ಹುಲಿ ಮತ್ತು ಮಳೆ ಸಂಬಂಧ

0

ಶೀರ್ಷಿಕೆ ನೋಡಿ ಆಶ್ಚರ್ಯವಾಗಿರಬಹುದಲ್ಲವೆ ? ಹುಲಿಗೂ ಮಳೆಗೂ ಏನಪ್ಪಾ ಸಂಬಂಧ ಎಂದು. ಖಂಡಿತ ಸಂಬಂಧವಿದೆ. ಗ್ರಾಮೀಣ ಭಾರತ ಅಚ್ಚರಿಗಳ ತವರೂರು. ನಾಗರಿಕರಿಗೆ ಅಂದರೆ ನಗರ ಪ್ರದೇಶದಲ್ಲಿ ವಾಸಿಸುವವರಿಗೆ ಬೆರಗು ಮೂಡಿಸುವಂಥ ಜನಪದ ನಂಬಿಕೆಗಳು ಅವರಲ್ಲಿವೆ. ಇವು ಇಳೆ-ಮಳೆ-ಗಾಳಿ-ಬೆಂಕಿ ಇವುಗಳೊಂದಿಗೆ ನಿತ್ಯದ ಬದುಕನ್ನು ಬೆಸೆದಿವೆ. ಮಳೆ, ಇಳೆಯ ಜೀವನಾಡಿ. ಅದರಲ್ಲಿಯೂ ಭಾರತೀಯ ಕೃಷಿ ಮುಂಗಾರುಮಳೆಯನ್ನೇ ಅವಲಂಬಿಸಿದೆ. ಯಾವವರ್ಷ ಮಳೆ ಬರುತ್ತದೆ, ಯಾವವರ್ಷ ಮಳೆ ಬರುವುದಿಲ್ಲ. ಯಾವಲಕ್ಷಣಗಳು ಕಂಡರೆ ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂಬುದನ್ನು ಹೇಳುವ ಜ್ಞಾನ ಗ್ರಾಮೀಣರಲ್ಲಿದೆ. ಬರುಬರುತ್ತಾ ಇಂಥ ಜ್ಞಾನ ನಶಿಸುತ್ತಾ ಬಂದಿದೆ. ಇರಲಿ, ಅದು ಬೇರೆಯೇ ವಿಚಾರ. ಅದರ ಬಗ್ಗೆ ಮತ್ತೊಮ್ಮೆ ಚರ್ಚಿಸೋಣ.

ಛಾಯಾಗ್ರಾಹಕರು: ಚಿನ್ನಸ್ವಾಮಿ ವಡ್ಡಗೆರೆ

ಬಂಡೀಪುರ ಕಾಡುಗಳ ಸಮುಚ್ಚಯದಲ್ಲಿ ಹುಲಿಗಳ ಸಂರಕ್ಷಣೆ ಕಾರ್ಯ ನಡೆಯುತ್ತಿದೆ. ಅದರ ಸಲುವಾಗಿಯೇ “ಸೇವ್ ಟೈಗರ್” ಅಭಿಯಾನ ನಡೆಯುತ್ತಿದೆ. ಅದಕ್ಕೂ ಮೊದಲು ಹುಲಿಗಳ ಸಂರಕ್ಷಣೆ ಹೇಗೆ ನಡೆಯುತ್ತಿತ್ತು. ಅದು ಜನಪದ ನಂಬಿಕೆಗಳ ಮೇಲೆಯೇ ಆಧರಿಸಿತ್ತು. ಈ ಪ್ರದೇಶಕ್ಕೆ ಹೊಂದಿಕೊಂಡಂತೆಯೇ ಇರುವ ಗ್ರಾಮದ ನಿವಾಸಿ, ಪತ್ರಕರ್ತ ಮತ್ತು ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ ಅವರು ಮಳೆ ಮತ್ತು ಹುಲಿಯ ರೂಪಕವೊಂದನ್ನು ನಮ್ಮ ಮುಂದಿರಿಸಿದ್ದಾರೆ. ಇದು ಆ ಪ್ರದೇಶದ ಗ್ರಾಮೀಣರ ನಂಬಿಕೆ. ಅವರು ಬರೆದ ವಿವರ ನಿಮ್ಮ ಮುಂದಿದೆ.

ಲೇಖಕರು: ಚಿನ್ನಸ್ವಾಮಿ ವಡ್ಡಗೆರೆ, ಕೃಷಿಕರು-ಪತ್ರಕರ್ತರು

ನಮ್ಮಲ್ಲಿ ಮುಂಗಾರು ಮಳೆ ನಿರೀಕ್ಷೆ ಮಾಡಿದಷ್ಟು ಬರುವುದಿಲ್ಲ. ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ನಿರೀಕ್ಷೆಗಿಂತ ತುಸು ಹೆಚ್ಚು ಮಳೆ ಬರುತ್ತದೆ. ಬಂಡೀಪುರ ಬೆಟ್ಟಸಾಲು ಸೇರುವ ಕಾಡಂಚಿನಲ್ಲಿರುವ ನಮ್ಮದು ಮಳೆ ನೆರಳಿನ ಪ್ರದೇಶ. ಹಾಗಾಗಿ ಹಿಂಗಾರು ಮಳೆ ನಮ್ಮಲ್ಲಿ ಚೆನ್ನಾಗಿ ಆಗುತ್ತದೆ.
ಈ ಬಾರಿ ಜಮೀನಿನ ಆಸುಪಾಸಿನಲ್ಲಿ ಜನರಿಗೆ ಮಲೆ ಮಾದಪ್ಪನ ವಾಹನ ಹುಲಿಯ ದರ್ಶನವಾಗಿದೆ. ಜೊತೆಗೆ ಒಂಟಿ ಸಾರಂಗವೊಂದು ನಮ್ಮ ತೋಟದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದೆ. ಇದೆಲ್ಲ ಎಂಟು ವರ್ಷಗಳ ಬರ ನೀಗುವ ಮುನ್ಸೂಚನೆ ಇರಬಹುದೇ !?. ಇದು ರಮ್ಯ ಕನಸೊಂದರ ಬೆನ್ನುಹತ್ತಿದಂತೆ. ಎಂಟು ವರ್ಷಗಳ ನಂತರ ಈ ಸಲ ನಮ್ಮ ತೋಟದಲ್ಲಿರುವ ನೂರಾರು ಹಣ್ಣಿನ ಗಿಡಗಳು, ತೆಂಗು,ಬಾಳೆ, ಗೇರು, ಜೋಳ, ಅರಿಶಿನ,ಈರುಳ್ಳಿ,ರೇಷ್ಮೆ ಹೀಗೆ ಒಂದಲ್ಲ ಒಂದು ಫಲಬಿಟ್ಟು ಗೊನೆಯಾಗಿ ಮಾಗಿ ಕೈಬೀಸಿ ಕರೆದಂತೆ ಕನಸೊಂದು ಬಿದ್ದ ಹಾಗೆ.ತಕ್ಷಣ ಎಚ್ಚರವಾಗಿ ನಿದ್ದೆ ಬಾರದ ರಾತ್ರಿಗಳು ಸುದೀರ್ಘವಾದಂತೆ ಭಾಸವಾಗುತ್ತಿದೆ.

ಕಳೆದ ಏಳೆಂಟು ವರ್ಷಗಳಲ್ಲಿ ಮಣ್ಣು ನಂಬಿ ಕಳೆದುಕೊಂಡದ್ದು ಅಪಾರ ಹಣ, ಶ್ರಮ, ಸಮಯ ಎಲ್ಲವೂ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ನಾನು ಸೋತರೂ ವಿಶ್ವಾಸ ಕಳೆದುಕೊಳ್ಳದ ಪ್ರಯತ್ನಶೀಲ. ಕಳೆದುಕೊಂಡ ಕಡೆಯೇ ಹುಡುಕುವ ಹುಚ್ಚು ಹಂಬಲ. ಇದಕ್ಕೆಲ್ಲಾ ಕೊನೆಯುಂಟೆ.ಇದು ನಿಜಕ್ಕೂ ‘ಎಂದೆಂದೂ ಮುಗಿಯದ ಕತೆ’

ಈ ಬರೆಹವನ್ನು ಓದಿದ ನನಗೆ “ಅಬ್ಬಾ ಎಂಥಾ ಶಕ್ತಿಶಾಲಿ ರೂಪಕ. ಕೈಯಲ್ಲಿಯೇ ಬೆಣ್ಣೆ ಇಟ್ಟುಕೊಂಡು ಊರೆಲ್ಲ ಅಲೆದ ಹಾಗೆ ಅರಣ್ಯ ಇಲಾಖೆಯವರು ಹುಲಿ ಸಂರಕ್ಷಣೆಗೆ ಇಂಥ ರೂಪಕಗಳನ್ನು ಬಳಸಿಕೊಳ್ಳುತ್ತಿಲ್ಲವಲ್ಲ ಎನಿಸಿತು. ಕೂಡಲೇ ಚಿನ್ನಸ್ವಾಮಿ ವಡ್ಡಗೆರೆ ಅವರಿಗೆ ಪೋನ್ ಮಾಡಿದೆ. ಆಗವರು ತೋಟದಲ್ಲಿಯೇ ಇದ್ದರು. ನನ್ನ ಅಭಿಪ್ರಾಯವನ್ನು ಹಂಚಿಕೊಂಡಾಗ ಅವರಿಗೂ ಅಚ್ಚರಿಯಾಯಿತು. ಈ ನಂತರ ಅವರು ಮೊದಲಿನ ಭಾಗದ ಬರವಣಿಗೆ ಮುಂದುವರಿಸಿದ್ದಾರೆ.

ಹುಲಿವಾನಕ್ಕೆ ನಾನೂ ಹೆಗಲಾಗಿದ್ದೆ: ಚಾಮರಾಜನಗರ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಹುಲಿ ಬೇಟೆ ನಿಷಿದ್ಧ. ನಮ್ಮ ಭಾಗದ ಮಹಾ ದೈವ ಮಲೆಮಾದಪ್ಪನ ವಾಹನ ಹುಲಿ. ಹಾಗಾಗಿ ಮಾದಪ್ಪನ ಮೇಲೆ ಇರುವಷ್ಟೇ ಭಕ್ತಿ, ನಮ್ಮ ಭಾಗದ ಗ್ರಾಮೀಣರಿಗೆ ಹುಲಿಯ ಮೇಲೂ ಇದೆ. ಹುಲಿ ಕೂಡಾ ದೈವವಾಗಿ ಪೂಜೆಗೊಳ್ಳುತ್ತದೆ. ದೇವಸ್ಥಾನಗಳಲ್ಲಿ ಹುಲಿವಾನ ಅಭಿಷೇಕ ಇಂದಿಗೂ ನಡೆಯುತ್ತದೆ. ನಾನೂ ಕೂಡ ಬಾಲ್ಯದಲ್ಲಿ ಗ್ರಾಮದಲ್ಲಿ ನಡೆಯುತ್ತಿದ್ದ ದೇವರ ಮೆರವಣಿಗೆಯಲ್ಲಿ ಹುಲಿವಾನಕ್ಕೆ ಹೆಗಲುಕೊಟ್ಟಿದ್ದೇನೆ.

ಇದೆಲ್ಲ ಯಾಕೆ ನೆನಪಾಯಿತೆಂದರೆ,ಮೊನ್ನೆ ನಮ್ಮೂರಿಗೆ ಮೂರ್ನಾಲ್ಕು ಬಾರಿ ಹುಲಿರಾಯ ದರ್ಶನ ನೀಡಿದ್ದ. ಈ ಬಗ್ಗೆ ನಾನು ಊರಿನವರು ಹೇಳುತ್ತಿದ್ದ “ಊರಿನಲ್ಲಿ ಹುಲಿ ಕಾಣಿಸಿಕೊಂಡರೆ ಮಳೆ ಬೆಳೆ ಚೆನ್ನಾಗಿ ಆಗುತ್ತದಂತೆ” ಎಂಬ ಜನಪದರ ನಂಬಿಕೆಯನ್ನು ಉಲ್ಲೇಖ ಮಾಡಿ ಬರೆದಿದ್ದೆ. ಇದನ್ನು ಓದಿದ Kumara Raitha ರೋಮಾಂಚಿತರಾಗಿ ಕರೆಮಾಡಿ ಮಾತನಾಡಿದರು.
“ನೀವು ಗೊತ್ತಿದ್ದು ಬರೆದಿರೊ ಅಥವಾ ಸಹಜವಾಗಿ ಹಳ್ಳಿಗಾಡಿನ ಮುಗ್ಧತೆ ನಿಮ್ಮಿಂದ ಹಾಗೆ ಬರೆಸಿತೊ ಗೊತ್ತಿಲ್ಲ. ಊರಿನಲ್ಲಿ ಹುಲಿ ಕಾಣಿಸಿಕೊಂಡರೆ ಆ ವರ್ಷ ಚೆನ್ನಾಗಿ ಮಳೆ ಬೆಳೆ ಆಗುತ್ತದೆ ಎಂಬ ಜನಪದ ನಂಬಿಕೆ “ಟೈಗರ್ ಸೇವ್ ಪ್ರಾಜೆಕ್ಟ್ ಗೆ ಅತ್ಯುತ್ತಮ ರೂಪಕದಂತಿದೆ ” ಎಂದು ತುಂಬಾ ಆಶ್ಚರ್ಯ ವ್ಯಕ್ತಪಡಿಸುತ್ತಾ ಖುಷಿ ಪಟ್ಟರು. ನಿಜವಾಗಿಯೂ ಅದನ್ನು ಬರೆಯುವಾಗ ನನಗೆ ಇದು ಟೈಗರ್ ಪ್ರಾಜೆಕ್ಟ್ ಗೆ ಒಳ್ಳೆಯ ರೂಪಕವಾಗಬಹುದು ಅಂತ ಹೊಳೆದಿರಲಿಲ್ಲ. ಅವರು ಹಾಗೆಂದು ಹೇಳಿದಾಗ ನೂರು ಕ್ಯಾಂಡಲ್ ಬಲ್ಪ್ ದಿಗ್ಗನೆ ಹೊತ್ತಿಕೊಂಡ ಅನುಭವವಾಯಿತು.

ನಮ್ಮ ಹೊಲ/ತೋಟದಲ್ಲಿ ಒಂಟಿ ಕೊಂಬಿನ ಸಾರಂಗವೊಂದು ಆಗಾಗ ದರ್ಶನ ಕೊಡುತ್ತಾ ರೇಷ್ಮೆ ಸೊಪ್ಪು ತಿನ್ನುತ್ತಾ ಇರುತ್ತದಂತೆ. ಅದಕ್ಕೆ ನಮ್ಮ ತೋಟದಲ್ಲಿ ಕೆಲಸಮಾಡುವ ಸಹಾಯಕರಿಗೆ ಹೇಳಿದ್ದೆ  “ಯಾವುದೇ ಪ್ರಾಣಿ ಕಾಣಿಸಿಕೊಂಡರು ಅವುಗಳಿಗೆ ತೊಂದರೆ ಕೊಡಬೇಡಿ”. ಏಕೆಂದರೆ ಪ್ರಕೃತಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾದವರು ನಾವು.ಪ್ರಾಣಿಗಳಲ್ಲ. ಸಾರಂಗ, ನವಿಲು, ಮೊಲ, ನೂರೆಂಟು ಪಕ್ಷಿಗಳು ನಮ್ಮ ಸುತ್ತ ಇದ್ದರೆ ಜೀವನದ ಸಂತೋಷವೇ ಬೇರೆ. ಹಸಿರಿನಿಂದ ನಳನಳಿಸುವ ಬದುಕೊಂದು ಸನಿಹದಲ್ಲೇ ಇದೆ ಅನಿಸುತ್ತಿದೆ.

ಛಾಯಾಗ್ರಾಹಕರು: ಚಿನ್ನಸ್ವಾಮಿ ವಡ್ಡಗೆರೆ

ಅಂದಹಾಗೆ  ಏಳೆಂಟು ವರ್ಷಗಳ ಹಿಂದೆ ಬಂಡೀಪುರದಲ್ಲಿ ನಾನೇ ಸೆರೆಯಿಡಿದ ಹುಲಿ ಚಿತ್ರಗಳು ಇಲ್ಲಿವೆ. ಮಡದಿ ಮಕ್ಕಳೊಂದಿಗೆ ಒಂದೇ ಜಾಗದಲ್ಲಿ ಆರು ಹುಲಿಗಳನ್ನು ಕಾಣುವ ಸೌಭಾಗ್ಯ ನಮ್ಮದಾಗಿತ್ತು. ತಂದೆ,ತಾಯಿ ಮತ್ತು ನಾಲ್ಕು ಮರಿ ಹುಲಿಗಳು ಕಡವೆ ಯೊಂದನ್ನು ಕೊಂದು ತಿನ್ನುತ್ತಿದ್ದ ಆ ಕ್ಷಣವನ್ನು  ಎಂದಿಗೂ ಮರೆಯಲಾರೆ. ಮೊದಲ ಸಲ ಆರು ಹುಲಿಗಳನ್ನು ನೋಡಿದಾಗ ಕ್ಯಾಮೆರಾದಲ್ಲಿ ಕ್ಲಿಕ್ಕಿಸುವುದನ್ನು ಮರೆತು ಕೈಕಾಲು ನಡುಕ ಬಂದು ಗಡಗಡ ನಡುಗುತ್ತಿದ್ದೆ. ಕುಮಾರ ರೈತ ಇಂದು ಪೋನ್ ಮಾಡಿದ್ದಾಗ ಆ ಎಲ್ಲ ಘಟನೆಗಳೂ ನೆನಪಾದವು

LEAVE A REPLY

Please enter your comment!
Please enter your name here