ನಮ್ಮ ಆರೋಗ್ಯ ಬೇರೆಯವರ ಪಾಲಾಗಿದೆ. ಅದು ಆಹಾರ ಮಾರಾಟ ಮಾಡುವ ದಲ್ಲಾಳಿ ಆಗಿರಬಹುದು, ಔಷಧಿ ಮಾರಾಟ ಮಾಡುವರಿರಬಹುದು, ಆಹಾರ ಉತ್ಪಾದನೆ ಮಾಡುವ ರೈತನಿರಬಹುದು, ಅನ್ನ ಹಾಕುವ ಹೋಟೆಲ್ನವರಿಬಹುದು. ಒಟ್ಟಾರೆ ನಮ್ಮ ಆರೋಗ್ಯವನ್ನು ಬೇರೆಯವರು ಗುತ್ತಿಗೆ ಪಡೆದಿದ್ದಾರೆ. ಕಂತಿನ ರೂಪದಲ್ಲಿ ವಿಷ ನಮ್ಮ ದೇಹವನ್ನು ಸೇರುತ್ತಿದೆ. ಅದರ ಬದಲು ಪರಿಸರ ಪೂರಕ ವಸ್ತುಗಳನ್ನು ಬಳಸಿಕೊಂಡು ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕಾಗಿದೆ.

ತಲೆಯಲ್ಲಿ ಹೇನುಗಳಿದ್ದರೆ ಕಿರಿಕಿರಿಯೇ ಸರಿ. ಯಾವಗಲೂ ಕೈಯಿಂದ ತಲೆಯನ್ನು ಕೆರೆದುಕೊಳ್ಳಬೇಕಾಗುತ್ತೆ. ಇದರಿಂದ ಸಮಾಜದಲ್ಲಿ ಮುಜುಗರ ಆಗುತ್ತೆ ನಿಜ. ನಮ್ಮ ವೈಯಕ್ತಿಕ ಸ್ವಚ್ಛತೆಯ ಕೊರತೆ ಹಾಗು ಸೋಂಕಿನಿಂದ ಹೇನುಗಳ ಕಾಟ ಬರುತ್ತದೆ. ಇದರ ಸಾಮಾನ್ಯ ಲಕ್ಷಣಗಳು ಏನೆಂದರೆ, ತಲೆ ಕೆರೆಯುವುದು, ತಲೆಯಲ್ಲಿ ಸೀರು ಮತ್ತು ಹೇನು ಕಾಣಸಿಗುತ್ತವೆ. ಆದರೆ ಹೇನಿನ ನಿವಾರಣೆಯನ್ನು ಥೀಮೇಟ್ ಎಂಬ ಘನಘೋರ ವಿಷವನ್ನು ಬಳಸುತ್ತಿರುವುದು ಆತಂಕ ತರುವ ವಿಷಯ.

ಸಾಮಾನ್ಯವಾಗಿ ಥೀಮೇಟ್, ಕೃಷಿಯಲ್ಲಿ ಬಳಕೆ ಆಗುತ್ತಿರುವ ಒಂದು ಬಗೆಯ ವಿಷ. ಇದು ಮಾರುಕಟ್ಟೆಯಲ್ಲಿ ಕಪ್ಪು ಬಣ್ಣದ ಹಾಗು ಹರಳು ರೂಪದಲ್ಲಿ ಸಿಗುವ ಸಿಸ್ಟಮಿಕ್ ಅಥವಾ ವ್ಯವಸ್ಥಿತ ಕೀಟನಾಶಕ. ಸಿಸ್ಟಮಿಕ್ ಕೀಟನಾಶಕಗಳನ್ನು ಬೇರಿನ, ಮಣ್ಣಿನ ಮೂಲಕ ನೀಡಲಾಗುತ್ತದೆ. ಇವು ಆಹಾರ ಪದಾರ್ಥದ ಒಳಭಾಗಕ್ಕೂ ಸೇರಿಕೊಳ್ಳುವ ಗುಣ ಹೊಂದಿರುತ್ತವೆ. ಮಣ್ಣಿನಲ್ಲಿರುವ ಹಾಗು ಬೆಳೆಯ ಸುಳಿಯಲ್ಲಿ ಇರುವ ಪೀಡೆ ನಿಯಂತ್ರಿಸಲು ರೈತರು ಥೀಮೇಟ್ ಬಳಸುತ್ತಾರೆ. ಗೆದ್ದಿಲು ನಿವಾರಣೆಗೆ ಇವತ್ತೀಗೂ ಥೀಮೇಟ್ ಬಳಕೆ ಹಳ್ಳಿಗಳಲ್ಲಿ ನಿಂತಿಲ್ಲ.

ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆ, ಕೆಲ ಹಳ್ಳಿಗಳಲ್ಲಿ ‘ಥೀಮೇಟ್’ಅನ್ನು ಸಣ್ಣಸಣ್ಣ ಪ್ಯಾಕೇಟ್ ಮಾಡಿ ಸಂತೆಗಳಲ್ಲಿ ಹಾಗು ಹಳ್ಳಿಗಳಲ್ಲಿ ಹೇನಿನ ಪುಡಿ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ. ಇದನ್ನು ಖರೀದಿ ಮಾಡಿದ ಹಳ್ಳಿಗರು ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ/ಔಡಲೆಣ್ಣೆ ಜೊತೆ  ಮಿಶ್ರ ಮಾಡಿ ಅರ್ಧ ಗಂಟೆ ನೆನೆ ಹಾಕುತ್ತಾರೆ. ಸ್ನಾನ ಮಾಡುವ ಅರ್ಧ ಗಂಟೆ ಮುನ್ನ ತಲೆಗೆ ಬರಿ ಕೈಯಿಂದ ಹಚ್ಚಿಕೊಳ್ಳುತ್ತಾರೆ. ಅರ್ಧ ಗಂಟೆ ನಂತರ ತಲೆಯನ್ನು ತೊಳೆದುಕೊಳ್ಳುತ್ತಾರೆ. ಇದರಿಂದಾಗಿ ಹೇನುಗಳು ಮಾಯವಾಗುತ್ತೆ. ಆದರೆ ಥೀಮೇಟ್ ವಿಷದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು.

ನಮ್ಮ ತಲೆ ಸಂಕೀರ್ಣ ವ್ಯವಸ್ಥೆಯಿಂದ ಕೂಡಿದೆ. ಒಂದು ಪಕ್ಷ ತಲೆಯಲ್ಲಿ ಹುಣ್ಣು ಅಥವಾ ಗಾಯವಾದರೆ ವಿಷ ನೇರವಾಗಿ ಮೆದುಳಿಗೆ ತಲುಪುತ್ತದೆ. ಇನ್ನು ಇದನ್ನು ಬರಿಕೈಯಿಂದ ಬಳಸುವುದರಿಂದ ವಿಷದ ಗಂಭೀರತೆ ಅಧಿಕವಾಗುತ್ತೆ. ಆದ್ದರಿಂದ ಇದರ ಬಗ್ಗೆ ಗಂಭೀರವಾಗಿ ಚಿಂತಿಸುವುದು; ಪರ್ಯಾಯಗಳನ್ನು ಅರಸುವುದು ಅತ್ಯಗತ್ಯ

ಹೇನು ಸಾಯಿಸಲು ಸರಳ ಸೂತ್ರಗಳು:

ಹೇನು ನಿವಾರಣೆಗೆ ನಮ್ಮಲ್ಲಿ ಸರಳ ಉಪಾಯವಿದೆ. ನಮ್ಮ ಪೂರ್ವಿಕರು ನಮ್ಮಲ್ಲಿ ಸಿಗುವ ವಸ್ತುಗಳಿಂದ ಹೇನು ಬಾಧೆಗೆ ಸಿದ್ಧ ಔಷಧ ಕಂಡುಕೊಂಡಿದ್ದರು. ವಿಷದ ಬಳಕೆ ಇಲ್ಲವಾಗಿತ್ತು. ಆದರೆ ಆಧುನಿಕತೆಯಿಂದ ಹೇನು ನಿವಾರಿಸಲು ವಿಷದ ಬಳಕೆ ಅನಿವಾರ್ಯವಾಯಿತು. ಕೆಲ ಉಪಯುಕ್ತ ಪದ್ಧತಿಗಳನ್ನು ಈ ಕೆಳಗೆ ಕೊಡಲಾಗಿದೆ.

ಸೀತಾಫಲದ ಬೀಜಗಳನ್ನು ಸಂಗ್ರಹಿಸಿ, ಅವುಗಳನ್ನು ನೀರಿನಲ್ಲಿ ತೊಳೆದು. ನೆರಳಲ್ಲಿ ಒಣಗಿಸಿ, ಎಲ್ಲಾ ಬೀಜಗಳನ್ನು ಮೆತ್ತಗೆ ಕುಟ್ಟಿಬೇಕು, ನಂತರ ಪುಡಿಯನ್ನು ಸೀಸೆಯೊಂದರಲ್ಲಿ ಸಂಗ್ರಹಿಸಿ ಇಟ್ಟುಕೊಂಡಿರಬೇಕು. ಸಾಧ್ಯವಾದರೆ ಸೀತಾಫಲದ ಚಿಗುರಲೆಗಳನ್ನು ನೆರಳಲ್ಲಿ ಒಣಗಿಸಿ, ಮೆತ್ತಗೆ ಕುಟ್ಟಿ ಪುಡಿಯನ್ನು ಸಂಗ್ರಹಿಸಿ ಇಟ್ಟು ಕೊಂಡಿರಬೇಕು. ನಮ್ಮಲ್ಲಿ ಸೀತಾಫಲದ ಚಿಗುರಲೆಗಳು ಇಲ್ಲವಾದರೆ ಚಿಂತೆ ಇಲ್ಲ. ಒಂದು ಚಮಚ ಬೀಜದ ಪುಡಿ ಅಥವಾ ಬೀಜ/ಚಿಗುರಲೆ ಮಿಶ್ರಣವನ್ನು ನೀರಿನಲ್ಲಿ ಒದ್ದೆಮಾಡಿಕೊಂಡು ತಲೆಗೆ ಹಚ್ಚಬೇಕು. ಹೆಚ್ಚಿಗೆ ಬೇಕಾದರೆ ಹಚ್ಚಿ ಕೊಳ್ಳಬಹುದು. ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡಬೇಕು. ಇದರಿಂದಾಗಿ ಹೇನುಗಳು ಹಾಗು ತಲೆಯಲ್ಲಿರುವ ಹುಣ್ಣುಗಳು ಮಾಯವಾಗುತ್ತೆ.

ಅಡುಗೆಗೆ ಬಳಸುವ ಬಲಿತ ತೆಂಗಿನಕಾಯಿಯ ಹಾಲುನ್ನು ತೆಗೆದು, ಅದಕ್ಕೆ ಅಷ್ಟೆ ಪ್ರಮಾಣದ ತುಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಸ್ನಾನ ಮಾಡುವ ಎರಡು ಗಂಟೆ ಮೊದಲು ತಲೆಯ ಬುಡಕ್ಕೆ ಹಚ್ಚಿಕೊಳ್ಳಬೇಕು. ಈ ರೀತಿ ಎರಡರಿಂದ ಮೂರುಸಾರೆ ಮಾಡಿದರೆ ಹೇನು ಮಾಯ.

ಒಂದು ಹಿಡಿ ಕಹಿಬೇವಿನ ಎಲೆಯನ್ನು ಅರೆದು ರಾತ್ರಿ ಮಲಗುವ ಮುನ್ನ ತಲೆಗೆ ಹಚ್ಚಿಕೊಂಡು, ತೆಳುವಾದ ಬಟ್ಟೆಯನ್ನು ಕಟ್ಟಿ, ಬೆಳಗ್ಗೆ ಸೀಗೆಪುಡಿಯನ್ನು ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡಬೇಕು.

ಥೀಮೆಟ್ ಅಥವಾ ಇತರ ಯಾವುದೇ ಕೀಟನಾಶಕಗಳ ಬಳಕೆ ಸಂಪೂರ್ಣವಾಗಿ ಆರೋಗ್ಯಕ್ಕೆ ಹಾನಿಕಾರಕ. ಇದನ್ನು ಉಪಯೋಗಿಸಿ, ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ. ನಮ್ಮ ಆರೋಗ್ಯ ನಮ್ಮ ಹಕ್ಕು ಮತ್ತು ನಮ್ಮ ಕರ್ತವ್ಯ. ಇದರ ಬಳಕೆಗೆ ಸೂಕ್ತ ಕಾಯದೆ ಮಾಡಬೇಕಾಗಿದೆ. ಇದಕ್ಕಿಂತ ಮೊದಲು ಬಳಸುವುದನ್ನು ನಿಲ್ಲಿಸಬೇಕು.

ಲೇಖಕರು: ವಿಜಯಲಕ್ಷ್ಮಿ ಮಂಜುನಾಥ ಹೊಳಲು, ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 95355-57362

LEAVE A REPLY

Please enter your comment!
Please enter your name here