ಬೆಳೆಗಳಿಗೆ ನೀರು ನಿರಂತರ ಬೇಕಾಗಿಲ್ಲ !

2
ಚಿತ್ರಗಳು – ಲೇಖನ: ಸ್ವರೂಪ್‌ ಕೊಟ್ಟೂರು

`ಕೃಷಿಗೆ ನೀರಿರಬೇಕು. ಆಗಷ್ಟೆ ರೈತರಿಗೆ ಖುಷಿ. ಆದ್ರೆ ಕೆಲವೊಮ್ಮೆ ಮಳೆಯ ಅನಿಶ್ಚತತೆ ಕಾಡುತ್ತಿದೆ. ಮಳೆ ಇಲ್ಲದ ಮೇಲೆ ಇಳೆಯ ಒಳಗೆ ಜಲವೆಲ್ಲಿ? ಒಟ್ಟಾರೆ ನಮ್ಮ ಪಾಲಿಗೆ ಕೃಷಿ-ಖುಷಿ ನೀರ ಮೇಲಿನ ಗುಳ್ಳೆ. ಈ ಕಾರಣಕ್ಕೆ ನಾನು ಮಳೆ ಅಪರೂಪ ಆದರೂ, ಬೋರ್‌ವೆಲ್ ನಿಂತರೂ ಒಮ್ಮಿಂದೊಮ್ಮೆಗೆ ಒಣಗದ ಜೊತೆಗೆ ಲಭ್ಯ ಅಲ್ಪ ನೀರಿನಲ್ಲಿಯೇ ಅಚ್ಚುಕಟ್ಟಾಗಿ ಬೆಳೆ ತೆಗೆಯುವ ಬಗ್ಗೆ ಯೋಚಿಸುತ್ತೇನೆ. ಮಣ್ಣಿನ ಸತ್ವದ ಕಡೆ ಲಕ್ಷ ಕೊಡುತ್ತೇನೆ. ಅದರ ಫಲವೇ ನಿವೀಗ ನೋಡುತ್ತಿರುವ ಬೆಳೆಗಳು….’ ಎನ್ನುತ್ತಾ ಕಾರ್ತೀಕೇಶ್ವರ ರಾಮಘಡ್ ತಮ್ಮ ಹೊಲದ ಮಧ್ಯಕ್ಕೆ ಕರೆದ್ಯೊಯ್ದು ನಿಲ್ಲಿಸಿದರು!.

ಮಣ್ಣಿನ ಸತ್ವಕ್ಕೆ ಮನ್ನಣೆ

ಬಳ್ಳಾರಿ ಜಿಲ್ಲೆಯ ಸಂಡೂರಿನ ಕಾರ್ತೀಕೇಶ್ವರ ರಾಮಘಡ್‌ರ ಕೃಷಿ ಪದ್ಧತಿಯೇ ವಿಭಿನ್ನ.  ಮಣ್ಣಿನ, ಬೆಳೆಯ ಉತ್ಕೃಷ್ಟತೆಯ ಬಗ್ಗೆ ಸಹ ನಾವು ಚಿಂತಸಬೇಕು ಎನ್ನುತ್ತಾರೆ. ಈ ಕಾರಣಕ್ಕೆ ರಾಮಘಡ್ ಹಣ ಗಳಿಕೆಯನ್ನೇ ಧೈಯವಾಗಿ ಇಟ್ಟುಕೊಂಡು ಕೃಷಿ ಮಾಡದೇ ಮಣ್ಣಿನ, ಆಹಾರದ ಗುಣಮಟ್ಟವನ್ನೂ ಕಾದಿಟ್ಟುಕೊಂಡು ವಿವಿಧ ಬೆಳೆ ತೆಗೆಯುತ್ತಾರೆ. `ಮಣ್ಣಿನಲ್ಲಿ ಸತ್ವ ಇದ್ದರಷ್ಟೆ ಕೃಷಿ ದೀರ್ಘಾಯುಷ್ಯ ಆಗಿರುತ್ತೆ. ಇಲ್ಲಂದರೆ ಭೂಮಿ ವಿಷವಾಗಿ, ನಮ್ಮ ದೇಹ ರೋಗದ ಗೂಡಾಗುತ್ತೆʼ ಎನ್ನುತ್ತಾರೆ.

ಸಹಜ ಕೃಷಿಯಲ್ಲೇ ಖುಷಿ

ಸಹಜ ಕೃಷಿ ಇವರ ಬೇಸಾಯದ ಮೂಲ ಮಂತ್ರ. ಬೆಳೆಗೆ ರಾಸಾಯನಿಕ ಗೊಬ್ಬರ ಕೊಡಲ್ಲ. ರೋಗ, ಕೀಟಬಾಧೆ ಇದ್ದರೂ ಯಾವುದೇ ಕ್ರಿಮಿನಾಶಕ ಬಳಸಲ್ಲ!. ಗಜಿಯಬಾದ್‌ನ ಕೃಷಿ ಸಂಶೋಧನಾ ಕೇಂದ್ರದಿಂದ ವೇಸ್ಟ್ ಡಿ ಕಂಪೋಸ್ಟರ್ ಜೈವಿಕ ದ್ರಾವಣ ತರಸಿದ್ದು, ಇದು ಎಲ್ಲದಕ್ಕೂ ಮದ್ದು ಎನ್ನುತ್ತಾರೆ. ದೊಡ್ಡ ದೊಡ್ಡ ಡ್ರಮ್‌ಗಳಲ್ಲಿ, ನೀರಿನ ಸಿಂಟೆಕ್ಸ್ಗಳಲ್ಲಿ ಇದನ್ನು ಹಾಕಿ ಇದರೊಂದಿಗೆ ಬೇಕಾದಷ್ಟು ನೀರು, ಬೆಲ್ಲ ಸೇರಿಸಿ ಇದನ್ನು ಹೆಚ್ಚಳ ಮಾಡುತ್ತಾರೆ. ಇದನ್ನೇ ತಮ್ಮ ಗಿಡಗಳಿಗೆ ಮೇಲು ಗೊಬ್ಬರವಾಗಿ ಬಳಸುತ್ತಾರೆ. ಿದರಿಂದ ಇವರ ಜಮಿನು ಸತ್ವಯುತ, ಮೃದು ಆಗಿದೆ. ಮಣ್ಣಿನಲ್ಲಿ ಹೇರಳವಾಗಿ ಎರೆಹುಳಗಳಿವೆ. ಬೆಳೆಗೆ ರೋಗ, ಕೀಟ ಬಾದಿಸಿದರೆ ಈ ಜೈವಿಕ ದ್ರಾವಣದೊಂದಿಗೆ ಬೇವಿನ ಎಣ್ಣೆ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ತಂಬಾಕು, ಫಿಶ್ ಆಯಿಲ್.. ಇತ್ಯಾದಿಗಳನ್ನು ಮಿಶ್ರಣ ಮಾಡಿ ಸಿಂಪಡಿಸುತ್ತಾರೆ! ಒಂದು ವೇಳೆ ಕ್ರಿಮಿನಾಶಕಗಳನ್ನು ಬಳಸಿದರೆ ಜೇನುನೊಣಗಳಿಗೆ ಮಾರಕ ಆಗುತ್ತೆ. ಇದರಿಂದ ಬೆಳೆಗಳ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಆಹಾರ ಬೆಳೆಗಳೂ ವಿಷಪೂರಿತ ಆಗುತ್ತೆ. ಇದರಿಂದ ಏನು ಲಾಭ? ಎಂದು ಪ್ರಶ್ನಿಸುತ್ತಾರೆ.

ತ್ಯಾಜ್ಯವೂ ಉಪಯುಕ್ತ

ಬಹುತೇಕ ರೈತರು ಬೆಳೆಯ ತ್ಯಾಜ್ಯವನ್ನು ಒಂದೆಡೆ ಗುಡ್ಡೆ ಹಾಕಿ ಸುಡುತ್ತಾರೆ. ಆದರೆ ರಾಮಘಡ್‌ ಅವರ ದೃಷ್ಟಿಯಲ್ಲಿ ಒಂದು ಒಣ ಹುಲ್ಲು ಕಡ್ಡಿಯೂ ತ್ಯಾಜ್ಯವಲ್ಲ! ಹುಲ್ಲನ್ನು ಕೊಯ್ದು ಅಲ್ಲೇ ಬಿಟ್ಟರೆ ಬೆಳೆಗಳಿಗೆ ಮುಚ್ಚಿಗೆ ಆಗಿ, ನೆಲಕ್ಕೆ ಕಸುವು ಆಗುತ್ತೆ. ಇದರೊಟ್ಟಿಗೆ ಕಳೆ ನಿಯಂತ್ರಣಕ್ಕೆ ಬರುತ್ತೆ ಎನ್ನುತ್ತಾರೆ. ಇನ್ನು ಇತರೆ ಬೆಳೆಗಳು ಒಣಗಿದ ಮೇಲೆ ಅದು ಮಣ್ಣಿನಲ್ಲಿ ಮಿಶ್ರಣ ಮಾಡುತ್ತಾರೆ. ಈಗ ಇವರ ಹೊಲದಲ್ಲಿ ಔಡಲ ಬೆಳೆದು ನಿಂತಿದ್ದು, ಇದರಿಂದ ಉದುರಿದ ಎಲೆಗಳು ನೆಲದಲ್ಲಿ ಹರಡಿವೆ. ಇದು ಕಳೆ ನಿಯಂತ್ರಿಸಿದ್ದಲ್ಲದೇ, ಭೂಮಿಯ ತೇವಾಂಶ ಆವಿ ಆಗದಂತೆ ತಡೆದಿದೆ. ಜೊತೆಗೆ ಅದು ಮಣ್ಣಲ್ಲಿ ಸೇರಿ ಕಸುವು ನೀಡುತ್ತಿದೆ.

ಏಕಾಂಗಿ ನಿರ್ವಹಣೆ

ಮಳೆಗಾಲದಲ್ಲಿ ಆರು ಎಕರೆ ಮಿಕ್ಕ ದಿನಗಳಲ್ಲಿ ಬೋರ್‌ವೆಲ್‌ನ ನೀರಿನ ಲಭ್ಯತೆ ನೋಡಿಕೊಂಡು ಗರಿಷ್ಠ ಎರಡು ಎಕರೆಯವರೆಗೆ ಕೃಷಿ ಮಾಡುತ್ತಾರೆ. ಅದು ಭಾಗಶಃ ಒಂಟಿ ಆಗಿ. ಹುಲ್ಲು ಕಟಾವ್ [ವೀಡ್ ಕಟರ್] ಯಂತ್ರ ಬಳಸುತ್ತಾರೆ. ಹೆಚ್ಚಿಗೆ ಕೂಲಿಗಾರರನ್ನು ಬೇಡದ ಬೆಳೆ ಔಡಲವನ್ನು ಹಾಕಿ ಆರೈಕೆ ಮಾಡುತ್ತಿದ್ದಾರೆ. ಅಲ್ಪ ಜಾಗದಲ್ಲಿ ಸಣ್ಣದಾಗಿ ಮತ್ತು ನಿರಂತರವಾಗಿ ಬೋರ್‌ವೆಲ್ ನೀರಿಗೆ ಸೇವಂತಿಗೆ, ಮೆಣಸಿನಕಾಯಿ, ಚೆಂಡು ಹೂವು.. ಹೀಗೆ ಆಯಾ ಕಾಲಕ್ಕೆ ಬೇಡಿಕೆ ಸಿಗುವ ಬೆಳೆ ಹಾಕಿ, ಇವರೇ ಆ ಫಲವನ್ನು ಕಿತ್ತು ಮಾರುಕಟ್ಟೆಗೆ ಸಾಗಿಸುತ್ತಾರೆ. ಉಳಿದಂತೆ ಭೂಮಿ ಹದ ಮಾಡಲು, ಭಿತ್ತನೆಗೆ ಮತ್ತು ಅಗತ್ಯ ಬಿದ್ದರೆ ಕೊಯ್ಲಿಗೆ ಕೃಷಿ ಕಾರ್ಮಿಕರನ್ನು ಆಶ್ರಯಿಸುತ್ತಾರೆ. ವೇಸ್ಟ್ ಡಿ ಕಂಪೋಸ್ಟ್‌ ಅನ್ನು ಬೆಳೆಗೆ ತಾವೇ ಸಿಂಪಡಿಸುತ್ತಾರೆ.

ಹೊಸ ತಳಿಗಳತ್ತ ತುಡಿತ

ರಾಮಘಡ್ ಎಂ.ಬಿ.ಎ ವ್ಯಾಸಂಗ ಮಾಡಿ, ಲಾಯರ್ ವೃತ್ತಿ ಮಾಡಿದವರು. ಆದರೆ ತಾಯಿಯ ಆಸೆಯಂತೆ ವಕೀಲಗಿರಿ ಬಿಟ್ಟು ಆಸ್ಥೆವಹಿಸಿ ಕೃಷಿ ಮಾಡುತ್ತಿದ್ದಾರೆ. ನಾಲ್ಕು ಜನರಂತೆ ಈಗ ಕೃಷಿ ಮಾಡದೇ ತನ್ನದೇ ಚಿಂತನೆ, ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ಸದಾ ಹೊಸ ತಳಿಗಳನ್ನು ಹುಡುಕುತ್ತಿರುತ್ತಾರೆ. ಇದಕ್ಕಾಗಿ ರಾಜ್ಯದ ವಿವಿಧೆಡೆ ನಡೆಯುವ ಕೃಷಿ ಮೇಳ, ಕೃಷಿ ಸಂಶೋಧನಾ ಕೇಂದ್ರಗಳಿಗೆ ಹೋಗಿ ಅನುಭವ ಪಡೆದಿದ್ದಾರೆ. ಇದಕ್ಕೆ ಪೂರಕವಾಗಿ ಸಾಕಷ್ಟು ಅಧ್ಯಯನ ನಡೆಸುತ್ತಾರೆ. ಕೃಷಿ ಸಂಬಂಧಿತ ಲೇಖನಗಳು, ಅಂತರ್ಜಾಲದ ಮೊರೆ ಹೋಗುತ್ತಾರೆ. ಆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಎಷ್ಟು ಬೇಡಿಕೆ ಇದೆ ಎನ್ನುವುದನ್ನೂ ಗ್ರಹಿಸುತ್ತಾರೆ. ಇವರ ಭೂಮಿ ಒಂದು ರೀತಿ ಹೊಸ ತಳಿಗಳ ಪ್ರಯೋಗ ಶಾಲೆ ಇದ್ದಂತೆ.

ಬಾಳೆ

ಈ ಭಾಗದಲ್ಲಿ ಪ್ರಥಮ ಬಾರಿಗೆ ಇಂಡೋ-ಅಮೇರಿಕನ್ ಡ್ರಾಫ್ಟ್ ಕೆವಿಂಡರ್ [ಗಿಡ್ಡ ತಳಿ] ತಳಿಯ ಬಾಳೆಯನ್ನು ಮೂರು ಎಕರೆಗೆ ಹಾಕಿದರು. ಒಂದು ಬಾಳೆ ಗೊನೆ ಗರಿಷ್ಠ ೭೪ ಕೆ.ಜಿ ತನಕ ಇಳುವರಿ ಬಂದಿತ್ತು!. ಇದು ಒಳ್ಳೆಯ ಅವಕ ತಂದಿತು. ಹನಿ ನೀರಾವರಿಯ ಮಹತ್ವ ಅಷ್ಟೊಂದು ಜನಪ್ರಿಯ ಆಗದ ದಿನಗಳಲ್ಲೇ ನೀರಿನ ಪೋಲು ತಪ್ಪಿಸಲು ಬಾಳೆಗೆ ಹನಿ ನಿರಾವರಿ ಅಳವಡಿಸಿದರು!. ತಮಿಳುನಾಡು ಮೂಲದ ಬೆಳೆ ಪಿಕೆಎಂ ೧ ತಳಿ ನುಗ್ಗೆ ಬೆಳೆಯಲು ನಿರ್ಧರಿಸಿದರು. ಇದು ತುಂಬಾ ರುಚಿಕರ ಮತ್ತು ಬೇಡಿಕೆ ಬೆಳೆ. ಅದಕ್ಕಾಗಿ ತಮ್ಮ ಮನೆಯ ಹಿತ್ತಲಿನಲ್ಲಿ ಎರಡು ನುಗ್ಗೆ ಗಿಡ ಬೆಳೆಸಿದರು. ಅದರಲ್ಲಿ ಬೀಜ ಹಿಡಿದು ಬೀಜ ಹಿಡಿದು ಆರು ಎಕರೆಗೆ ತುಂಬಿಸಿದರು!. ನುಗ್ಗೆಯೊಟ್ಟಿಗೆ ಮಿಶ್ರ ಬೆಳೆ ಆಗಿ ಕಲ್ಲಂಗಡಿ ಬೆಳೆಸಿದರು. ಕಲ್ಲಂಗಡಿಯಿಂದ ಒಳ್ಳೆಯ ಲಾಭ ಕಂಡರು. ನುಗ್ಗೆ ಬೆಳೆಯಿಂದ ಎಕರೆಗೆ ವಾರ್ಷಿಕ ಆದಾಯ ಸರಿಸುಮಾರು ೫೦ ಸಾವಿರವರೆಗೂ ಮೂರು ವರ್ಷಗಳ ಕಾಲ ಪಡೆದರು.

ಸಮಗ್ರ ಕೃಷಿ.. ಬದುಕು ಸಮೃದ್ಧಿ..

ಸಾಧ್ಯವಾದಷ್ಟು ಕಡಿಮೆ ಖರ್ಚು, ಮಿತ ನೀರು ಬಳಕೆ, ಬೆಳೆ ನಿರ್ವಹಣೆ ಮತ್ತು ಅಧಿಕ ಆದಾಯ ಕೊಡುವಂತಹ ಬೆಳೆಗಳ ಮೇಲೆ ರಾಮಘಡ್ ದೃಷ್ಟಿ ನೆಡುತ್ತಾರೆ!. ಒಂದೊಮ್ಮೆ ಪ್ರತಿಕೂಲ ಹವಾಮಾನದಿಂದ ಬೆಳೆ ಹಾಳಾದರೂ, ನಿರೀಕ್ಷಿತ ಇಳುವರಿ ಬರದಿದ್ದರೆ ರೈತನಿಗೆ ಅಷ್ಟೊಂದು ಬಾಧೆ ತರಲ್ಲ ಎನ್ನುತ್ತಾರೆ ಇವರು. ಇದರೊಂದಿಗೆ ತಮ್ಮ ಜಮೀನಿನಲ್ಲಿ ನೀರಿನ ಲಭ್ಯತೆ ಅನುಗುಣವಾಗಿ ಮುಖ್ಯ ಬೆಳೆಗಳ ಜೊತೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬರುವ ಟೊಮೋಟೋ, ಮೆಣಸಿನಕಾಯಿ, ಚೆಂಡು ಹೂವು, ಸೇವಂತಿಗೆ.. ಹೀಗೆ ವಿವಿಧ ಬೆಳೆಗಳನ್ನು ಬೆಳೆದು ನಿರಂತರ ಆದಾಯ ಗಳಿಸುತ್ತಿದ್ದಾರೆ.

ಏನೇ ರಾಸಾಯನಿಕ ಗೊಬ್ಬರ, ಕೀಟನಾಶಕ ಔಷಧಿಗಳನ್ನು ಬಳಸಿದರೂ ಏಳು-ಬೀಳು ಎರಡನ್ನೂ ನೋಡುತ್ತೇವೆ. ಅಲ್ಲಿ ಹಣ ಕಳೆದುಕೊಳ್ಳುವುದರೊಂದಿಗೆ ಭೂಮಿ ಮತ್ತು ನಮ್ಮ ಆರೋಗ್ಯ ಎರಡೂ ಹಾಳಾಗುತ್ತೆ. ಆದರೆ ಹೀಗೆ ಕೃಷಿ ಮಾಡಿದರೆ ಮಣ್ಣಿನ, ಮನುಷ್ಯನ ಆರೋಗ್ಯ ಚೆನ್ನಾಗಿರುತ್ತೆ. ಪ್ರತಿ ಸಾರಿ ಇಲ್ಲೂ ನಷ್ಟ ಆಗಲ್ಲ. ಇದನ್ನು ನಾವು ಅರಿಯಬೇಕು ಎನ್ನುತ್ತಾರೆ.

ನೀರು ನಿರಂತರ ಬೇಕಾಗಿಲ್ಲ!

ಬಹುತೇಕ ಬೆಳೆಗಳು ನೀರಿಲ್ಲದಿದ್ದರೆ ಒಣಗುತ್ತವೆ. ಆದರೆ ನುಗ್ಗೆಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆದರೂ ತಡೆದುಕೊಳ್ಳುತ್ತೆ. ಸಂಪೂರ್ಣ ಒಣಗಿ ಹೋಗಲ್ಲ. ಹಾಗಾಗಿ ಈ ಬೆಳೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ವರ್ಷಗಳ ಕಾಲ ನೀರಿನ ಅಭಾವ ಆದರೂ ನುಗ್ಗೆ ಜೀವ ಹಿಡಿದುಟ್ಟುಕೊಳ್ಳುತ್ತೆ. ಮಳೆ ಸೊಂಪಾದರೆ, ನೀರು ಕೊಟ್ಟರೆ ಮತ್ತೆ ತಿಬ್ಬಳಿಸಿಕೊಂಡು ಫಲ ನೀಡುತ್ತದೆ.

ರಾಮಘಡ್ ನುಗ್ಗೆಗೆ ಹನಿ ನೀರಾವರಿ ಕಲ್ಪಿಸಿದ್ದಾರೆ. ಇನ್ನು ಕಳೆದ ಮೂರು ವರ್ಷದಲ್ಲಿ ಬಿದ್ದ ಮಳೆ ಪ್ರಮಾಣ ತೀರಾ ಕಮ್ಮಿ. ಅದಕ್ಕಾಗಿ ಈ ಬಾರಿ ಹತ್ತಿರಹತ್ತಿರ ನಾಲ್ಕು ಎಕರೆಗೆ ಎನ್‌ಬಿಸಿಹೆಚ್-೨೨ ತಳಿಯ ಔಡಲ ತುಂಬಿಸಿದ್ದಾರೆ. ಇದು ಗುಜರಾತ್ ಮೂಲದ್ದು. ಆಂಧ್ರದಲ್ಲಿ ಜನಪ್ರಿಯ ಬೆಳೆ. ಇದರಲ್ಲಿ ಎಣ್ಣಿನ ಅಂಶ ಯಥೇಚ್ಚ ಆಗಿದ್ದು ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಇದು ನೀರು ಕಡಿಮೆ ಬೇಡುವ ಬೆಳೆ. ಈಗಾಗಲೇ ಸಮೃದ್ಧವಾಗಿ ಔಡಲ ಇದ್ದು, ಕಟಾವ್‌ಗೆ ಬಂದಿದೆ. ಈ ಔಡಲವನ್ನು ಒಣಗಿದ ಮೇಲೆ ಕಾಂಪೋಸ್ಟ್ ತೊಟ್ಟಿ ಮಾಡಿ ಗೊಬ್ಬರ ಮಾಡುವ ಯೋಜನೆಯಲ್ಲಿದ್ದಾರೆ.

ಮೊ ನಂ: ೯೧೧೩೬ ೬೦೬೯೬

2 COMMENTS

  1. ವೇಸ್ಟ್ ಡಿ ಕಾಂಪೊಸರ್ ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ಕೊಟ್ಟರೆ ಅನುಕೂಲವಾಗುತ್ತದೆ.

    • ಇನ್ನೆರಡು ದಿನದಲ್ಲಿ ವೇಸ್ಟ್‌ ಡಿ ಕಾಂಪೋಸರ್‌ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡುತ್ತೇವೆ. ನಿರೀಕ್ಷಿಸಿ

LEAVE A REPLY

Please enter your comment!
Please enter your name here