ಕೃಷಿ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿಗೆ ಸಚಿವ ಸಂಪುಟ ಅಸ್ತು ಎಂದಿದೆ. ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತಿದ್ದುಪಡಿಗೆ ಒಪ್ಪಿಗೆ ಸೂಚಿಸಲಾಗಿದೆ. ಪ್ರಸ್ತುತ ಕೃಷಿ ಇಲಾಖೆಯಲ್ಲಿ ಕರ್ನಾಟಕ ಕೃಷಿ ಸೇವೆಗಳು (ನೇಮಕಾತಿ) ನಿಯಮಗಳು, 1999 ಜಾರಿಯಲ್ಲಿರುತ್ತದೆ.  ತದನಂತರ, 2014ರಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗಿರುತ್ತದೆ.

ಕಳೆದ 20 ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ಸಮಗ್ರ ಪರಿಷ್ಕರಣೆ ಮಾಡಿರಲಿಲ್ಲ.  ಪ್ರಸ್ತುತ ಅವಧಿಯಲ್ಲಿ ಸಮಗ್ರ ಪರಿಷ್ಕರಣೆ ಮಾಡಿ ಜಾರಿಗೆ ತರಲಾಗಿದೆ.   ಕೃಷಿ ಆಯುಕ್ತರು ಹಾಗೂ ಜಲಾನಯನ ಅಭಿವೃದ್ಧಿ ಆಯುಕ್ತರು ಹುದ್ದೆಗಳನ್ನು ಸೇರಿಸಲಾಗಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಪ್ರಯತ್ನದಿಂದ ನಿಯಮಾವಳಿಗಳಿಗೆ ತಿದ್ದುಪಡಿ ತರುವ ಮೂಲಕ ಇಲಾಖೆಗೆ ಬಲ ತುಂಬಿದಂತಾಗಿದೆ.

ಸಹಾಯಕ ಕೃಷಿ ನಿರ್ದೇಶಕರು ವೃಂದದ ನೇರ ನೇಮಕಾತಿ ಮತ್ತು ಮುಂಬಡ್ತಿ ಅನುಪಾತವನ್ನು 30:70 ಬದಲಾಗಿ 20:80 ರಂತೆ ನಿಗದಿಪಡಿಸಲಾಗಿದೆ. ಸಹಾಯಕ ಕೃಷಿ ನಿರ್ದೇಶಕ, ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ವೃಂದಗಳ ನೇರ ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ತೀರ್ಮಾನಿಸಲಾಗಿದೆ. ಕೃಷಿ ಅಧಿಕಾರಿ ವೃಂದದ ನೇರ ನೇಮಕಾತಿ ಮತ್ತು ಮುಂಬಡ್ತಿ ಅನುಪಾತವನ್ನು 50:50 ರಂತೆ ನಿಗಧಿಪಡಿಸಲಾಗಿದೆ.

 ಶೇಕಡ 50ರಲ್ಲಿ ನೇರ ನೇಮಕಾತಿಯಲ್ಲಿ ಶೇಕಡ 85ರಷ್ಟು ಕೃಷಿ ಪದವೀದರರಿಗೆ, ಶೇಕಡ 15ರಷ್ಟು ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) / ಬಿ.ಟೆಕ್ (ಆಹಾರ ತಂತ್ರಜ್ಞಾನ / ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗಿದೆ.   ಕೃಷಿ ಪದವಿ ಹೊಂದಿಲ್ಲದ ಸಹಾಯಕ ಕೃಷಿ ಅಧಿಕಾರಿಗಳು ಇಲಾಖೆಯಲ್ಲಿ ಕಳೆದ 30-35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಕೃಷಿ ಅಧಿಕಾರಿಯಾಗಿ ಒಂದು ಬಾರಿಗೆ ಮುಂಬಡ್ತಿ ನೀಡಲು ತೀರ್ಮಾನಿಸಲಾಗಿದೆ.

ನಿಯಮಾವಳಿಗೆ ತಿದ್ದುಪಡಿ ತರುವ ಮೂಲಕ ಇಲಾಖೆಯ ಕೆಳಹಂತದ ಅಧಿಕಾರಿಗಳಾದ ಸಹಾಯಕ ಕೃಷಿ ಅಧಿಕಾರಿಗಳನ್ನು ಶೇಕಡ 100ರಷ್ಟು ನೇರ ನೇಮಕಾತಿಯಿಂದ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಆ ಮೂಲಕ ಈ ನೇಮಕಾತಿಯಲ್ಲಿ ಶೇಕಡ 85ರಷ್ಟು ಕೃಷಿ ಪದವೀದರರಿಗೆ, ಶೇಕಡ 15ರಷ್ಟು ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) / ಬಿ.ಟೆಕ್ (ಆಹಾರ ತಂತ್ರಜ್ಞಾನ / ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗಿದೆ.

LEAVE A REPLY

Please enter your comment!
Please enter your name here