ಕೃಷಿ ವಿಶ್ವವಿದ್ಯಾನಿಲಯದ ನೂತನ ತಂತ್ರಜ್ಞಾನಗಳು ಮತ್ತು ಕೃಷಿಯಲ್ಲಿ ನೂತನ ಅವಿಷ್ಕಾರಗಳು ರೈತರಿಗೆ ಸಕಾಲದಲ್ಲಿ ತಲುಪುವಂತಾಗಲು ಈ ವರ್ಷದ ಕೃಷಿ ಮೇಳವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕೃಷಿ ಮೇಳವನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ 2021ರ ನವೆಂಬರ್, 11, 12, 13 ಮತ್ತು 14 ರಂದು ನಾಲ್ಕು ದಿನಗಳ ಕಾಲ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್ ತಿಳಿಸಿದರು.

ಅವರಿಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿರುವ ಆಡಳಿತ ಕಚೇರಿ ನಾಯಕ್ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈ ಬಾರಿಯ ಕೃಷಿಮೇಳ ರೈತರ ಆದಾಯ ದ್ವಿಗುಣಗೊಳಿಸುವಿಕೆಗೆ ಕೃಷಿ ತಾಂತ್ರಿಕತೆಗಳು  ವಿಷಯದ ಬಗ್ಗೆ ಕೇಂದ್ರೀಕೃತಗೊಂಡಿರುತ್ತದೆ. ಇದು ಇಂದಿನ ತುರ್ತು ಆದ್ಯತೆಯಾಗಿದೆ ಎಂದು ವಿವರಿಸಿದರು.

Krishimela bengaluru
ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್, ವಿಸ್ತರಣಾ ನಿರ್ದೇಶಕ ಡಾ. ಎನ್. ದೇವಕುಮಾರ್, ಕೃಷಿ ಸಂಶೋಧನಾ ನಿರ್ದೇಶಕ ಡಾ. ವೈ.ಜಿ. ಷಡಕ್ಷರಿ, ಹಿರಿಯ ಪ್ರಾಧ್ಯಾಪಕ, ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ. ಕೆ. ಶಿವರಾಮು ಹಾಜರಿದ್ದರು.

ಕಳೆದ ವರ್ಷ ಕೃಷಿಮೇಳದ ಅವಧಿ ಸೀಮಿತಗೊಂಡಿತ್ತು. ಕೋವಿಡ್ -19 ಕಾರಣ ಆನ್ ಲೈನ್ ಕೃಷಿಮೇಳಕ್ಕೆ ಆದ್ಯತೆ ನೀಡಲಾಗಿತ್ತು. ಕಡಿಮೆ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಲು ಅವಕಾಶ ಮಾಡಲಾಗಿತ್ತು. ಮಳಿಗೆಗಳ ಸಂಖ್ಯೆಯೂ ಕಡಿಮೆಯಿತ್ತು. ಖಾಸಗಿಯವರಿಗೆ ಭಾಗವಹಿಸಲು ಅವಕಾಶ ನೀಡಿರಲಿಲ್ಲ ಎಂದು ಹೇಳಿದರು.

ಈ ಬಾರಿ ಕೃಷಿಮೇಳದಲ್ಲಿ ವಿಶ್ವವಿದ್ಯಾಲಯ, ಅಭಿವೃದ್ಧಿ ಇಲಾಖೆಗಳು, ಸ್ವಸಹಾಯ ಸಂಘಗಳ ಜೊತೆಗೆ ಖಾಸಗಿಯವರಿಗೂ ಭಾಗವಹಿಸಲು ಅವಕಾಶ ನೀಡಲಾಗಿದೆ. ಮುನ್ನೂರಕ್ಕೂ ಹೆಚ್ಚಿನ ಮಳಿಗೆಗಳು ಇರುತ್ತವೆ. ಕೋವಿಡ್ ನಿಯಮಾವಳಿಗಳನ್ನು ಗಮನದಲ್ಲಿರಿಸಿಕೊಂಡು ಮೇಳ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ಕೋವಿಡ್ ಸಂದರ್ಭದಲ್ಲಿಯೂ ಆಹಾರ ಉತ್ಪಾದನೆ ಪ್ರಮಾಣ ಕುಂಠಿತಗೊಂಡಿಲ್ಲ. ಹಣ್ಣು ತರಕಾರಿಗಳ ಉತ್ಪಾದನೆ ಕಡಿಮೆಯಾಗಿಲ್ಲ. ಇದಕ್ಕೆ ಕಾರಣ ಕೃಷಿಕರು ಎಂದ ಅವರು ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರ ಆದಾಯ ದ್ವಿಗುಣಗೊಳಿಸುವಿಕೆಗೆ ಅಗತ್ಯವಾದ ತಾಂತ್ರಿಕತೆಗಳನ್ನು ಒದಗಿಸಲು ವಿಶ್ವವಿದ್ಯಾಲು ಉತ್ಸುಕವಾಗಿದೆ ಎಂದು ಹೇಳಿದರು.

ಈ ಬಾರಿ ಕೃಷಿಮೇಳ ಆಯೋಜಿಸುವ ಬಗ್ಗೆ ಅನಿಶ್ಚತತೆಯಿತ್ತು. ಆದರೂ 2021ರ ಮೇ ತಿಂಗಳಿನಿಂದಲೇ ಸಿದ್ದತೆಗಳನ್ನು ಆರಂಬಿಸಿದೆವು. ಈಗ ಕೋವಿಡ್ ಆತಂಕ ಗಣನೀಯವಾಗಿ ಕಡಿಮೆಯಾಗಿದೆ. ಆದರೂ ಸುರಕ್ಷತಾ ನಿಯಮಾವಳಿಗಳನ್ನು ಸಹ ಪಾಲಿಸಲಾಗುತ್ತದೆ ಎಂದರು.

ರೈತರ ಆದಾಯ ದ್ವಿಗುಣಗೊಳಿಸುವಿಕೆಗೆ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಂಡಾಗ ಉತ್ಪಾದನಾ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ. ಇದನ್ನು ಸಾಧ್ಯವಾಗಿಸುವತ್ತ ನಮ್ಮ  ವಿಜ್ಞಾನಿಗಳು ಪರಿಶ್ರಮಿಸಿದ್ದಾರೆ, ಕಚ್ಚಾ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ  ಬೆಲೆ ದೊರೆಯದ ಕಾರಣ ಅವುಗಳನ್ನು ರೈತರೇ ಮೌಲ್ಯವರ್ಧನೆ ಮಾಡಿ   ಮಾರಾಟ ಮಾಡಲು ಸಾಧ್ಯವಾಗುವ ರೀತಿ ಮಾರ್ಗದರ್ಶನ ಮಾಡಲಾಗುತ್ತದೆ ಎಂದು ಹೇಳಿದರು.

ಈ ಬಾರಿಯೂ ಕೃಷಿಮೇಳದ ಸಂದರ್ಭದಲ್ಲಿ ನೂತನ ತಳಿಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಭತ್ತ: ಕೆ.ಎಂ.ಪಿ-220, ಭತ್ತ: ಎಂ.ಎಸ್.ಎನ್.99 (ಐ.ಇ.ಟಿ. 283490), ರಾಗಿ: ಕೆ.ಎಂ.ಆರ್-316, ಬರಗು: ಜಿಪಿಯುಪಿ28, ನವಣೆ: ಜಿ.ಪಿ.ಯು.ಎಫ್.3, ಸಾಮೆ: ಜಿ.ಪಿ.ಯು.ಎಲ್.6, ಬೀಜದ ದಂಟು: ಕೆಬಿಜಿಎ-15, ಕಬ್ಬು: ಸಿಓವಿಸಿ 18061, ಮತ್ತು ಹಲಸು: ಬೈರಚಂದ್ರ ಮತ್ತು  ಮೇವಿನ ತೋಕೆ ಗೋಧಿ: ಆರ್ಕ-11-1. ಇವುಗಳನ್ನು ಹೊಸ ತಳಿಗಳಾಗಿವೆ ಎಂದು ವಿವರಿಸಿದರು.

ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ / ವಿಜ್ಞಾನಿಗಳಿಗೆ / ವಿಸ್ತರಣಾ ಕಾರ್ಯಕರ್ತರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುತ್ತದೆ., ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ.ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಎಂ.ಸಿ. ರಂಗಸ್ವಾಮಿ, , ಡಾ|| ಎಂ.ಹೆಚ್.ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ ಟಿ.ಎಂ.ಅರವಿಂದ, ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ಕುಮಾರಿ ವೈ.ಜಿ. ಮಂಜುಳ, ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ  ಸಿ. ನವಿಕ್ರಮ್ , ಡಾ|| ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ ಮುನಿರೆಡ್ಡಿ, ಡಾ|| ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಡಾ: ಎ.ಪಿ. ಮಲ್ಲಿಕಾರ್ಜುನಗೌಡ, ಡಾ: ಎಂ.ಹೆಚ್. ಮರೀಗೌಡ  ಅತ್ಯುತ್ತಮ ತೋಟಗಾರಿಕಾ ಸಂಶೋಧನಾ ರಾಷ್ಟ್ರೀಯ ದತ್ತಿ ಪ್ರಶಸ್ತಿ ಡಾ: ಹೆಚ್.ಪಿ. ಮಹೇಶ್ವರಪ್ಪ ಇವರುಗಳಿಗೆ ಸಂದಿದೆ ಎಂದು ಹೇಳಿದರು.

ತಜ್ಞ ವಿಜ್ಞಾನಿಗಳ ತಂಡದಿಂದ ಕೃಷಿ ಸಂಬಂಧಿ ಪ್ರಶ್ನೆಗಳಿಗೆ ಭೌತಿಕವಾಗಿ ಮತ್ತು ಜೂಮ್ ಸಭೆ ಮೂಲಕ ನೇರ ಪರಿಹಾರ ನೀಡಲಾಗುವುದು. ಪ್ರಾತ್ಯಕ್ಷಿಕಾ ತಾಕುಗಳು, ಮಳಿಗೆಗಳು ಮತ್ತು  ಕೃಷಿ ಮೇಳದ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದು ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್ಬುಕ್, ಟ್ಟಿಟ್ಟರ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಜೂಮ್ ಸಭೆ ಮೂಲಕ. ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ನೇರ ವೀಕ್ಷಣೆ ಮಾಡುವ ವ್ಯವಸ್ಥೆಯೂ ಇರುತ್ತದೆ. ಕಾರಣಾಂತರಗಳಿಂದ ಕೃಷಿಮೇಳಕ್ಕೆ ಬರಲಾಗದವರು ಆನ್ ಲೈನ್ ಮೂಲಕ ವೀಕ್ಷಿಸಬಹುದು ಎಂದು ಹೇಳಿದರು.

LEAVE A REPLY

Please enter your comment!
Please enter your name here