ಸಗಣಿ ಬಳಸಿ ಉತ್ತಮ ಇಳುವರಿ ಗಳಿಸಿ

0

“ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಊರೆಲ್ಲ ಅಲೆದರು” ಎಂಬ ಗಾದೆ ಇದೆ. ಕೃಷಿಗೆ ಬೇಕಾದ ಬಹುತೇಕ ಪರಿಕರಗಳು ಗ್ರಾಮೀಣ ಮನೆಯ ಪರಿಸರದಲ್ಲಿಯೇ ಇರುತ್ತವೆ. ಆದರೂ ಹೆಚ್ಚಿನ ರೈತರು ಒಳಸುರಿಗಳಿಗಾಗಿ ಪೇಟೆಯತ್ತಲೇ ಮುಖ ಮಾಡುತ್ತಾರೆ. ಇಂಥ ಪರಿಸ್ಥಿತಿ ತಪ್ಪಬೇಕಾದ ಅವಶ್ಯಕತೆ ಇದೆ.

ಸಾವಯವ ಪೋಷಕಾಂಶ

ಭತ್ತದಲ್ಲಿ ಗಣನೀಯ ಇಳುವರಿಗೆ ಸಾವಯವ ದ್ರವ ಪೋಷಕಾಂಶ ಬಳಸಬಹುದು. ನಾಟಿ ಮಾಡಿದ ಒಂದು ತಿಂಗಳ ನಂತರ ೨೦ ಕೆಜಿ ಸಗಣಿಯನ್ನು ೨೦೦ ಲೀಟರ್‌ ನೀರಿನಲ್ಲಿ ಚೆನ್ನಾಗಿ ಕದಡಬೇಕು. ಅದನ್ನು ಭತ್ತದ ಗದ್ದೆಗೆ ಹಾಯಿಸಬೇಕು. ಈ ಪ್ರಮಾಣದ ಸಗಣಿ ಒಂದು ಎಕರೆಗೆ ಸಾಕಾಗುತ್ತದೆ. ಹೀಗೆ ಮಾಡುವುದರಿಂದ ದ್ರವರೂಪದ ಪೋಷಕಾಂಶ ಮಣ್ಣು ಮತ್ತು ಬೆಳೆಗೆ ಬೇಗನೇ ತಲುಪುತ್ತದೆ ಎಂದು ಕೃಷಿತಜ್ಞ, ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಆರ್.ಜಿ. ಗೊಲ್ಲರ್‌ ಅವರು ಹೇಳುತ್ತಾರೆ.

ಸಿಂಪಡಣೆ

೨೦ ಕೆಜಿ ಸಗಣಿಯನ್ನು ೨೦೦ ಲೀಟರ್‌ ನೀರು ಇರುವ ಡ್ರಮ್ಮಿಗೆ ಬೆರೆಸಿ ಚೆನ್ನಾಗಿ ಕಲಕಬೇಕು. ತದನಂತರ ಅದನ್ನು ಹತ್ತಿಯ ಬಟ್ಟೆಯಲ್ಲಿ ಸೋಸಿಕೊಳ್ಳಬೇಕು. ಬಳಿಕ ಬೆಳಗ್ಗೆ ಹತ್ತು ಗಂಟೆಯೊಳಗೆ ಅದನ್ನು ಬೆಳೆಗಳ ಮೇಲೆ ಸಿಂಪಡಿಸಬೇಕು. ಇದರಿಂದ ಭತ್ತವನ್ನು ಕಾಡುವ ನುಶಿಬಾಧೆ,  ಕೀಟಗಳ ಬಾಧೆಯನ್ನು ತಪ್ಪಿಸಬಹುದು. ಇದರಿಂದ ಸಸ್ಯರೋಗಳ ಬಾಧೆಯೂ ಉಂಟಾಗುವುದಿಲ್ಲ.

ತಂಪು ಹೊತ್ತಿನಲ್ಲಿ ಸಿಂಪಡಣೆ

ಬಿಸಿಲು ಪ್ರಖರವಾಗಿರುವ ಸಮಯದಲ್ಲಿ ಕೀಟಗಳು ಕಾಂಡಗಳಲ್ಲಿ, ಎಲೆಯ ಕೆಳಭಾಗದಲ್ಲಿ ಸೇರಿಕೊಂಡಿರುತ್ತವೆ. ಆಗ ಸಿಂಪಡಣೆ ಮಾಡಿದರೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಬೆಳಗ್ಗೆ ೮ ಗಂಟೆ ಒಳಗೆ, ಗರಿಷ್ಠ ಎಂದರೆ ೧೦ ಗಂಟೆ ಒಳಗೆ ದ್ರವರೂಪದ ಸಗಣಿಯನ್ನು ಸಿಂಪಡಿಸಬೇಕು. ಆಗ ಹೆಚ್ಚಿನ ಪರಿಣಾಮ ಉಂಟಾಗುತ್ತದೆ.

ನಾಟಿ ಮಾಡಿದ ಒಂದು ತಿಂಗಳ ನಂತರದಿಂದ ಆರಂಭಿಸಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಸಗಣಿ ನೀರನ್ನು ಮೇಲೆ ಹೇಳಿದ ಪ್ರಮಾಣದಲ್ಲಿ ಸಿಂಪಡಿಸಬೇಕು ಅಥವಾ ಪ್ರತಿ ಸಲ ನೀರು ಹಾಯಿಸಿದಾಗಲೂ ಸಗಣಿ ನೀರನ್ನು ಹಾಯಿಸಬಹುದು ಎಂದು ಆರ್.ಜಿ. ಗೊಲ್ಲರ್‌ ಸೂಚಿಸುತ್ತಾರೆ.

ಹತ್ತು ಕುಂಟೆಗೆ ೫ ಕೆಜಿ

ಒಂದು ಎಕರೆಗೆ ೪೦ ಕುಂಟೆ. ಪ್ರತಿ ಹತ್ತು ಕುಂಟೆಗೆ ಒಂದು ಪಾತಿ ಇದ್ದರೆ ಪ್ರತಿ ಪಾತಿಗೆ  ೫೦ ಲೀಟರ್‌ ನೀರಿಗೆ ೫ ಕೆಜಿ ಪ್ರಮಾಣದ ಸಗಣಿ ಬೆರೆಸಿ ಹಾಯಿಸಬೇಕು. ಆಗ ಸೂಕ್ತ ಪ್ರಮಾಣದ ದ್ರವ ಪೋಷಕಾಂಶ ಬೆಳೆಗೆ ಸಮಾನವಾಗಿ ದಕ್ಕುತ್ತದೆ.

ರಸಗೊಬ್ಬರ

ದ್ರವರೂಪದ ಸಗಣಿಯನ್ನು ಹಾಯಿಸಿದ ಅಥವಾ ಸಿಂಪಡಿಸಿದ ಐದು ದಿನಗಳ ನಂತರವೇ ರಸಗೊಬ್ಬರಗಳನ್ನು ನೀಡಬಹುದು. ಇವುಗಳನ್ನು ಒಟ್ಟಿಗೆ ನೀಡಿದಾಗ ಪರಿಣಾಮ ಉಂಟಾಗುವುದಿಲ್ಲ ಎಂದು ಆರ್.ಜಿ. ಗೊಲ್ಲರ್‌ ಸೂಚಿಸುತ್ತಾರೆ.

ರಸಗೊಬ್ಬರಗಳ ಅವಲಂಬನೆ ಕಡಿಮೆ

ಭತ್ತದ ಗದ್ದೆಯಲ್ಲಿ ಹಸಿರೆಲೆ ಸಸ್ಯಗಳನ್ನು (ಅಪ್ಸೆಣಬು, ಡಯಂಚಾ ಇತ್ಯಾದಿ) ಬೆಳೆಸಿ ಅದು ಹೂವು ಬಿಡುವ ಮುನ್ನ ಹರಗಬೇಕು. ಈ ಹಂತದಲ್ಲಿ ಚೆನ್ನಾಗಿ ಕಳಿತ ಒಂದೂವರೆ ಟನ್‌ ಸಾವಯವ ಗೊಬ್ಬರವನ್ನು ಒಂದು ಎಕರೆಗೆ ಹಾಕಿ ಜೊತೆಗೆ ಜೀವಜಲ (ಬಯೋಡೈಜೆಸ್ಟರ್‌ ದ್ರವ)ವನ್ನು ಹಾಯಿಸಿ ರೊಟೋವೇಟರ್‌ ಬಳಸಿ ಚೆನ್ನಾಗಿ ಹರಗಬೇಕು. ಅದು ಮಣ್ಣಿನಲ್ಲಿ ಹದವಾಗಿ ಮಿಶ್ರಣವಾಗುತ್ತದೆ. ಈ ಬಳಿಕ ನಾಟಿಗೆ ಗದ್ದೆ ಸಿದ್ಧಪಡಿಸಿಕೊಂಡು ನಾಟಿ ಮಾಡುವುದು ಅಗತ್ಯ. ಹೀಗೆ ಮಾಡುವುದರಿಂದ ರಸಗೊಬ್ಬರಗಳ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಇದರಿಂದ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಎಲ್ಲದಕ್ಕಿಂತ ಮಿಗಿಲಾಗಿ ಮಣ್ಣು ಭಾರಿ ಫಲವತ್ತಾಗುತ್ತದೆ.

ಬೆಳಗ್ಗಿನ ಜಾವದ ಸಗಣಿ

ಗದ್ದೆಗೆ ಸಗಣಿ ದ್ರವ ಹಾಯಿಸಲು ಅಥವಾ ಸಿಂಪಡಿಸಲು ಎರಡು ಮೂರು ದಿನ ಸಂಗ್ರಹಿಸಿಟ್ಟ ಸಗಣಿ ಬಳಸಿದರೆ ಉತ್ತಮ ಪರಿಣಾಮವಾಗುವುದಿಲ್ಲ. ಕೊಟ್ಟಿಗೆಯಲ್ಲಿ ಬೆಳಗ್ಗಿನ ಜಾವ ಸಗಣಿ ಸಂಗ್ರಹಿಸಿ ಸೂಚಿಸಿದ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಬೇಕು. ಈ ಅಂಶವನ್ನು ರೈತರು ಮರೆಯಬಾರದು

LEAVE A REPLY

Please enter your comment!
Please enter your name here