ನಿರಂತರ ಸುರಿಯುತ್ತಿದ್ದ ಮಳೆ ಕೃಷಿಮೇಳಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೋ ಇಲ್ಲವೋ ಎಂಬ ಆತಂಕ ಸೃಷ್ಟಿಸಿತ್ತು. ಇದರ ನಡುವೆಯೂ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ.

ನವೆಂಬರ್ 11. ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಆಯೋಜಿಸಿದ್ದ ಕೃಷಿಮೇಳದ ಮೊದಲ ದಿನ. ಹಿಂದಿನ ದಿನವೇ ಮಹಾನಗರದಲ್ಲಿ ಮಹಾಮಳೆ ಹಿಡಿಯಿತು. ಅಂದು ಸಂಜೆಯೇ ರಾಜ್ಯದ, ದೇಶದ ವಿವಿಧೆಡೆಗಳಿಂದ ಆಗಮಿಸಿ ಪೂರ್ವ ನಿರ್ಮಿತ ಮಳಿಗೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಜೋಡಿಸುತ್ತಿದ್ದವರಿಗೆ ತೀವ್ರ ಆತಂಕ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾರದಿದ್ದರೆ ? ಆಯೋಜಕರಿಗೂ ಇದೇ ಆತಂಕ. ಕೃಷಿಮೇಳದ ದಿನಗಳನ್ನು ಮುಂದೂಡಬೇಕಿತ್ತೆ ?

ಮರುದಿನ ಕೃಷಿಮೇಳದ ಅಂಗಳವೆಲ್ಲ ಕೆಸರು. ಈ ಕೆಸರಿನಲ್ಲಿ ಬಂದವರು ಗೊಣಗದೇ ಹೋಗದಿರುತ್ತಾರೆಯೇ ಎಂಬ ಭಾವನೆ. ಇವೆಲ್ಲವನ್ನೂ ಸುಳ್ಳಾಗಿಸುವಂತೆ ಮೊದಲ ದಿನವೇ ಮಳೆಯ ನಡುವೆಯೂ ಅಪಾರ ಸಂಖ್ಯೆಯಲ್ಲಿ ಆಸಕ್ತರು ಹರಿದು ಬಂದರು. ಮಳಿಗೆಗಳನ್ನು ಹಾಕಿದ್ದೆಡೆ ಮಳೆಯಿಂದ ನೆನೆಯದೇ ವೀಕ್ಷಣೆ ಮಾಡಲು ಅನುಕೂಲವಾಗುವಂತೆ ಇದ್ದ ವ್ಯವಸ್ಥೆ ಭಾರಿ ನೆರವಾಯಿತು.

ಪ್ರಾಯೋಗಿಕ ವಿವಿಧ ತಾಕುಗಳಲ್ಲಿಯೂ ಜನವೋ ಜನ. ಕಾಲು ಕೆಸರಾಗುತ್ತೆ, ಬಟ್ಟೆ ಕೊಳೆಯಾಗುತ್ತೆ ಎಂಬ ಯಾವ ಭಾವನೆಯೂ ಅವರಲ್ಲಿ ಇರಲಿಲ್ಲ. ಹೊಸ ಹೊಸ ತಂತ್ರಜ್ಞಾನಗಳನ್ನು ತಿಳಿದುಕೊಳ್ಳಬೇಕೆನ್ನುವ ತವಕ. ಬಂದವರಲ್ಲಿ ಹಲವರು ಬರುತ್ತಾ ಕೊಡೆಗಳನ್ನು ತಂದಿದ್ದರು. ಕೃಷಿ ವಿಜ್ಞಾನಿಗಳು ಹಾಕಿದ್ದ ತಾತ್ಕಾಲಿಕ ಡೇರೆಗಳಲ್ಲಿ ನಿಂತು, ತಾಕುಗಳಲ್ಲಿ ಕೊಡೆಗಳನ್ನು ಹಿಡಿದು ಬಂದವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಿದರು.

ಮೊದಲನೇ ದಿನ ಭೌತಿಕ ಕೃಷಿಮೇಳದಲ್ಲಿ ನೇರವಾಗಿ ಭಾಗಿಯಾಗಿದವರ ಸಂಖ್ಯೆ  66 ಸಾವಿರ. ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧೆಡೆಗಳಿಂದ ವೀಕ್ಷಿಸಿದವರ ಸಂಖ್ಯೆ  1.62 ಲಕ್ಷ. ಅಂದು ಕೃಷಿಮೇಳದ ಸಾಂಪ್ರದಾಯಿಕವಾದ ಖ್ಯಾತ ಆಹಾರ ಮಳಿಗೆಯಲ್ಲಿ ಊಟ ಮಾಡಿದವರ ಸಂಖ್ಯೆ ಗಣನೀಯವಾಗಿತ್ತು.

ಎರಡನೇ ದಿನವೂ ಮಳೆ, ಕೃಷಿಮೇಳದ ಅಂಗಳ ಮತ್ತಷ್ಟು ಕೆಸರಾಗಿತ್ತು. ಆದರೆ ಬಂದವರ ಸಂಖ್ಯೆ ಮೊದಲನೇ ದಿನ ಬಂದವರ ಸಂಖ್ಯೆಗಿಂತ ಮೂರು ಪಟ್ಟಾಗಿತ್ತು.  ಒಟ್ಟು 1.74 ಲಕ್ಷ ಮಂದಿ ಭೌತಿಕ ಕೃಷಿಮೇಳದಲ್ಲಿ ಪಾಲ್ಗೊಂಡಿದ್ದರು. ಅಂದು ಜಾಲತಾಣಗಳ ಮೂಲಕ ಕೃಷಿಮೇಳ ವೀಖ್ಷಿಸಿದವರ ಸಂಖ್ಯೆ  5.2 ಲಕ್ಞ. ಕೃಷಿಮೇಳದ ಬೃಹತ್ ಆಹಾರ ಡೇರೆಯಲ್ಲಿ ಊಟ ಸೇವಿಸಿದವರ ಸಂಖ್ಯೆಯೂ ಅಪಾರ. ಚಳಿಗೆ ಮಳೆಗೆ ಆಹಾರ ಮೇಳದಲ್ಲಿ ನೀಡಿದ್ದ ಬಿಸಿಬಿಸಿ ಮುದ್ದೆ ಸೇವನೆ ಚೇತೋಹಾರಿಯಾಗಿತ್ತು ಎಂಬುದೇ ಊಟ ಸೇವಿಸಿದವರ ಅಭಿಪ್ರಾಯ.

krishimela
ಕೃಷಿಮೇಳದ ಯಶಸ್ಸಿಗೆ ಅಪಾರವಾಗಿ ಶ್ರಮಿಸಿದ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್, ವಿಸ್ತರಣಾ ನಿರ್ದೇಶಕ ಡಾ. ಎನ್. ದೇವಕುಮಾರ್, ಸಂಶೋಧನಾ ನಿರ್ದೇಶಕ ಡಾ. ಷಡಕ್ಷರಿ, ಹಿರಿಯ ವಾರ್ತಾತಜ್ಞ ಡಾ. ಕೆ. ಶಿವರಾಮು

ಮೂರನೇ ದಿನ ಮಳೆ ಸಂಜೆ 4ರ ತನಕ ಬಿಡುವು ಕೊಟ್ಟಿತ್ತು. ಅಂದು ಭೌತಿಕ ಕೃಷಿಮೇಳಕ್ಕೆ ಭೇಟಿ ನೀಡಿದವರ ಸಂಖ್ಯೆ  ಮೊದಲ ಎರಡು ದಿನಗಳಲ್ಲಿ ಭೇಟಿ ನೀಡಿದವರಿಗಿಂತ ಹೆಚ್ಚು. ಒಟ್ಟು 3 ಲಕ್ಷ ಜನ ಭೇಟಿ ನೀಡಿದ್ದರು. ಅಂದು ಜಾಲತಾಣಗಳ ಮೂಲಕ ಕೃಷಿಮೇಳ ವೀಕ್ಷಣೆ ಮಾಡಿದವರ ಸಂಖ್ಯೆ  13 ಲಕ್ಷ !

ಇಂದು ಕೃಷಿಮೇಳದ ನಾಳ್ಕನೇ ದಿನ. ಭಾನುವಾರ ಸಹ. ಆದರೆ ನಿನ್ನೆ ರಾತ್ರಿಯಿಂದಲೇ ಜಿಟಿಜಿಟಿ ಮಳೆ. ಬೆಳಗ್ಗೆ 8ರವರೆಗೂ ಮಳೆಯಿತ್ತು. ಇಂದು ಆಸಕ್ತರು ಕಡಿಮೆಯಾಗಬಹುದೆಂಬ ನಿರೀಕ್ಷೆಯಿತ್ತು. ಅದನ್ನು ಸುಳ್ಳು ಮಾಡುವಂತೆ ಬಂದವರ ಸಂಖ್ಯೆ  2.54 ಲಕ್ಷ. ಜಾಲತಾಣಗಳಲ್ಲಿ ವೀಕ್ಷಿಸಿದವರ ಸಂಖ್ಯೆ 18. 29 ಲಕ್ಷ.

ಕಳೆದ ನಾಲ್ಕು ತಿಂಗಳಿಂದ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳು, ಸಿಬ್ಬಂದಿ ಕೃಷಿಮೇಳಕ್ಕಾಗಿ ಅಪಾರವಾಗಿ ಶ್ರಮಿಸಿದ್ದರು. ಮುಖ್ಯವಾಗಿ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್, ವಿಸ್ತರಣಾ ನಿರ್ದೇಶಕ ಡಾ. ಎನ್. ದೇವಕುಮಾರ್, ಕೃಷಿ ಸಂಶೋಧನಾ ನಿರ್ದೇಶಕ ಡಾ. ಷಡಕ್ಷರಿ, ಮಾಧ್ಯಮ ಸಂಪರ್ಕ ವಿಭಾಗದ ಮುಖ್ಯಸ್ಥ ಡಾ. ಶಿವರಾಮು ಪ್ರತಿಯೊಂದು ವಿಭಾಗದ ಬಗ್ಗೆಯೂ ಯೋಜನೆ ಬಗ್ಗೆಯೂ ಅಪಾರವಾಗಿ ಶ್ರಮಿಸಿದ್ದರು. ನಿರಂತರ ಮಳೆ ನಡುವೆಯೂ ಬಂದವರ ಉತ್ಸಾಹ, ಹುರುಪು ನೋಡಿ ಅವರ ಮನದುಂಬಿ ಬಂದಿತ್ತು. ಒಟ್ಟು ನಾಲ್ಕು ದಿನಗಳಲ್ಲಿ ಕೃಷಿಮೇಳ ಕಣ್ತುಂಬಿಕೊಂಡವರ ಸಂಖ್ಯೆ 4. 25 ಲಕ್ಷ ಜನ !

ಮೇಳಕ್ಕೆ ಬಂದಿದ್ದ ಮಂಡ್ಯದ ಕೃಷಿಕ ರಾಜೇಶ್ ಹೇಳಿದ ಮಾತು ಮೇಳದ ಯಶಸ್ಸಿಗೆ ಕಾರಣ ನುಡಿಯುತ್ತದೆ. “ರೈತ್ರು ಅಂದ ಮೇಲೆ ಮಳೆಚಳಿಗೆ ಹೆದರ್ಕೊಂಡು ಕುಳಿತುಕೊಳ್ಳೋಕೆ ಆಗುತ್ತಾ ? ಹೊಸಹೊಸ ವಿಷಯ ತಿಳ್ಕೋಬೇಕು ಅಂದ್ರೆ ಕೃಷಿಮೇಳಕ್ಕೆ ಬರಲೇಬೇಕು. ಕೃಷಿಮೇಳ ನೋಡಿದ ಮೇಲೆ ಈ ಪರಿ ಮಳೆ ನಡುವೆಯೂ ಬಂದಿದ್ದು ಸಾರ್ಥಕ ಎನಿಸಿತು”

LEAVE A REPLY

Please enter your comment!
Please enter your name here