ತರಕಾರಿಯಲ್ಲಿ ತರಾವರಿ ವಿಷಗಳು ಹಾಗು ಹತೋಟಿ ಕ್ರಮಗಳು 

0
ಲೇಖಕರು: ಮಂಜುನಾಥ ಹೊಳಲು

ನಗರ ಪ್ರದೇಶಗಳ ಸುತ್ತಮುತ್ತ ಇರುವ ಸಾಕಷ್ಟು ರೈತರು ತರಕಾರಿ ಬೆಳೆಯಲು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಕೊಳಚೆ ಹಾಗು ಕಲುಷಿತವಾಗಿರುವ ಕೆರೆಗಳ ನೀರನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೊಳಚೆ ನೀರಿನಲ್ಲಿ ಪಾದರಸ, ಸತು, ನಿಕ್ಕಲ್, ಕ್ರೋಮಿಯಂ, ಜಿಂಕ್, ಆರ್ಸೆನಿಕ್ ಮುಂತಾದ ಭಾರಲೋಹದ ವಿಷದ ಪ್ರಮಾಣ ಹೆಚ್ಚಾಗಿರುತ್ತವೆ. ಈ ನೀರನ್ನು ತರಕಾರಿ ಮತ್ತು ಸೊಪ್ಪು ಬೆಳೆಯಲು ಬಳಸುವುದರಿಂದ  ತರಕಾರಿಯ ಒಳಗೆ ವಿಷ ಸೇರಿಕೊಳ್ಳುತ್ತವೆ. ಕೊಳಚೆ ನೀರಿನ ಜೊತೆಯಲ್ಲೇ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳಿಂದಲೂ ವಿಷ ಮಣ್ಣು ಮತ್ತು ನಮ್ಮ ಆಹಾರದಲ್ಲಿ ಸೇರ್ಪಡೆಯಾಗುತ್ತಿವೆ. ಮಣ್ಣಿನಲ್ಲಿ ವಿಷ ಸೇರಿದ ನಂತರ ಅವುಗಳನ್ನು ತೆಗೆಯುವುದು ಕಷ್ಟಸಾಧ್ಯ. ಹಾಗಾಗಿ ಅವು ಅಲ್ಲೇ ಉಳಿದು ನಿರಂತರವಾಗಿ ನಮ್ಮ ಆಹಾರದಲ್ಲಿ ಸೇರುತ್ತಿರುತ್ತವೆ.

ಪರಿಣಾಮ

ತರಕಾರಿಗಳು ದಿನನಿತ್ಯದ ಆಹಾರ. ಅವುಗಳಲ್ಲಿ ಹೆಚ್ಚಿನ ಪೋಷಕಾಂಶಗಳು ಇವೆ. ಹಾಗಾಗಿ ನಮ್ಮ ಆಹಾರದಲ್ಲಿ ಅವುಗಳಿಗೆ ಆದ್ಯತೆ ಹೆಚ್ಚು. ನಗರಗಳಲ್ಲಿ ತಿನ್ನುವವರ ಜನಸಂಖ್ಯೆಗೆ ಅನುಗುಣವಾಗಿ ತರಕಾರಿಗಳನ್ನು ಒದಗಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ನಗರಗಳ ಸುತ್ತಮುತ್ತಲಿನ ಪ್ರದೇಶಗಳ ಮತ್ತು ಹಳ್ಳಿಗಳ ರೈತರು ಹೆಚ್ಚಾಗಿ ತರಕಾರಿ ಬೆಳೆಯಲು ಒತ್ತು ಕೊಡುತ್ತಿದ್ದಾರೆ. ಆದರೆ ನಗರಗಳು ಬೆಳೆದಂತೆಲ್ಲಾ ನಗರಗಳು ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮಾಣ ಸಹ ಹೆಚ್ಚಾಗುತ್ತಿದೆ. ಹೀಗೆ ಹೆಚ್ಚಾಗುತ್ತಿರುವ ಮಾಲಿನ್ಯದಿಂದಾಗಿ ತರಕಾರಿ ಮತ್ತು ಸೊಪ್ಪಿನ ಬೆಳೆಯ ಮೇಲೆ ಪರಿಣಾಮ ಬೀರುತ್ತಿದೆ.

ಪರಿಸರಕ್ಕೆ ಸೇರ್ಪಡೆ

ಭಾರ ಲೋಹಗಳು ನಾವು ದಿನನಿತ್ಯ ಉಪಯೋಗಿಸುವ ವಸ್ತುಗಳು,  ನಮ್ಮ ದೈನಂದಿನ ಚಟುವಟಿಕೆಗಳಿಂದಾಗಿ ಪರಿಸರಕ್ಕೆ ಸೇರುತ್ತಿದೆ. ಕಾರ್ಖಾನೆಯಲ್ಲಿ ಉಪಯೋಗಿಸುವ ಕಚ್ಚಾ ಪದಾರ್ಥಗಳು, ಕಾರ್ಖಾನೆ ತ್ಯಾಜ್ಯ, ಎಲೆಕ್ಟ್ರಾನಿಕ್ ವಸ್ತುಗಳು, ಬ್ಯಾಟರಿ, ಬಲ್ಪುಗಳು, ಪೈಂಟ್, ಗಟಾರದ ಕೊಳಚೆ ನೀರು ಮತ್ತು ನಗರಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯಗಳಿದ ಭಾರಲೋಹಗಳು ಹೆಚ್ಚಿನ ಪ್ರಮಾಣದಲ್ಲಿ ಪರಿಸರಕ್ಕೆ ಸೇರುತ್ತಿವೆ.

ಆಹಾರ ಸರಪಣಿ

ಹೆಚ್ಚಾದ ಕೈಗಾರಿಕೀಕರಣ, ನಗರಗಳ ಬೆಳವಣಿಗೆ, ಶುದ್ಧ ನೀರಿನ ಮೂಲಗಳು ಕಣ್ಮರೆಯಾಗುತ್ತಿರುವುದು, ಶುದ್ಧೀಕರಿಸದ ಕೊಳಚೆ ನೀರು ಮತ್ತು ಕೈಗಾರಿಕಾ ತ್ಯಾಜ್ಯಗಳಿಂದಾಗಿ ಭಾರಲೋಹದ ಪ್ರಮಾಣ ಪರಿಸರದಲ್ಲಿ, ಕೃಷಿ ಜಮೀನುಗಳಲ್ಲಿ ಹೆಚ್ಚಾಗುತ್ತಿದೆ. ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ತರಕಾರಿ ಮತ್ತು ಸೊಪ್ಪನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಅವುಗಳ ಮೂಲಕ ಭಾರ ಲೋಹಗಳು  ನಮ್ಮ ಆಹಾರ ಸರಪಣಿಗೆ ಸೇರ್ಪಡೆಯಾಗುತ್ತಿವೆ.

ರಾಸಾಯನಿಕ ಗೊಬ್ಬರ – ಕೀಟನಾಶಕ

ಭಾರಲೋಹಗಳು ರೈತರು ಉಪಯೋಗಿಸುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಮೂಲಕವೂ ಮಣ್ಣಿಗೆ ಸೇರುತ್ತಿದೆ. ರಂಜಕದ ಅಂಶ ಇರುವ ಗೊಬ್ಬರಗಳು, ಕೆಲವೊಂದು ಕೀಟನಾಶಕಗಳು, ಕಳೆನಾಶಕ, ಶಿಲೀಂಧ್ರ ನಾಶಕಗಳಲ್ಲಿ ಭಾರ ಲೋಹ ಇರುತ್ತದೆ. ಕೀಟನಾಶಕಗಳನ್ನು ಸಿಂಪಡಿಸಿದಾಗ ಮಣ್ಣು, ಭಾರ ಲೋಹಗಳನ್ನು ಹೀರಿಕೊಳ್ಳುತ್ತದೆ. ಮಣ್ಣಿನ ಮೂಲಕ ಇವುಗಳು ಬೆಳೆಯಲ್ಲಿ ಸೇರಿಕೊಳ್ಳುತ್ತವೆ. ದೆಹಲಿ, ವಾರಣಾಸಿ, ಬೆಂಗಳೂರು, ಹೈದರಾಬಾದ್, ಕೊಯಂಬತೂರ್, ಕೊಲ್ಕತ್ತ, ಅಹಮದಾಬಾದ್, ಆಗ್ರಾ, ಲುಧಿಯಾನ, ಭೋಪಾಲ್ ಮುಂತಾದ ನಗರಗಳ ಸುತ್ತಮುತ್ತ ಬೆಳೆಯುವ ತರಕಾರಿಗಳು ಅದರಲ್ಲೂ ಸೊಪ್ಪುಗಳಾದ ದಂಟು ಮತ್ತು ಪಾಲಕ್‌ಗಳಲ್ಲಿ ಭಾರಲೋಹಗಳ ಅಂಶ ಹೆಚ್ಚಾಗಿರುವುದು ಕಂಡು ಬಂದಿದೆ.

ಮಣ್ಣಿನ ಮೇಲೆ ಬೀರುವ ಪರಿಣಾಮ:

ಮಣ್ಣಿನಲ್ಲಿ ಭಾರಲೋಹಗಳು ಸೇರಿಕೊಳ್ಳುವುದರಿಂದ ಮಣ್ಣಿನ ಮೇಲೆ ಸಾಕಷ್ಟು ಪರಿಣಾಮಗಳಾಗುತ್ತವೆ. ಮಣ್ಣಿನಲ್ಲಿರುವ ಪೋಷಕಂಶಗಳು ಕರಗಲು ಮತ್ತು ಗಿಡಗಳು ಆ ಪೋಷಕಾಂಶಗಳನ್ನು ತೆಗೆದುಕೊಳ್ಳಲು ಇವು ತೊಂದರೆ ಉಂಟು ಮಾಡುತ್ತವೆ. ಮಣ್ಣಿನಲ್ಲಿ ಸೂಕ್ಷ್ಮಜೀವಿಗಳ ಸಂಖ್ಯೆ ಕಡಿಮೆಯಾಗಿ ಜೈವಿಕ ಕ್ರಿಯೆಗಳು ನಡೆಯುವುದಿಲ್ಲ. ಇದರಿಂದ ಒಟ್ಟಾರೆಯಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ.

ಗಿಡಗಳ ಮೇಲೆ ಬೀರುವ ಪರಿಣಾಮ:

ಭಾರಲೋಹಗಳು ಗಿಡಗಳ ಒಳಗೆ ಸೇರಿಕೊಳ್ಳುವುದರಿಂದ ಗಿಡದ ಬೆಳವಣಿಗೆಯಲ್ಲಿ ಕುಂಠಿತ ಕಂಡುಬರುತ್ತದೆ. ರೆಂಬೆಗಳು, ಎಲೆಗಳ ಪ್ರಮಾಣ ಕಡಿಮೆ ಇರುತ್ತದೆ. ಎಲೆಯ ಬಣ್ಣ ಹಳದಿಯಾಗುತ್ತದೆ. ಎಲೆಗಳಲ್ಲಿ ರಂಧ್ರ ಉಂಟಾಗುತ್ತದೆ. ಜೊತೆಯಲ್ಲೇ ಭಾರಲೋಹಗಳು ತರಕಾರಿಗಳಲ್ಲಿ ಶೇಖರವಾಗಿ ತರಕಾರಿಯನ್ನು ವಿಷಯುಕ್ತಗೊಳಿಸುತ್ತವೆ. ಭಾರಲೋಹಗಳು ಗಿಡದಲ್ಲಿ ಕಿಣ್ವಗಳ ಉತ್ಪಾದನೆಯಲ್ಲಿ ವ್ಯತ್ಯಯ ಉಂಟುಮಾಡುತ್ತವೆ. ಜೊತೆಯಲ್ಲೇ ಎಲೆಗಳಲ್ಲಿ ನಡೆಯುವ ದ್ಯುತಿ ಸಂಶ್ಲೇಷಣೆ ಕ್ರಿಯೆಯ ಪ್ರಮಾಣವನ್ನು ಕಡಿಮೆ ಮಾಡಿ ಒಟ್ಟಾರೆಯಾಗಿ ಗಿಡದ ಬೆಳವಣಿಗೆ ಮತ್ತು ಇಳುವರಿ ಮೇಲೆ ಪರಿಣಾಮ ಉಂಟು ಮಾಡುತ್ತವೆ.

ಮನುಷ್ಯರ ಮೇಲಾಗುವ ಪರಿಣಾಮಗಳು:

ಭಾರಲೋಹಗಳಿರುವ ತರಕಾರಿ ಮತ್ತು ಸೊಪ್ಪನ್ನು ತಿನ್ನುವುದರಿಂದ ಪ್ರಾರಂಭಿಕ ಹಂತದಲ್ಲಿ ತಲೆನೋವು, ಸ್ನಾಯು ಸೆಳೆತ, ವಾಕರಿಕೆ ಮುಂತಾದ ಲಕ್ಷಣಗಳು ಕಂಡು ಬರುತ್ತದೆ. ದೀರ್ಘಾವಧಿಯಲ್ಲಿ ಕಾನ್ಸರ್, ಮೂತ್ರಪಿಂಡದ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆಗಳು, ನರಮಂಡಲ ದೌರ್ಬಲ್ಯ ಮುಂತಾದ ರೋಗಗಳು ಬರುತ್ತವೆ. ಈ ಭಾರಲೋಹಗಳು ಮನುಷ್ಯರ ದೇಹಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಅವಶ್ಯಕತೆ ಇದ್ದರೂ ಸಹ ಅತಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಈ ಸಮಸ್ಯೆಗಳು ಕಂಡುಬರುತ್ತವೆ. ಮುಖ್ಯವಾಗಿ ಕ್ಯಾಡ್ಮಿಯಂ ಪ್ರಮಾಣ ಹೆಚ್ಚಾದರೆ ವಾಕರಿಕೆ, ವಾಂತಿ, ಹೊಟ್ಟೆನೋವು ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಂತರ ಮೂತ್ರಪಿಂಡದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ನ್ಯೂನತೆಗಳು:

ನಿರಂತರವಾಗಿ ಸೀಸದೊಂದಿಗೆ ಸಂಪರ್ಕ ಹೊಂದುವುದರಿಂದ ಮಕ್ಕಳು ಕೆಲವೊಂದು ನ್ಯೂನತೆಗಳೊಂದಿಗೆ ಹುಟ್ಟುತ್ತಾರೆ. ಜೊತೆಯಲ್ಲೇ ಮೆದುಳಿನ ನಿಷ್ಕಿçಯತೆ, ಅತೀ ಚಟುವಟಿಕೆ, ಕೈಗಳು ನಡುಗುವುದು, ಸ್ನಾಯುಗಳಲ್ಲಿ ದೌರ್ಬಲ್ಯ ಕಂಡು ಬರುತ್ತದೆ. ಮಕ್ಕಳು ಸೀಸದ ಸಂಪರ್ಕಕ್ಕೆ ಬಂದಾಗ ಅದು ಅವರ ಮೇಲೆ ಬೇಗ ಪರಿಣಾಮ ಬೀರುತ್ತದೆ. ಅಂತಹ ಮಕ್ಕಳ ಬೌದ್ಧಿಕ ಮಟ್ಟದಲ್ಲಿ ಕುಂಠಿತ ಕಂಡು ಬರುತ್ತದೆ. ಕ್ರೋಮಿಯಂ ಲೋಹ ಕ್ಯಾನ್ಯರ್‌ಕಾರಕ ಗುಣವನ್ನು ಹೊಂದಿದೆ. ಅತೀ ಹೆಚ್ಚಿನ ಪ್ರಮಾನದಲ್ಲಿ ಕ್ರೋಮಿಯಂ ಲೋಹ ದೇಹ ಸೇರಿದರೆ ಮೂತ್ರಪಿಂಡ ಮತ್ತು ಪಿತ್ತಜನಕಾಂಗಕ್ಕೆ ಹಾನಿಯಾಗುತ್ತದೆ.

ಅಲರ್ಜಿ – ತುರಿಕೆ

ನಿಕ್ಕಲ್ ಲೋಹ ದೇಹದ ಸಂಪರ್ಕಕ್ಕೆ ಬಂದರೆ ಚರ್ಮದ ಅಲರ್ಜಿ ಮತ್ತು ತುರಿಕೆ ಉಂಟಾಗುತ್ತದೆ. ಪಾದರಸ ಮುಖ್ಯವಾಗಿ ಮೆದುಳು ಮತ್ತು ಮೂತ್ರಪಿಂಡವನ್ನು ಹೆಚ್ಚಾಗಿ ಹಾನಿ ಮಾಡುತ್ತದೆ. ಪಾದರಸದ ಅಂಶ ದೇಹದಲ್ಲಿ ಹೆಚ್ಚಾದರೆ ಮರೆವು, ಆತಂಕ, ಭಾವನೆಗಳ ಮೇಲೆ ನಿಯಂತ್ರಣವಿಲ್ಲದಿರುವುದು, ನಿಶ್ಯಕ್ತಿ, ಮೂತ್ರಪಿಂಡದ ಹಾನಿಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ನರಮಂಡಲದ ಮೇಲೆ ಪರಿಣಾಮ:

ಕ್ರೋಮಿಯಂ ಮೂತ್ರಪಿಂಡ ಮತ್ತು ನರಮಂಡಲದ ಮೇಲೆ ನಾಶ್ವತವಾದ ಪರಿಣಾಮವನ್ನು ಬೀರುತ್ತವೆ. ಆರ್ಸೆನಿಕ್ ವಿಷದಿಂದ ಕೈ ಮತ್ತು ಪಾದದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ದೇಹದ ಕೆಲವೊಂದು ಭಾಗಗಳಲ್ಲಿ ಚರ್ಮ ಹೆಚ್ಚು ಕಪ್ಪಾಗುತ್ತದೆ. ಜಿಂಕ್ ದೇಹಕ್ಕೆ ಅವಶ್ಯಕ ಅದರ ಪ್ರಮಾಣ ಕಡಿಮೆಯಾದರೂ ದೇಹದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹೆಚ್ಚಾದಾಗ ಗಂಟಲು ಒಣಗುವುದು, ನಾಲಗೆ ಸಂವೇದನೆ ಕಳೆದುಕೊಂಡು ಎಲ್ಲ ಪದಾರ್ಥಗಳೂ ಸಿಹಿ ರುಚಿ ಕೊಡುವುದು, ಕೆಮ್ಮು, ನಿಶ್ಯಕ್ತಿ, ಅತೀ ಚಳಿಯ ಅನುಭವ, ಜ್ವರ ಮತ್ತು ವಾಂತಿಯಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಭಾರ ಲೋಹದ ಅಂಶಗಳನ್ನು ಕಡಿಮೆ ಮಾಡುವ ತಂತ್ರಗಳು

ಭಾರಲೋಹದ ಅಂಶಗಳನ್ನು ಮಣ್ಣಿನಲ್ಲಿ ಕಡಿಮೆ ಮಾಡಲು 2 ಮುಖ್ಯವಿಧಾನಗಳನ್ನು ಅನುಸರಿಸಲಾಗುತ್ತದೆ. ಮೊದಲನೆಯದು ಜಮೀನಿನಲ್ಲೇ ಅನುಸರಿಸುವ ಕ್ರಮಗಳು, ಮತ್ತೊಂದು ಜಮೀನಿನ ಮಣ್ಣು ತೆಗೆದು ಹೊರಗೆ ಮಣ್ಣನ್ನು ಶುದ್ಧಗೊಳಿಸುವುದು. ಜಮೀನಿನಿಂದ ಮಣ್ಣು ತೆಗೆದು ಹೊರಗೆ ಅದನ್ನು ಶುದ್ಧಗೊಳಿಸುವುದು ಹೆಚ್ಚು ವೆಚ್ಚದಾಯಕ, ಹಾಗಾಗಿ ಜಮೀನಿನಲ್ಲೇ ಮಣ್ಣಿನಲ್ಲಿರುವ ಭಾರಲೋಹಗಳ ಸಾಂದ್ರತೆಯನ್ನು ಕಡಿಮೆ ಮಾಡುವುದು ಸುಲಭ.

• ಭಾರ ಲೋಹ ಹೆಚ್ಚಾಗಿರುವ ಜಮೀನಿನನ್ನು ಆದಷ್ಟೂ ಆಳ ಉಳುಮೆ ಮಾಡಬೇಕು. ಆ ಮೂಲಕ ಭಾರ ಲೋಹ ಮಣ್ಣಿನೊಂದಿಗೆ ಬೆರೆತು ಭಾರ ಲೋಹದ ಪ್ರಮಾನ ಕಡಿಮೆಯಾಗುತ್ತದೆ.
• ಹೊರಗಿನಿಂದ ಉತ್ತಮವಾದ ಮಣ್ಣನ್ನು ತಂದು ಜಮೀನಿಗೆ ಹಾಕುವ ಮೂಲಕ ಭಾರ ಲೋಹದ ಪ್ರಮಾಣವನ್ನು ಕಡಿಮೆ ಮಾಡಬಹುದು.
• ಮಣ್ಣಿಗೆ ಸುಣ್ಣವನ್ನು ಸೇರಿಸಿ ಮಣ್ಣಿನ ರಸಸಾರವನ್ನು ಹೆಚ್ಚಿಸುವ ಮೂಲಕ ಭಾರಲೋಹಗಳು ಮಣ್ಣಿನಲ್ಲಿ ಕರಗುವ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ಕ್ಯಾಡ್ಮಿಯಂ, ಜಿಂಕ್, ನಿಕ್ಕಲ್, ಪಾದರಸದಂತಹ ಭಾರಲೋಹಗಳು ಬೇಗ ಕರಗುವುದಿಲ್ಲ.
• ಮಣ್ಣಿಗೆ ಸುಣ್ಣ, ಫಾಸ್ಫೇಟ್, ಸಾವಯವ ಪದಾರ್ಥಗಳನ್ನು ಹೆಚ್ಚಾಗಿ ಸೇರಿಸುವುದರಿಂದ ಅವು ಭಾರ ಲೋಹಗಳನ್ನು ಗಿಡ ಹೀರಿಕೊಳ್ಳದಂತೆ ತಡೆಯುತ್ತವೆ.
• ಹೈಡ್ರಸ್ ಮ್ಯಾಂಗನೀಸ್ ಆಕ್ಸೆöಡ್‌ನ್ನು ಮಣ್ಣಿಗೆ ಸೇರಿಸುವುದರಿಂದ ಕ್ಯಾಡ್ಮಿಯಂ ಮತ್ತು ಸೀಸದಿಂದ ಮಣ್ಣು ಕಲುಷಿತವಾಗುವುದನ್ನು ತಡೆಯುತ್ತದೆ ಮತ್ತು ಈ ಲೋಹಗಳನ್ನು ಗಿಡಗಳು ಹೀರಿಕೊಳ್ಳದಂತೆ ತಡೆಯುತ್ತದೆ.
• ಸೂಕ್ಷ್ಮಜೀವಿಗಳ ಜೈವಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಮಣ್ಣಿನಲ್ಲಿರುವ ಭಾರಲೋಹಗಳನ್ನು ಕಡಿಮೆ ಮಾಡಬಹುದು. ಆದರೆ ದೊಡ್ಡ ಪ್ರಮಾಣದಲ್ಲಿ ಇನ್ನೂ ಈ ತಂತ್ರಜ್ಞಾನ ಬಳಕೆಗೆ ಬಂದಿಲ್ಲ.
• ಕೆಲವೊಂದು ಗಿಡ ಮರಗಳು ಭೂಮಿಯಲ್ಲಿರುವ ಕಲ್ಮಷಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಂಡು ಮಣ್ಣನ್ನು ಶುದ್ದಗೊಳಿಸುತ್ತವೆ. ಇಂತಹ ಗಿಡ ಮರಗಳನ್ನು ಉಪಯೋಗಿಸಿ ಮಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ಭಾರ ಲೋಹಗಳನ್ನು ತೆಗೆಯಬಹುದು. ಆದರೆ ಈ ವಿಧಾನ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಹೆಚ್ಚು ಪ್ರಸಿದ್ಧವಾಗಿಲ್ಲ.
• ಭಾರಲೋಹಗಳನ್ನು ಎಲ್ಲ ವಿಧದ ಗಿಡಗಳು ಒಂದೇ ಪ್ರಮಾಣದಲ್ಲಿ ಹೀರಿಕೊಳ್ಳುವುದಿಲ್ಲ. ಗಿಡದಿಂದ ಗಿಡಕ್ಕೆ ಪ್ರಭೇದದಿಂದ ಪ್ರಭೇದಕ್ಕೆ ಇದರಲ್ಲಿ ವ್ಯತ್ಯಾಸ ಇರುತ್ತದೆ. ಭಾರಲೋಹಗಳು ಸಾಮಾನ್ಯವಾಗಿ ಗಿಡದ ಪ್ರಮುಖ ಭಾಗವಾದ ಎಲೆಗಳಲ್ಲಿ ಶೇಖರವಾಗುತ್ತದೆ. ಹಣ್ಣು ಮತ್ತು ಬೇರಿನ ಭಾಗದಲ್ಲಿ ಆದಷ್ಟೂ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಹಾಗಾಗಿ ಸೊಪ್ಪುಗಳಲ್ಲಿ ಭಾರ ಲೋಹದ ಹೀರುವಿಕೆಯ ಪ್ರಮಾಣ ಹೆಚ್ಚು. ಸೊಪ್ಪುಗಳನ್ನು ಹೊರತು ಪಡಿಸಿ ಬೇರೆ ಬೆಳೆಗಳನ್ನು ಬೆಳೆಯುವುದರಿಂದ ಭಾರಲೋಹಗಳಿಂದ ಆಹಾರ ಕಲುಷಿತವಾಗುವುದನ್ನು ತಡೆಯಬಹುದು.
• ಭಾರ ಲೋಹಗಳನ್ನು ಕಡಿಮೆ ಪ್ರಮಾಣದಲ್ಲಿ ಹೀರಿಕೊಳ್ಳುವ ಬೆಳೆಗಳನ್ನು ಮಾತ್ರ ಬೆಳೆಯಬೇಕು.
• ಜಮೀನಿನಲ್ಲಿನ ಮಣ್ಣು ಮತ್ತು ನೀರನ್ನು ಆಗಾಗ್ಗೆ ಪರೀಕ್ಷೆ ಮಾಡಿಸುತ್ತಿರಬೇಕು.
• ಕೃಷಿ ಜಮೀನಿಗೂ ಮತ್ತು ಮುಖ್ಯ ರಸ್ತೆಗೂ ಸ್ವಲ್ಪ ಅಂತರ ಇದ್ದರೆ ಸೀಸದ ಪ್ರಮಾಣ ಜಮೀನಿನಲ್ಲಿ ಹೆಚ್ಚಾಗುವುದನ್ನು ತಡೆಯಬಹುದು.

LEAVE A REPLY

Please enter your comment!
Please enter your name here