ಬರದ ತೀವ್ರತೆ ಹೆಚ್ಚಾಗಲು ಮಳೆ ಹಂಚಿಕೆಯಲ್ಲಿ ವ್ಯತ್ಯಾಸ, ತಾಪಮಾನ ಹೆಚ್ಚಳ ಕಾರಣದಿಂದ ನೀರಿನ ಬೇಡಿಕೆ ಹೆಚ್ಚಾಗಿರುವುದು, ಅಂತರ್ಜಲದ ಕುಸಿತ ಮತ್ತು ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗಿರುವುದು ಪ್ರಮುಖ ಕಾರಣ ಎಂದು ಕೃಷಿವಿಜ್ಞಾನಿ ಡಾ. ಎಂ.ಎನ್.ತಿಮ್ಮೇಗೌಡ ತಿಳಿಸಿದರು.
ಅವರಿಂದು ಬರ ನಿರ್ವಹಣೆ: ಸೂಕ್ತ ಕೃಷಿ ತಂತ್ರಜ್ಞಾನಗಳು ಕುರಿತ ರಾಜ್ಯಮಟ್ಟದ ಆನ್‌ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದನ್ನು ಸಮೇತಿ (ದಕ್ಷಿಣ), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಸಮೇತಿ (ಉತ್ತರ) ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಮತ್ತು ರಾಜ್ಯ ಕೃಷಿ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು.
ಬರ ಪರಿಸ್ಥಿತಿ ನಿರ್ವಹಣೆಗಾಗಿ ಕೃಷಿಕರು ಸೂಕ್ತ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು. ಪ್ರಸ್ತುತ ಮುಂಗಾರಿನಲ್ಲಿ ಬಿತ್ತನೆಯಾಗದ ಪ್ರದೇಶ ಹಾಗೂ ಬಿತ್ತನೆಯಾಗಿ ಬೆಳೆ ನಾಶಗೊಂಡಿರುವ ಭೂಮಿಯಲ್ಲಿ ಪರ್ಯಾಯ ಬೆಳೆಗಳಾದ ಅವರೆ, ಅಲಸಂದೆ, ಹುರುಳಿ, ಸಿರಿಧಾನ್ಯಗಳಾದ ನವಣೆ, ಹಾರಕ, ಸಾಮೆ, ಬರಗು, ಊದಲು, ಎಣ್ಣೆಕಾಳು ಬೆಳೆಗಳಾದ ಸೂರ್ಯಕಾಂತಿ, ಹುಚ್ಚೆಳ್ಳು, ಮೆಣಸಿನಕಾಯಿ ಇತ್ಯಾದಿ ಬೆಳೆಗಳನ್ನು ಸೆಪ್ಟಂಬರ್ ತಿಂಗಳಿನಲ್ಲಿ ಬಿತ್ತಬಹುದು.
ಬೆಳವಣಿಗೆ ಹಂತದಲ್ಲಿರುವ ಬೆಳೆಗಳಲ್ಲಿ ಅಂತರ ಬೇಸಾಯ ಕೈಗೊಂಡು ಬೆಳೆಗಳ ಬೆಳವಣಿಗೆ ಉತ್ತೇಜಿಸಬೇಕು. ಬೆಳೆ ಒಣಗಲು ಪ್ರಾರಂಬಿಸಿದ ಸಂದರ್ಭದಲ್ಲಿ ಶೇ.1ರ ಪೊಟ್ಯಾಷಿಯಂ ಸಿಂಪಡಣೆ ಮಾಡುವುದರಿಂದ ಬರ ನಿರೋಧಕ, ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ತೋಟಗಾರಿಕಾ ಬೆಳೆಗಳಲ್ಲಿ ವೃತ್ತಾಕಾರ ಅಥವಾ ಅರ್ಧವೃತ್ತಾಕಾರದ ಬದು ಹಾಗೂ ಆಳವಾದ ಕಂದಕಗಳನ್ನು ನಿರ್ಮಾಣ ಮಾಡಬೇಕು.
ಕೃಷಿ ಹೊಂಡದಲ್ಲಿ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಅಂತರ ಬೇಸಾಯಕ್ಕೆ ಒತ್ತು ನೀಡುವುದು ಜೊತೆಗೆ ದೋಣಿ ಸಾಲು ನಿರ್ಮಿಸುವುದು. ಬೆಳೆಗಳ ಸಂಖ್ಯೆ ಹೆಚ್ಚಾಗಿದ್ದರೆ ತೆಳುಗೊಳಿಸುವುದು, ಬೆಳೆ ವಿರಳವಾಗಿದ್ದರೆ ಸಸಿಗಳ ಸಂಖ್ಯೆ ಕಾಪಾಡಿಕೊಳ್ಳಲು ತೇವಾಂಶ ನೋಡಿಕೊಂಡು ಬಿತ್ತನೆ / ನಾಟಿ ಮಾಡುವುದು ಅಗತ್ಯ.
ರಾಸುಗಳ ಮೇವಿಗಾಗಿ ಕಡಿಮೆ ಅವಧಿಯ ಹುಲ್ಲಿನ ಬೆಳೆಗಳನ್ನು ಬೆಳೆಯುವುದು. ಬೆಳೆಯೊಂದಿಗೆ ಪೈಪೋಟಿ ನಡೆಸುವ ಕಳೆಗಳನ್ನು ಕಿತ್ತು ಬೆಳೆಹೊದ್ದಿಕೆಯಾಗಿ ಉಪಯೋಗಿಸಬೇಕು. ಬರಗಾಲದ ಪುನರಾವರ್ತನೆಯನ್ನು ತಪ್ಪಿಸಲು ಬದುಗಳ ಮೇಲೆ ಮರಗಳನ್ನು ಬೆಳೆಯಲು ಮುಂದಾಗಬೇಕು. ಸದ್ಯ ಶೇ.16ರಷ್ಟಿರುವ ಕಾಡನ್ನು ಶೇ.33ರಷ್ಟಕ್ಕೆ ಹೆಚ್ಚಿಸುವುದು ಅತ್ಯಗತ್ಯ.
ಪ್ರಸ್ತುತ ಮಣ್ಣಿನಲ್ಲಿ ಶೇ.0.33ರಷ್ಟಿರುವ ಸಾವಯವ ಇಂಗಾಲ ಅಂಶವನ್ನು ಶೇ.0.75ಗೆ ಹೆಚ್ಚಿಸಲು ಮುಂದಾಗುವುದು, ಬಿದ್ದಂತಹ ಮಳೆ ನೀರನ್ನು ಜಮೀನಿನಲ್ಲೇ ಹಿಂಗಿಸಲು ಮಣ್ಣು ಮತ್ತು ನೀರು ಸಂರಕ್ಷಣೆ ಕ್ರಮಗಳನ್ನು ಅನುಸರಿಸುವುದು ಅವಶ್ಯಕವೆಂದು ಅಭಿಪ್ರಾಯಪಟ್ಟರು.
ಕಾರ್ಯಾಗಾರದ ಸಂದರ್ಭದಲ್ಲಿ ಸಮೇತಿ ಮುಖ್ಯಸ್ಥ, ಹಿರಿಯ ಕೃಷಿ ವಿಜ್ಞಾನಿ ಡಾ. ಕೆ. ಶಿವರಾಮು, ಸಹಾಯಕ ಪ್ರಾಧ್ಯಾಪಕ ಮೂರ್ತಿ, ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳು, ಸಿಬ್ಬಂದಿ ಹಾಜರಿದ್ದರು.