ಜಗತ್ತಿನ ಶಕ್ತಿಯೇ ಸೂರ್ಯಕಿರಣ. ಇದರ ಕಾಸ್ಮಿಕ್ ಕಿರಣಗಳಿಂದ ಭೂಮಿಯ ಸಕಲ ಜೀವರಾಶಿಗಳೂ ಚೈತನ್ಯ ಪಡೆಯುತ್ತವೆ. ಈ ಕಿರಣಗಳ ಗರಿಷ್ಠ ಪ್ರಯೋಜನ ಪಡೆಯಬೇಕೆಂದರೆ ಇದರ ಸಂಪರ್ಕ ಜಾಸ್ತಿ ಮಾಡಿಕೊಳ್ಳಬೇಕಾಗುತ್ತದೆ. ಕೃಷಿಯಲ್ಲಿ ಇದರ ಸದುಪಯೋಗ ಬಹುಮಹಡಿ ಪದ್ಧತಿಯಿಂದ ದೊರೆಯುತ್ತದೆ. ಎಲ್ಲ ಗಿಡಮರಗಳಿಗೂ ಒಂದೇ ಪ್ರಮಾಣದ ಸೂರ್ಯಶಕ್ತಿ ಅಗತ್ಯ ಇರುವುದಿಲ್ಲ. ಕೆಲವಕ್ಕೆ ಹೆಚ್ಚು; ಕೆಲವಕ್ಕೆ ಕಡಿಮೆ ಬೇಕಾಗುತ್ತದೆ. ಅನಾದಿ ಕಾಲದಿಂದಲೂ ಭಾರತೀಯ ಕೃಷಿಕರು ಇವುಗಳನ್ನೆಲ್ಲ ಅಧ್ಯಯನ ಮಾಡಿ ಬಹುಮಹಡಿ ಕೃಷಿಯನ್ನು ಬಳಕೆಗೆ ತಂದು ಅಭಿವೃದ್ಧಿಪಡಿಸಿದ್ದಾರೆ.

ಈ ಪದ್ಧತಿ ಸಸ್ಯಗಳ ಸಾಂದ್ರತೆ ಹೊಂದಿಕೊಂಡಿರುತ್ತದೆ. ಉದಾಹರಣೆಗೆ ಹೇಳುವುದಾದರೆ ಮಲೆನಾಡಿನಲ್ಲಿ ಬಹಳ ಉತ್ತಮವಾಗಿ ಬರುವಂಥವು ಅಡಿಕೆ, ಬಾಳೆ, ಕರಿಮೆಣಸು, ಏಲಕ್ಕಿ ಮತ್ತು ಕೆಲವು ಔಷಧ ಸಸ್ಯಗಳಾದ ಪಚೋಲಿ, ಹಿಪ್ಪಲಿ ಇತ್ಯಾದಿ. ಬಯಲುಸೀಮೆಯಲ್ಲಿ ಧಾನ್ಯಗಳ ಜೊತೆಗೆ ಹರಳು, ತೋಟಗಾರಿಕೆ ಬೆಳೆಗಳ ಜೊತೆಗೆ ಧಾನ್ಯದ ಬೆಳೆಗಳನ್ನೂ ಬೆಳೆಯಬಹುದು. ಮಿಶ್ರಬೆಳೆ ಎಂದು ನಾವು ಏನು ಕರೆಯುತ್ತೇವೆಯೋ ಅದು ಕೂಡ ಬಹುಮಹಡಿ ಕೃಷಿಪದ್ಧತಿಗೆ ಹೊಂದಿಕೊಂಡಿದೆ ಎಂದು ಕೃಷಿತಜ್ಞ ಡಾ. ವಿ.ಪಿ.ಹೆಗ್ಡೆ ತಿಳಿಸುತ್ತಾರೆ.

ಕಬ್ಬಿನ ಜೊತೆ ದವಸ-ಧಾನ್ಯಗಳನ್ನೂ ಬೆಳೆಯಬಹುದು. ಇದಕ್ಕೆ ಅಂತರ ಹೆಚ್ಚಿಸುವುದು ಅಗತ್ಯ. ಸಾಲಿನಿಂದ ಸಾಲಿಗೆ ಆರು ಅಡಿ ಅಂತರದಲ್ಲಿ ಕಬ್ಬು ಬಿತ್ತನೆ ಮಾಡಿರಬೇಕು. ಹೀಗೆ ಮಾಡಿದಾಗ ಮಧ್ಯದಲ್ಲಿ ದ್ವಿದಳ ಧಾನ್ಯಗಳನ್ನೂ ಬೆಳೆಯಬಹುದು. ಕಬ್ಬಿನ ಬೆಳೆ ಕಟಾವಿಗೆ ಬರುವ ಹಂತದೊಳಗೆ ಕನಿಷ್ಟ ಎರಡು ಭಾರಿ ದ್ವಿದಳ ಧಾನ್ಯಗಳನ್ನು ಕೊಯ್ಲು ಮಾಡಿರಬಹುದು. ಕಬ್ಬಿಗೆ ಗರಿಷ್ಠ ಪ್ರಮಾಣದ ಕಾಸ್ಮಿಕ್ ಕಿರಣಗಳು ಕೂಡ ಲಭ್ಯವಾಗುತ್ತಿರುತ್ತವೆ.

ದ್ವಿದಳ ಧಾನ್ಯಗಳನ್ನು ಬೆಳೆಸುವುದರಿಂದ ಆಗುವ ಪ್ರಯೋಜನ ಏನೆಂದರೆ ಸಾರಜನಕ ಸ್ಥಿರೀಕರಣ ಆಗುತ್ತದೆ. ಇದರಿಂದಾಗಿ ಕಬ್ಬಿಗೆ ಎರಡನೆ ಸಲ ಸಾರಜನಕ ಅಂಶ ಇರುವ ಗೊಬ್ಬರ ನೀಡುವ ಅಗತ್ಯ ಇರುವುದಿಲ್ಲ. ಇದೆಲ್ಲ ಉತ್ತಮ ಅಂಶಗಳು. ಇದನ್ನು ಮಿಶ್ರಬೆಳೆ ಅಥವಾ ಬಹುಮಹಡಿ ಬೆಳೆಯಂತಲೂ ಕರೆಯಬಹುದು

ಪಪ್ಪಾಯಿ, ಸಪೋಟಾ, ಮಾವು, ಸೀಬೆ ಬೆಳೆಗಳ ಮಧ್ಯೆ ಸಹ ಬೇರೆಬೇರೆ ಬೆಳೆಗಳನ್ನು ಬೆಳೆಯಬಹುದು. ಮುಖ್ಯವಾಗಿ ನಾವು ನೋಡಬೇಕಾದ್ದು ಹಲವು ಹಂತಗಳಲ್ಲಿ ಕಾಸ್ಮಿಕ್ ಕಿರಣಗಳ ಪ್ರಯೋಜನ ಪಡೆಯುವುದು ಸಾಧ್ಯ ಆಗದೇ ಇದ್ದಾಗ ಈ ಕಿರಣಗಳು ಗರಿಷ್ಠ ಪ್ರಮಾಣದಲ್ಲಿ ಮಣ್ಣಿಗೆ ನೇರವಾಗಿ ತಾಕುತ್ತವೆ. ಇದರಿಂದ ಇವುಗಳ ಹೆಚ್ಚಿನ ಶಕ್ತಿ ವ್ಯಯವಾಗುತ್ತದೆ. ಇದನ್ನು ತಡೆಗಟ್ಟಲು ಪ್ರಯತ್ನಿಸಬೇಕು. ಎಷ್ಟೇ ಪ್ರಯತ್ನಿಸಿದರೂ ನೂರಕ್ಕೆ ನೂರರಷ್ಟು ತಡೆಯಲು ಆಗುವುದಿಲ್ಲ. ಮಣ್ಣಿಗೂ ಕೂಡ ಸ್ವಲ್ಪ ಪ್ರಮಾಣದಲ್ಲಿ ಈ ಕಿರಣಗಳ ಅಗತ್ಯ ಇರುತ್ತದೆ.

ಬಹುಮಹಡಿ ಕೃಷಿ ಪದ್ಧತಿ ಅನುಸರಿಸಿದ ಸಂದರ್ಭದಲ್ಲಿ ಕಾಸ್ಮೆಟಿಕ್ ಕಿರಣಗಳ ಗರಿಷ್ಠ ಪ್ರಯೋಜನ ಪಡೆಯಲು ಸಾಧ್ಯ ಆಗುತ್ತದೆ. ಏಕಬೆಳೆ ಪದ್ಧತಿ ಅನುಸರಿಸಿದಾಗ ಇದರ ಬಳಕೆ ಸಾಧ್ಯ ಆಗುವುದಿಲ್ಲ. ಪೂರ್ವಾಹ್ನದ ಕಾಸ್ಮಿಕ್ ಕಿರಣಗಳಿಂದ ದೊರೆಯುವ ಪ್ರಯೋಜನ ಸಂಜೆ ಅಥವಾ ಇಳಿಬಿಸಿಲಿನ ಕಿರಣಗಳಿಂದ ದೊರೆಯುವುದಿಲ್ಲ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಡಾ. ವಿ.ಪಿ.ಹೆಗ್ದೆ, ದೂ: 08170 217403

LEAVE A REPLY

Please enter your comment!
Please enter your name here