ರಿಕಲ್ಚರ್ ಇಂಡಿಯಾ: ಬೆಳೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಾಗಲೂ ಬೆಳೆವಿಮೆ ಕವರ್ ಆಗುತ್ತದೆಯೇ ?

ಡಿ. ಉಷಾ: ವೈಯಕ್ತಿಕ ಹಂತದಲ್ಲಾದರೆ ಅದು ನಮ್ಮ ಪರಿಧಿಗೆ ಬರುವುದಿಲ್ಲ. ಒಂದು ಪ್ರದೇಶದಲ್ಲಿ ಅಂದರೆ ಗ್ರಾಮ ಪಂಚಾಯತ್ ಅಥವಾ ಹೋಬಳಿ ಮಟ್ಟದಲ್ಲಿ ಸಾಮೂಹಿಕವಾಗಿ ಆಗಿದ್ದರೆ ಮಾತ್ರ ಕಂಪನಿಯಿಂದ ಕವರ್ ಆಗುತ್ತದೆ. ಕರ್ನಾಟದಲ್ಲಿ ಎಲ್ಲವೂ ಗ್ರಾಮ ಪಂಚಾಯತ್ ಮಟ್ಟಕ್ಕೆ ಬಂದಾಗಿದೆ. ಮೊದಲು ತಾಲ್ಲೂಕುವಾರು ಇತ್ತು. ನಂತರ ಹೋಬಳಿ ಮಟ್ಟಕ್ಕೆ ಈಗ ಗ್ರಾಮ ಪಂಚಾಯತ್ ಮಟ್ಟಕ್ಕೆ ಬಂದಿದೆ.

ಅಗ್ರಿಕಲ್ಚರ್ ಇಂಡಿಯಾ: ಕೆಲವರು ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡು ಸಾಗುವಳಿ ಮಾಡುತ್ತಿರುತ್ತಾರೆ. ಬೆಳೆ ನಷ್ಟವಾದಾಗ ಪರಿಹಾರದ ಹಣ ಯಾರಿಗೆ ದೊರೆಯುತ್ತದೆ

ಡಿ. ಉಷಾ: ಭೂಮಿಗೆ ಯಾರ ಹೆಸರಿನ ದಾಖಲಾತಿ ಲಿಂಕ್ ಆಗಿರುತ್ತದೆಯೋ ಅವರಿಗೆ ವಿಮಾ ಪರಿಹಾರದ ಹಣ ದೊರೆಯುತ್ತದೆ. ಹೀಗಾಗಿ ಭೂ ಮಾಲೀಕರಿಗೆ ಪರಿಹಾರದ ಹಣ ಸಂದಾಯವಾಗುತ್ತದೆ. ಅವರಿಂದ ಗುತ್ತಿಗೆದಾರರು ಪಡೆಯಬೇಕು. ಸದ್ಯಕ್ಕೆ ವಿಮಾ ಯೋಜನೆಯಲ್ಲಿ ಟೆನೆಂಟ್ ಫಾರ್ಮರ್ ಪ್ರಸ್ತಾಪವಿಲ್ಲ.

ಅಗ್ರಿಕಲ್ಚರ್ ಇಂಡಿಯಾ: ಬೆಳೆವಿಎಗೆ ಸಂಬಧಿಸಿದಂತೆ ಹೆಚ್ಚಿನ ಮಾಹಿತಿ ಬೇಕು ಎಂದರೆ ರೈತರು ಯಾರನ್ನು ಸಂಪರ್ಕಿಸಬೇಕು ?

ಡಿ. ಉಷಾ: ನಮ್ಮ ಸಂಸ್ಥೆಯ ದೂರವಾಣಿ 1800 425 0505 ಈ ನಂಬರಿಗೆ ಉಚಿತವಾಗಿ ಕರೆ ಮಾಡಬಹುದು. ಆಗ ಕನ್ನಡದಲ್ಲಿಯೇ ಹೆಚ್ಚಿನ ಮಾಹಿತಿ ದೊರಕುತ್ತದೆ.

LEAVE A REPLY

Please enter your comment!
Please enter your name here