ಒಳನಾಡು ಮೀನು ಸಾಕಾಣಿಕೆಯಲ್ಲಿ ಭಾರತೀಯ ಗೆಂಡೆ ಮೀನುಗಳಾದ ಕಟ್ಲಾ, ರೋಹು, ಮತ್ತು ಮೃಗಾಲ ಪ್ರಮುಖ ಸ್ಥಾನವನ್ನು ಪಡೆದಿರುತ್ತದೆ. ಹಾಗೆಯೇ ವಿದೇಶಿ ಗೆಂಡೆ ಮೀನುಗಳಾದ ಸಾಮಾನ್ಯಗೆಂಡೆ, ಹುಲ್ಲುಗೆಂಡೆ, ಮತ್ತು ಬೆಳ್ಳಿ ಗೆಂಡೆಗಳು ನಂತರದ ಸ್ಥಾನವನ್ನು ಪಡೆಯುತ್ತವೆ. ಈ ಮೀನುಗಳು ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿಯನ್ನು ನೀಡುತ್ತವೆ, ಇವುಗಳು ಕೃತಕ ಆಹಾರಕ್ಕೆ ಹೊಂದಿಕೊಂಡು ರೋಗನಿರೋಧಕ ಶಕ್ತಿ ಹೊಂದಿರುತ್ತವೆ.
ಹೆಕ್ಟೇರಿಗೆ 8,000 ರಿಂದ 10,000
ಮೀನು ಸಾಕಾಣಿಕೆ ಕೊಳಗಳನ್ನು ಸಜ್ಜುಗೊಳಿಸಿದ ನಂತರ, ಸುಮಾರು 8 ರಿಂದ 15 ಸೆಂ.ಮೀ ಅಳತೆಯುಳ್ಳ ಅಂದಾಜು ಬೆರಳಿನ ಗಾತ್ರದ ಮೀನು ಮರಿಗಳನ್ನು ಹೆಕ್ಟೇರಿಗೆ 8,000 ರಿಂದ 10,000 ವರೆಗೆ ಬಿತ್ತನೆ ಮಾಡುಬಹುದು.
ಕಾಟ್ಲಾ
ಪ್ರಮುಖ ಮೀನು ತಳಿಗಳಾದ ಕಾಟ್ಲಾ- ಕಾಟ್ಲಾ ಮೀನು ಅತಿ ಶೀಘ್ರವಾಗಿ ಬೆಳೆಯುವ ಗೆಂಡೆ ಮೀನು ಆಗಿದ್ದು, ದಪ್ಪ ತಲೆ, ಬೆಳ್ಳಿ – ಕಪ್ಪು ಬಣ್ಣ ಹೊಂದಿದ್ದು, ದೊಡ್ಡ ಮೇಲ್ಮುಖ ಬಾಯಿ ಇರುತ್ತದೆ. ಇದು ಕೊಳದ ನೀರಿನ ಮೇಲ್ಭಾಗದಲ್ಲಿರುವ ಜಲ ಸೂಕ್ಷ್ಮಾಣು ಜೀವಿಗಳನ್ನು ತಿಂದು ಬೆಳೆಯುತ್ತದೆ. ಕೆರೆಗಳಲ್ಲಿ ಹಾಗೂ ಕೊಳಗಳಲ್ಲಿ ಈ ಮೀನು ಮರಿಯನ್ನು ಉತ್ಪಾದನೆ ಮಾಡುವುದಿಲ್ಲ ಹಾಗಾಗಿ ಮೀನು ಮರಿ ಕೇಂದ್ರದಲ್ಲಿ ಪ್ರಚೋದನೆ ಮೂಲಕ ಮೀನು ಮರಿ ಉತ್ಪಾದನೆ ಮಾಡುವುದು ಸೂಕ್ತವಾಗಿರುತ್ತದೆ. ಈ ಮೀನುಗಳು ಜೂನ್-ಸಪ್ಟೆಂಬರ್ ತಿಂಗಳವರೆಗೆ ಮಾತ್ರ ಮೊಟ್ಟೆಯಿಡುವ ಸಾಮರ್ಥ್ಯವಿರುತ್ತದೆ. ಇದು ವರ್ಷಕ್ಕೆ 1 ರಿಂದ 1.5 ಕೆ.ಜಿ ತೂಕದವರೆಗೂ ಬೆಳೆಯುತ್ತದೆ.
ರೋಹು
ರೋಹು ಮೀನು ಸಣ್ಣ ತಲೆ, ಉದ್ದದ ದೇಹ ಹೊಂದಿದ್ದು ಹಸಿರು ಮಿಶ್ರಿತ ಹೊನ್ನು ಬಣ್ಣವಿರುತ್ತದೆ. ದೇಹವು ಮಾಸಲು ಬಣ್ಣದಿಂದ ಕೂಡಿದ್ದು ರೆಕ್ಕೆಗಳು ಕಂದು ಬಣ್ಣವನ್ನು ಹೊಂದಿರುತ್ತದೆ ಹಾಗೂ ಕೆಳತುಟಿ ಒರಟಾಗಿರುತ್ತದೆ. ಕೊಳದ ಮಧ್ಯಭಾಗದಲ್ಲಿ ಲಭ್ಯವಿರುವ ಆಹಾರ, ಪಾಚಿ, ಕೊಳಕು ಪದಾರ್ಥಗಳನ್ನು ತಿಂದು ಬದುಕುತ್ತದೆ. ಈ ಮೀನು ಪ್ರಚೋದಿಸಿ ಮೀನು ಮರಿಗಳನ್ನು ಉತ್ಪತ್ತಿ ಮಾಡುವುದರಿಂದ ಜೂನ್-ಸಪ್ಟೆಂಬರ್ ತಿಂಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಇದು ವರ್ಷಕ್ಕೆ ಸರಾಸರಿ 750 ಗ್ರಾಂ ನಿಂದ 1 ಕೆ.ಜಿ ತೂಕದ ವರೆಗೂ ಬೆಳೆಯುತ್ತದೆ.
ಮೃಗಾಲ
ಈ ಜಾತಿಯ ಮೀನುಗಳು ನಿಧಾನ ಬೇಳವಣಿಗೆ ಹೊಂದಿದ್ದು ಬೆಳ್ಳಿ ಮಿಶ್ರಿತ ಕಪ್ಪು ಬಣ್ಣ, ಕೊಳವೆಯಾಕಾರದ ಉದ್ದದ ದೇಹ ವಿರುತ್ತದೆ. ಕೊಳದ ತಳಭಾಗದಲ್ಲಿ ವಾಸಿಸುವುದರಿಂದ ಅಲ್ಲಿ ದೊರೆಯುವ ಕೊಳೆತ ಎಲೆ ಹಾಗೂ ಇತರೆ ಪ್ರಾಣಿ ಜನ್ಯ ಆಹಾರವನ್ನು ಉಪಯೋಗಿಸಿಕೊಂಡು ಜೀವಿಸುತ್ತದೆ. ಈ ಮೀನಗಳು ಪ್ರಚೋದಿಸಿ ಮರಿಗಳನ್ನು ಉತ್ಪಾದನೆ ಮಾಡಬಹುದು. ಸಾಮಾನ್ಯವಾಗಿ ಜೂನ್-ಸಪ್ಟೆಂಬರ್ ತಿಂಗಳಲ್ಲಿ ಮಾತ್ರ ಮೀನು ಮರಿ ಮಾಡುವ ಸಾಮರ್ಥ್ಯವಿರುತ್ತದೆ. ಇದು ಸಹ ಸರಾಸರಿ 750 ಗ್ರಾಂ ನಿಂದ 1 ಕೆ.ಜಿ ತೂಕದವರೆಗೆ ಬೆಳೆಯುತ್ತದೆ.
ಸಾಮಾನ್ಯಗೆಂಡೆ
ವಿದೇಶಿ ತಳಿ, ಹಳದಿ ಮಿಶ್ರಿತ ಹೊನ್ನು ಬಣ್ಣ, ಅಗಲ ದೇಹ, ವರ್ಷಪೂರ್ತಿ ಸಂತಾನೋತ್ಪತ್ತಿ ಹೊಂದಿದ್ದು. ಕೊಳದ ತಳಭಾಗದಲ್ಲಿ ವಾಸಿಸುತ್ತದೆ ಹಾಗೂ ತಳಭಾಗದಲ್ಲಿ ದೊರೆಯುವ ಪ್ರಾಣಿಜನ್ಯ ಮತ್ತು ಕೊಳೆತ ಪದಾರ್ಥಗಳನ್ನು ತಿಂದು ಬದುಕುತ್ತದೆ.ಈ ಮೀನು ವಾತಾವರಣದಲ್ಲಿ ಉಂಟಾಗುವ ಏರುಪೇರುಗಳಿಗೆ ಸರಿ ಹೊಂದಿಕೊಂಡು ಬೆಳೆಯುವುದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ. ಅನೇಕ ಬಗೆಯ ಜಲ ಸಸ್ಯಗಳನ್ನು ತಿಂದು ಶೀಘ್ರವಾಗಿ ಬೆಳೆಯುವುದರಿಂದ ವರ್ಷಕ್ಕೆ ಸರಾಸರಿ 1 ರಿಂದ 1.5 ಕೆ.ಜಿ ತೂಕ ಬೆಳೆಯುತ್ತದೆ.
ಹುಲ್ಲು ಗೆಂಡೆ
ವಿದೇಶಿ ತಳಿ, ಚಿಕ್ಕತಲೆ, ಉದ್ದದ ದೇಹ, ಹಸೀರು ಮಿಶ್ರಿತ ಹೊನ್ನು ಬಣ್ಣ, ಜಲಸಸ್ಯಗಳು ಮತ್ತು ಹುಲ್ಲು ತಿಂದು ಜೀವಿಸುತ್ತದೆ. ಈ ಮೀನುಗಳನ್ನು ವಿಶೇಷವಾಗಿ ಜಲಸಸ್ಯಗಳು ಹೆಚ್ಚಾಗಿ ಬೆಳೆದಿರುವ ಅಥವಾ ಬೆಳೆಯುವ ಕೆರೆಗಳಲ್ಲಿ ಸಾಕಾಣಿಕೆ ಮಾಡುವುದರಿಂದ ಕೆರೆಯಲ್ಲಿ ಇರುವ ಜಲಸಸ್ಯಗಳನ್ನು ನಿಯಂತ್ರಿಸುವುದಲ್ಲದೆ ಉತ್ತಮ ಇಳುವರಿಯನ್ನು ಪಡೆಯಬಹುದು. ಇದು ವರ್ಷಕ್ಕೆ 2 ರಿಂದ 3 ಕೆ.ಜಿ ತೂಕ ಬೆಳೆಯುತ್ತದೆ.
ಅಮೂರ್
ಹಳದಿ ಮಿಶ್ರಿತ ಹೊನ್ನು ಬಣ್ಣ, ಅಗಲ ಮತ್ತು ಉದ್ದದ ದೇಹ, ಶೀಘ್ರ ಬೆಳವಣಿಗೆ, ನಿಧಾನಗತಿಯಲ್ಲಿ ಲೈಗಿಂಕ ಪ್ರೌಢಾವಸ್ಥೆ, ಹೆಚ್ಚು ರೋಗನಿರೋಧಕ ಶಕ್ತಿ ಹಾಗೂ ಕೃತಕ ಆಹಾರವನ್ನು ಸೇವಿಸುತ್ತದೆ. ಈ ಮೀನು ಯಾವುದೇ ಉಷ್ಣಾಂಶಕ್ಕೆ ಹಾಗೂ ವಾತಾವರಣಕ್ಕೆ ಹೊಂದಿಕೊಂಡು ತಳಭಾಗದಲ್ಲಿ ದೊರೆಯುವ ಸಸ್ಯ ಮತ್ತು ಪ್ರಾಣಿಜನ್ಯ ಪದಾರ್ಥಗಳನ್ನು ತಿಂದು ಜೀವಿಸುತ್ತದೆ. ಇದು ವರ್ಷಕ್ಕೆ 1.5 ರಿಂದ 2 ಕೆ.ಜಿ ಯವರೆಗೆ ಬೆಳೆಯುತ್ತದೆ.
ಉತ್ತಮ ಗುಣಮಟ್ಟದ ರೋಗರಹಿತ ಆರೋಗ್ಯವಂತ ಮೀನು ಮರಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
- ಮೀನು ಮರಿಗಳ ಸ್ನಾಯುಗಳು ಮೆದುವಾಗಿದ್ದು, ಸ್ಪಷ್ಟವಾಗಿ ಕಾಣುವಂತಿರಬೇಕು.
- ಮೀನು ಮರಿಗಳು ಉದ್ದವಾಗಿದ್ದು, ತೆಳುವಾಗಿರಬೇಕು, ಕೊಬ್ಬಿರಬಾರದು, ನೀರಿನ ಉಷ್ಣಾಂಶ ಜಾಸ್ತಿಯಿರುವ ಹೆಚ್ಚು ಔಷಧ (ಆಂಟಿಬ್ಯಾüಟಿಕ್) ಬಳಸುವ ಮೀನು ಮರಿ ಉತ್ಪಾದನಾ ಘಟಕದಲ್ಲಿ ಮರಿಗಳನ್ನು ಖರೀದಿಸದಿರಿ.
- ಮರಿಗಳು ಏಕ ಗಾತ್ರವಾಗಿರಬೇಕು ವಿವಿಧ ಗುಂಪು ಮರಿಗಳನ್ನು ಪಡೆಯದಿರಿ.
- ಮರಿಗಳ ಬಣ್ಣವು ಹೆಚ್ಚು ಕಂದು ಬಣ್ಣ, ಕಂದು ಬಣ್ಣದ ಬೂದುಯಿಂದ, ಅತೀ ಬೂದು ಹೊಂದಿರಬೇಕು. ಮಂದ ಬಣ್ಣ ಅಥವಾ ನಸು ಕೆಂಪಾದ ಮರಿಗಳು ಸೂಕ್ತವಲ್ಲ.
- ನೀರನ್ನು ಸುತ್ತಿಸಿದಾಗ ಬಲವಾದ ಮೀನು ಮರಿಗಳು ನೀರಿನ ಸುತ್ತವಿಕೆಯ ವಿರುದ್ಧ ದಿಕ್ಕಿಗೆ ಚಲಿಸುತ್ತದೆ.
ಮೀನು ತಳಿಗಳ ನಿರ್ವಹಣೆ:
ಮೀನು ತಳಿ ಅಭಿವೃದ್ಧಿಗೊಳಿಸುವಲ್ಲಿ ಪ್ರೌಢಾವಸ್ಥೆ ಮೀನುಗಳ ನಿರ್ವಹಣೆಯು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಪ್ರೌಢ ಮೀನುಗಳ ನಿರ್ವಹಣೆ ಪರಿಣಾಮಕಾರಿಯಾಗದಿದ್ದಲ್ಲಿ ನಕಾರಾತ್ಮಕ ಗುಣಗಳಾದ ಕುಂಠಿತ ಬೆಳವಣಿಗೆ, ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ಫಲಭರಿತತೆಯಲ್ಲಿ ಕುಂಠಿತಗೊಳ್ಳುವುದು ಕಂಡು ಬರುತ್ತದೆ. ಸಾಮಾನ್ಯವಾಗಿ ಒಂದು ಹೆಕ್ಟೇರ್ ವಿಸ್ತೀರ್ಣಕ್ಕೆ 1000 ಕೆ.ಜಿ ಯಿಂದ 3000 ಕೆ.ಜಿವರೆಗೆ ಮೀನು ತಳಿಗಳ ನಿರ್ವಹಣೆ ಮಾಡಬಹುದು. ಈ ರೀತಿ ನಿರ್ವಹಣೆಯಿಂದ ಪ್ರತಿಯೊಂದು ಮೀನುಗಳ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಬಹುದು ಹಾಗೂ ಪ್ರೌಢಾವಸ್ಥೆಯನ್ನು ಸರಿಯಾದ ಸಮಯಕ್ಕೆ ತಲುಪುವಂತೆ ನೋಡಿಕೊಳ್ಳಬಹುದು.
ಮೀನು ತಳಿಗಳ ನಿರ್ವಹಣೆ ಕೊಳದಲ್ಲಿ ಸಾಮಾನ್ಯ ಗೆಂಡೆಯನ್ನು ಹೊರತುಪಡಿಸಿ ಉಳಿದ ಮೀನು ತಳಿಗಳನ್ನು ಒಂದೇ ಕೊಳದಲ್ಲಿ ಬಿಡಬಹುದು, ಏಕೆಂದರೆ ಸಾಮಾನ್ಯ ಗೆಂಡೆಯು ವರ್ಷಾದ್ಯಂತ ಸುಲಭವಾಗಿ ಮರಿ ಮಾಡುತ್ತದೆ. ಅಲ್ಲದೇ ನಿರ್ವಹಣೆ ಕೊಳದಲ್ಲಿ ಇತರೆ ಮೀನುಗಳ ನಿರ್ವಹಣೆಯಲ್ಲಿ ತೊಂದರೆ ಉಂಟುಮಾಡುತ್ತದೆ.
ಲೇಖಕರು: ಡಾ. ವಿಜಯಕುಮಾರ್.ಎಸ್