ಜಾಲಿಮರ ತೆಗೆದು ಮಿಯಾವಾಕಿ ಮಾದರಿ ಕಿರು ಅರಣ್ಯ ನಿರ್ಮಾಣ

0
ಲೇಖಕರು: ಮಂಜುನಾಥ್

ಲೇಖನ ಭಾಗ – 1

ರಾಮನಾಥಪುರಂ ಜಿಲ್ಲೆಯಲ್ಲಿ  ಜಿಲ್ಲಾಡಳಿತ ಗ್ರಾಮ ಪಂಚಾಯಿತಿ ಮತ್ತು ಸಮುದಾಯದ ಸಹಯೋಗದಲ್ಲಿ ಬಳ್ಳಾರಿ MGNREGA/ ಉದ್ಯೋಗ ಖಾತ್ರಿ ಯೋಜನೆ ಬಳಸಿ ಜಾಲಿ/ಸೀಮೆ ಜಾಲಿ/ಸೀಮೈ ಕರುವೇಲಂ prosopis Juliflora ಮರಗಳನ್ನು ತೆಗೆದು ಆ ಜಾಗದಲ್ಲಿ ವೈವಿಧ್ಯ 25 ಸ್ಥಳೀಯ ಮರ ಆಧಾರಿತ ಮಿಯಾವಾಕಿ ಮಾದರಿ “ಕಿರು ಅರಣ್ಯ” ನಿರ್ಮಾಣ ಮಾಡಿರುವ ಕುರಿತು ಒಂದು ನೋಟ

ರಾಮನಾಥಪುರಕ್ಕೆ ಸೀಮೈ ಕರುವೇಲಂನ ಇತಿಹಾಸ:

ಬಳ್ಳಾರಿ ಜಾಲಿ/ ಸೀಮೈ ಕರುವೇಲಂ ಹೀಗೆ ಸ್ಥಳೀಯವಾಗಿ ಬೇರೇ ಬೇರೇ ಹೆಸರುಗಳಿಂದ ಕರೆಯಲಾಗುವ “Prosopis juliflora” ರಾಮನಾಥಪುರಂಗೆ ಬಂದಿದ್ದು ಹೇಗೆಂದು ಅಲ್ಲಿನ ಸ್ಥಳೀಯ ರೈತರೊಂದಿಗೆ ನಡೆದ ಮಾತುಕತೆಯಲ್ಲಿ ಕೇಳಿದೆವು. “1960ರ ಆಸುಪಾಸಿನಲ್ಲಿ ಸ್ಥಳೀಯವಾಗಿ ಅಡುಗೆ ಮಾಡಲು ಸೇರಿದಂತೆ ಗೃಹ ಬಳಕೆಗೆ ಉರುವಲು ಕೊರತೆಯಾದಾಗ ಅದನ್ನು ಮನಗಂಡ ಅಂದಿನ ಮುಖ್ಯಮಂತ್ರಿ ಕಾಮರಾಜನ್ರವರು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಯಾವ ಗಿಡ ಅತೀ ವೇಗವಾಗಿ ಮತ್ತು ಎಲ್ಲ ಹವಾಮಾನ ವೈಪರೀತ್ಯಗಳಲ್ಲೂ ಉಳಿದು ಮರವಾಗಿ ಬೆಳೆಯುತ್ತದೆ ಎನ್ನುವ ಕುರಿತ  ಸಮಾಲೋಚನೆ ನಡೆಸಿದರು. ಇದರ ಪರಿಣಾಮ, ಈ (prosopis juliflora) ಸೀಮೆ ಜಾಲಿಮರದ ಬೀಜಗಳನ್ನು ತರಿಸಿ ಅದನ್ನು ಹೆಲಿಕಾಪ್ಟರ್ನಲ್ಲಿ ರಾಮನಾಥಪುರ ಜಿಲ್ಲೆಯಾದ್ಯಂತ ಬಿತ್ತನೆ ಮಾಡಿದರು. ಅಲ್ಲದೇ  ಸುತ್ತಲ ಜಿಲ್ಲೆಗಳಾದ  ಶಿವಗಂಗೈ, ಮಧುರೈ, ವಿರುಧುನಗರ್, ದಿಂಡುಗಲ್, ಥೇಣಿ, ತಿರುನಲ್ವೇಲಿ, ತೂತುಕುಡಿ, ಮತ್ತು ಕನ್ಯಾಕುಮಾರಿ ಜಿಲ್ಲೆಗಳ ಗೋಮಾಳ, (ಪೋರಂಬೋಕು,) ಕೆರೆ ದಂಡೆಗಳು ಮತ್ತಿತರೇ ಸರ್ಕಾರಿ ಸ್ಥಳಗಳಲ್ಲಿ ಬಿತ್ತನೆ ಮಾಡಲು ಸೂಚನೆ ಕೊಟ್ಟರು” ಎಂಬ ಮಾಹಿತಿ ದೊರೆಯಿತು.

ಈ ಕಾರ್ಯಕ್ರಮ ಅಂದಿನ ಕಾಲಕ್ಕೆ ಉರುವಲು ಸಮಸ್ಯೆಯನ್ನು ಶೀಘ್ರವಾಗಿ ಮತ್ತು ಯಶಸ್ವಿಯಾಗಿ ನೀಗಿಸಿತು. ಆದರೆ ಕ್ರಮೇಣ ಸರ್ಕಾರಿ ಪಡಿತರದಲ್ಲಿ ನೀಡಲಾಗುತ್ತಿದ್ದ ಸೀಮೆ ಎಣ್ಣೆ ಮತ್ತು ಎಲ್ಪಿಜಿಯನ್ನು ಉರುವಲು ಆಗಿ ಬಳಸಲು ಶುರುಮಾಡಿದ ಪರಿಣಾಮ ಸೀಮೆ ಜಾಲಿಯನ್ನು ಉರುವಲಿಗೆ ಬಳಸುವ ಪ್ರಮಾಣ ಗಣನೀಯವಾಗಿ ಕಡಿಮೆಯಾಯಿತು.

ಇದರ ಉರುವಲು ಬಳಸುವ ಕಾರ್ಯ ಕಡಿಮೆಯಾಗಿದ್ದರ ಜೊತೆಗೆ ಇದು  ಅನಾಹುತ-ಆಕ್ರಮಣಕಾರಿ ವೇಗದಲ್ಲಿ  ಎಲ್ಲಡೆಯೂ ವ್ಯಾಪಿಸಿತು. ಇಂದು ಜಾಲಿಮರಗಳು ಇಲ್ಲಿನ  ಸ್ಥಳೀಯ ಸಸ್ಯ ವೈವಿಧ್ಯ-ಪರಿಸರಕ್ಕೆ ದೊಡ್ಡ ಮಟ್ಟದ ಜೈವಿಕ ತೊಂದರೆಯಾಗಿದೆ.

ಮೊದಲಿಗೆ 150-750 ಮಿಮೀ ವಾರ್ಷಿಕ ಮಳೆಯ ಪ್ರದೇಶಗಳಲ್ಲಿ ಈ ಸಸ್ಯ ಕಂಡುಬರುತ್ತಿತ್ತು ಎಂದು FAO ವರದಿ ಮಾಡಿದೆ. “ಆದಾಗ್ಯೂ, ತಮಿಳುನಾಡು ರಾಜ್ಯದ ಕಾವೇರಿ ನದಿಯ ಮುಖಜ ಭೂಮಿಯಲ್ಲಿ ಭತ್ತ ಬೆಳೆಯುವ ಪ್ರದೇಶಗಳಲ್ಲಿ 1500 ಮಿಮೀ ಸರಾಸರಿ ವಾರ್ಷಿಕ ಮಳೆ ಬಿದ್ದಿರುವ ಉದಾಹರಣೆ ಇದೆ. ಅಲ್ಲಿ ಪ್ರವಾಹಗಳು ಸಾಮಾನ್ಯವಾಗಿವೆ.  ಇಂತಹ ಸ್ಥಳಗಳೂ ಇಂದು ಬಳ್ಳಾರಿ ಜಾಲಿ ಬೆಳೆಯುವ ಸ್ಥಳಗಳಾಗಿ ಬದಲಾಗಿವೆ.  ರಾಮನಾಥಪುರಂ ಜಿಲ್ಲೆಯ ಪರಮಕುಡಿ ಬಳಿಯಲ್ಲಿ ಹರಿಯುವ ವೆಂಗೈ ನದಿ  ಪಾತ್ರದುದ್ದಕ್ಕೂಈ ಬಳ್ಳಾರಿ ಜಾಲಿ ಆವರಿಸಿ ಬೆಳೆದಿದೆ.

ಎಂತದ್ದೇ ಹವಾಮಾನ ವೈಪರೀತ್ಯದ ಸಂದರ್ಭದಲ್ಲೂ ಆಳವಾಗಿ ಬೇರೂರಿ ಬೆಳೆಯಬಲ್ಲ ಈ ಗಿಡ ಎಲ್ಲ ಕಡೆ  ಬೆಳೆಯುತ್ತಾ ಸಾಯದ ಕಳೆಯಾಗಿ ಪರಿಣಮಿಸಿದೆ. ಜೊತೆಗೆ ಮೇಕೆಯಂತಹ ಜಾನುವಾರುಗಳು ಇದರ  ಕಾಯಿಗಳನ್ನು ಮೇವಾಗಿ ತಿಂದು ತಮ್ಮ ಹಿಕ್ಕೆಯ ಮೂಲಕ  ಎಲ್ಲಾ ಕಡೆ ಬೀಜ ಪ್ರಸರಣ ಮಾಡುತ್ತವೆ.

ಕೆಲವು ವೈಜ್ನಾನಿಕ ಮಾಹಿತಿಯ ಪ್ರಕಾರ ಒಂದು ಗಿಡದ ಬೇರುಗಳು ಮಣ್ಣು ಸಡಿಲ ಇರುವಲ್ಲಿ ಆಳವಾಗಿ ಹೋಗಿ ದಿನಕ್ಕೆ 40 ಲೀಟರ್ವರೆಗೂ ನೀರನ್ನು ಬಳಸಿಕೊಂಡು ಬೆಳೆಯುತ್ತವೆ.  ಗಟ್ಟಿಯಾದ ಮಣ್ಣಿನ ಪದರ ಇರುವೆಡೆಯಲ್ಲಿ ಅಡ್ಡಡ್ಡವಾಗಿ ಬೆಳೆಯುತ್ತಾ ಬಿದ್ದ ಮಳೆನೀರನ್ನು ಅಂತರ್ಜಲಕ್ಕೆ ಹೋಗದಂತೆ ತಡೆದು ಬಳಸಿಕೊಳ್ಳುತ್ತದೆ, ಈ ಆಕ್ರಮಣಕಾರಿ ಗಿಡ ಇಂದು ಒಂದು ದೊಡ್ಡ ಜೈವಿಕ ತೊಂದರೆಯಾಗಿದೆ.

ಸೀಮೆ ಜಾಲಿ ಗಿಡಗಳು ಹಕ್ಕಿ-ಪಕ್ಷಿಗಳು ವಾಸಕ್ಕೆ ಸೂಕ್ತವಾಗಿದೆ ಇದರ ಕಾಯಿ ಮತ್ತು ಸೊಪ್ಪು ಆಡುಗಳಂತಹ ಪ್ರಾಣಿಗಳಿಗೆ ಮೇವಿನ ಮೂಲವಾಗಿ ಪಶುಸಂಗೋಪನೆಗೆ ಸಹಾಯಕಾರಿಯಾಗಿದ್ದರೂ ತುಂಬ ಜಾಸ್ತಿ / ತುಂಬ ಕಾಲ ಮೇಕೆಯಂತಹ ಪ್ರಾಣಿಗಳು ಇವನ್ನೇ ಆಹಾರವಾಗಿ ತಿಂದರೆ ಅವುಗಳ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದಾಗಿ ಕೆಲವೊಮ್ಮೆ ಸಾವು ಕೂಡ ಬರುತ್ತದೆ ಎನ್ನುವುದು ಸ್ಥಳೀಯ ಜಾನುವಾರ ಸಾಕಾಣೆದಾರರ ಮಾತು.

ಮುಂದುವರಿಯುತ್ತದೆ….

ಮಂಜುನಾಥ್ ಅವರು ಏಟ್ರಿ ಸಂಸ್ಥೆಯ ಹಿರಿಯ ಕಾರ್ಯಕರ್ತರು. ಸಂಸ್ಥೆ ಸಹಭಾಗಿತ್ವದಲ್ಲಿ ನಡೆದ ಮಹತ್ವದ ಪರಿಸರ ಸಂರಕ್ಷಣೆ ಕಾರ್ಯದ ಕುರಿತು ಈ ಲೇಖನ ಬರೆದಿದ್ದಾರೆ.

LEAVE A REPLY

Please enter your comment!
Please enter your name here